ಕನ್ನಡಪ್ರಭ ವಾರ್ತೆ ಬೆಂಗಳೂರು
ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಕುರಿತು ಮತದಾರರಲ್ಲಿ ಜಾಗೃತಿ ಮೂಡಿಸಲು ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದಿದ್ದರೆ ಗ್ಯಾರಂಟಿ ಯೋಜನೆಗಳ ಲಾಭ ದೊರೆಯುವುದಿಲ್ಲ ಎಂದು ಪ್ರಚಾರ ಮಾಡುವ ಬಗ್ಗೆ ಶಾಸಕರ ಸಭೆಯಲ್ಲಿ ತೀವ್ರವಾಗಿ ಚರ್ಚಿಸಲಾಗಿದೆ.ಎಸ್‌ಐಆರ್ ಪ್ರಕ್ರಿಯೆ, ಜಿಬಿಎ-ಸ್ಥಳೀಯ ಸಂಸ್ಥೆಗಳ ಚುನಾವಣೆ, ಪಕ್ಷ ಸಂಘಟನೆ ಕುರಿತು ದೇವನಹಳ್ಳಿ ಬಳಿಯ ರೆಸಾರ್ಟ್‌ನಲ್ಲಿ ಕೆಪಿಸಿಸಿ ಕರೆದಿದ್ದ ಶಾಸಕರು, ಪದಾಧಿಕಾರಿಗಳ ಸಭೆಯಲ್ಲಿ ಎಸ್‌ಐಆರ್ ಮೂಲಕ ಅರ್ಹ ಮತದಾರರು ಮತದಾರರು ಪಟ್ಟಿಯಿಂದ ಹೊರಗುಳಿಯದಂತೆ ತಡೆಯುವ ಕುರಿತು ಚರ್ಚೆ ನಡೆಸಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೆವಾಲಾ ಸೇರಿ ಬಹುತೇಕ ಎಲ್ಲ ನಾಯಕರು ಎಸ್‌ಐಆರ್‌ನಿಂದ ಕಾಂಗ್ರೆಸ್‌ನ ಸಾಂಪ್ರದಾಯಿಕ ಮತಗಳು ಪಟ್ಟಿಯಿಂದ ತೆಗೆದು ಹಾಕದಂತೆ ಎಚ್ಚರವಹಿಸಸಲು ಸೂಚಿಸಿದರು.ಅರಿವು ಮೂಡಿಸಬೇಕು:
ಪ್ರಮುಖವಾಗಿ ಮತದಾನದ ಹಕ್ಕು ಇಲ್ಲದವರಿಗೆ ಗ್ಯಾರಂಟಿ ಯೋಜನೆಯ ಲಾಭ ದೊರೆಯುವುದಿಲ್ಲ ಎಂಬುದನ್ನು ಮತದಾರರಿಗೆ ತಿಳಿಸಬೇಕು. ಅದರಲ್ಲೂ ಬಡ ಮತ್ತು ಸಾಮಾನ್ಯ ಜನರಲ್ಲಿ ಈ ಬಗ್ಗೆ ಅರಿವು ಮೂಡಿಸಬೇಕು.ಗ್ಯಾರಂಟಿಯ ಲಾಭ ಪಡೆಯುತ್ತಿರುವವರನ್ನು ಗುರುತಿಸಿ ಎಸ್‌ಐಆರ್ ಪ್ರಕ್ರಿಯೆ ಮತ್ತು ಮತದಾರರ ಪಟ್ಟಿಯಲ್ಲೇ ಉಳಿಯುವಂತಾಗಲು ಏನು ಮಾಡಬೇಕು ಎಂಬ ಬಗ್ಗೆ ಅರಿವು ಮೂಡಿಸಬೇಕು ಎಂದು ಶಾಸಕರು ಮತ್ತು ಪದಾಧಿಕಾರಿಗಳಿಗೆ ತಿಳಿಸಲಾಯಿತು.
ಇದರ ಜತೆಗೆ ಗ್ಯಾರಂಟಿ ಯೋಜನೆಗಳ ಪೈಕಿ ಗೃಹಲಕ್ಷ್ಮೀ ಮತ್ತು ಗೃಹ ಜ್ಯೋತಿಗೆ ಹೊಸದಾಗಿ ಅರ್ಜಿ ಆಹ್ವಾನಿಸುವ ಬಗ್ಗೆಯೂ ಚರ್ಚಿಸಲಾಯಿತು. ಅದರಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರಿರುವುದನ್ನು ಖಚಿತಪಡಿಸುವ ಅಂಶ ಸೇರಿಸುವ ಬಗ್ಗೆಯೂ ಚರ್ಚಿಸಲಾಯಿತು. ಈ ಕ್ರಮದಿಂದಾಗಿ ಮತದಾರರು ಗೃಹಲಕ್ಷ್ಮೀ ಮತ್ತು ಗೃಹ ಗ್ಯಾರಂಟಿ ಫಲಾನುಭವಿಗಳಾಗಲು ಮತ ಹಕ್ಕು ಉಳಿಸಲು ಸೂಕ್ತ ದಾಖಲೆಗಳನ್ನು ಎಸ್‌ಐಆರ್ ವೇಳೆ ಒದಗಿಸಲಿದ್ದಾರೆ ಎಂಬ ಚಿಂತನೆ ನಡೆಸಲಾಯಿತು. ಈ ಕುರಿತು ಮುಂದಿನ ದಿನಗಳಲ್ಲಿ ಚರ್ಚೆ ನಡೆಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲು ನಿರ್ಧರಿಸಲಾಯಿತು.
