ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ವೈದ್ಯಕೀಯ, ಎಂಜಿನಿಯರಿಂಗ್ ಸೀಟುಗಳ ರೇಟು ಹೆಚ್ಚಾದಂತೆ ಲೋಕಸಭೆಯ ಸೀಟು ರೇಟ್ ಹೆಚ್ಚಾಗಿದೆ ಎಂದು ವಿಧಾನಸಭೆ ಮಾಜಿ ಸ್ವೀಕರ್ ಕೆ.ಆರ್. ರಮೇಶ್ ಕುಮಾರ್ ವಿಷಾದಿಸಿದರು.ಮೈಸೂರು ವಿವಿ ಮಾನಸಗಂಗೋತ್ರಿಯ ವಿಶ್ವಜ್ಞಾನಿ ಸಭಾಂಗಣದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಸಂಶೋಧನ ಹಾಗೂ ವಿಸ್ತರಣ ಕೇಂದ್ರ, ಡಾ.ಬಿ.ಆರ್. ಅಂಬೇಡ್ಕರ್ ಎಜುಕೇಷನಲ್ ಅಂಡ್ ಕಲ್ಚರಲ್ ಟ್ರಸ್ಟ್, ಸಮಾನತೆ- ಸ್ವಾಭಿಮಾನ-ಸ್ವಾವಲಂಬನೆ ಪ್ರತಿಷ್ಠಾನ ಹಾಗೂ ಸಮಾನತೆ ಪ್ರಕಾಶ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ವಿ. ಶ್ರೀನಿವಾಸಪ್ರಸಾದ್ ಅವರ 77ನೇ ಜನ್ಮ ದಿನಾಚರಣೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಯಾರಾದರೂ ಚುನಾವಣೆ ಸುಧಾರಣೆ ಬಗ್ಗೆ ಮಾತಾಡಿದ್ದಾರೆಯೇ? ಚುನಾವಣಾ ರಾಜಕಾರಣದ ತೊಡಕುಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ ಸರಿಪಡಿಸಬೇಕಿದೆ ಎಂದರು.
ಹಿಂದೆ ಠೇವಣಿ ಕಟ್ಟಲು ಹಣ ಇಲ್ಲದವರನ್ನು ಜನರು ಪಾರ್ಲಿಮೆಂಟಿಗೆ ಕಳುಹಿಸುತ್ತಿದ್ದರು. ಈಗ ಒಂದು ಪಕ್ಷ ಶ್ರೀಮಂತ ವ್ಯಕ್ತಿಯನ್ನು ಅಭ್ಯರ್ಥಿಯನ್ನಾಗಿಸಿದರೆ ಉಳಿದ ಪಕ್ಷಗಳು ಶ್ರೀಮಂತರನ್ನೇ ಕಣಕ್ಕಿಳಿಸುತ್ತವೆ. ಉದ್ಯಮಿಗಳಾದವರು ಮತಗಳನ್ನು ಖರೀದಿ ಮಾಡುತ್ತಾರೆ. ಹಣವಿಲ್ಲದವರು ಚುನಾವಣೆಗೆ ಸ್ಪರ್ಧಿಸಲಾಗದ ಸ್ಥಿತಿಗೆ ತಲುಪಿದ್ದೇವೆ. ಮೌಲ್ಯಗಳನ್ನು ಬೆಂಬಲಿಸುವ ಜನರು ಅಸಂಘಟಿತರಾಗಿದ್ದಾರೆ. ಭ್ರಷ್ಟಾಚಾರ ಮತ್ತು ಚುನಾವಣೆ ಪ್ರತ್ಯೇಕವಾದ ವಿಚಾರ ಅಲ್ಲ ಎಂದು ಅವರು ತಿಳಿಸಿದರು.ಕೋಗಿಲೆ, ಕಾಗೆಯನ್ನು ಬಿಡದ ನಾವುಗಳು ಮನುಷ್ಯರನ್ನು ಬಿಡುತ್ತೇವೆಯೇ? ಇವತ್ತಿಗೂ ಈ ದೇಶದಲ್ಲಿ ದಲಿತತೇರರಿಗೆ ಅಂಬೇಡ್ಕರ್ ಯಾಕೇ ಪರಿಚಯವಾಗುತ್ತಿಲ್ಲ. ಅಂಬೇಡ್ಕರ್ ಹೆಸರಲ್ಲಿ ವೃತ್ತಿ ಮಾಡಿಕೊಳ್ಳುವುದನ್ನು ನಿಲ್ಲಿಸಬೇಕು. ಸಂವಿಧಾನ ಕೊಟ್ಟ ಅಧಿಕಾರವನ್ನು ಮರ್ಜಿಗೆ ಬಳಸುವುದಾದರೆ ಸಂವಿಧಾನದ ಹೆಸರಲ್ಲಿ ಯಾಕೇ ಪ್ರತಿಜ್ಞೆ ಸ್ವೀಕರಿಸಬೇಕು ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಅಂದಿನಿಂದ ಇಂದಿಗೆ ಹಿಂದಕ್ಕೆ ಚಲಿಸುತ್ತಿದ್ದೇವೆ. ನಮಗೇ ಎಲ್ಲಾ ಸೌಕರ್ಯಗಳು ಸಿಕ್ಕಿವೆ. ಮನುಷ್ಯರಾಗಿದ್ದೇವೆಯೇ? ಪೂನಾ ಒಪ್ಪಂದದ ಬಳಿಕ ಈ ದೇಶದಲ್ಲಿ ಎಷ್ಟು ಸುಧಾರಿಸಿದ್ದೇವೆ? ನಮ್ಮನ್ನು ಪ್ರಶ್ನಿಸಿಕೊಂಡರೆ ನಿರಾಸೆ ಮೂಡುತ್ತದೆ. ಸ್ವಾಭಿಮಾನ ಪ್ರಚಾರದ ವಸ್ತುವಲ್ಲ. ಅದು ನಿಷ್ಠೆಯ ವಿಚಾರ. ಅಂಬೇಡ್ಕರ್ ಅವರು ವ್ಯಕ್ತಿಗತವಾದ ಅವಮಾನವನ್ನು ಸ್ವಾಭಿಮಾನ, ಛಲದಿಂದ ಎದುರಿಸಿದರು. ಸಂವಿಧಾನ ತಿದ್ದುಪಡಿಗೆ ರೂಪಿಸಿರುವ ನಿಯಾಮವಳಿಗಳು ಭಾರತದಲ್ಲಿ ಮತ್ತೊಂದು ನಾಗರಿಕ ಯುದ್ಧವಾಗುವುದನ್ನು ತಪ್ಪಿಸಿದೆ ಎಂದು ಅವರು ತಿಳಿಸಿದರು.