ಕೆ.ಆರ್.ಪೇಟೆ ಟಿಎಪಿಸಿಎಂಎಸ್ ಚುನಾವಣೆ: 14 ಸ್ಥಾನಗಳಿಗೆ 29 ಮಂದಿ ಕಣದಲ್ಲಿ

| Published : Sep 25 2025, 01:00 AM IST

ಸಾರಾಂಶ

ಕೆ.ಆರ್.ಪೇಟೆ ತಾಲೂಕಿನ 31 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಪ್ರತಿನಿಧಿಗಳ ಮೂಲಕ ಆಯ್ಕೆಯಾಗಬೇಕಾಗಿರುವ ಎ.ತರಗತಿ 6 ಸ್ಥಾನಗಳಿಗೆ ಜೆಡಿಎಸ್ ಮತ್ತು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ನಡುವೆ ನೇರ ಸ್ಪರ್ಧೆ ನಡೆಯುತ್ತಿದೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಟಿಎಪಿಸಿಎಂಎಸ್‌ನ 14 ಮಂದಿ ನಿರ್ದೇಶಕರ ಆಯ್ಕೆಗೆ 29 ಮಂದಿ ಅಂತಿಮವಾಗಿ ಕಣದಲ್ಲಿ ಉಳಿದ್ದು, ಸೆ.28 ರಂದು ಚುನಾವಣೆ ನಡೆಯಲಿದೆ.

ನಾಮಪತ್ರ ವಾಪಸ್ ಪಡೆಯಲು ಕಡೆ ದಿನವಾಗಿದ್ದ ಮಂಗಳವಾರ 41 ನಾಮಪತ್ರಗಳ ಪೈಕಿ 12 ನಾಮಪತ್ರಗಳನ್ನು ಅಭ್ಯರ್ಥಿಗಳು ವಾಪಸ್ ಪಡೆದಿದ್ದು, ಅಂತಿಮವಾಗಿ 29 ಮಂದಿ ಕಣದಲ್ಲಿ ಉಳಿದ್ದಾರೆ. ಎಲ್ಲಾ ಅಭ್ಯರ್ಥಿಗಳಿಗೂ ಚಿಹ್ನೆ ಹಂಚಿಕೆ ಮಾಡಲಾಗಿದೆ. ಎ.ವರ್ಗದಿಂದ 12ಮಂದಿ, ಬಿ.ವರ್ಗದಿಂದ 17ಮಂದಿ ಕಣದಲ್ಲಿ ಉಳಿದಿದ್ದಾರೆ ಎಂದು ಚುನಾವಣಾಧಿಕಾರಿ ತಹಸೀಲ್ದಾರ್ ಡಾ.ಎಸ್.ಯು.ಅಶೋಕ್ ತಿಳಿಸಿದ್ದಾರೆ.

ತಾಲೂಕಿನ 31 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಪ್ರತಿನಿಧಿಗಳ ಮೂಲಕ ಆಯ್ಕೆಯಾಗಬೇಕಾಗಿರುವ ಎ.ತರಗತಿ 6 ಸ್ಥಾನಗಳಿಗೆ ಜೆಡಿಎಸ್ ಮತ್ತು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ನಡುವೆ ನೇರ ಸ್ಪರ್ಧೆ ನಡೆಯುತ್ತಿದೆ. ಟಿಎಪಿಸಿಎಂಎಸ್ ನ 4888 ಷೇರುದಾರ ಮತದಾರರಿದ್ದು ಬಿ ವರ್ಗದಿಂದ 8 ಅಭ್ಯರ್ಥಿಗಳ ಆಯ್ಕೆಯಾಗಬೇಕಾಗಿದೆ.

ಶಾಸಕ ಎಚ್.ಟಿ.ಮಂಜು ನಾಯಕತ್ವದಲ್ಲಿ ಜೆಡಿಎಸ್ ಬೆಂಬಲಿತರು ಈಗಾಗಲೇ ಪ್ರಚಾರ ಕಾರ್ಯ ಆರಂಭಿಸಿದ್ದಾರೆ, ಹಾಲಿ ಅಧ್ಯಕ್ಷ ಹಾಗೂ ಅಭ್ಯರ್ಥಿ ಬಿ.ಎಲ್.ದೇವರಾಜು ನೇತೃತ್ವದಲ್ಲಿ ಕಾಂಗ್ರೆಸ್ ಬೆಂಬಲಿತರು ಬಿರುಸಿನ ಮತಯಾಚನೆ ಆರಂಭಿಸಿದ್ದಾರೆ.

