ಮಂಗಳೂರಿನ ದೇರಳಕಟ್ಟೆಯ ಜಸ್ಟೀಸ್ ಕೆ.ಎಸ್.ಹೆಗ್ಡೆ ಚಾರಿಟೇಬಲ್ ಆಸ್ಪತ್ರೆಯು ರೋಗಿಗಳ ಪಾಲಿನ ಆಶಾಕಿರಣವಾಗಿ ಪರಿಣಮಿಸಿದೆ. ಅತ್ಯಾಧುನಿಕ ತಂತ್ರಜ್ಞಾನಗಳಿಂದ ಕೂಡಿದ ಎನ್‌ಎಬಿಎಚ್‌ ರಾಷ್ಟ್ರೀಯ ಮಾನ್ಯತಾ ಮಂಡಳಿಯಿಂದ ಅಧಿಕೃತ ಮಾನ್ಯತೆ ಪಡೆದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಾಗಿ ರೋಗಿಗಳಿಗೆ ಗುಣಮಟ್ಟದ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ನೀಡುವ ಮೂಲಕ ಸೇವೆ ಸಲ್ಲಿಸುತ್ತಿದೆ ಎಂದು ಆಸ್ಪತ್ರೆ ಸಹಾಯಕ ವೈದ್ಯಕೀಯ ಅಧೀಕ್ಷಕ ಡಾ.ಶಿರಾಲ್ ಹೆಗ್ಡೆ ತಿಳಿಸಿದ್ದಾರೆ.

- ಬಡರೋಗಿಗಳ ಆಶಾಕಿರಣವಾದ ಮಂಗಳೂರಿನ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ: ಡಾ.ಶಿರಾಲ್ ಹೆಗ್ಡೆ ಮಾಹಿತಿ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಮಂಗಳೂರಿನ ದೇರಳಕಟ್ಟೆಯ ಜಸ್ಟೀಸ್ ಕೆ.ಎಸ್.ಹೆಗ್ಡೆ ಚಾರಿಟೇಬಲ್ ಆಸ್ಪತ್ರೆಯು ರೋಗಿಗಳ ಪಾಲಿನ ಆಶಾಕಿರಣವಾಗಿ ಪರಿಣಮಿಸಿದೆ. ಅತ್ಯಾಧುನಿಕ ತಂತ್ರಜ್ಞಾನಗಳಿಂದ ಕೂಡಿದ ಎನ್‌ಎಬಿಎಚ್‌ ರಾಷ್ಟ್ರೀಯ ಮಾನ್ಯತಾ ಮಂಡಳಿಯಿಂದ ಅಧಿಕೃತ ಮಾನ್ಯತೆ ಪಡೆದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಾಗಿ ರೋಗಿಗಳಿಗೆ ಗುಣಮಟ್ಟದ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ನೀಡುವ ಮೂಲಕ ಸೇವೆ ಸಲ್ಲಿಸುತ್ತಿದೆ ಎಂದು ಆಸ್ಪತ್ರೆ ಸಹಾಯಕ ವೈದ್ಯಕೀಯ ಅಧೀಕ್ಷಕ ಡಾ.ಶಿರಾಲ್ ಹೆಗ್ಡೆ ತಿಳಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಸ್ಪತ್ರೆಯು 1 ಸಾವಿರ ಹಾಸಿಗೆಗಳ ಸೌಲಭ್ಯ ಹೊಂದಿದ್ದು, 20 ಸುಸಜ್ಜಿತ ಆಪರೇಷನ್ ಕೊಠಡಿ, 120 ಹಾಸಿಗೆಗಳ ತೀವ್ರ ನಿಗಾ ಘಟಕಗಳು, ತುರ್ತು ಚಿಕಿತ್ಸಾ ಘಟಗಳನ್ನು ಹೊಂದಿದೆ. ಆ ಮೂಲಕ ದಿನದ 24 ಗಂಟೆಯೂ ನಿರಂತರ ಸೇವೆ ಒದಗಿಸುವ ಕಾರ್ಯ ಮಾಡುತ್ತಿದೆ ಎಂದರು.

