ಜಂಕ್‌ ಫುಡ್ ಆರೋಗ್ಯಕ್ಕೆ ಮಾರಕ: ಗುರುಮಹಾಂತ ಶ್ರೀ

| Published : Jun 17 2024, 01:31 AM IST

ಸಾರಾಂಶ

ಇಂದಿನ ಆಹಾರ ಪದ್ಧತಿಯಲ್ಲಿ ಯುವ ಜನಾಂಗವು ಜಂಕ್‌ ಫುಡ್ ತಿನ್ನುವುದರಿಂದ ತಮ್ಮ ಜೀವನ ಹಾಗೂ ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದು ಇಳಕಲ್ಲಿನ ವಿಜಯ ಮಹಾಂತೇಶ್ವರ ಮಠದ ಗುರುಮಹಾಂತ ಶ್ರೀಗಳು ವಿಷಾದ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಇಳಕಲ್ಲ

ಇಂದಿನ ಆಹಾರ ಪದ್ಧತಿಯಲ್ಲಿ ಯುವ ಜನಾಂಗವು ಜಿಂಕ್‌ ಫುಡ್ ತಿನ್ನುವುದರಿಂದ ತಮ್ಮ ಜೀವನ ಹಾಗೂ ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ. ಕಾರಣ ಪ್ರತಿಯೊಬ್ಬರೂ ಜಿಂಕ್ ಫುಡ್‌ನಿಂದ ದೂರವಿರ ಬೇಕು ಎಂದು ಇಳಕಲ್ಲಿನ ವಿಜಯ ಮಹಾಂತೇಶ್ವರ ಮಠದ ಗುರುಮಹಾಂತ ಶ್ರೀಗಳು ಹೇಳಿದರು.

ಇಳಕಲ್ಲಿನ ವಿಜಯ ಮಹಾಂತೇಶ್ವರ ಆಯುರ್ವೇದ ಮೆಡಿಕಲ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಅಡಿಯಲ್ಲಿ ಆರ್.ಪಿ. ಕರಡಿ ಆಯುರ್ವೇದ ಆಸ್ಪತ್ರೆ, ಇಳಕಲ್ಲ ಹಾಗೂ ವಿಜಯ ಮಹಾಂತ ರಕ್ತ ಭಂಡಾರ ಮತ್ತು ನಿಹಾರಿಕಾ ಫೌಂಡೇಶನ್, ಕಂದಗಲ್ಲ ಇವರ ಸಹಯೋಗದಲ್ಲಿ ಬೃಹತ್ ರಕ್ತದಾನ ಶಿಬಿರವನ್ನು ಸಸಿಗೆ ನೀರು ಹಾಕುವುದರ ಮೂಲಕ ಉದ್ಘಾಟಿಸಿ ಮಾತನಾಡಿ, ಹಣ್ಣು ಹಂಪಲು ಮತ್ತು ಸತ್ವಭರಿತ ಆಹಾರ ಸೇವೆನೆ ಮಾಡಿ ಜನರ ಜೀವ ಉಳಿಸುವುದಕ್ಕಾಗಿ ರಕ್ತದಾನ ಮಾಡಬೇಕೆಂದು ಸಲಹೆ ನೀಡಿದರು.

ಸಂಸ್ಥೆಯ ವಾಯಿಸ್ ಚೇರ್ಮನ್‌ ಅರುಣ ಬಿಜ್ಜಲ ಅಧ್ಯಕ್ಷತೆ ವಹಿಸಿ ಮಾತನಾಡಿ, ರಕ್ತ ಕೊಡುವವರು ಸಂಪೂರ್ಣವಾಗಿ ಆರೋಗ್ಯವಾಗಿರಬೇಕೆಂದರು.

ಡಾ.ಶೀತಲ್ ವಿ. ಪ್ರಾಸ್ತಾವಿಕವಾಗಿ ಮಾತನಾಡಿ, ರಕ್ತದ ಮಹತ್ವ ಮತ್ತು ರಕ್ತದಲ್ಲಿರುವ ಘಟಕಗಳ ಬಗ್ಗೆ ತಿಳಿಸಿದರು. ರವಿ ಕೊಟಾರಿ ಮಾತನಾಡಿ, ರಕ್ತದಾನ ಮಾಡುವುದರಿಂದ ೩ ಜೀವಗಳನ್ನು ಉಳಿಸಬುಹುದು, ಆದ್ದರಿಂದ ಎಲ್ಲರೂ ರಕ್ತದಾನ ಮಾಡಬೇಕೆಂದು ಹೇಳಿದರು.

ಮಹಾವಿದ್ಯಾಲಯದ ಚೇರ್ಮನ್‌ ಎಂ.ಜಿ. ಪಟ್ಟಣಶೆಟ್ಟರ ಹಾಗೂ ಆಸ್ಪತ್ರೆಯ ಚೇರ್ಮನ್‌ ಆರ್.ಆರ್. ಸೂಡಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಪ್ರಾಚಾರ್ಯ ಡಾ. ಕೆ.ಸಿ. ದಾಸ್ ಉಪಸ್ಥಿತರಿದ್ದರು. ವಿಜಯ ಮಹಾಂತ ರಕ್ತ ಭಂಡಾರದ ಮುಖ್ಯಸ್ಥ ಎಂ.ಬಿ. ಗೊಂಗಡಶೆಟ್ಟಿ ಹಾಗೂ ನಿಹಾರಿಕಾ ಫೌಂಡೇಶನ್‌ ಚೇರ್ಮನ್‌ ವೀರಣ್ಣ ಜೀರಗಿ ಅವರನ್ನು ಮಹಾವಿದ್ಯಾಲಯದ ಪರವಾಗಿ ಸನ್ಮಾನಿಸಲಾಯಿತು.

೨೦ನೇ ವರ್ಷದ ರಕ್ತದಾನಿಗಳಿಗೆ ವಂದಿಸುವ ಕಾರ್ಯಕ್ರಮದ ಅಡಿಯಲ್ಲಿ ಬೃಹತ್ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಶಿಬಿರದಲ್ಲಿ ಸುಮಾರು ೧೦೦ ಶಿಬಿರಾರ್ಥಿಗಳು ರಕ್ತದಾನ ಮಾಡಿದರು.

ಎನ್.ಎಸ್.ಎಸ್ ಯೋಜನಾಧಿಕಾರಿ ಡಾ.ಪ್ರಕಾಶ ತಾರಿವಾಳ ಸ್ವಾಗತಿಸಿದರು. ಡಾ. ದೀಕ್ಷಾ ಪ್ರಾರ್ಥಿಸಿದರು. ಡಾ.ಸಿದ್ದಲಿಂಗಮೂರ್ತಿ ವಂದಿಸಿದರು. ಡಾ. ಮಂಜುಳಾ ಸರಗಣಾಚಾರ ನಿರೂಪಿಸಿದರು.