ಬಹುಮುಖ ವ್ಯಕ್ತಿತ್ವದ ಜನಾನುರಾಗಿ ಕೆ.ಎಚ್.ಶ್ರೀನಿವಾಸ್

| Published : Aug 31 2024, 01:33 AM IST

ಸಾರಾಂಶ

ಅರಸು, ಹೆಗಡೆ ನಿಟಕವರ್ತಿಯಾಗಿ ಹಲವು ಹುದ್ದೆ ನಿರ್ವಹಣೆ ಮಾಡಿದ್ದ ಕೆ.ಎಚ್.ಶ್ರೀನಿವಾಸ್ ಅಪಾರ ಓದಿನ ಹಸಿವಿದ್ದ ಮುತ್ಸದ್ದಿಯಾಗಿದ್ದರಲ್ಲದೆ, ಸಾಹಿತ್ಯ ಕ್ಷೇತ್ರದಲ್ಲೂ ಕೃಷಿ ಮಾಡಿದ್ದರು.

ಕನ್ನಡಪ್ರಭ ವಾರ್ತೆ ಸಾಗರ

ಮಾಜಿ ಸಚಿವ ಹಾಗೂ ಹಿರಿಯ ರಾಜಕಾರಣಿ ಕೆ.ಎಚ್.ಶ್ರೀನಿವಾಸ್ (85) ಶುಕ್ರವಾರ ನಿಧನರಾದರು. ಈಚೇಗೆ ರಾಜಕೀಯದಿಂದ ದೂರು ಉಳಿದಿದ್ದ ಇವರು ಬೆಂಗಳೂರಿನ ತಮ್ಮ ಸ್ವಗೃಹದಲ್ಲಿ ವಿಶ್ರಾಂತ ಜೀವನ ಸಾಗಿಸುತ್ತಿದ್ದರು. ಇವರಿಗೆ ಪತ್ನಿ, ಓರ್ವ ಪುತ್ರ ಹಾಗೂ ಮೂವರು ಪುತ್ರಿಯರು ಇದ್ದಾರೆ.