ಹೃದ್ರೋಗ ಚಿಕಿತ್ಸೆ, ಹೃದಯ ಶಸ್ತ್ರಚಿಕಿತ್ಸೆ, ಮಕ್ಕಳ ಶಸ್ತ್ರಚಿಕಿತ್ಸೆ, ಪ್ಲಾಸ್ಟಿಕ್ ಸರ್ಜರಿ, ಮೆಡಿಕಲ್ ಗ್ಯಾಸ್ಟ್ರೋಎಂಟರಾಲಜಿ, ಸರ್ಜಿಕಲ್ ಗ್ಯಾಸ್ಟ್ರೋ ಎಂಟರಾಲಜಿ (ಉದರ ಮತ್ತು ಕರುಳು ಸಂಬಂಧಿ ಕಾಯಿಲೆ ಪತ್ತೆ ಮತ್ತು ಶಸ್ತ್ರಚಿಕಿತ್ಸೆ), ನರರೋಗ ಚಿಕಿತ್ಸೆ, ಮೆದಳು ಮತ್ತು ನರರೋಗ ಶಸ್ತ್ರಚಿಕಿತ್ಸೆ, ಮೂತ್ರಪಿಂಡ ಚಿಕಿತ್ಸೆ, ಯುರೋಲಾಜಿ ವಿಭಾಗಗಳು, ಆಯಾ ಕಾಲಕ್ಕೆ ತಕ್ಕಂತೆ ಬದಲಾಗುತ್ತಿರುವ ಎಲ್ಲ ಆಧುನಿಕ ಸೌಲಭ್ಯಗಳನ್ನು ಅಳವಡಿಸಿಕೊಂಡು, ಕಾರ್ಯ ನಿರ್ವಹಿಸುತ್ತಿದೆ ಎಂದು ಹೇಳಿದರು.

ಆಸ್ಪತ್ರೆಯು ಎನ್ಎಬಿಎಲ್‌ ಮಾನ್ಯತೆ ಪಡೆದ ಪ್ರಯೋಗಾಲಯ ಹೊಂದಿದೆ. ರೋಗ ನಿರ್ಣಯ ಪರೀಕ್ಷೆ, ಹಿಸ್ಟೋಪಥಾಲಜಿ, ಹೆಮಟಾಲಜಿ, ಸೈಟೋಲಜಿ, ಬಯೋ ಕೆಮಿಸ್ಟ್ರಿ, ಮೈಕ್ರೋ ಬಯಾಲಜಿ ಕ್ಷೇತ್ರದಲ್ಲಿ ಪರಿಣಾಮಕಾರಿ ರೋಗ ನಿರ್ಣಯ ಸೇವೆ ಒದಗಿಸುತ್ತಿದೆ. ಕೆ.ಎಸ್.ಹೆಗ್ಡೆ ಆಸ್ಪತ್ರೆಯಲ್ಲಿ ಆಧುನಿಕ ರೊಬೋಟೆಕ್ ಶಸ್ತ್ರಚಿಕಿತ್ಸೆ ಆರಂಭಿಸಿದ್ದು, ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀ ರೋಗ ವಿಭಾಗ, ಯುರೋಲಾಜಿ, ಕ್ಯಾನ್ಸರ್ ವಿಭಾಗ, ಸಾಮಾನ್ಯ ಶಸ್ತ್ರಚಿಕಿತ್ಸೆ, ಸರ್ಜಿಕಲ್ ಗ್ಯಾಸ್ಟ್ರೋ ವಿಭಾಗದಲ್ಲಿ ಅತ್ಯಂತ ಸಂಕೀರ್ಣ ಕಾರ್ಯ ವಿಧಾನಗಳನ್ನು ನಿರ್ವಹಿಸಲು ಆಧುನಿಕ ತಂತ್ರಜ್ಞಾನ ಬಳಸುತ್ತಿದ್ದೇವೆ ಎಂದು ತಿಳಿಸಿದರು.

