ಸಾರಾಂಶ
ಯಡಗೆರೆ ಮಂಜುನಾಥ್
ಕನ್ನಡಪ್ರಭ ವಾರ್ತೆ ನರಸಿಂಹರಾಜಪುರತಾಲೂಕಿನ ಮುತ್ತಿನಕೊಪ್ಪ ಗ್ರಾಮದ ಕೆ.ಕಣಬೂರು ಕಾಲೋನಿ ಸೇತುವೆ ತುಂಬಾ ಹಳೆಯದಾಗಿದ್ದು, ಎರಡು ಪಿಲ್ಲರ್ ಹಾಳಾಗಿರುವುದರಿಂದ ಯಾವ ಕ್ಷಣದಲ್ಲಾದರೂ ಕುಸಿಯುವ ಭೀತಿ ಎದುರಾಗಿದೆ.
ತಾಲೂಕಿನ ಮುತ್ತಿನಕೊಪ್ಪ ಗ್ರಾಮದ ಕೆ.ಕಣಬೂರು, ಕಣಬೂರು ಕಾಲೋನಿ, ಕುಸುಬೂರು, ದೊಡ್ಡಿನತಲೆ, ಸಾತ್ಕೋಳಿಗೆ ಹೋಗುವ ಜನರು ಕೆ.ಕಣಬೂರು ಕಾಲೋನಿ ಕರಿಬಸವನಹಳ್ಳ ಸೇತುವೆ ಮೇಲೆ ಸಂಚರಿಸಬೇಕಾಗಿದೆ. ಈ ಸೇತುವೆ 1960ಕ್ಕಿಂತ ಮುಂಚೆ ನಿರ್ಮಿಸಲಾಗಿದ್ದು, 4 ಪಿಲ್ಲರ್ ಇದೆ. ಇದರಲ್ಲಿ ಎರಡು ಪಿಲ್ಲರ್ ಹಾಳಾಗಿದ್ದು ಕಲ್ಲುಗಳು ಉರುಳಿ ಬಿದ್ದಿವೆ. ಸೇತುವೆ ಯಾವುದೇ ಕ್ಷಣದಲ್ಲಾದರೂ ಕುಸಿಯುವ ಆಂತಕವಿದ್ದು, ಇದು ಕಿರಿದಾಗಿದ್ದು ಎರಡು ವಾಹನ ಹೋಗುವಂತಿಲ್ಲ. ಜೊತೆಗೆ ಎರಡು ಬದಿಯಲ್ಲೂ ಕೈಪಿಡಿ ಇಲ್ಲ. ಇದರಿಂದಾಗಿ ವಾಹನ ಸವಾರರು ಸ್ವಲ್ಪ ಬದಿಗೆ ಬಂದರೂ ಹಳ್ಳಕ್ಕೆ ಬೀಳುತ್ತಾರೆ. ರಾತ್ರಿ ಸಮಯದಲ್ಲಿ ಈ ಸೇತುವೆ ಮೇಲೆ ಬಂದರೆ ಮತ್ತಷ್ಟು ಅಪಾಯವಂತು ಕಟ್ಟಿಟ್ಟ ಬುತ್ತಿ. ಮೇಲ್ಡಂಡೆ ಯೋಜನೆ ವಾಹನಗಳು:ಈ ಸೇತುವೆ ಮೇಲೆ ಕುಸುಬೂರು ಕಾಲೋನಿ, ಕುಸುಬೂರು, ದೊಡ್ಡಿನತಲೆ, ಕೆ.ಕಣಬೂರು ಕಾಲೋನಿ, ಸಾತ್ಕೋಳಿಯ 170 ಕುಟುಂಬಗಳು ಹಾಗೂ ಸಾವಿರಾರು ಜನರು ಓಡಾಡಬೇಕಾಗಿದೆ. ಶಾಲಾ ಬಸ್ಸು ಸಹ ಇದರಲ್ಲಿ ಓಡಾಡುತ್ತವೆ. ಈ ಮಧ್ಯೆ ಮುತ್ತಿನಕೊಪ್ಪದಲ್ಲಿರುವ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಗಳ ದೊಡ್ಡ, ದೊಡ್ಡ ವಾಹನಗಳು ಇಲ್ಲಿ ಸಂಚರಿಸುವುದರಿಂದ ಸೇತುವೆ ಮತ್ತಷ್ಟು ಶಿಥಿಲಗೊಳ್ಳುತ್ತಿದೆ. ಈ ಕುರಿತು ಅಧಿಕಾರಿಗಳಿಗೆ ಹೊಸ ಸೇತುವೆ ನಿರ್ಮಾಣದ ಬಗ್ಗೆ ಗ್ರಾಮಸ್ಥರು ಮನಸಿ ಸಲ್ಲಿಸಿದ್ದರು. ಸರ್ವೇ ಕಾರ್ಯ ಮಾಡಿದ್ದರೂ ಸೇತುವೆ ನಿರ್ಮಾಣವಾಗಿಲ್ಲ. ಜನಪ್ರತಿನಿಧಿಗಳಿಗೆ ಹೊಸ ಸೇತುವೆ ನಿರ್ಮಿಸಿಕೊಡುವಂತೆ ಗ್ರಾಮಸ್ಥರು ಮನವಿ ಸಲ್ಲಿಸಿದರೂ ಏನು ಪ್ರಯೋಜನವಾಗುತ್ತಿಲ್ಲ ಎಂಬುದು ಗ್ರಾಮಸ್ಥರು ದೂರಾಗಿದೆ. ಇನ್ನಾದರೂ ಜಿಲ್ಲಾಧಿಕಾರಿ, ಜನಪ್ರತಿನಿಧಿಗಳು ಗಮನ ಹರಿಸಿ ಹೊಸ ಸೇತುವೆ ನಿರ್ಮಿಸಿಕೊಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.ಕೆ.ಕಣಬೂರು ಕಾಲೋನಿ ಸೇತುವೆ ತುಂಬಾ ಹಳೆಯದಾಗಿದ್ದು, ಯಾವಾಗ ಬೇಕಾದರೂ ಉರುಳಬಹುದು. ಹೊಸ ಸೇತುವೆ ನಿರ್ಮಿಸಬೇಕಾಗಿದೆ. ಇಲ್ಲಿನ ಜನರು 10 ರಿಂದ 12 ಕಿ.ಮೀ.ಸುತ್ತುವರಿದು ಹೋಗಬೇಕು. ತುರ್ತಾಗಿ ಸರ್ಕಾರ ಗಮನ ನೀಡಿ ಹೊಸ ಸೇತುವೆ ಮಾಡಿಕೊಡಬೇಕು.
- ಎಚ್.ಎಸ್.ರವಿಕುಮಾರ್, ರೈತರು, ಕುಸುಬೂರುಭದ್ರಾ ಮುಳುಗಡೆಯಾದಾಗ ನಂದಿಗಾವೆ ಎಂಬ ಪ್ರದೇಶದಿಂದ ಇಲ್ಲಿಗೆ ನಾವು ಬಂದಿದ್ದೇವೆ. ಮಳೆ ಇದೇ ರೀತಿ ಬಂದರೆ ಕೆ.ಕಣಬೂರು ಕಾಲೋನಿ ಸೇತುವೆ ಕುಸಿಯುತ್ತದೆ. ಜೀವ ಭಯದಿಂದಲೇ ವಾಹನಗಳು ಹೋಗುತ್ತಿದೆ. ಅನೇಕ ಬಾರಿ ಸರ್ಕಾರಕ್ಕೆ ಅರ್ಜಿ ನೀಡಿದ್ದೇವೆ. ಯಾವ ಸರ್ಕಾರ ಬಂದರೂ ಹೊಸ ಸೇತುವೆ ನಿರ್ಮಾಣವಾಗಿಲ್ಲ. ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಗೆ ದೊಡ್ಡ, ದೊಡ್ಡ ವಾವನಗಳು ಹೋಗುತ್ತಿರುವುದರಿಂದಲೂ ಸೇತುವೆ ಮತ್ತಷ್ಟು ಹಾಳಾಗಿದೆ.- ಕೆ.ಆರ್ ಆನಂದ. ಕುಸುಬೂರು ಕಾಲೋನಿಕೆ.ಕಣಬೂರು ಕಾಲೋನಿ ಸೇತುವೆ ಎರಡು ಬದಿಯಲ್ಲೂ ಕೈಪಿಡಿ ಇಲ್ಲ. ಶಾಲಾ ಮಕ್ಕಳ ವಾಹವೂ ಇದೇ ಸೇತುವೆ ಮೇಲೆ ಹೋಗುತ್ತಿದೆ. ತುರ್ತಾಗಿ ಜನಪ್ರತಿನಿಧಿಗಳು, ಅಧಿಕಾರಿಗಳು ಗಮನ ನೀಡಿ ಹೊಸ ಸೇತುವೆಗೆ ಹಣ ಮಂಜೂರು ಮಾಡಬೇಕು. ಮುತ್ತಿನಕೊಪ್ಪ ಶಾಲೆಗೆ ಈ ಭಾಗದಿಂದ 50 ಮಕ್ಕಳು ಇದೇ ಸೇತುವೆ ಮೇಲೆ ದಿನನಿತ್ಯ ಹೋಗುತ್ತಾರೆ.
- ಚಂದ್ರಮ್ಮ, ಕಣಬೂರು ಕಾಲೋನಿ