ಜೀವನ ಗೆಲ್ಲಲು ನ್ಯಾಯ ನೀತಿ ಬೇಕು- ಮೂಜಗು ಶ್ರೀ

| Published : Oct 03 2025, 01:07 AM IST

ಜೀವನ ಗೆಲ್ಲಲು ನ್ಯಾಯ ನೀತಿ ಬೇಕು- ಮೂಜಗು ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ಕೌಶಲ್ಯಾಧಾರಿತ ಶಿಕ್ಷಣ ಈಗ ಮುನ್ನಣೆಯಲ್ಲಿದೆ. ಧರ್ಮ, ಸಂಸ್ಕೃತಿ, ನ್ಯಾಯ ನೀತಿಯ ಯೋಚನೆಗಳು ನಮ್ಮನ್ನು ಬಿಟ್ಟು ಹೋಗಬಾರದು, ಜೀವನ ಗೆಲ್ಲಲು ಎಲ್ಲವೂ ಬೇಕು ಎಂದು ಹುಬ್ಬಳ್ಳಿ ಮೂರುಸಾವಿರ ಮಠದ ಜಗದ್ಗುರು ಡಾ.ಗುರುಸಿದ್ಧ ರಾಜಯೋಗೀಂದ್ರ ಮಹಾಸ್ವಾಮಿಗಳು ತಿಳಿಸಿದರು.

ಹಾನಗಲ್ಲ: ಕೌಶಲ್ಯಾಧಾರಿತ ಶಿಕ್ಷಣ ಈಗ ಮುನ್ನಣೆಯಲ್ಲಿದೆ. ಧರ್ಮ, ಸಂಸ್ಕೃತಿ, ನ್ಯಾಯ ನೀತಿಯ ಯೋಚನೆಗಳು ನಮ್ಮನ್ನು ಬಿಟ್ಟು ಹೋಗಬಾರದು, ಜೀವನ ಗೆಲ್ಲಲು ಎಲ್ಲವೂ ಬೇಕು ಎಂದು ಹುಬ್ಬಳ್ಳಿ ಮೂರುಸಾವಿರ ಮಠದ ಜಗದ್ಗುರು ಡಾ.ಗುರುಸಿದ್ಧ ರಾಜಯೋಗೀಂದ್ರ ಮಹಾಸ್ವಾಮಿಗಳು ತಿಳಿಸಿದರು.

ಪಟ್ಟಣದ ಶ್ರೀ ಕುಮಾರೇಶ್ವರ ಶಿಕ್ಷಣ ಮಹಾವಿದ್ಯಾಲಯದ ಬಿಇಡಿ ಪ್ರಶಿಕ್ಷಣಾರ್ಥಿಗಳಿಗೆ ದೀಪದಾನ ಸಮಾರಂಭ ಸಾನಿಧ್ಯವಹಿಸಿ ಉದ್ಘಾಟಿಸಿ ಮಾತನಾಡಿದ ಅವರು, ಬದುಕು ನ್ಯಾಯ ನೀತಿಯ ಚೌಕಟ್ಟಿನಲ್ಲಿರಬೇಕು. ಜೀವನ ಗೆಲ್ಲಲು ಜಾಗರೂಕತೆಯೂ ಬೇಕು. ನಾವು ಕಾಯಕ ಪ್ರಿಯರಾಗಿರೋಣ. ಗುರುವಿಗಿಂತ ಯಾರೂ ದೊಡ್ಡವರಲ್ಲ. ಶಿಕ್ಷಕ ವೃತ್ತಿ ಧರ್ಮ ಪಾಲಿಸುವಲ್ಲಿ ಒಂದಷ್ಟೂ ಲೋಪ ಮಾಡಬಾರದು. ಮುಂದಿನ ಪೀಳಿಗೆಗೆ ನಾವೂ ಆದರ್ಶವಾಗಿರಬೇಕು, ಆದರ್ಶ ಬದುಕನ್ನು ಕಲಿಸಿಕೊಡುವ ಕೆಲಸ ಆಗಬೇಕು. ಮಕ್ಕಳಿಗೆ ಸಮಾಜ ಸೇವೆ ಸಂಕಲ್ಪ ಮಾಡಿಸಬೇಕಲ್ಲದೆ ಸಮಾಜಕ್ಕಾಗಿ ಅವರಲ್ಲಿ ತುಡಿತ ಇರಬೇಕು ಎಂದರು.ಬಂಕಾಪೂರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ರಮೇಶ ತೆವರಿ ಮಾತನಾಡಿ, ಇಂದಿನ ದಿನಮಾನಗಳಲ್ಲಿ ವಿದ್ಯಾರ್ಥಿ ಹಾಗೂ ಶಿಕ್ಷಕರ ಬಾಂಧವ್ಯ ದೂರ ಸರಿಯುತ್ತಿದ್ದು, ಅದಕ್ಕೆ ಶಿಕ್ಷಣದಲ್ಲಿ ಆಗಿರುವ ಬದಲಾವಣೆಯು ಒಂದು ಕಾರಣ, ಈಗ ಗುರು ಶಿಷ್ಯರ ಸಂಬಂಧದ ಅರಿವು ಮೂಡಿಸಬೇಕಾಗಿದೆ, ಶಿಕ್ಷಕ ಹೊಸದನ್ನು ಕಾಣುವ, ಹೊಸದನ್ನು ಕಟ್ಟುವ ಮನೋಜ್ಞನಾಗಿರುತ್ತಾನೆ, ಶಿಕ್ಷಕರು ಸ್ವಯಂ ಸೇವಕರಲ್ಲದೆ, ಸಹಾನುಭೂತಿಗಳಾಗಿರಬೇಕು. ಹಾಗೆಯೆ ಧನಾತ್ಮಕ ಚಿಂತನೆ ಜೊತೆಗೆ ಕಲಾರಾಧಕರಾಗಿರಬೇಕು. ದೀಪದಾನ ಎಂದರೆ ಜ್ಞಾನವನ್ನು ಒಬ್ಬರಿಂದ ಇನ್ನೊಬ್ಬರಿಗೆ ಧಾರೆ ಎರೆಯುವುದಾಗಿದೆ. ದೀಪವು ಕತ್ತಲೆಯನ್ನು ಕಳೆದು ಬೆಳಕನ್ನು ನೀಡುತ್ತದೆ. ಹಾಗೆಯೇ ಬೆಳಕಿನಿಂದ ನಮ್ಮ ಕತ್ತಲೆಯನ್ನು ದೂರಾಗಿಸಿ ನಮ್ಮ ಬದುಕನ್ನು ಬಂಗಾರವಾಗುವಂತೆ ಮಾಡುತ್ತದೆ. ಪ್ರಶಿಕ್ಷಣಾರ್ಥಿಗಳು ತಮ್ಮ ಮುಂದಿನ ಜೀವನದಲ್ಲಿ ದೀಪದಂತೆ ಬೆಳಗಿಸಿಕೊಳ್ಳುವ ಜತೆಗೆ ಭಾರತದ ಭವಿಷ್ಯದ ಪ್ರಜೆಗಳನ್ನು ರೂಪಿಸಬೇಕು ಎಂದು ತಿಳಿಸಿದರು.

