ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯಪಾಂಡವಪುರ ತಾಲೂಕು ಬೇಬಿ ಬೆಟ್ಟದಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆ ವಿರುದ್ಧ ಮೊದಲು ದನಿ ಎತ್ತಿದ್ದು ಮಾಜಿ ಶಾಸಕ, ರೈತಸಂಘದ ನಾಯಕರಾಗಿದ್ದ ಕೆ.ಎಸ್.ಪುಟ್ಟಣ್ಣಯ್ಯ. ಕಲ್ಲು ಗಣಿಗಾರಿಕೆಯಿಂದ ಕೆಆರ್‌ಎಸ್ ಅಣೆಕಟ್ಟೆಗೆ ವಿಪತ್ತು ಸಂಭವಿಸುವುದಾಗಿ ಬಹಿರಂಗವಾಗಿ ಹೇಳಿದ್ದೂ ಕೂಡ ಅವರೇ.
೨೦೧೧ರಿಂದಲೇ ಕೆ.ಎಸ್.ಪುಟ್ಟಣ್ಣಯ್ಯನವರು ಕಲ್ಲು ಗಣಿಗಾರಿಕೆ ವಿರುದ್ಧ ಪ್ರಬಲ ಹೋರಾಟವನ್ನು ಮುಂದುವರೆಸಿಕೊಂಡು ಬಂದಿದ್ದರು. ಬೇಬಿ ಬೆಟ್ಟದಲ್ಲಿ ಗಣಿಗಾರಿಕೆಯನ್ನು ಸಂಪೂರ್ಣವಾಗಿ ನಿಷೇಧಿಸುವಂತೆಯೂ ಸರ್ಕಾರದ ಮೇಲೆ ಒತ್ತಡ ಹೇರುತ್ತಲೇ ಬಂದಿದ್ದರು. ಆದರೆ, ಕೆ.ಎಸ್.ಪುಟ್ಟಣ್ಣಯ್ಯನವರ ಮಾತನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿರಲೇ ಇಲ್ಲ.೩.೬.೨೦೧೭ರಲ್ಲಿ ಬೇಬಿ ಬೆಟ್ಟದಲ್ಲಿ ನಡೆಯುತ್ತಿದ್ದ ಅಕ್ರಮ ಗಣಿಗಾರಿಕೆ ಕುರಿತು ಸಾಮಾಜಿಕ ಹೋರಾಟಗಾರ ಕೆ.ಆರ್.ರವೀಂದ್ರ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದರು. ಆನಂತರದಲ್ಲಿ ನಿರಂತರವಾಗಿ ಇಲ್ಲಿಯವರೆಗೂ ಅಕ್ರಮ ಗಣಿಗಾರಿಕೆ ವಿರುದ್ಧ ಕಾನೂನು ಹೋರಾಟ ಮುಂದುವರೆಸಿಕೊಂಡು ಬಂದಿದ್ದಾರೆ. ಬೇಬಿ ಬೆಟ್ಟ ಕಾವಲ್ ಪ್ರದೇಶ ಮಹಾರಾಜರಿಗೆ ಸೇರಿದ ಆಸ್ತಿಯಾಗಿದ್ದು, ಗಣಿಗಾರಿಕೆಯಿಂದ ಬೆಟ್ಟದ ಅಕ್ಕಪಕ್ಕದ ಕೆರೆಗಳು ನಾಶವಾಗಿದ್ದು, ಪರಿಸರ ಹಾನಿಯ ಬಗ್ಗೆ ಗಮನಸೆಳೆದಿದ್ದರು. ಕೆಆರ್‌ಎಸ್ ಉಳಿಸಿ ಹೋರಾಟ ಸಮಿತಿಯಿಂದಲೂ ನಿರಂತರವಾಗಿ ಹೋರಾಟಗಳು ನಡೆದುಕೊಂಡು ಬಂದಿದ್ದವು. ಆದರೆ, ಗಣಿಗಾರಿಕೆ ನಡೆಸುತ್ತಿದ್ದವರು ಹೋರಾಟಗಳಿಗೆ ಸೊಪ್ಪು ಹಾಕಿರಲಿಲ್ಲ. ಗಣಿ ಇಲಾಖೆ ಅಧಿಕಾರಿಗಳು ಸೇರಿದಂತೆ ಜಿಲ್ಲಾಡಳಿತ ಕಂಡೂ ಕಾಣದಂತಿದ್ದವು.