ರೊಬೊಟಿಕ್ ಬಳಸಿ ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆ ಪರಿಣಾಮಕಾರಿಯಾಗಿದೆ. ಇಂತಹ 200ಕ್ಕೂ ಹೆಚ್ಚು ಶಸ್ತ್ರಚಿಕಿತ್ಸೆ ಮಾಡಿದ್ದೇವೆ. ಇದರಿಂದ ರೋಗಿಯು ತ್ವರಿತವಾಗಿ ಗುಣಮುಖರಾಗಲು ಸಹಾಯಕ ಆಗುತ್ತದೆ. ಶೀಘ್ರ ಚೇತರಿಕೆ, ಕಡಿಮೆ ರಕ್ತ ಸೋರಿಕೆ, ರೋಗಿಯು ಶೀಘ್ರವೇ ಗುಣಮುಖರಾಗುವುದು. ಆಸ್ಪತ್ರೆಯಲ್ಲಿ ಇರುವಿಕೆಯ ಅವಧಿ ಕಡಿತ ಇವೆಲ್ಲಾ ರೊಬೋಟಿಕ್ ಶಸ್ತ್ರಚಿಕಿತ್ಸೆಯ ಪ್ರಮುಖ ಧನಾತ್ಮಕ ಪ್ರಯೋಜನಗಳಾಗಿವೆ. ಜೀರ್ಣಾಂಗ ವ್ಯೂಹದ ಚಿಕಿತ್ಸೆಗಾಗಿ ವೈದ್ಯಕೀಯ ಗ್ಯಾಸ್ಟ್ರೋ ಎಂಟರಾಲಜಿ ವಿಭಾಗ ಕೆಲಸ ಮಾಡುತ್ತಿದ್ದು, ನಿಟ್ಟೆ ಸೆಂಟರ್ ಫಾರ್‌ ಡೈಜೆಸ್ಟಿವ್ ಡಿಸ್‌ಆರ್ಡರ್‌ ಕೇಂದ್ರದಡಿ ಅತ್ಯಾಧುನಿಕ ಸೌಕರ್ಯದೊಂದಿಗೆ ಅತ್ಯುತ್ತಮ ಸೇವೆಯೊಂದಿಗೆ ಕ್ಲಿಷ್ಟಕರ ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ನಿರ್ವಹಿಸುವಲ್ಲಿ ಸಂಸ್ಥೆ ಹೆಸರಾಗಿದೆ ಎಂದು ವಿವರಿಸಿದರು.

ಹಣದ ಕೊರತೆಯಿಂದ ಯಾರೂ ಚಿಕಿತ್ಸೆಯಿಂದ ವಂಚಿತರಾಗಬಾರದು ಎಂಬುದು ಕೆ.ಎಸ್.ಹೆಗ್ಡೆ ಆಸ್ಪತ್ರೆಯ ಧ್ಯೇಯ. ಆಯುಷ್ಮಾನ ಭಾರತ್‌, ಇಸಿಎಚ್‌ಎಸ್, ಇಎಸ್ಐ, ಕೆಎಸ್ಸಾರ್ಟಿಸಿ ವಿಮೆ, ಮೆಸ್ಕಾಂ, ಆರೋಗ್ಯ ಭಾಗ್ಯ, ಕೊಂಕಣ್ ರೈಲ್ವೆ ಸೇರಿದಂತೆ ಬಹುತೇಕ ಎಲ್ಲ ಸರ್ಕಾರಿ ಆರೋಗ್ಯ ವಿಮೆ ಮತ್ತು ಬಹುತೇಕ ಖಾಸಗಿ ವಿಮೆಗಳಡಿ ನಗದುರಹಿತ ಚಿಕಿತ್ಸೆ ಸಂಸ್ಥೆಯಲ್ಲಿ ಲಭ್ಯವಿದೆ. ಆಸ್ಪತ್ರೆಯ ಸ್ವಯಂ ವಿಮೆ ಕಾರ್ಡ್‌ ಕ್ಷೇಮ ಹೆಲ್ತ್‌ ಕಾರ್ಡ್ ಆರೋಗ್ಯ ವಿಮೆ ಯೋಜನೆಯು ನಗದು ರಹಿತ ಸೇವೆ ನೀಡುವಲ್ಲಿ ಸಾವಿರಾರು ಕುಟುಂಬಗಳಿಗೂ ಆಸರೆಯಾಗಿದೆ ಎಂದು ಮಾಹಿತಿ ನೀಡಿದರು.

ಸಂಸ್ಥೆಯ ಸಾರ್ವಜನಿಕ ಸಂಪರ್ಕ ವ್ಯವಸ್ಥಾಪಕ ಹೇಮಂತ್ ಶೆಟ್ಟಿ, ಶ್ರೀರಕ್ಷಾ ಟ್ರಸ್ಟ್ ಅಧ್ಯಕ್ಷ ರವಿ, ಹಾಲಿವಾಣದ ಶಿವಪ್ಳ ಆಂಜನೇಯ ಇತರರು ಇದ್ದರು.

