ಸಾರಾಂಶ
ಶಹಾಪುರದಲ್ಲಿ ಪಿಎಸ್ಐ ಪರಶುರಾಮ ಸಾವಿಗೆ ಕಾರಣರಾದ ಶಾಸಕ ಚೆನ್ನಾರೆಡ್ಡಿ ಪಾಟೀಲ್ ಹಾಗೂ ಅವರ ಪುತ್ರ ಸನ್ನಿಗೌಡ ಅವರನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿ ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ನಗರದ ತಹಸೀಲ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಕನ್ನಡಪ್ರಭ ವಾರ್ತೆ ಶಹಾಪುರ
ಪಿಎಸ್‌ಐ ಪರಶುರಾಮ್ ಸಾವಿಗೆ ಕಾರಣರಾದವರನ್ನು ಬಂಧಿಸುವಂತೆ ಆಗ್ರಹಿಸಿ ದಲಿತಪರ ಸಂಘಟನೆಗಳ ಒಕ್ಕೂಟದ ವತಿಯಿಂದ ನಗರದಲ್ಲಿ ವಾಲ್ಮೀಕಿ ವೃತ್ತದಿಂದ ಹೊಸ ತಹಸೀಲ್ ಕಚೇರಿವರೆಗೆ ಬೃಹತ್ ಪ್ರತಿಭಟಣಾ ಮೆರವಣಿಗೆ ನಡೆಸಿದರು.ಈ ವೇಳೆ ಧರಣಿ ಕುಳಿತ ಪ್ರತಿಭಟನಾಕಾರರು, ಪಿಎಸ್ಐ ಸಾವಿನ ಪ್ರಕರಣವನ್ನು ಸಿಐಡಿಯಿಂದ ಸಿಬಿಐಗೆ ವರ್ಗಾಯಿಸಬೇಕು ಹಾಗೂ ಯಾದಗಿರಿ ಶಾಸಕ ಚೆನ್ನಾರೆಡ್ಡಿ ತುನ್ನೂರು ಹಾಗೂ ಪುತ್ರ ಸನ್ನಿಗೌಡ ಬಂಧಿಸುವಂತೆ ಆಗ್ರಹಿಸಿ ನಗರದ ತಹಸೀಲ್ದಾರ್ ಉಮಾಕಾಂತ್ ಹಳ್ಳೆ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಒಕ್ಕೂಟದ ಮುಖ್ಯಸ್ಥ ಮರಿಯಪ್ಪ ಜಾಲಿಬೆಂಚಿ ಮಾತನಾಡಿ, ತನ್ನದೇ ಇಲಾಖೆಯ ಅಧಿಕಾರಿಗೆ ನ್ಯಾಯ ಕೊಡಿಸದ ಪೊಲೀಸರು ಸಾಮಾನ್ಯ ಜನರಿಗೆ ಯಾವ ನ್ಯಾಯ ಕೊಡಿಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಶಾಸಕ ಹಾಗೂ ಅವರ ಪುತ್ರನನ್ನು ತಕ್ಷಣ ಬಂಧಿಸದಿದ್ದರೆ ಎಸ್‌ಪಿ ಕಚೇರಿ ಮುಂದೆ ಅನಿರ್ದಿಷ್ಟ ಉಪವಾಸ ಸತ್ಯಾಗ್ರಹ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಶಿವಪುತ್ರ ಜವಳಿ ಮಾತನಾಡಿ, ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ದಕ್ಷ ಅಧಿಕಾರಿಗೆ ಮಾನಸಿಕವಾಗಿ ಹಿಂಸೆ ನೀಡಿದ್ದಲ್ಲದೆ, ಜಾತಿ ನಿಂದನೆ ಮಾಡಿ ಆತನ ಸಾವಿಗೆ ಕಾರಣರಾದ ಶಾಸಕ ಹಾಗೂ ಅವರ ಪುತ್ರನನ್ನು ಬಂಧಿಸುವ ಮೂಲಕ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಇದೇ ವೇಳೆ ದಲಿತ ಸಂಘಟನೆ ಮುಖಂಡ ರಾಯಪ್ಪ ಸಾಲಿಮನಿ ಮಾತನಾಡಿದರು. ದಲಿತ ಸಂಘಟನೆಯ ಹಿರಿಯ ಮುಖಂಡ ಮಲ್ಲಿಕಾರ್ಜುನ ಪೂಜಾರಿ, ಹೊನ್ನಪ್ಪ ಗಂಗನಾಳ, ಸುಭಾಷ್ ತಳವಾರ, ಜೈರೆಡ್ಡಿ ಹೊಸ್ಮನಿ, ಬಸವರಾಜ, ಮರೆಪ್ಪ ಕನ್ಯಾಕೋಳುರು, ಮರೆಪ್ಪ ಕ್ರಾಂತಿ, ದೇವಿಂದ್ರ ಗೌಡೂರ, ಪ್ರಭು ದಿಗ್ಗಿ, ಮಾಳಪ್ಪ, ಶರಬಣ್ಣ ದೋರನಹಳ್ಳಿ ಸೇರಿದಂತೆ ಇತರರಿದ್ದರು.