ಬಹುಮುಖ ವ್ಯಕ್ತಿತ್ವ :ಮೂಲತಃ ಸಾಗರ ತಾಲ್ಲೂಕಿನ ಕಾನುಗೋಡು ಗ್ರಾಮದವರಾದ ಕೆ.ಎಚ್.ಶ್ರೀನಿವಾಸ್ ಅವರದ್ದು ಬಹುಮುಖ ವ್ಯಕ್ತಿತ್ವ. ರಾಜಕೀಯ ಕ್ಷೇತ್ರ ಮಾತ್ರವಲ್ಲ ಸಾಹಿತ್ಯ ಕ್ಷೇತ್ರದಲ್ಲಿಯೂ ಗುರುತಿಸಿಕೊಂಡಿದ್ದರು. ಕಾನುಗೋಡು ಮನೆ ಹೆಸರಿನ ಕವನ ಸಂಕಲನವೂ ಸೇರಿದಂತೆ ಐದು ಕೃತಿಗಳನ್ನು ಇವರು ಬರೆದಿದ್ದಾರೆ. ಸಾಹಿತ್ಯ ಮತ್ತು ಸಂಗೀತದ ಬಗ್ಗೆ ಅಪಾರ ಆಸಕ್ತಿಯ ಜೊತೆಗೆ ಆಳವಾದ ಓದು ಹಾಗೂ ಚಿಂತನೆ ಇವರಿಗಿತ್ತು. ಈ ಕಾರಣದಿಂದಾಗಿಯೇ ಅವರೊಬ್ಬ ಉತ್ತಮ ವಾಗ್ಮಿಯಾಗಿದ್ದರು. ಸಾಹಿತ್ಯ ಸಮ್ಮೇಳನ ಸೇರಿದಂತೆ ಸಾಹಿತ್ಯಕ್ಕೆ ಸಂಬಂಧಿಸಿದ ಹೆಚ್ಚಿನ ಕಾರ್ಯಕ್ರಮದಲ್ಲಿ ಆಸಕ್ತಿಯಿಂದ ಭಾಗವಹಿಸುತ್ತಿದ್ದರು. ಬಹಳ ವರ್ಷಗಳ ಹಿಂದೆ ತಾಳಮದ್ದಲೆಯಲ್ಲಿಯೂ ಉತ್ತಮ ಅರ್ಥಧಾರಿಯಾಗಿ ಪುರಾಣದ ಪಾತ್ರಗಳನ್ನು ಪರಿಣಾಮಕಾರಿಯಾಗಿ ಕಟ್ಟಿಕೊಟ್ಟಿದ್ದರು.ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಇಂಟರ್‌ಮೀಡಿಯಟ್ ಅಭ್ಯಾಸ ಮಾಡಿ ನಂತರ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಂದುವರೆಸಿದರು. ಮೈಸೂರು ವಿ.ವಿ. ಯಲ್ಲಿ ರಾಜಕೀಯ ಶಾಸ್ತ್ರದಲ್ಲಿ ಎಂಎ.ಪದವಿ ಮುಗಿಸಿ ಮಹಾರಾಜ ಕಾಲೇಜಿನಲ್ಲಿ ಕೆಲ ಕಾಲ ಉಪನ್ಯಾಸಕರಾಗಿ ಕೂಡ ಕೆಲಸ ಮಾಡಿದ್ದರು.ಸಾಗರದಲ್ಲಿ ಪದವಿ ಕಾಲೇಜು ಆರಂಭಿಸಬೇಕು ಎನ್ನುವ ಕಾರಣಕ್ಕಾಗಿ 1963ರಲ್ಲಿ ವಿದ್ಯಾವರ್ಧಕ ಸಂಘ ಆರಂಭವಾಯಿತು. ಇದರ ಸ್ಥಾಪಕ ಕಾರ್ಯದರ್ಶಿಯಾಗಿ ಕೆ.ಹೆಚ್.ಶ್ರೀನಿವಾಸ್ ಕೆಲಸ ಮಾಡಿದ್ದರು. ಅಂದು ಶಾಸಕರಾಗಿದ್ದ ಕೆ.ಜಿ.ಒಡೆಯರ್ ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾಗಿದ್ದರು. ಕೆ.ವಿ.ಸುಬ್ಬಣ್ಣ, ಎಲ್.ಟಿ.ತಿಮ್ಮಪ್ಪ ಹೆಗಡೆ ಮುಂತಾದವರು ಸಂಸ್ಥೆಯ ಆಡಳಿತ ಮಂಡಳಿಯಲ್ಲಿದ್ದರು. ಅದೇ ಮುಂದೆ ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನ (ಎಂಡಿಎಫ್) ವಾಗಿ ಸಾಗರ ಪ್ರಾಂತ್ಯದ ಶೈಕ್ಷಣಿಕ ಪ್ರಗತಿಗೆ ತನ್ನದೇ ಆದ ಕೊಡುಗೆ ನೀಡುವಂತಾಯಿತು. ತೀರಾ ಇತ್ತೀಚಿನ ವರ್ಷಗಳವರೆಗೂ ಕೆ.ಎಚ್.ಶ್ರೀನಿವಾಸ್ ಎಂ.ಡಿ.ಎಫ್. ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