ಬಿಜೆಪಿ ಕಡಿಮೆ ಅಂತರದಲ್ಲಿ ಸೋತ ಕ್ಷೇತ್ರದತ್ತ ಗಮನಹರಿಸಿ:ಎಸ್‌ಐಆರ್ ನಡೆದಿರುವ ಬೇರೆ ರಾಜ್ಯಗಳಲ್ಲಿ ಬಿಜೆಪಿ ಕಡಿಮೆ ಅಂತರದಲ್ಲಿ ಗೆದ್ದಿರುವ ಕ್ಷೇತ್ರಗಳಲ್ಲಿಯೇ ಹೆಚ್ಚಿನ ಮತದಾರರನ್ನು ಪಟ್ಟಿಯಿಂದ ತೆಗೆಯಲಾಗಿದೆ. ಕಾಂಗ್ರೆಸ್ ಸೇರಿ ಇತರ ಪಕ್ಷಗಳಿಗೆ ಅನಾನುಕೂಲವಾಗುವಂತೆ ಮತಪಟ್ಟಿ ಪರಿಷ್ಕರಿಸಲಾಗಿದೆ. ಇನ್ನು, ಪಶ್ಚಿಮ ಬಂಗಾಳದಲ್ಲಿ ಮ್ಯಾಪಿಂಗ್ ವೇಳೆ 72 ಲಕ್ಷ ಮತಗಳನ್ನು ಗುರುತಿಸಲಾಗಿತ್ತು. ಅದೇ ಮತದಾರರ ಪಟ್ಟಿಯಿಂದ ತೆಗೆಯುವಾಗ 90 ಲಕ್ಷ ಮತಗಳನ್ನು ತೆಗೆಯಲಾಗಿದೆ. ಇದು ಕಾನೂನು ಬಾಹಿರ. ಅದೇ ಮಾದರಿಯನ್ನು ರಾಜ್ಯದಲ್ಲೂ ಅನುಸರಿಸುವ ಸಾಧ್ಯತೆಗಳಿವೆ. ಹೀಗಾಗಿ ಎಲ್ಲರೂ ಎಚ್ಚರದಿಂದಿರಬೇಕು. 2023ರ ಚುನಾವಣೆಯಲ್ಲಿ ಬಿಜೆಪಿ ಕಡಿಮೆ ಅಂತದಲ್ಲಿ ಸೋತ ಕ್ಷೇತ್ರಗಳಲ್ಲಿ ಶಾಸಕರು ಕಟ್ಟೆಚ್ಚರ ವಹಿಸಬೇಕು ಎಂದು ಸಭೆಯಲ್ಲಿ ನಿರ್ದೇಶಿಸಲಾಯಿತು.
ಜತೆಗೆ ಅಲ್ಪಸಂಖ್ಯಾತ, ದಲಿತ ಮತ್ತು ಹಿಂದುಳಿದ ವರ್ಗದ ಮತದಾರರನ್ನು ಎಸ್‌ಐಆರ್‌ನಲ್ಲಿ ಗುರಿಯಾಗಿಸುವ, ಕಾಂಗ್ರೆಸ್‌ನ ಸಾಂಪ್ರದಾಯಿಕ ಅಹಿಂದ ಮತಗಳನ್ನು ತೆಗೆಯುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಅಹಿಂದ ವರ್ಗದಲ್ಲಿ ಹೆಚ್ಚಾಗಿ ಜಾಗೃತಿ ಮೂಡಿಸಬೇಕು. ಶಾಸಕರು, ಸಚಿವರು ಈ ಬಗ್ಗೆ ನೇತೃತ್ವ ವಹಿಸಬೇಕು ಎಂದು ಸೂಚಿಸಲಾಯಿತು.ಎಸ್ಐಆರ್ ಕುರಿತು ಹಾಗೂ ಅರ್ಹರು ಮತದಾರರ ಪಟ್ಟಿಯಿಂದ ಹೊರಹೋಗದಂತೆ ನೋಡಿಕೊಳ್ಳಲು ಕಾಂಗ್ರೆಸ್ ಮಾತ್ರವಲ್ಲದೆ ಉಳಿದೆಲ್ಲ ರಾಜಕೀಯ ಪಕ್ಷಗಳ ಬಿಎಲ್‌ಒ ಮತ್ತು ಬಿಎಲ್‌ಎಗಳಿಗೆ ಸರ್ಕಾರದಿಂದ ತರಬೇತಿ ನೀಡಲಾಗುವುದು. ಚುನಾವಣಾ ಆಯೋಗದಿಂದ ಯಾರೆಲ್ಲ ಮತದಾರರಿಗೆ ಎಲಿಮಿನೇಷನ್ ಅರ್ಜಿ ನೀಡಲಾಗುತ್ತದೆಯೋ ಅವರನ್ನು ಸಂಪರ್ಕಿಸಿ, ಅವರಿಂದ ಸಹಿ ಹಾಕಿಸಿ, ಅವರಿಗೆ ಸೂಕ್ತ ದಾಖಲೆಗಳನ್ನು ದೊರಕಿಸುವಂತೆ ಮಾಡಬೇಕು. ಅದರ ಬಗ್ಗೆಯೂ ಬಿಎಲ್‌ಒ ಮತ್ತು ಬಿಎಲ್‌ಎಗಳಿಗೆ ತರಬೇತಿ ನೀಡಲಾಗುತ್ತದೆ ಎಂದು ಮಾಹಿತಿ ನೀಡಲಾಯಿತು.
