ಇಂಗ್ಲೆಂಡ್‌ನಲ್ಲಿ ಜ್ಯೂನಿಯರ್ ಶಂಕರ್ ‘ಮ್ಯಾಜಿಕ್’

| Published : Oct 02 2024, 01:05 AM IST

ಇಂಗ್ಲೆಂಡ್‌ನಲ್ಲಿ ಜ್ಯೂನಿಯರ್ ಶಂಕರ್ ‘ಮ್ಯಾಜಿಕ್’
Share this Article
  • FB
  • TW
  • Linkdin
  • Email

ಸಾರಾಂಶ

‘ಗಿಲಿಗಿಲಿ ಮ್ಯಾಜಿಕ್’ ಖ್ಯಾತಿಯ ಜಾದೂಗಾರ ಶಂಕರ್ ಜ್ಯೂನಿಯರ್ ಅವರು ಲಂಡನ್‌ನ ‘ರೀಡಿಂಗ್’ನಲ್ಲಿ ಜರುಗಿದ ‘ಹವ್ಯಕ ಹಬ್ಬ’-ಯು.ಕೆ. ಹವ್ಯಕ ಸಮುದಾಯದ ಹತ್ತನೇ ವಾರ್ಷಿಕ ಕೂಟದಲ್ಲಿ ತನ್ನ ಪ್ರದರ್ಶನ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಉಡುಪಿ

‘ಗಿಲಿಗಿಲಿ ಮ್ಯಾಜಿಕ್’ ಖ್ಯಾತಿಯ ಜಾದೂಗಾರ ಶಂಕರ್ ಜ್ಯೂನಿಯರ್ ಅವರು ತಮ್ಮ ಯಶಸ್ವಿ ಇಂಗ್ಲೆಂಡ್ ಪ್ರವಾಸದಿಂದ ಹಿಂದಿರುಗಿ ಬುಧವಾರ (ಅ.2) ಉಡುಪಿಗೆ ಬರುತ್ತಿದ್ದಾರೆ. ಕಳೆದ ಹತ್ತು ದಿನಗಳಲ್ಲಿ ಅವರು ಲಂಡನ್‌ನ ‘ರೀಡಿಂಗ್’ನಲ್ಲಿ ಜರುಗಿದ ‘ಹವ್ಯಕ ಹಬ್ಬ’-ಯು.ಕೆ. ಹವ್ಯಕ ಸಮುದಾಯದ ಹತ್ತನೇ ವಾರ್ಷಿಕ ಕೂಟದಲ್ಲಿ ತನ್ನ ಪ್ರದರ್ಶನ ನೀಡಿದ್ದಾರೆ.ಅಲ್ಲದೆ ‘ವೆಲ್ಲಿಂಗ್’ ಮತ್ತು ‘ಚಿಸ್ಲ್ ಹರ್ಸ್ಟ್’ ಎಂಬಲ್ಲಿ ಸಹಾಯಾರ್ಥ ಪ್ರದರ್ಶನಗಳನ್ನು ನೀಡಿದ ಅವರು, ಸಮಾಜ ಸೇವಾ ಕಾರ್ಯಗಳಿಗಾಗಿ ನಿಧಿ ಸಂಗ್ರಹಿಸಲು ನೆರವಾಗಿದ್ದಾರೆ.ಭಾರತೀಯ ಹೈ ಕಮಿಷನ್ ಸಭಾಂಗಣ ನೆಹರು ಸೆಂಟರ್‌ನಲ್ಲಿ ನೀಡಿದ ವಿಶೇಷ ಪ್ರದರ್ಶನವನ್ನು ಅನೇಕ ಲಂಡನ್ ವಾಸಿಗಳು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಮಾತ್ರವಲ್ಲದೆ ಪ್ರದರ್ಶನವನ್ನು ನೆಹರು ಸೆಂಟರ್‌ನ ಡೆಪ್ಯೂಟಿ ಡೈರೆಕ್ಟರ್ ಸಂಜಯ್ ಶರ್ಮ ಮತ್ತು ಅನೇಕ ಗಣ್ಯ ವ್ಯಕ್ತಿಗಳು ವೀಕ್ಷಿಸಿದರು.

ಎಲ್ಲ ಪ್ರದರ್ಶನಗಳಿಗೆ ಉತ್ತಮ ಪ್ರತಿಕ್ರಿಯೆಯನ್ನು ವ್ಯಕ್ತವಾಯಿತು. ಅಲ್ಲದೆ ಪ್ರದರ್ಶನದ ಮಾಹಿತಿ ಬಿಡುಗಡೆಯಾದ 24 ಗಂಟೆಗಳಲ್ಲಿ ಸಭಾಂಗಣದ ಎಲ್ಲ ಆಸನಗಳು ಮುಂಗಡವಾಗಿ ಕಾಯ್ದಿರಿಸಿ ಭರ್ತಿಯಾಗಿದ್ದವು. ಶಂಕರ್ ಜ್ಯೂನಿಯರ್ ಅವರು ಕಲಾಪ್ರೇಮಿಗಳನ್ನು ನಿರಾಶೆಗೊಳಿಸದೆ, ಅದ್ಭುತ ಪ್ರದರ್ಶನಗಳನ್ನು ನೀಡಿ, ಪ್ರೇಕ್ಷಕರನ್ನು ಮುದಗೊಳಿಸಿದರು.ಇದೇ ಸಂದರ್ಭದಲ್ಲಿ ಶಂಕರ್ ಜ್ಯೂನಿಯರ್ ಅವರು ಪ್ರತಿಷ್ಠಿತ ‘ಲಂಡನ್ ಮ್ಯಾಜಿಕ್ ಸರ್ಕಲ್’ ಸಂಸ್ಥೆಗೆ ತೆರಳಿ ಜಾದೂಗಾರರನ್ನು ಭೇಟಿಯಾದರು. ಹಾಗೆಯೇ ‘ಝೋಡಿಯಾಕ್ ಮ್ಯಾಜಿಕ್ ಸೊಸೈಟಿ’ ಎಂಬ ಜಾದೂಗಾರರ ಕೂಟದ ವಿಶೇಷ ಅತಿಥಿಯಾಗಿ ಆಹ್ವಾನಿತರಾಗಿ ತನ್ನ ಕೈಚಳಕ ಪ್ರದರ್ಶಿಸಿದರು.