ರಾಜಕೀಯ ಪ್ರವೇಶ :ಶೈಕ್ಷಣಿಕ ಕ್ಷೇತ್ರದಲ್ಲಿ ಕೆಲಸ ಮಾಡುತ್ತಲೆ ಕೆ.ಹೆಚ್.ಶ್ರೀನಿವಾಸ್ ರಾಜಕೀಯ ಕ್ಷೇತ್ರವನ್ನು ಪ್ರವೇಶಿಸಿದರು. 1967ರಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಮೊದಲ ಬಾರಿಗೆ ಸಾಗರ ಕ್ಷೇತ್ರದ ಶಾಸಕರಾಗಿ ವಿಧಾನಸಭೆಯನ್ನು ಪ್ರವೇಶಿಸಿದರು. ನಂತರ ವಿಧಾನಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಉಪ ಸಚೇತಕರಾಗಿಯೂ ಕೆಲಸ ಮಾಡಿದರು. 1976ರಿಂದ 1978 ರ ವರೆಗೆ ದೇವರಾಜ ಅರಸು ಅವರ ರಾಜಕೀಯ ಕಾರ್ಯದರ್ಶಿಯಾಗಿ ಕೆಲಸ ಮಾಡಿದರು.1978ರಲ್ಲಿ ಕಾಂಗ್ರೆಸ್ ಪಕ್ಷದಿಂದ ಶಿವಮೊಗ್ಗ ಕ್ಷೇತ್ರಕ್ಕೆ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾಗಿದ್ದಲ್ಲದೆ ಅರಸು ಮಂತ್ರಿಮಂಡಲದಲ್ಲಿ ಮಂತ್ರಿಯಾಗಿಯೂ ಕೆಲಸ ಮಾಡಿದರು. 1985ರಲ್ಲಿ ಪುನಃ ಶಿವಮೊಗ್ಗ ಕ್ಷೇತ್ರದ ಶಾಸಕರಾಗಿ ಆಯ್ಕೆಯಾದರು.ರಾಮಕೃಷ್ಣ ಹೆಗಡೆಯವರ ಕಾಲದಲ್ಲಿ ವಿಧಾನಸಭೆಯಲ್ಲಿ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. 1996ರಲ್ಲಿ ಜೆಡಿಎಸ್ ಪಕ್ಷದಿಂದ ವಿಧಾನ ಪರಿಷತ್ತಿನ ಸದಸ್ಯರಾಗಿ ಆಯ್ಕೆಯಾಗಿದ್ದಲ್ಲದೆ 2000ದಲ್ಲಿ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರಾಗಿ ಸಮರ್ಥವಾಗಿ ಕೆಲಸ ಮಾಡಿದರು. ಬಿ.ಎಸ್.ಯಡಿಯೂರಪ್ಪನವರು ಬಿಜೆಪಿ ತೊರೆದು ಕೆಜೆಪಿ ಪಕ್ಷವನ್ನು ಸ್ಥಾಪನೆ ಮಾಡಿದಾಗ ಆ ಪಕ್ಷದೊಂದಿಗೆ ಗುರುತಿಸಿಕೊಂಡ ಕೆ.ಎಚ್.ಶ್ರೀನಿವಾಸ್ ಆ ಸಂದರ್ಭದಲ್ಲಿ ಎದುರಾದ ವಿಧಾನಸಭೆ ಚುನಾವಣೆಯಲ್ಲಿ ಯಡಿಯೂರಪ್ಪನವರೊಂದಿಗೆ ಹೆಚ್ಚಿನ ಪ್ರಚಾರ ಸಭೆಗಳಲ್ಲಿ ಸಕ್ರಿಯಾಗಿ ಭಾಗವಹಿಸಿದ್ದನ್ನು ನೆನಪಿಸಿ ಕೊಳ್ಳಬಹುದು. ಸಾಗರದ ಎಲ್.ಬಿ.ಕಾಲೇಜಿನ ಆವರಣದಲ್ಲಿ ದೇವರಾಜ ಅರಸು ಹೆಸರಿನ ಅದ್ಭುತವಾದ ಒಳಾಂಗಣ ರಂಗಮಂದಿರವನ್ನು ನಿರ್ಮಿಸಿದ್ದು ಕೆ.ಹೆಚ್.ಶ್ರೀನಿವಾಸ್ ಅವರ ಹೆಗ್ಗಳಿಕೆಯಾಗಿದೆ.