Justice Shivaraj Patil's achievement is amazing: Justice Indresh

ವಿವೇಕಾನಂದ ಜಯಂತಿ

--

-ಶಿವರಾಜ ಪಾಟೀಲ ರಚಿಸಿದ ‘ಶುಭ ರಾತ್ರಿಗೊಂದು ನುಡಿ ಮಂಥನ-365’ । ‘ಗುಡ್ ನೈಟ್-365’ ಕೃತಿಗಳ ಲೋಕಾರ್ಪಣೆ

--

ಕನ್ನಡಪ್ರಭ ವಾರ್ತೆ ಕಲಬುರಗಿ

ಜಸ್ಟಿಸ್ ಶಿವರಾಜ ಪಾಟೀಲರು ‘ಚಕ್ಕಡಿಯಿಂದ ತಕ್ಕಡಿವರೆಗೆ’ ಸಾಧನೆ ಮಾಡಿದವರು, ಅವರ ಜೀವನ ಮೌಲ್ಯಗಳು ಪ್ರತಿಯೊಬ್ಬರು ಅರಿತುಕೊಳ್ಳಬೇಕೆಂದು ಹೈಕೋರ್ಟ್‌ ನ್ಯಾ. ಇ.ಎಸ್. ಇಂದ್ರೇಶ್ ಹೇಳಿದರು.

ಪಂಡಿತ ರಂಗಮಂದಿರದಲ್ಲಿ ಪಾಟೀಲ ಪ್ರತಿಷ್ಠಾನ ಹಾಗೂ ಸರ್ವಜ್ಞ ಮಹಾವಿದ್ಯಾಲಯ ಆಶ್ರಯದಲ್ಲಿ ಆಯೋಜಿಸಿದ್ದ ನ್ಯಾ. ಡಾ. ಶಿವರಾಜ ಪಾಟೀಲರು ರಚಿಸಿದ ‘ಶುಭ ರಾತ್ರಿಗೊಂದು ನುಡಿ ಮಂಥನ-365’, ‘ಗುಡ್ ನೈಟ್-365’ ಕೃತಿಗಳ ಲೋಕಾರ್ಪಣೆ ಮಾಡಿ, ಸ್ವಾಮಿ ವಿವೇಕಾನಂದರ ಜಯಂತ್ಯುತ್ಸವದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

“ಜಸ್ಟಿಸ್ ಶಿವರಾಜ ಪಾಟೀಲರು ಬರೀ ನ್ಯಾಯಮೂರ್ತಿಗಳಾಗಿರಲಿಲ್ಲ, ಸಮಾಜದ ಚಿಂತನೆಗೆ ಸದಾ ಕ್ರಿಯಾಶೀಲ ವ್ಯಕ್ತಿಯಾಗಿದ್ದಾರೆ ಎಂದರು. ನ್ಯಾಯಮೂರ್ತಿ ಶಿವರಾಜ ವಿ. ಪಾಟೀಲರು ಒಬ್ಬ ಸಂಯಮ, ಸಹೃದಯಿ, ಸರಳತೆ, ಸಮಾಜದ ಬಗ್ಗೆ ಚಿಂತನೆವುಳ್ಳ ಮೇರು ವ್ಯಕ್ತಿ , ಪಾಟೀಲರು ‘ಚಕ್ಕಡಿಯಿಂದ ತಕ್ಕಡಿವರೆಗೆ’ ಸಾಧಿಸುತ್ತ ಜೀವನ ಮೌಲ್ಯಗಳೊಂದಿಗೆ ಬದುಕುತ್ತಿದ್ದಾರೆಂದು ಮೆಚ್ಚುಗೆ ಮಾತನ್ನಾಡಿದರು.

ವಿದ್ಯಾರ್ಥಿಗಳಲ್ಲಿ ಸಾಮಾನ್ಯ ಜ್ಞಾನ ಇಲ್ಲವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ನಾವು ಟೆಕ್ನಾಲಜಿ, ಕೃತಕ ಬುದ್ಧಿಮತ್ತೆ ಯುಗದಲ್ಲಿ ಬದುಕಿದ್ದೇವೆ. ಏನೇ ಟೆಕ್ನಾಲಜಿ ಇದ್ದರೂ ಮೆದುಳಿಗೆ ಇರುವಷ್ಟು ಬುದ್ದಿಶಕ್ತಿ ಯಾವ ಟೆಕ್ನಾಲಜಿಗೂ ಇಲ್ಲ. ಬುದ್ಧಿಶಕ್ತಿಯಿಂದ ಕೆಲಸ ಮಾಡಿದರೆ ಮಾತ್ರ ಮುಂದೆ ಬರಲು ಸಾಧ್ಯ ಎಂದು ನ್ಯಾ. ಇಂದ್ರೇಶ್‌ ಹೋಳಿದರು.

