ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ತಾಲೂಕು ಟಿಎಪಿಸಿಎಂಎಸ್ ಚುನಾವಣೆಯಲ್ಲಿ ಶಾಸಕ ಎಚ್.ಟಿ.ಮಂಜು ನೇತೃತ್ವದಲ್ಲಿ ಹೆಚ್ಚಿನ ಸ್ಥಾನಗಳಲ್ಲಿ ಗೆಲುವು ಸಾಧಿಸಿ ಸಂಘದ ಆಡಳಿತ ಜೆಡಿಎಸ್ ಪಕ್ಷದ ಪಾಲಾಗಿದೆ.ಸಂಘದ 14 ನಿರ್ದೇಶಕರ ಆಯ್ಕೆಗೆ ಭಾನುವಾರ ಚುನಾವಣೆ ನಡೆದು ಎ ವರ್ಗದ 6 ಸ್ಥಾನಗಳಿಗೆ ಸಮಬಲ ಪೈಪೂಟಿ ನಡೆದು ಜೆಡಿಎಸ್ ಬೆಂಬಲಿತ 3 ಮತ್ತು ಕಾಂಗ್ರೆಸ್ ಬೆಂಬಲಿತ 3 ಮಂದಿ ಅಭ್ಯರ್ಥಿಗಳು ಆಯ್ಕೆಯಾದರು.
ಜೆಡಿಎಸ್ ಬೆಂಬಲಿತ ಬಿ.ಎಂ.ಕಿರಣ್ 25, ಟಿ.ಬಲದೇವ್ 16 ಮತ್ತು ಶಾಸಕ ಎಚ್.ಟಿ.ಮಂಜು ಸಹೋದರ ಎಚ್.ಟಿ.ಲೋಕೇಶ್ 16 ಮತಗಳನ್ನು ಪಡೆದು ಆಯ್ಕೆಯಾದರೆ, ಕಾಂಗ್ರೆಸ್ ಬೆಂಬಲಿತ ಎಂ.ಪಿ.ಲೋಕೇಶ್ 16, ಅಘಲಯ ಎ.ವೈ.ವಿಜಯಕುಮಾರ್ 16 ಮತ್ತು ಕಿಕ್ಕೇರಿ ಕಾಯಿ ಸುರೇಶ್ 17 ಮತ ಪಡೆದು ಆಯ್ಕೆಯಾದರು.ಷೇರುದಾರ ಮತದಾರರಿಂದ ಎಲ್ಲಾ 8 ಕ್ಷೇತ್ರಗಳಲ್ಲೂ ಜೆಡಿಎಸ್ ಬೆಂಬಲಿಗರು ವಿಜೇತರಾಗಿದ್ದು, ರೈತಾಪಿ ವರ್ಗ ಕಾಂಗ್ರೆಸ್ ಬೆಂಬಲಿತರನ್ನು ಸಂಪೂರ್ಣ ತಿರಸ್ಕರಿಸಿದ್ದಾರೆ. ಬಿ ವರ್ಗದ ಸಾಮಾನ್ಯ ಕ್ಷೇತ್ರದಿಂದ ಜೆಡಿಎಸ್ ಬೆಂಬಲಿತ ಕೆ.ಬಿ.ಮಧು 2532 ಮತಗಳು, ಶೀಳನೆರೆ ಎಸ್.ಎಲ್.ಮೋಹನ್ 2438, ಬಿಸಿಎಂ ಬಿ ವರ್ಗದಿಂದ ಎಂ.ಮೋಹನ್ 2400, ಸಾಮಾನ್ಯ ಮಹಿಳೆ ಕ್ಷೇತ್ರ ಎಂ.ಡಿ.ಜ್ಯೋತಿ 2465, ಬಿ.ಆರ್.ಲತಾಮಣಿ 2187, ಪರಿಶಿಷ್ಟ ಜಾತಿಯಿಂದ ನಾಗರಾಜು 1937, ಪರಿಶಿಷ್ಟ ಪಂಗಡ ವರ್ಗ- ಬಿ.ಎಸ್.ಮಂಜುನಾಥ್ 1934 ಮತ್ತು ಬಿಸಿಎಂ ಎ ವರ್ಗ ಎನ್.ಕೆ.ದಿಲೀಪ್ ಕುಮಾರ್ 2136 ಮತ ಪಡೆದು ಗೆಲುವು ಸಾಧಿಸಿದ್ದಾರೆ.
