ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ತಾಲೂಕಿನಾದ್ಯಂತ ಸಡಗರ, ಭಕ್ತಿ ಮತ್ತು ಸಂಭ್ರಮದಿಂದ ಮಹಾಶಿವನನ್ನು ಧ್ಯಾನಿಸುವ ಮಹಾಶಿವರಾತ್ರಿ ಹಬ್ಬವನ್ನು ಹಿಂದೂ ಧರ್ಮಿಯರು ಭಕ್ತಿ ಮತ್ತು ಶ್ರದ್ಧೆಯಿಂದ ಆಚರಿಸಿದರು.

ತಾಲೂಕಿನ ಪ್ರಾಚೀನ ಶಿವದೇವಾಲಯಗಳಾದ ಪಟ್ಟಣದ ಶ್ರೀಭ್ರಮರಾಂಭ ಮಲ್ಲಿಕಾರ್ಜುನ ದೇವಾಲಯ, ಅಘಲಯ ಮಲ್ಲೇಶ್ವರ, ತ್ರಿವೇಣಿ ಸಂಗಮದ ಸಂಗಮೇಶ್ವರ, ಗೋವಿಂದನಹಳ್ಳಿಯ ಪಂಚಲಿಂಗೇಶ್ವರ ದೇವಾಲಯ, ಹೊಸಹೊಳಲಿನ ಕೋಟೆ ಭೈರವೇಶ್ವರ ದೇವಾಲಯ, ವಳಗೆರೆ ಮೆಣಸ ಗ್ರಾಮದ ಏಕನಾಥೇಶ್ವರ, ಬಲ್ಲೇನಹಳ್ಳಿಯ ಪಾತಾಳೇಶ್ವರ, ಅಕ್ಕಿಹೆಬ್ಬಾಳಿನ ಸೋಮೇಶ್ವರ, ಹರಿಹರಪುರದ ಹರಿಹರೇಶ್ವರ, ಪುರ ಸಮೀಪದ ಮಹದೇಶ್ವರ ದೇವಸ್ಥಾನ, ಅಕ್ಕಿಹೆಬ್ಬಾಳು ಕೊಂಕಣೇಶ್ವರ, ಭೈರಾಪುರದ ಭೈರವೇಶ್ವರ, ಸಿಂದೂಘಟ್ಟದ ಜಪ್ಪೇಶ್ವರ ದೇವಾಲಯ, ಅಗ್ರಹಾರ ಬಾಚಹಳ್ಳಿಯ ಅಮೃತೇಶ್ವರ ದೇವಾಲಯ, ರಾಯಸಮುದ್ರ ವೀರಭದ್ರೇಶ್ವರ ದೇವಾಲಯ, ನಾರಾಯಣದುರ್ಗಾದ, ಮಲ್ಲೇಶ್ವರ, ಸಂತೇಬಾಚಹಳ್ಳಿಯ ಶಿವದೇವಾಲಯ, ತೆಂಡೇಕೆರೆಯ ವೀರಭದ್ರೇಶ್ವರ ದೇವಾಲಯ, ಬಳ್ಳೇಕೆರೆ ಈಶ್ವರ ದೇವಾಲಯ, ಸಾಸಲು ಸೋಮೇಶ್ವರ, ದೇವಾಲಯ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳ ಶಿವ ದೇವಾಲಯಗಳಲ್ಲಿ ಪೂಜಾಕಾರ್ಯ ನಡೆಯಿತು.

ದೇವಾಲಯ ಸೇರಿದಂತೆ ತಾಲೂಕಿನಾದ್ಯಂತ ಈಶ್ವರ ದೇವಾಲಯಗಳಲ್ಲಿಂದು ಮಹಾ ಶಿವನಿಗೆ ವಿಶೇಷ ಪೂಜೆ ಮತ್ತು ಅಭಿಷೇಕಗಳು ನಡೆದವು. ಬೆಳಿಗ್ಗೆಯಿಂದಲೇ ದೇವಾಲಯಗಳಿಗೆ ಆಗಮಿಸಿದ ಅಪಾರ ಸಂಖ್ಯೆಯ ಭಕ್ತರು ಆರಾಧ್ಯದೈವ ಮಹಾಶಿವನಿಗೆ ರುದ್ರಾಭಿಷೇಕ, ಪಂಚಾಮೃತಾಭಿಷೇಕ, ವಿಶೇಷ ಪೂಜೆ ಸಲ್ಲಿಸಿದರು. ರುದ್ರ ಹೋಮ ನಡೆದು ಸಹಸ್ರ ಬಿಲ್ವಾರ್ಚನೆ ನಡೆಯಿತು. ದೇವಾಲಯಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಪೂಜೆ ಸಲ್ಲಿಸಿದರು. ಸಂಜೆ ವಿಶೇಷ ಪೂಜೆಯ ನಂತರ ನಾಲ್ಕು ಯಾಮಗಳಲ್ಲಿ ರುದ್ರಾಭಿಷೇಕ ನಡೆಯಿತು. ಶಿವಲಿಂಗಕ್ಕೆ ಪೂಜೆ,ಅಭಿಷೇಕ ನಡೆಸಿ ಮಂಗಳಾರತಿ ಅರ್ಪಿಸಿ ಪ್ರಸಾದ ವಿತರಿಸಲಾಯಿತು.

ಪಟ್ಟಣದ ಕಲ್ಲು ಮಠದ ಚನ್ನಬಸವೇಶ್ವರ ದೇವಸ್ಥಾನದಲ್ಲಿ ಇರುವ ಬೃಹತ್ ಶಿವಲಿಂಗಕ್ಕೆ ಭಕ್ತರು ಹಾಲಿನ ಅಭಿಷೇಕ ನೆರವೇರಿಸಿದರು. ವಳಗೆರೆ ಮೆಣಸದ ಏಕನಾಥೇಶ್ವರ ದೇವಾಲಯ ಭೂಮಿಯಲ್ಲಿ ಹುದುಗಿ ಹೋಗಿದ್ದು ಕಳೆದ ೧೨ ವರ್ಷಗಳ ಹಿಂದೆ ಉತ್ಕನನ ಮಾಡಲಾಗಿತ್ತು.


ಕಳೆದ ೧೨ ವರ್ಷಗಳಿಂದಲೂ ಈ ದೇವಾಲಯದಲ್ಲಿ ಗ್ರಾಮಸ್ಥರು ಶಿವರಾತ್ರಿಯನ್ನು ವಿಶೇಷವಾಗಿ ಆಚರಿಸುತ್ತಿದ್ದು ನಾಳೆ ಸಾವಿರಾರು ಜನರಿಗೆ ಅನ್ನಸಂತರ್ಪಣೆ ನಡೆಯಲಿದೆ. ಬಹುತೇಕ ಎಲ್ಲಾ ಶಿವಾಲಯಗಳಲ್ಲೂ ರಾತ್ರಿ ಜಾಗರಣೆ ಅಂಗವಾಗಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.