ಜ್ಯೋತಿ ಸೌಹಾರ್ದ ಸಂಘಕ್ಕೆ 1.72 ಕೋಟಿ ಲಾಭ

| Published : Apr 07 2025, 12:30 AM IST / Updated: Apr 07 2025, 12:31 AM IST

ಸಾರಾಂಶ

ಜ್ಯೋತಿ ವಿವಿಧೋದ್ದೇಶ ಸಂಸ್ಥೆ ಮೂಲಕ ಜ್ಯೋತಿ ಬಜಾರ್, ಬಟ್ಟೆ ಅಂಗಡಿ, ಮೆಡಿಕಲ್ ಸ್ಟೋರ್ಸ್ ಮುಂತಾದ ಹದಿನೆಂಟು ವಿಭಾಗಗಳನ್ನು ನಡೆಸಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ನಿಪ್ಪಾಣಿ

2024-25ರಲ್ಲಿ ಜ್ಯೋತಿ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ ನಿಯಮಿತ ಯಕ್ಸಂಬಾ ಸಂಸ್ಥೆಯು 1 ಕೋಟಿ 72 ಲಕ್ಷ 69 ಸಾವಿರದ 697 ರು. ಲಾಭ ಗಳಿಸಿದೆ ಎಂದು ಸಂಸ್ಥಾಪಕರು ಹಾಗೂ ಮಾಜಿ ಸಂಸದರಾದ ಅಣ್ಣಾ ಸಾಹೇಬ ಜೊಲ್ಲೆ ಮಾಹಿತಿ ನೀಡಿದರು.

ಶ್ರೀ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜ್ಯೋತಿ ವಿವಿಧೋದ್ದೇಶ ಸಂಸ್ಥೆ ಮೂಲಕ ಜ್ಯೋತಿ ಬಜಾರ್, ಬಟ್ಟೆ ಅಂಗಡಿ, ಮೆಡಿಕಲ್ ಸ್ಟೋರ್ಸ್ ಮುಂತಾದ ಹದಿನೆಂಟು ವಿಭಾಗಗಳನ್ನು ನಡೆಸಲಾಗುತ್ತಿದೆ. ಸದ್ಯ 63 ಶಾಖೆಗಳಿಂದ ಆರ್ಥಿಕ ವಹಿವಾಟು ನಡೆಯುತ್ತಿದೆ. ಈ ವರ್ಷ ಸಂಸ್ಥೆಯು 1 ಕೋಟಿ 72 ಲಕ್ಷದ 69 ಸಾವಿರದ 697 ಲಾಭ ಗಳಿಸಿದೆ. ಸಂಸ್ಥೆಯಲ್ಲಿ 43,176 ಸದಸ್ಯರಿದ್ದು, ಷೇರು ಬಂಡವಾಳ ₹2,38,98,600.00, ಮೀಸಲು ಮತ್ತು ಇತರ ನಿಧಿಗಳು ₹10.47 ಕೋಟಿ ಠೇವಣಿ ₹331.83 ಕೋಟಿಯಷ್ಟಿದ್ದು, ಸಾಲ ಮತ್ತು ಮುಂಗಡ ಮೊತ್ತ ₹163.85 ಕೋಟಿ ವಿತರಿಸಲಾಗಿದೆ. ಆದ ಕಾರಣ ಸಂಸ್ಥೆಯು ₹130.09 ಕೋಟಿ ಬ್ಯಾಂಕ್ ಬ್ಯಾಲೆನ್ಸ್ ಮತ್ತು ಹೂಡಿಕೆ ಹೊಂದಿದೆಂದರು.

ಇನ್ನು ₹344.69 ಕೋಟಿ ಕೆಲಸದ ಬಂಡವಾಳ ಲಭ್ಯವಿದೆ. ಸಂಸ್ಥೆಯಿಂದ ₹29.88 ಕೋಟಿಗಳಷ್ಟು ವಸ್ತುಗಳನ್ನು ಖರೀದಿಸಲಾಗಿದೆ. ಸಂಸ್ಥೆಯು ₹33.53 ಕೋಟಿಗಳಷ್ಟು ವಿವಿಧ ವಸ್ತುಗಳನ್ನು ಮಾರಾಟ ಮಾಡಿದೆ. ₹1.72 ಕೋಟಿ ನಿವ್ವಳ ಲಾಭವನ್ನು ಸಂಸ್ಥೆ ಗಳಿಸಿದೆ ಎಂದು ಸಂಸ್ಥಾಪಕ ಅಣ್ಣಾಸಾಹೇಬ ಜೊಲ್ಲೆ ತಿಳಿಸಿದರು.

ಅಲ್ಲದೆ, ಸಂಸ್ಥೆಯು ವಿವಿಧ ಕಂಪನಿಗಳ ವಸ್ತುಗಳನ್ನು ಸಗಟು ದರದಲ್ಲಿ ಖರೀದಿಸಿ ಅಂಗಡಿಕಾರರಿಗೆ ಲಭ್ಯವಾಗುವಂತೆ ಮಾಡಿದೆ. ಬಜಾರ್, ಬಟ್ಟೆ ಅಂಗಡಿ, ಮೆಡಿಕಲ್ ಸೇರಿದಂತೆ ಆರ್ಥಿಕ ವಹಿವಾಟಿನಲ್ಲಿಯೂ ಮುಂಚೂಣಿಯಲ್ಲಿದೆ. ಸಂಸ್ಥೆಯು ದಿನದಿಂದ ದಿನಕ್ಕೆ ಲಾಭ ಗಳಿಸುತ್ತಿದೆ ಎಂದು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಶಾಸಕಿ ಶಶಿಕಲಾ ಜೊಲ್ಲೆ, ಬಸವ ಪ್ರಸಾದ ಜೊಲ್ಲೆ, ಅಧ್ಯಕ್ಷ ಬಾಬುರಾವ್ ಮಾಳಿ, ಉಪಾಧ್ಯಕ್ಷ ವಿಶ್ವನಾಥ ಪೇಟಕರ, ನಿರ್ದೇಶಕ ಜಗದೀಶ್ ಹಿಂಗ್ಲಜೆ, ಜಗದೀಶ್ ಜಾಧವ, ರಾವಸಾಬ ಬಾಕಳೆ, ಪವನ್ ಪಾಟೀಲ್, ಅಮೃತ್ ಚಂದ್ರಕಾಂತ ಖೋತ್, ಬಾಳಾಸಾಹೇಬ ಶಿಂಧೆ, ಸವಿತಾ ಉಂದುರೆ, ಕೃಷ್ಣಪ್ಪ ಪೂಜಾರಿ, ಆನಂದ ಗಿಡ್ಡ, ಲಕ್ಷ್ಮಣ ಪ್ರಭಾತ, ಕಲ್ಲಪ್ಪ ನಾಯಿಕ, ಪ್ರಭಾರ ಪ್ರಧಾನ ವ್ಯವಸ್ಥಾಪಕ ಸಂತೋಷ ಎಸ್.ಪಾಟೀಲ, ಸಹಾಯಕ ಪ್ರಧಾನ ವ್ಯವಸ್ಥಾಪಕರು ಮಹಾಂತೇಶ ಶಿರೋಳೆ, ಸಹಾಯಕ ಪ್ರಧಾನ ವ್ಯವಸ್ಥಾಪಕರು ಸಂತೋಷ ಪೂಜಾರಿ, ಲೆಕ್ಕಾಧಿಕಾರಿ ತಾನಾಜಿ ಶಿಂಧೆ ಮೊದಲಾದವರು ಉಪಸ್ಥಿತರಿದ್ದರು.