ಶಾಸಕರಿಗೆ ಸವಾಲಾಗಿದ್ದ ಚುನಾವಣೆ:ಈ ಚುನಾವಣೆ ಕ್ಷೇತ್ರದ ಶಾಸಕ ಎಚ್.ಟಿ.ಮಂಜು ಅವರಿಗೆ ಸವಾಲಿನದಾಗಿತ್ತು. ಕಳೆದ ಮನ್ಮುಲ್ ಚುನಾವಣೆಯಲ್ಲಿ ಸ್ಪರ್ಧಿಸಿ ಶಾಸಕ ಎಚ್.ಟಿ.ಮಂಜು ಪರಾಭವಗೊಂಡ ನಂತರ ವಿಜೇತ ನಿರ್ದೇಶಕರು ಸಿಕ್ಕಸಿಕ್ಕ ವೇದಿಕೆಗಳಲ್ಲಿ ಶಾಸಕರನ್ನು ಹೀನಾಯವಾಗಿ ನಿಂದಿಸುತ್ತಿದ್ದರು.
ಕ್ಷೇತ್ರದಲ್ಲಿ ಶಾಸಕ ಎಚ್.ಟಿ.ಮಂಜು ವರ್ಚಸ್ಸು ಕುಂದಿದೆ ಎಂದು ಕೆಲವರು ವ್ಯವಸ್ಥಿತ ಅಪಪ್ರಚಾರದಲ್ಲಿ ನಿರತರಾಗಿದ್ದರು. ಚುನಾವಣೆ ಕೆಲವೇ ಕೆಲವು ಸೂಚಿತ ಡೆಲಿಗೇಟ್ಸ್ ಮೂಲಕ ನಡೆದ ಚುನಾವಣೆಯಾಗಿದ್ದು, ಅದರಲ್ಲಿ ಶ್ರೀಸಾಮಾನ್ಯನ ಪಾಲುದಾರಿಕೆ ಇರಲಿಲ್ಲ. ಅಪಪ್ರಚಾರ ನಡೆಸುತ್ತಿದ್ದವರ ಸವಾಲು ಸ್ವೀಕರಿಸಿದ ಶಾಸಕ ಎಚ್.ಟಿ.ಮಂಜು ಸಂಪೂರ್ಣ ರೈತಾಪಿ ವರ್ಗದ ಮತದಾರರಿಂದಲೇ ಆಯ್ಕೆಯಾಗಬೇಕಾದ ಟಿಎಪಿಸಿಎಂಎಸ್‌ನ ಬಿ ವರ್ಗದ ಎಲ್ಲಾ 8 ಕ್ಷೇತ್ರಗಳಲ್ಲೂ ಜೆಡಿಎಸ್ ಬೆಂಬಲಿತರು ಗೆಲ್ಲಿಸಿಕೊಳ್ಳುವ ಮೂಲಕ ತಮ್ಮ ರಾಜಕೀಯ ಶಕ್ತಿ ಪ್ರದರ್ಶನ ಮಾಡಿದ್ದಾರೆ.ಹಾಲಿ ಅಧ್ಯಕ್ಷರಾಗಿದ್ದ, ಸಂಸ್ಥೆಯನ್ನು ಲಾಭದಾಯಕವಾಗಿ ಮುನ್ನಡೆಸಿದ ಕಾಂಗ್ರೆಸ್ ಮುಖಂಡ ಬಿ.ಎಲ್.ದೇವರಾಜು ಅವರ ಅನಿರೀಕ್ಷಿತ ಸೋಲು ಕಾಂಗ್ರೆಸ್ ಪಾಳಯದಲ್ಲಿ ತೀವ್ರ ನಿರಾಸೆ ಮೂಡಿಸಿದೆ.
ಚುನಾವಣೆ ನಂತರ ವಿಜೇತರಾದ ಜೆಡಿಎಸ್ ಬೆಂಬಲಿತರನ್ನು ಪಕ್ಷದ ಕಚೇರಿಯಲ್ಲಿ ಶಾಸಕ ಎಚ್.ಟಿ.ಮಂಜು ಅಭಿನಂದಿಸಿ, ಪಕ್ಷದ ಪರ ಮತಹಾಕಿದ ಮತದಾರರಿಗೆ ಕೃತಜ್ಞತೆ ಅರ್ಪಿಸಿದರು. ರೈತಾಪಿ ಜನರ ನಿರೀಕ್ಷೆ ಹುಸಿಯಾಗದಂತೆ ಸಂಘದ ಪ್ರಗತಿಗೆ ಶ್ರಮಿಸುವುದಾಗಿ ಭರವಸೆ ನೀಡಿದರು.