ಮಹಾತ್ಮ ಜ್ಯೋತಿಬಾ ಫುಲೆ 19ನೇ ಶತಮಾನದ ಭಾರತದ ಶ್ರೇಷ್ಠ ಸಮಾಜ ಸುಧಾರಕರಾಗಿದ್ದು, ಅಂಧಶ್ರದ್ಧೆ, ಜಾತಿ ಪದ್ಧತಿ, ಅಸ್ಪೃಶ್ಯತೆ ಮತ್ತು ಅಸಮಾನತೆಯ ವಿರುದ್ಧ ಧ್ವನಿ ಎತ್ತಿದವರಲ್ಲಿ ಅಗ್ರಗಣ್ಯ ಸ್ಥಾನದಲ್ಲಿ ನಿಲ್ಲುತ್ತಾರೆ.

ಕನಕಗಿರಿ: ಶಿಕ್ಷಣ ಕ್ರಾಂತಿಯ ರೂವಾರಿ ಮಹಾತ್ಮ ಜ್ಯೋತಿರಾವ್ ಫುಲೆ ಅವರ 199ನೇ ಜನ್ಮ ಜಯಂತಿ ಅಂಗವಾಗಿ ಪಟ್ಟಣದ ಶ್ರೀಪಂಪಣ್ಣ ಗುಗ್ಗಳ ಶೆಟ್ರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿಶೇಷ ಉಪನ್ಯಾಸ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ತಾವರಗೇರಾ ಬುದ್ಧ ವಿಹಾರ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರದ ಡಾ.ಎರಿಸ್ವಾಮಿ ಮಾತನಾಡಿ, ಮಹಾತ್ಮ ಜ್ಯೋತಿಬಾ ಫುಲೆ 19ನೇ ಶತಮಾನದ ಭಾರತದ ಶ್ರೇಷ್ಠ ಸಮಾಜ ಸುಧಾರಕರಾಗಿದ್ದು, ಅಂಧಶ್ರದ್ಧೆ, ಜಾತಿ ಪದ್ಧತಿ, ಅಸ್ಪೃಶ್ಯತೆ ಮತ್ತು ಅಸಮಾನತೆಯ ವಿರುದ್ಧ ಧ್ವನಿ ಎತ್ತಿದವರಲ್ಲಿ ಅಗ್ರಗಣ್ಯ ಸ್ಥಾನದಲ್ಲಿ ನಿಲ್ಲುತ್ತಾರೆ. ಫುಲೆ ಅವರು ಕೇವಲ ಶಿಕ್ಷಣ ತಜ್ಞರಾಗಿರದೆ, ಒಬ್ಬ ಮಾನವತಾವಾದಿಯಾಗಿದ್ದರು. ತಮ್ಮ ಪತ್ನಿ ಸಾವಿತ್ರಿಬಾಯಿ ಅವರಿಗೆ ತಾವೇ ಶಿಕ್ಷಣ ನೀಡಿ ಅವರನ್ನು ದೇಶದ ಮೊದಲ ಮಹಿಳಾ ಶಿಕ್ಷಕಿಯನ್ನಾಗಿ ಮಾಡಿದರು. ಸಮಾಜದ ತೀವ್ರ ವಿರೋಧದ ನಡುವೆಯೂ ಈ ದಂಪತಿಗಳು ಶೋಷಿತರ ಶಿಕ್ಷಣಕ್ಕಾಗಿ ಶ್ರಮಿಸಿದ್ದಾರೆ ಎಂದು ತಿಳಿಸಿದರು.

ಇನ್ನೂ 1848ರಲ್ಲಿ ಪುಣೆಯಲ್ಲಿ ಹೆಣ್ಣು ಮಕ್ಕಳಿಗಾಗಿ ಭಾರತದ ಮೊದಲ ಶಾಲೆ ಪ್ರಾರಂಭಿಸಿದ ಜ್ಯೋತಿಬಾ ಫುಲೆ ಅವರು ಶೂದ್ರ ಮತ್ತು ಅತಿ-ಶೂದ್ರ ವರ್ಗದ ಮಕ್ಕಳಿಗಾಗಿ ಹಲವಾರು ಶಾಲೆ ತೆರೆದರು.