- - -

(ಬಾಕ್ಸ್‌) * ಕೈಗೆಟುಕುವ ದರದಲ್ಲಿ ಗುಣಮಟ್ಟದ ಸೇವೆ ಅತ್ಯಂತ ಗುಣಮಟ್ಟದ ಸೇವೆಗಳನ್ನು ಜನಸಾಮಾನ್ಯರಿಗೆ ಕೈಗೆಟುಕುವ ದರದಲ್ಲಿ ಆಸ್ಪತ್ರೆ ನೀಡುತ್ತಿದೆ. ಸುತ್ತಮುತ್ತಲಿನ ಪ್ರದೇಶ, ಜಿಲ್ಲೆಗಳಿಂದ, ಉತ್ತರ ಕರ್ನಾಟಕ, ನೆರೆಯ ಕೇರಳದಿಂದಲೂ ನಿತ್ಯ 2500ಕ್ಕೂ ಹೆಚ್ಚು ಹೊರ ರೋಗಿಗಳು ಆಸ್ಪತ್ರೆಗೆ ಭೇಟಿ ನೀಡಿ, ಸೇವೆ ಪಡೆಯುತ್ತಿದ್ದಾರೆ. ವೈದ್ಯಕೀಯ ಕ್ಷೇತ್ರದ ಆಧುನೀಕರಣ, ನವೀನತೆಗೆ ಒತ್ತು ನೀಡುವ ಆಸ್ಪತ್ರೆಯ ನ್ಯೂಕ್ಲಿಯಲ್ ಮೆಡಿಸಿನ್‌, ರೊಬೊಟಿಕ್‌ ಸರ್ಜರಿಯಂತಹ ಅತ್ಯಾಧುನಿಕ ಸೌಲಭ್ಯಗಳು ವೈದ್ಯಕೀಯ ಕ್ಷೇತ್ರದಲ್ಲಿ ಮುನ್ನುಗ್ಗುತ್ತಿವೆ. ಆರೋಗ್ಯ ಕ್ಷೇತ್ರದ ಕಾಳಜಿ, ಗುಣಮಟ್ಟದಲ್ಲಿನ ಶ್ರೇಷ್ಠತೆ, ಅತ್ಯಂತ ಕಡಿಮೆ ದರದ ಚಿಕಿತ್ಸಾ ಲಭ್ಯತೆಯಿಂದ ಮಂಗಳೂರಿನ ಜಸ್ಟೀಸ್‌ ಕೆ.ಎಸ್.ಹೆಗಡೆ ಚಾರಿಟಬಲ್ ಆಸ್ಪತ್ರೆ ರೋಗಿಗಳ ಪಾಲಿನ ಆಶಾಕಿರಣವಾಗಿದೆ. ದಾವಣಗೆರೆ, ನೆರೆಯ ಜಿಲ್ಲೆಗಳ ಜನರು ಸಹ ಹೆಚ್ಚಿನ ಮಾಹಿತಿಗೆ ಶ್ರೀರಕ್ಷಾ ಟ್ರಸ್ಟ್ ಅಧ್ಯಕ್ಷ ಪಿ.ರವಿ (ಮೊ.78997 74727) ಇಲ್ಲಿಗೆ ಸಂಪರ್ಕಿಸಲು ಡಾ.ಶಿರಾಲ್ ಹೆಗ್ಡೆ ಮನವಿ ಮಾಡಿದರು.

- - -

-11ಕೆಡಿವಿಜಿ2: ದಾವಣಗೆರೆಯಲ್ಲಿ ಮಂಗಳವಾರ ಮಂಗಳೂರಿನ ಜಸ್ಟೀಸ್ ಕೆ.ಎಸ್.ಹೆಗ್ಡೆ ಚಾರಿಟಬಲ್ ಆಸ್ಪತ್ರೆಯ ಸಹಾಯಕ ವೈದ್ಯಕೀಯ ಅಧೀಕ್ಷಕ ಡಾ.ಶಿರಾಲ್ ಹೆಗ್ಡೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.