ಕಳೆದ ಅವಧಿಯಲ್ಲಿ ಕಾಂಗ್ರೆಸ್ ಪಕ್ಷ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸದೆ ಅಂದು ಕ್ಷೇತ್ರದ ಶಾಸಕರಾಗಿದ್ದ, ಮಾಜಿ ಸಚಿವ ಕೆ.ಸಿ.ನಾರಾಯಣಗೌಡ ನೇತೃತ್ವದ ಬಿಜೆಪಿ ಸೋಲಿಸುವ ಸ್ಪಷ್ಟ ಗುರಿಯಿಂದ ಜೆಡಿಎಸ್ ಪಕ್ಷಕ್ಕೆ ಬೆಂಬಲ ನೀಡಿತ್ತು. ಇದರ ಪರಿಣಾಮ ಕಳೆದ ಅವಧಿಯಲ್ಲಿ ಎಲ್ಲಾ 14 ಸ್ಥಾನಗಳು ಜೆಡಿಎಸ್ ಪಾಲಾಗಿತ್ತು.

ಇದೀಗ ರಾಜಕೀಯ ಪರಿಸ್ಥಿತಿ ಬದಲಾಗಿದೆ. ಕಳೆದ ಅವಧಿಯಲ್ಲಿ ಜೆಡಿಎಸ್ ಪಕ್ಷದಿಂದ ಗೆದ್ದು ಅಧ್ಯಕ್ಷರಾಗಿ ಆಡಳಿತ ನಡೆಸಿದ್ದ ವಕೀಲ ಬಿ.ಎಲ್.ದೇವರಾಜು ಇಂದು ಕಾಂಗ್ರೆಸ್ ಪಾಳಯದಲ್ಲಿದ್ದಾರೆ. ಕಳೆದ ಅವಧಿಯಲ್ಲಿ ಪ್ರಬಲ ಹೋರಾಟ ನೀಡಿದ್ದ ಭಾರತೀಯ ಜನತಾ ಪಕ್ಷ ಜೆಡಿಎಸ್ ಪಕ್ಷದ ಮೈತ್ರಿಯ ಭಾಗವಾಗಿದ್ದು ತನ್ನ ಯಾವುದೇ ಅಭ್ಯರ್ಥಿಯನ್ನು ಕಣಕ್ಕಿಳಿಸದೆ ಮೌನವಾಗಿದೆ.

ಶಿಂಷಾ ನದಿಯಲ್ಲಿ ಹೆಬ್ಬಾವು ಪ್ರತ್ಯಕ್ಷ

ಮದ್ದೂರು:

ತಾಲೂಕಿನ ಚಾಮನಹಳ್ಳಿ ಸಮೀಪ ಪಟಲದಮ್ಮ ದೇಗುಲದ ಶಿಂಷಾ ನದಿ ದಡದಲ್ಲಿ ಬುಧವಾರ ಹೆಬ್ಬಾವು ಪ್ರತ್ಯಕ್ಷವಾಗಿದೆ.

ಗ್ರಾಮದ ರಾಮಕೃಷ್ಣರ ಜಮೀನಿನ ಬಳಿ ಕುರಿಗಾಹಿಗಳು ಕುರಿ ಮೇಯಿಸುತ್ತಿದ್ದಾಗ ನದಿ ದಡದಲ್ಲಿ ಹೆಬ್ಬಾವು ಇರುವುದು ಗೋಚರವಾಗಿದೆ. ಸುಮಾರು 10 ಅಡಿ ಉದ್ದದ 50 ಕೆ.ಜಿ ತೂಕದ ಹೆಬ್ಬಾವು ನದಿ ನೀರಿನಲ್ಲಿ ತೇಲಿಕೊಂಡು ಬಂದಿರಬಹುದು ಎಂದು ಶಂಕಿಸಲಾಗಿದೆ. ಅರಣ್ಯ ಇಲಾಖೆಯ ಉರಗ ರಕ್ಷಕ ರವೀಂದ್ರ ನೆರವಿನಿಂದ ಹೆಬ್ಬಾವನ್ನು ವಶಕ್ಕೆ ತೆಗೆದುಕೊಂಡು ರಕ್ಷಣೆ ಮಾಡಿರುವ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಹೆಬ್ಬಾವನ್ನು ಸುರಕ್ಷತಾ ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ ಎಂದು ವಲಯ ಅರಣ್ಯಾಧಿಕಾರಿ ಗವಿಯಪ್ಪ ತಿಳಿಸಿದ್ದಾರೆ.