ಕೆ.ಆರ್.ಪೇಟೆ: ಪಿಎಲ್‌ಡಿ ಬ್ಯಾಂಕ್ ಚುನಾವಣೆ ಬಿರುಸಿನ ಮತದಾನ

| Published : Feb 09 2025, 01:15 AM IST

ಕೆ.ಆರ್.ಪೇಟೆ: ಪಿಎಲ್‌ಡಿ ಬ್ಯಾಂಕ್ ಚುನಾವಣೆ ಬಿರುಸಿನ ಮತದಾನ
Share this Article
  • FB
  • TW
  • Linkdin
  • Email

ಸಾರಾಂಶ

ಕೆ.ಆರ್.ಪೇಟೆ ಪಟ್ಟಣದ ಕೆಪಿಎಸ್ ಶಾಲೆ ಆವರಣದಲ್ಲಿ ವೃತ್ತವಾರು 12 ಮತಗಟ್ಟೆ ಸ್ಥಾಪಿಸಲಾಗಿತ್ತು. ಬ್ಯಾಂಕ್‌ನಲ್ಲಿ 10,500 ಷೇರುದಾರರಿದ್ದು, ವಿವಿಧ ಕಾರಣಗಳಿಂದ 4444 ಮತದಾರರು ಅನರ್ಹಗೊಂಡ ಪರಿಣಾಮ 1761 ಷೇರುದಾರರಿಗೆ ಮತದಾನದ ಹಕ್ಕು ನೀಡಲಾಗಿತ್ತು. ಒಟ್ಟು 35 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ತಾಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ ನೂತನ ಆಡಳಿತ ಮಂಡಳಿ 12 ಸ್ಥಾನಗಳಿಗೆ ಶನಿವಾರ ಬಿರುಸಿನ ಮತದಾನ ನಡೆಯಿತು.

ಪಟ್ಟಣದ ಕೆಪಿಎಸ್ ಶಾಲೆ ಆವರಣದಲ್ಲಿ ವೃತ್ತವಾರು 12 ಮತಗಟ್ಟೆ ಸ್ಥಾಪಿಸಲಾಗಿತ್ತು. ಬ್ಯಾಂಕ್‌ನಲ್ಲಿ 10,500 ಷೇರುದಾರರಿದ್ದು, ವಿವಿಧ ಕಾರಣಗಳಿಂದ 4444 ಮತದಾರರು ಅನರ್ಹಗೊಂಡ ಪರಿಣಾಮ 1761 ಷೇರುದಾರರಿಗೆ ಮತದಾನದ ಹಕ್ಕು ನೀಡಲಾಗಿತ್ತು.

ಬ್ಯಾಂಕ್‌ನಲ್ಲಿ ಒಟ್ಟು 14 ನಿರ್ದೇಶಕ ಸ್ಥಾನಗಳಿದ್ದು ಎರಡು ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದ್ದ ಹಿನ್ನೆಲೆಯಲ್ಲಿ 12 ಸ್ಥಾನಗಳಿಗೆ ಚುನಾವಣೆ ನಡೆಯಿತು. ಒಟ್ಟು 35 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಮತದಾನದ ಹಕ್ಕು ಹೊಂದಿದ್ದ 1761 ಮತದಾರರಲ್ಲಿ 1426 ಮತದಾರರು ತಮಗೆ ನಿಗದಿಯಾಗಿದ್ದ ವಿವಿಧ ವೃತ್ತಗಳ ಮತಗಟ್ಟೆ ಕೇಂದ್ರದಲ್ಲಿ ಮತ ಚಲಾಯಿಸಿದರು. ಮತದಾನದ ಹಕ್ಕಿನಿಂದ ವಂಚಿತರಾದ 1349 ಮತದಾರರು ರಾಜ್ಯ ಹೈಕೋರ್ಟ್ ಮೂಲಕ ಮತದಾನದ ಹಕ್ಕು ಪಡೆದು ಮತ ಚಲಾಯಿಸಿದರು. ಇದರಿಂದ ಒಟ್ಟಾರೆ 2775 ಮಂದಿ ವಿವಿಧ ಮತಗಟ್ಟೆ ಕೇಂದ್ರಗಳಲ್ಲಿ ತಮ್ಮ ಹಕ್ಕು ಚಲಾಯಿಸಿದರು.

