ನವಲಗುಂದ: ಸ್ಥಳೀಯ ಖಾಸಗಿ ವಸತಿ ಶಾಲೆಯ ಹಾಗೂ ಇದರ ಆಡಳಿತ ಮಂಡಳಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ನೊಂದ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡಬೇಕು ಎಂದು ಆಗ್ರಹಿಸಿ ತಾಲೂಕು ಗಂಗಾಮತ ಸಮಾಜದ ಮುಖಂಡರು ಧಾರವಾಡ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಉಮೇಶ ಬೊಮ್ಮಕ್ಕನವರ ಅವರಿಗೆ ಶುಕ್ರವಾರ ಶಾನವಾಡ ಗ್ರಾಮದಲ್ಲಿ ಮನವಿ ಸಲ್ಲಿಸಿದರು.
ವಿದ್ಯಾಜ್ಯೋತಿ ಕನ್ನಡ ಮಾಧ್ಯಮ ಕಿರಿಯ ಪ್ರಾಥಮಿಕ ಶಾಲೆಯನ್ನು ಭರತೇಶ ಕುರುಬರ ಎಂಬ ವ್ಯಕ್ತಿ ಖಾಸಗಿ ಶಾಲೆಯನ್ನು ನಡೆಸುತ್ತಿದ್ದ ಶಾಲೆಗೆ ಶಾನವಾಡ ಗ್ರಾಮದ ಆಕಾಶ ವಸಂತ ನೀಲಣ್ಣವರ ಎಂಬ ಬಾಲಕನು 4ನೇ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿದ್ದ. ವಿದ್ಯಾರ್ಥಿಗೆ ಕಿರುಕುಳ ನೀಡಿದ್ದಾರೆ. ಹೋಂ ವರ್ಕ್ ಮಾಡಿಲ್ಲ ಎಂದು ಹೊಡೆದಿದ್ದಾರೆ. ಇದರಿಂದ ವಿದ್ಯಾರ್ಥಿಯು ಶಾಲೆಯ 2ನೇ ಮಹಡಿಯಿಂದ ಬಿದ್ದು ತೀವ್ರವಾಗಿ ಗಾಯಗೊಂಡಿದ್ದ. ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯದಲ್ಲಿ ಮೃತಪಟ್ಟಿದ್ದ. ವಿದ್ಯಾರ್ಥಿಯ ಸಾವಿಗೆ ಖಾಸಗಿ ಶಾಲೆಯ ಶಿಕ್ಷಕ ಭರತೇಶ ಕುರುಬರ ಹಾಗೂ ಇದರ ಆಡಳಿತ ಮಂಡಳಿ ನೇರ ಹೊಣೆಗಾರರು. ಆದಕಾರಣ ಶಾಲೆಯ ವಿರುದ್ಧ ಕ್ರಮ ಕೈಗೊಳ್ಳಬೇಕು. ಆಕಾಶ ಕುಟುಂಬಕ್ಕೆ ಪರಿಹಾರ ಕೊಡಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಪುರಸಭೆ ಮಾಜಿ ಅಧ್ಯಕ್ಷ ನಿಂಗಪ್ಪ ಅಸುಂಡಿ, ತಾಪಂ ಮಾಜಿ ಅಧ್ಯಕ್ಷ ನಿಂಗಪ್ಪ ಬಾರಕೇರ, ಕಿರಣ ಉಳ್ಳಿಗೇರಿ, ಅಪ್ಪಣ್ಣ ಹಿರಗಣ್ಣವರ, ಸಹದೇವ ಗುಳೇದ, ರಾಜು ಹಿರಗಣ್ಣವರ ಸೇರಿ ನೂರಾರು ಸಮಾಜ ಬಾಂದವರು, ಶಾನವಾಡ ಗ್ರಾಮಸ್ಥರು ಇದ್ದರು.