ದೀಪದಾನದ ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡಿದ ಪ್ರಾಚಾರ್ಯ ಡಾ. ಎನ್. ಸದಾಶಿವಪ್ಪ, ವಿದ್ಯಾರ್ಥಿ ದಿಸೆಯಲ್ಲೆ ಮಕ್ಕಳಿಗೆ ಉತ್ತಮ ನಡೆ-ನುಡಿ ಸಂಸ್ಕಾರ ನೀಡುವ ಮೂಲಕ ಸಮಾಜದಲ್ಲಿ ಮಾದರಿಯಾದ ಪ್ರಜೆಗಳನ್ನು ರೂಪಿಸುವ ಕಾರ್ಯಮಾಡಬೇಕು. ಶಿಕ್ಷಕ ವೃತ್ತಿ ಗೌರವಯುತವಾದ ವೃತ್ತಿಯಾಗಿದ್ದು, ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಶಿಕ್ಷಕರಾದವರು ಕಾರಣವಾಗಬೇಕು, ತಮ್ಮ ವೃತ್ತಿ ದಕ್ಷತೆಯನ್ನು ತೋರಿಸುವ ಜೊತೆಗೆ ಮಕ್ಕಳ ಭವಿಷ್ಯಕ್ಕೆ ಭದ್ರ ಬುನಾದಿ ಹಾಕಬೇಕು.ಡಾ. ಪ್ರಕಾಶ ಜಿ.ವಿ. ಪ್ರಾಸ್ತಾವಿಕ ನುಡಿಯನ್ನಾಡಿದರು. ಡಾ. ವಿಶ್ವನಾಥ ಬೊಂದಾಡೆ ದತ್ತಿನಿಧಿ ಕಾರ್ಯಕ್ರಮ ನಡೆಸಿಕೊಟ್ಟರು. ಶ್ರೀ ಕುಮಾರೇಶ್ವರ ವಿದ್ಯಾವರ್ಧಕ ಟ್ರಸ್ಟನ ಸಲಹಾ ಮಂಡಳಿಯ ಸದಸ್ಯರಾದ ನಾಗಪ್ಪಾ ಸವದತ್ತಿ, ಬಸಣ್ಣಾ ಎಲಿ ಅತಿಥಿಗಳಾಗಿದ್ದರು. ರುದ್ರಗೌಡಾ ಕಲ್ಲನಗೌಡ್ರ, ಮತ್ತು ನಾಗಲಕ್ಮೀ ಬೇವಿನಮರದ ಪ್ರಶಿಕ್ಷಣಾರ್ಥಿ ಅನಿಸಿಕೆ ಹೇಳಿದರು. ದತ್ತಿನಿಧಿ ಕಾರ್ಯಕ್ರಮದಲ್ಲಿ ಶಿಕ್ಷಣ ಮಹಾವಿದ್ಯಾಲಯಕ್ಕೆ ಪ್ರಥಮ ಸ್ಥಾನ ಪಡೆದ ಸಭಿಹಾಬಾನು ಭಾಷಾ ಶೇಖ್, ದ್ವಿತೀಯ ಸ್ಥಾನ ಪಡೆದ ಸ್ಫೂರ್ತಿ ಕೇಶವ ನಾಯ್ಕ, ತೃತೀಯ ಸ್ಥಾನ ಪಡೆದ ದಾನೇಶ್ವರಿ ಬೆಳಕೆರಿ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಆಶಾ ವಿ.ಎಸ್. ಪ್ರಾರ್ಥನಾ ನೃತ್ಯ ಮಾಡಿದರು. ಲಕ್ಷ್ಮಿ ಕುಳೆನೂರ ಸ್ವಾಗತಿಸಿದರು. ಚೈತ್ರಾ ಮಹೇಂದ್ರಕರ ಅತಿಥಿಗಳನ್ನು ಪರಿಚಸಿದರು. ಕಾವ್ಯಾ ಮಲಗುಂದ ಮತು ರೇಶ್ಮಾ ಸಾವಕ್ಕನವರ ನಿರೂಪಿಸಿದರು. ವೇಣು ತಳವಾರ ವಂದಿಸಿದರು.