೨೦೧೮ರ ಸೆ.೨೫ರಂದು ಸಂಭವಿಸಿದ ಗಣಿ ಸ್ಫೋಟ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ನೀಡಿದ ವರದಿ ಜಿಲ್ಲಾಡಳಿತಕ್ಕೆ ನಡುಕ ಹುಟ್ಟಿಸಿತು. ಗಣಿಗಾರಿಕೆಯಿಂದ ಕೆಆರ್‌ಎಸ್ ಡ್ಯಾಂಗೆ ಅಪಾಯ ಎದುರಾಗುವ ಸಾಧ್ಯತೆಗಳಿರುವುದನ್ನು ಉಲ್ಲೇಖಿಸಿ ಸರ್ಕಾರ ಮತ್ತು ಮಂಡ್ಯ ಜಿಲ್ಲಾಡಳಿತಕ್ಕೆ ವರದಿ ನೀಡಿತ್ತು. ಆನಂತರದಲ್ಲಿ ಗಣಿಗಾರಿಕೆಗೆ ಕಡಿವಾಣ ಹಾಕುವ ಪ್ರಯತ್ನಗಳು ನಡೆಯುತ್ತಿದ್ದರೂ ಆಗಿಂದಾಗ್ಗೆ ಉಸ್ತುವಾರಿ ಕೇಂದ್ರದ ವರದಿಯನ್ನು ಉಲ್ಲಂಘಿಸಿ ಗಣಿಗಾರಿಕೆ ಸ್ಥಳದಲ್ಲಿ ಸ್ಫೋಟಗಳು ಸಂಭವಿಸುತ್ತಲೇ ಇದ್ದವು. ಪರೀಕ್ಷಾರ್ಥ ಸ್ಫೋಟದ ಹೆಸರಿನಲ್ಲಿ ಗಣಿಗಾರಿಕೆಗೆ ಅನುಮತಿ ಪಡೆಯುವ ಪ್ರಯತ್ನಗಳೂ ಗಣಿ ಮಾಲೀಕರಿಂದ ನಡೆದರೂ ರೈತಸಂಘದ ಪ್ರಬಲ ವಿರೋಧದಿಂದ ಆ ಎಲ್ಲಾ ಪ್ರಯತ್ನಗಳು ವಿಫಲವಾದವು.೨೦೧೯ರಲ್ಲಿ ಸಂಸದೆಯಾಗಿ ಆಯ್ಕೆಯಾದ ಸುಮಲತಾ ಆರಂಭದಲ್ಲಿ ಬೇಬಿಬೆಟ್ಟ ಸೇರಿದಂತೆ ವಿವಿಧೆಡೆ ನಡೆಯುತ್ತಿದ್ದ ಗಣಿಗಾರಿಕೆ ವಿರುದ್ಧ ಪ್ರಬಲ ಹೋರಾಟ ನಡೆಸಿದರು. ಸಂಸತ್ ಅಧಿವೇಶನದಲ್ಲೂ ಗಣಿಗಾರಿಕೆಯಿಂದ ಕೆಆರ್‌ಎಸ್ ಅಣೆಕಟ್ಟೆಗೆ ಅಪಾಯವಿರುವ ಬಗ್ಗೆ ದನಿ ಎತ್ತಿದ್ದರು. ಜೆಡಿಎಸ್ ಶಾಸಕರ ವಿರೋಧ ಕಟ್ಟಿಕೊಂಡು ದಿಶಾ ಸಭೆಗಳಲ್ಲಿ ನಿರಂತರ ಚರ್ಚೆ ಮಾಡಿ, ಗಣಿಗಾರಿಕೆ ಪ್ರದೇಶಗಳಿಗೂ ಖುದ್ದು ಭೇಟಿದ್ದರು. ಆನಂತರದಲ್ಲಿ ಗಣಿಗಾರಿಕೆ ಪ್ರದೇಶದಲ್ಲಿ ೧೪೪ಸೆಕ್ಷನ್ ಜಾರಿಗೊಳಿಸಿ ಗಣಿಗಾರಿಕೆಗೆ ಸರ್ಕಾರ ಬ್ರೇಕ್ ಹಾಕಿತ್ತು.
