ರಡ್ಡಿ ಲಿಂಗಾಯತ ಎಂದೇ ನಮೂದಿಸಿ: ರೇವಣಸಿದ್ದಪ್ಪ

| Published : Sep 16 2025, 12:03 AM IST

ಸಾರಾಂಶ

ಕಡೂರು, ಸೆ. 22 ರಿಂದ ಅ.7 ರವರೆಗೆ ರಾಜ್ಯ ಸರ್ಕಾರ ನಡೆಸಲಿರುವ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಗಣತಿಯಲ್ಲಿ ರಡ್ಡಿ ಲಿಂಗಾಯತ ಜನಾಂಗದವರು ರಡ್ಡಿ ಲಿಂಗಾಯತ, ಉಪ ಪಂಗಡ ರಡ್ಡಿ ಎಂದು ಬರೆಸುವಂತೆ ಬಡಗನಾಡು ಹೇಮರಡ್ಡಿ ಲಿಂಗಾಯತ ಜನಾಂಗ ಸಂಘದ ಕೇಂದ್ರ ಸಮಿತಿ ಅಧ್ಯಕ್ಷ ಎಚ್.ಸಿ.ರೇವಣಸಿದ್ದಪ್ಪ ಮನವಿ ಮಾಡಿದ್ದಾರೆ.

- ಗಿರಿಯಾಪುರ ಗ್ರಾಮದ ಶ್ರೀ ಹೇಮರಡ್ಡಿ ಮಲ್ಲಮ್ಮ ಶತಮಾನೋತ್ಸವ ಭವನದಲ್ಲಿ ಸುದ್ದಿಗೋಷ್ಠಿ

ಕನ್ನಡಪ್ರಭ ವಾರ್ತೆ, ಕಡೂರು

ಸೆ. 22 ರಿಂದ ಅ.7 ರವರೆಗೆ ರಾಜ್ಯ ಸರ್ಕಾರ ನಡೆಸಲಿರುವ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಗಣತಿಯಲ್ಲಿ ರಡ್ಡಿ ಲಿಂಗಾಯತ ಜನಾಂಗದವರು ರಡ್ಡಿ ಲಿಂಗಾಯತ, ಉಪ ಪಂಗಡ ರಡ್ಡಿ ಎಂದು ಬರೆಸುವಂತೆ ಬಡಗನಾಡು ಹೇಮರಡ್ಡಿ ಲಿಂಗಾಯತ ಜನಾಂಗ ಸಂಘದ ಕೇಂದ್ರ ಸಮಿತಿ ಅಧ್ಯಕ್ಷ ಎಚ್.ಸಿ.ರೇವಣಸಿದ್ದಪ್ಪ ಮನವಿ ಮಾಡಿದ್ದಾರೆ.ತಾಲೂಕಿನ ಗಿರಿಯಾಪುರ ಗ್ರಾಮದ ಶ್ರೀ ಹೇಮರಡ್ಡಿ ಮಲ್ಲಮ್ಮ ಶತಮಾನೋತ್ಸವ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ರಡ್ಡಿ ಲಿಂಗಾಯತ ಜನಾಂಗದ ಸಂಘ 107 ವರ್ಷ ಪೂರೈಸಿ ಶತಮಾನೋತ್ಸವ ಆಚರಿಸಿದೆ. ಅಖಿಲ ಭಾರತ ವೀರಶೈವ ಮಹಾಸಭಾ ಅಥವಾ ಜಾಗತಿಕ ಲಿಂಗಾಯತ ಮಹಾಸಭಾಕ್ಕಿಂತ ಮೊದಲೇ ಇದ್ದ ಸಂಘ ರಾಜ್ಯದ 17 ಜಿಲ್ಲೆಗಳಲ್ಲಿ ಅಸ್ತಿತ್ವ ಹೊಂದುವ ಮೂಲಕ 4 ಲಕ್ಷಕ್ಕಿಂತ ಅಧಿಕ ಜನಸಂಖ್ಯೆ ಹೊಂದಿದೆ. ರಾಜ್ಯ ಸರ್ಕಾರ ಕಳೆದ ಬಾರಿ 1074 ಎಂದು ಕೋಡ್ ನಂಬರ್ ಕೊಟ್ಟಿತ್ತು, ಈಗ ಬದಲಿಸಿ ಎ-1192 ಎಂದು ಘೋಷಿಸಿದೆ. ಗಣತಿಗೆ ಬರುವ ಸಂದರ್ಭದಲ್ಲಿ 60 ಪ್ರಶ್ನೆಗಳ ನಮೂನೆ ಇರಲಿದೆ. ಅದರಂತೆ ನಮ್ಮ ಸಮುದಾಯದವರು ಧರ್ಮ ಕಾಲಂ ಹೊರತು ಪಡಿಸಿ ಜಾತಿ ರಡ್ಡಿ ಲಿಂಗಾಯತ ಎಂದೇ ನಮೂದಿಸಬೇಕು. ಇದೇ 20 ರಂದು ಅಂತಿಮ ನಮೂನೆ ಘೋಷಣೆ ನಂತರ ಧರ್ಮ ಕಾಲಂನಲ್ಲಿ ಏನು ನಮೂದಿಸಬೇಕು ಎಂದು ತಿಳಿಸಲಾಗುವುದು ಎಂದು ಮಾಹಿತಿ ನೀಡಿದರು.