ಸ್ತ್ರೀ ಶಿಕ್ಷಣ ಮತ್ತು ದಲಿತೋದ್ಧಾರಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟ ಇವರು ''''ಭಾರತದ ಸಾಮಾಜಿಕ ಕ್ರಾಂತಿಯ ಪಿತಾಮಹ ಎಂದೂ ಸಹ ಕರೆಯಲ್ಪಡುತ್ತಾರೆ. ಫುಲೆ ಅವರು ಹಾಕಿಕೊಟ್ಟ ಸಮಾನತೆಯ ಹಾದಿಯು ನಂತರದ ದಿನಗಳಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಅವರಂತಹ ನಾಯಕರಿಗೆ ಸ್ಫೂರ್ತಿಯಾಯಿತು.ಅಂದು ಆ ಮಹನೀಯರು ಮಾಡಿದ ತ್ಯಾಗ, ಬಲಿದಾನ, ಹೋರಾಟಗಳೇ ನಮಗಿಂದು ಸಮಾನತೆ, ಶಿಕ್ಷಣ, ಉದ್ಯೋಗ ಹಾಗೂ ಉತ್ತಮ ಬದುಕನ್ನು ಪಡೆಯಲು ಸಾಧ್ಯವಾಗಿಸಿದೆ. ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಬೇಕು, ಜೀವನದಲ್ಲಿ ಉತ್ತಮ ಸಾಧನೆ ಮಾಡಬೇಕು ಅಂದುಕೊಂಡವರಿಗೆ ಇಂತಹ ಮಹನೀಯರ ಜೀವನ ಸ್ಫೂರ್ತಿ ಹಾಗೂ ದಾರಿದೀಪವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಬಜರಂಗ ಬಲಿ ಮಾತನಾಡಿ, ಪೈಪೋಟಿ ಹೆಚ್ಚುತ್ತಿರುವ ಇಂದಿನ ದಿನಮಾನಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಸತತ ಪರಿಶ್ರಮದ ಜತೆಗೆ ತಾಳ್ಮೆ ಬೇಕು. ''''ಆಳಾಗಿ ದುಡಿ, ಅರಸನಾಗಿ ಉಣ್ಣು ಎಂಬ ಮಾತಿನಂತೆ ಬಹುಶಃ ಮೂರು ವರ್ಷ ನಾವು ಪಡುವ ಸತತ ಪರಿಶ್ರಮ ನಮ್ಮನ್ನು ಸುಖವಾಗಿ ಬದುಕಲು ದಾರಿ ಮಾಡಿಕೊಡಬಲ್ಲದು. ವಿದ್ಯಾರ್ಥಿ ದೆಸೆಯಿಂದಲೇ ಅಧ್ಯಯನಶೀಲತೆ, ಶಿಸ್ತು, ಸಂಯಮದಂತಹ ಗುಣ ರೂಢಿಸಿಕೊಳ್ಳುವುದು ನಮ್ಮನ್ನು ಉನ್ನತ ಸ್ಥಾನಮಾನಕ್ಕೆ ಕೊಂಡೊಯ್ಯುತ್ತದೆ ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ವಕೀಲ ಕುಷ್ಟಗಿಯ ಬೆಟ್ಟಪ್ಪ ಯತ್ನಟ್ಟಿ ಹಾಗೂ ಬಸವಂತಪ್ಪ ಚವ್ಹಾಣ ಅತಿಥಿಗಳಾಗಿ ಭಾಗವಹಿಸಿದ್ದರು‌.

ಇಂಗ್ಲೀಷ್ ವಿಭಾಗದ ಮುಖ್ಯಸ್ಥರು ಹಾಗೂ ಐಕ್ಯೂಎಸಿ ಸಂಚಾಲಕ ರಕ್ಷಿತ್.ಎ, ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರು ಹಾಗೂ ಎನ್ಎಸ್ಎಸ್ ಘಟಕದ ಸಂಯೋಜಕ ವೀರೇಶ್ ಕೆಂಗಲ್, ಹಿರಿಯ ಉಪನ್ಯಾಸಕ ಅಮರೇಶ ವೆಂಕಟಾಪುರ, ಬಾಲಪ್ಪ ಕುರಿ, ವಿನಯ್ ಕುಮಾರ್, ವಿಜಯ್ ಸರೋದೆ, ಬಸವರಾಜ್ ಚಿಗರಿ, ಹಲಿಗೆಮ್ಮ, ಬೋರಯ್ಯ ಸೇರಿ ಇತರರು ಇದ್ದರು.