ಜನರಲ್ಲಿ ದೇಶಪ್ರೇಮ ಕಡಿಮೆ ಆಗುತ್ತಿದೆ. ಎಲ್ಲರೂ ಮರೆತು ಹೋಗುತ್ತಿದ್ದಾರೆ. ಮನುಷ್ಯ ತನ್ನ ಮನುಷ್ಯತ್ವ ಕಳೆದುಕೊಂಡಾಗ ಮಾತ್ರ ಬಡವನಾಗುತ್ತಾನೆ. ನಮ್ಮಲ್ಲಿ ಮನುಷ್ಯತ್ವ ಇರದೇ ಇದ್ದರೆ, ಬದುಕಲಿಕ್ಕೆ ಆಗಲ್ಲ. ನಾವು ಹೃದಯದಿಂದ ಬದುಕಿದರೆ ಎಲ್ಲ ಹಕ್ಕುಗಳು, ಮೌಲ್ಯಗಳು ಸಿಗುತ್ತದೆ. ನಾವು ಯಾವಾಗಲು ಜನರ ಜತೆಗೆ ಹೊಂದಾಣಿಕೆಯಿಂದ ಬೆರೆಯಬೇಕು. ಜಸ್ಟಿಸ್ ಶಿವರಾಜ ಪಾಟೀಲರು ಸ್ನೇಹ ಜೀವಿ. ಅವರು ಸಮಾಜಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಹೀಗಾಗಿ ನಾವು ಅವರಂತೆ ಬಾಳಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಜಿ.ಎಲ್. ಲಕ್ಷ್ಮೀನಾರಾಯಣರು ಮಾತನಾಡಿ, ಸ್ವಾಮಿ ವಿವೇಕಾನಂದರ ಜೀವನ ಮೌಲ್ಯಗಳನ್ನು ಅರಿತುಕೊಳ್ಳಬೇಕು” ಎಂದರು. ಡಾ. ಶಿವರಾಜ ವಿ. ಪಾಟೀಲರು ರಚಿಸಿದ ‘ಶುಭ ರಾತ್ರಿಗೊಂದು ನುಡಿ ಮಂಥನ-365’, ‘ಗುಡ್ ನೈಟ್-365’ ಕೃತಿಗಳನ್ನು ಮೆರವಣಿಗೆಯಲ್ಲಿ ತಂದು ಬಿಡುಗಡೆ ಮಾಡಲಾಯ್ತು.

ಸರ್ವಜ್ಞ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರಾದ ಪ್ರೊ. ಚನ್ನಾರಡ್ಡಿ ಪಾಟೀಲ ಮಾತನಾಡಿ, ಶಿವರಾಜ ಪಾಟೀಲರ ಜೀವನ ಇಂದಿನ ಯುವಕರಿಗೆ ಆದರ್ಶಪ್ರಾಯವಾಗಿದೆ. ಅವರ ವಿಚಾರಗಳು ಎಲ್ಲರಿಗೂ ತಲುಪಿ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆಯಾದರೆ ಸಾರ್ಥಕ. ಇದೇ ಕಾರಣಕ್ಕೆ ಅವರ ಜನ್ಮದಿನದಂದು ಕೃತಿಗಳನ್ನು ಲೋಕಾರ್ಪಣೆ ಮಾಡಲಾಗಿದೆ ಎಂದರು.

ವಿಶ್ರಾಂತ ಪ್ರಾಧ್ಯಾಪಕ ಡಾ. ಕಲ್ಯಾಣರಾವ್‌ ಪಾಟೀಲ ಕೃತಿಗಳ ಕುರಿತು ಮಾತನಾಡಿದರು. ಡಾ. ಎಚ್. ವೀರಭದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ನೇತ್ರತಜ್ಞ ಡಾ. ವಿಶ್ವನಾಥ ರಡ್ಡಿ, ಹಿರಿಯ ಸಿವಿಲ್ ನ್ಯಾ. ಶ್ರೀನಿವಾಸ್‌ ನವಲೆ, ಎಸ್. ಎಂ. ಪಾಟೀಲ, ಎಸ್.ಎಂ. ಪಾಟೀಲ, ಡಾ. ಎಸ್.ಬಿ.ಕಾಮರೆಡ್ಡಿ, ಬಿ.ಆರ್.ಪಾಟೀಲ್, ಗೌರೀಶ್, ಬಸವರಾಜ ಕರೆಡ್ಡಿ, ಬಿ.ಎಸ್. ದೇಸಾಯಿ, ಅಭಿಷೇಕ್ ಪಾಟೀಲ, ರಾಕೇಶ್ ಪಾಟೀಲ, ಪ್ರಭುಗೌಡ, ಪ್ರಶಾಂತ ಕುಲಕರ್ಣಿ, ಕರುಣೇಶ್ ಹಿರೇಮಠ, ಗುರುರಾಜ ಕುಲಕರ್ಣಿ ಇದ್ದರು. ಡಾ. ವಿದ್ಯಾವತಿ ನಿರೂಪಿಸಿದರು. ತ್ರಿವೇಣಿ ವಂದಿಸಿದರು.

ಫೋಟೋ- ಸರ್ವಜ್ಞ ಸಮಾರಂಭ