ಶಾಲೆ ಆವರಣದಲ್ಲಿ ಮತಗಟ್ಟೆಗಳ ಬಳಿ ಅಭ್ಯರ್ಥಿಗಳ ಪರ ಬೆಂಬಲಿಗರು ಹಾಗೂ ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಮುಖಂಡರು ತಮ್ಮ ತಮ್ಮ ಬೆಂಬಲಿಗರ ಪಡೆಯೊಂದಿಗೆ ಆಗಮಿಸಿದ ಪರಿಣಾಮ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿತ್ತು. ಮತಯಾಚನೆ ಮಾಡಲು ಬಂದವರು ತಿರುಗಾಡಲು ಹರಸಾಹಸ ಪಡಬೇಕಾಯಿತು.

ಶಾಸಕ ಎಚ್.ಟಿ.ಮಂಜು ತಮ್ಮ ಪತ್ನಿ ರಮಾ ಜೊತೆಗೂಡಿ ಮತ ಚಲಾಯಿಸಿದರೆ, ಮಾಜಿ ಶಾಸಕರಾದ ಕೆ.ಬಿ.ಚಂದ್ರಶೇಖರ್, ಬಿ.ಪ್ರಕಾಶ್, ಕಾಂಗ್ರೆಸ್ ಮುಖಂಡರಾದ ವಿಜಯರಾಮೇಗೌಡ, ರಾಜ್ಯ ಸಹಕಾರ ಮಾರಾಟ ಮಹಾ ಮಂಡಳಿ ನಿರ್ದೇಶಕ ಶೀಳನೆರೆ ಮೋಹನ್, ಪುರಸಭೆ ಅಧ್ಯಕ್ಷೆ ಪಂಕಜ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬಿ.ನಾಗೇಂದ್ರಕುಮಾರ್, ಹರಳಹಳ್ಳಿ ವಿಶ್ವನಾಥ್, ಜೆಡಿಎಸ್ ಅಧ್ಯಕ್ಷ ಎ.ಎನ್.ಜಾನಕೀರಾಂ ಸೇರಿದಂತೆ ಹಲವು ಮುಖಂಡರು ಮತಚಲಾಯಿಸಿ ತಮ್ಮ ಬೆಂಬಲಿತ ಅಭ್ಯರ್ಥಿಗಳ ಪರ ಮತಯಾಚನೆ ಮಾಡಿದರು.

ಬೂಕನಕೆರೆಯ ಗ್ರಾಮದ ಅನಾರೋಗ್ಯ ಪೀಡಿತ ವಯೋವೃದ್ಧ ನಾಗೇಶ್(೭೦) ವೀಲ್ ಚೇರ್ ಮೂಲಕ ಮತ ಚಲಾಯಿಸಿ ಮತೋತ್ಸಾಹವನ್ನು ಪ್ರದರ್ಶಿಸಿದರು. ಮತದಾನದ ಹಕ್ಕಿನಿಂದ ವಂಚಿತರಾದವರು ನ್ಯಾಯಾಲಯದ ಮೂಲಕ ಮತದಾನ ಹಕ್ಕು ಪಡೆದುಕೊಂಡು ಬಂದ ಕಾರಣ ಮತದಾನ ಕೇಂದ್ರದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಇದರ ಜೊತೆಗೆ ಅಭ್ಯರ್ಥಿಗಳು ಕೆಲವರ ಐ.ಡಿ ಕಾರ್ಡ್‌ಗಳನ್ನು ಚುನಾವಣಾ ಪೂರ್ವದಲ್ಲಿಯೇ ಸಂಗ್ರಹಿಸಿಕೊಂಡಿದ್ದ ಪರಿಣಾಮ ಕೆಲವು ಮತದಾರರು ಕಾರ್ಡ್‌ಗಳಿಗಾಗಿ ಪರದಾಡಬೇಕಾಯಿತು.

ತಾಪಂ ಇಒ ಕೆ.ಸುಷ್ಮಾ ಚುನಾವಣಾ ಅಧಿಕಾರಿಯಾಗಿದ್ದು, ಪೊಲೀಸ್ ನಿರೀಕ್ಷಕಿ ಸುಮಾರಾಣಿ ಮತ್ತು ಪಿ.ಎಸ್.ಐ ನವೀನ್ ನೇತೃತ್ವದ ಪೊಲೀಸರ ಪಡೆ ಶಾಂತಿಯುತ ಚುನಾವಣೆಗೆ ಅಗತ್ಯ ಕ್ರಮ ವಹಿಸಿತ್ತು.