ಕರ್ನಾಟಕ ಸರ್ಕಾರ ಹಿಂದುಳಿದ ವರ್ಗದ ಆಯೋಗದ ಮೂಲಕ ನಡೆಸುತ್ತಿರುವ ಸಮೀಕ್ಷೆಗೆ ನಮ್ಮ ಬೆಂಬಲವಿದೆ. ಇದರಿಂದ ಜನರಿಗೆ ಅಧಿಕೃತ ಮತ್ತು ಸರಿಯಾದ ಮಾಹಿತಿ ಲಭ್ಯವಾಗಲಿ ಎನ್ನುವುದು ನಮ್ಮ ಆಶಯ. ಸರ್ಕಾರದ ಅಧೀನ ಕಾರ್ಯದರ್ಶಿ ಯವರು ಗಣತಿ ಸಮಯದಲ್ಲಿ ಕೇಳುವ ಪ್ರಶ್ನಾವಳಿಗಳ ನಮೂನೆಯನ್ನು ಸೆ.20 ರಂದು ಅಂತಿಮಗೊಳಿಸಲಾಗುವುದು. ಆ ನಂತರವೇ ಧರ್ಮದ ಕಾಲಂನಲ್ಲಿ ಏನು ನಮೂದಿಸಬೇಕು ಎನ್ನುವುದನ್ನು ತಿಳಿಸಲಾಗುವುದು. ಯಾವುದೇ ಗೊಂದಲಗಳಿಗೆ ಆಸ್ಪದ ನೀಡದೆ ಮೇಲೆ ಹೇಳಿದಂತೆ ಸಮುದಾಯದ ಜನರು ಮಾಹಿತಿ ಒದಗಿಸುವಂತೆ ಕೋರಿದರು.

ಪತ್ರಿಕಾಗೋಷ್ಠಿಗೂ ಮುನ್ನ ಬಡಗನಾಡು ಹೇಮರಡ್ಡಿ ರಾಜ್ಯ ಸಂಘದ ಉಪಾಧ್ಯಕ್ಷ ಎಚ್.ಸಿ.ರಾಜಪ್ಪ, ಪ್ರಧಾನ ಕಾರ್ಯದರ್ಶಿ ಈಶ್ವರಪ್ಪ, ಮೈಸೂರು ಘಟಕದ ಜಿ.ಎಂ.ವಾಮದೇವ, ಕೇಂದ್ರ ಸಂಘದ ಉಪಾಧ್ಯಕ್ಷ ಜಿ.ಎಚ್.ಗಿರೀಶ್, ಅಜ್ಜಂಪುರ ಘಟಕದ ಹೇಮಂತ್‌ ಕುಮಾರ್, ಕಡೂರು ಘಟಕದ ಜಿ.ಬಿ.ಆನಂದಮೂರ್ತಿ ಮುಂತಾದವರ ನೇತೃತ್ವದಲ್ಲಿ ಸಭೆ ನಡೆಸಿ ಕೇಂದ್ರ ಸಂಘದ ನಿರ್ಣಯಕ್ಕೆ ಬದ್ಧ ಎನ್ನುವ ಒಕ್ಕೊರಲಿನ ಅಭಿಪ್ರಾಯಕ್ಕೆ ಬರಲಾಯಿತು. ಇದೇ ಸಂದರ್ಭದಲ್ಲಿ ಜಿ.ಬಿ.ಶಿವಶಂಕರ್, ಹೇಮರಡ್ಡಿ, ಚನ್ನಾಪುರ ಸಿದ್ದೇಗೌಡ್ರು, ಜಿ.ಪಿ. ಪ್ರಭುಕುಮಾರ್, ಬಾರ್ಗೇಶಪ್ಪ, ಗ್ರಾ.ಪಂ. ಸದಸ್ಯ ಉಮಾ ಮಹೇಶ್ವರಪ್ಪ, ಜಿ.ಸಿ. ಜಯಸೋಮನಾಥ, ನೀಲಲೋಚನಸ್ವಾಮಿ, ಸಿ.ಜಿ.ಯಶವಂತಕುಮಾರ್ ಮುಂತಾದವರು ಇದ್ದರು.14ಕೆಕೆಡಿಯು1.

ಕಡೂರು ತಾಲೂಕು ಗಿರಿಯಾಪುರ ಗ್ರಾಮದ ಬಡಗನಾಡು ಹೇಮರಡ್ಡಿ ಲಿಂಗಾಯತ ಜನಾಂಗ ಸಂಘದಿಂದ ಗ್ರಾಮದ ಹೇಮರಡ್ಡಿ ಮಲ್ಲಮ್ಮ ಶತಮಾನೋತ್ಸವ ಭವನದಲ್ಲಿ ರಾಜ್ಯಸರ್ಕಾರದ ಸಾಮಾಜಿಕ ಸಮೀಕ್ಷೆ ಸಂದರ್ಭದಲ್ಲಿ ಸಮುದಾಯದವರು ಒದಗಿಸಬೇಕಾದ ಮಾಹಿತಿ ಮತ್ತು ತೀರ್ಮಾನಗಳ ಕುರಿತು ಪೂರ್ವಭಾವಿ ಸಭೆ ನಡೆಸಿದರು.