ಮತದಾರರಲ್ಲಿ ಜಾಗೃತಿ ಮೂಡಿಸಲು ಪಕ್ಷದಿಂದಿಂದ ಬೂತ್ ಮಟ್ಟದಲ್ಲಿ ಮತದಾರರ ಸಭೆ ನಡೆಸಬೇಕು. ಸಭೆಯಲ್ಲಿ ಮತದಾರರ ಪಟ್ಟಿಯಿಂದ ತೆಗೆದು ಹಾಕದೇ ಇರಲು ಏನೆಲ್ಲ ಕ್ರಮ ಕೈಗೊಳ್ಳಬೇಕು, ಯಾವ ದಾಖಲೆಗಳನ್ನು ನೀಡಬೇಕು ಎಂಬುದನ್ನು ತಿಳಿಸಬೇಕು. ಜತೆಗೆ ಸಹಾಯವಾಣಿ ಕೇಂದ್ರವನ್ನೂ ತೆರೆದು, ಗೊಂದಲದಲ್ಲಿರುವ ಮತದಾರರಿಗೆ ಸೂಕ್ತ ಮಾಹಿತಿ ನೀಡುವ ಕೆಲಸ ಮಾಡಬೇಕು. ಇವುಗಳ ಮೇಲೆ ಶಾಸಕರು ನಿಗಾವಹಿಸಬೇಕು ಎಂದು ನಿರ್ದೇಶಿಸಲಾಯಿತು.ಶಾಸಕರ ಗೈರಿಗೆ ಅಸಮಧಾನ:
ಎಸ್‌ಐಆರ್ ಕುರಿತಾಗಿ ಕರೆಯಲಾಗಿದ್ದ ಮಹತ್ವದ ಸಭೆಗೆ ಸುಮಾರು 68 ಶಾಸಕರು ಗೈರಾಗಿದ್ದರು. ಇದಕ್ಕೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಆದಿಯಾಗಿ ಎಲ್ಲ ನಾಯಕರು ಅಸಮಧಾನ ವ್ಯಕ್ತಪಡಿಸಿದರು. ಅದರಲ್ಲಿ ಡಿ.ಕೆ.ಶಿವಕುಮಾರ್ ಅವರು, ಮುಂದೆ ಮತ್ತೊಮ್ಮೆ ಶಾಸಕರಾಗಬೇಕಿದ್ದರೆ ಸೋಮವಾರ ನಡೆಯಲಿರುವ ಸಭೆಗೆ ಹಾಜರಾಗಬೇಕು ಎಂದು ಗೈರಾದ ಶಾಸಕರಿಗೆ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.ಇಂದೂ ಮುಂದುವರಿಯುವ ಸಭೆ:
ಎಸ್‌ಐಆರ್ ಕುರಿತ ಸಭೆ ಸೋಮವಾರವೂ ಮುಂದುವರಿಯಲಿದೆ. ಸೋಮವಾರ ರಣದೀಪ್‌ಸಿಂಗ್ ಸುರ್ಜೆವಾಲಾ ಮತ್ತು ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಸಭೆ ನಡೆಯಲಿದೆ. ಪಕ್ಷದ ಪದಾಧಿಕಾರಿಗಳು, ಭಾನುವಾರದ ಸಭೆಯಲ್ಲಿ ಗೈರಾದ ಶಾಸಕರು ಪಾಲ್ಗೊಳ್ಳಲಿದ್ದು, ಹಲವು ಸೂಚನೆಗಳನ್ನು ನೀಡಲಿದ್ದಾರೆ.