ಸರ್ಕಾರದ ನಿಲುವನ್ನು ವಿರೋಧಿಸಿ ಗಣಿ ಮಾಲೀಕರು ಹೈಕೋರ್ಟ್ ಮೊರೆ ಹೋಗಿದ್ದರು. ಪ್ರಕರಣದ ವಿಚಾರಣೆ ಪೂರ್ಣಗೊಳಿಸಿರುವ ಹೈಕೋರ್ಟ್ ೨೦ ಕಿ.ಮೀ. ವ್ಯಾಪ್ತಿಯಲ್ಲಿ ಗಣಿಗಾರಿಕೆಗೆ ನಿರ್ಬಂಧ ಹೇರಿ ಅಂತಿಮ ತೆರೆ ಎಳೆದಿದೆ.ಕೆಆರ್‌ಎಸ್ ಸುತ್ತ ಗಣಿಗಾರಿಕೆ ನಿಷೇಧಿಸಬೇಕೆನ್ನುವುದು ನನ್ನ ಹೋರಾಟದ ಮೂಲ ಉದ್ದೇಶವಾಗಿತ್ತು. ಜಿಲ್ಲೆಯ ಜನರ ಜೀವನಾಡಿಯಾಗಿದ್ದ ಜಲಾಶಯದ ರಕ್ಷಣೆ ನಮ್ಮ ಕರ್ತವ್ಯವೂ ಆಗಿತ್ತು. ಕೆಆರ್‌ಎಸ್ ಅಣೆಕಟ್ಟೆಯ ೨೦ ಕಿ.ಮೀ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿಷೇಧಿಸಿ ಹೈಕೋರ್ಟ್‌ನ ಮಹತ್ವದ ಆದೇಶ ಹೊರಡಿಸಿರುವುದು ಸಂತಸ ತಂದಿದೆ. ಮಹತ್ವದ ಆದೇಶ ನೀಡಿದ ಹೈಕೋರ್ಟ್ ನ್ಯಾಯಮೂರ್ತಿಗಳಾದ ಪಿ.ಬಿ.ವರಾಳೆ, ಕೃಷ್ಣ ಎಸ್.ದೀಕ್ಷಿತ್ ಅವರಿಗೆ ಧನ್ಯವಾದ ಅರ್ಪಿಸುವೆ.- ಸುಮಲತಾ ಅಂಬರೀಶ್, ಸಂಸದೆಬೇಬಿ ಬೆಟ್ಟದಲ್ಲಿ ನಡೆಯುತ್ತಿದ್ದ ಅಕ್ರಮ ಗಣಿಗಾರಿಕೆಯಿಂದ ಕೆಆರ್‌ಎಸ್‌ಗೆ ಉಂಟಾಗುತ್ತಿದ್ದ ಅಪಾಯ ತಪ್ಪಿಸಲು ಆರು ವರ್ಷಗಳಿಂದ ನಿರಂತರವಾಗಿ ಕಾನೂನು ಹೋರಾಟ ನಡೆಸಿಕೊಂಡು ಬಂದಿರುವೆ. ಅಣೆಕಟ್ಟು ಸುತ್ತ ೨೦ ಕಿ.ಮೀ. ವ್ಯಾಪ್ತಿಯಲ್ಲಿ ಗಣಿ ಚಟುವಟಿಕೆ ನಿಷೇಧಿಸಿ ಹೈಕೋರ್ಟ್ ಹೊರಡಿಸಿರುವ ಆದೇಶ ತೃಪ್ತಿ ತಂದಿದೆ. ಸುತ್ತಮುತ್ತಲ ಗ್ರಾಮಗಳ ಜನರಿಗೆ ನೆಮ್ಮದಿ ತಂದಿದೆ. ಪ್ರಾಮಾಣಿಕ ಹೋರಾಟಕ್ಕೆ ಸಿಕ್ಕ ಜಯವೂ ಆಗಿದೆ. ಹೈಕೋರ್ಟ್ ಆದೇಶ ಉಲ್ಲಂಘನೆಯಾಗದಂತೆ ತಡೆಯಬೇಕಿರುವುದು ಜಿಲ್ಲಾಡಳಿತದ ಕರ್ತವ್ಯವಾಗಿದೆ.-ಕೆ.ಆರ್.ರವೀಂದ್ರ, ಸಾಮಾಜಿಕ ಹೋರಾಟಗಾರಕೆಆರ್ಎಸ್ ಸುರಕ್ಷತೆ ದೃಷ್ಟಿಯಿಂದ ಹೈಕೋರ್ಟ್ ಉತ್ತಮ ತೀರ್ಪು ನೀಡಿದೆ. ಯಾವುದೇ ಸರ್ಕಾರಿ ಆದೇಶವಿದ್ದರೂ ಅದರ ನೆರಳಲ್ಲೇ ಗಣಿಗಾರಿಕೆ ನಡೆಯುತ್ತಿತ್ತು. ಅಕ್ರಮ ಗಣಿಗಾರಿಕೆಯಿಂದ ಸರ್ಕಾರಕ್ಕೆ ತೆರಿಗೆ ವಂಚನೆಯಾಗುತ್ತಿತ್ತಲ್ಲದೆ ಸಾರ್ವಜನಿಕರ ಹಣವೂ ಲೂಟಿಯಾಗುತ್ತಿತ್ತು. ಹೈಕೋರ್ಟ್ ತೀರ್ಪಿನಿಂದ ಅವೆಲ್ಲಕ್ಕೂ ತಡೆ ಬಿದ್ದಂತಾಗಿದೆ. ಕೆಆರ್‌ಎಸ್‌ನ 20 ಕಿ.ಮೀ. ವ್ಯಾಪ್ತಿಯಲ್ಲಿ ಗಣಿ ನಿಷೇಧಿಸಿ ತೀರ್ಪು ನೀಡಿದ ನ್ಯಾಯಾಧೀಶರಿಗೆ ಧನ್ಯವಾದಗಳು.- ಕೆ.ಎಸ್.ನಂಜುಂಡೇಗೌಡ, ರೈತ ಮುಖಂಡಕೆಆರ್ಎಸ್ ಉಳಿವಿಗಾಗಿ ರೈತಸಂಘ ಹಿಂದಿನಿಂದಲೂ ಹೋರಾಟ ನಡೆಸಿಕೊಂಡು ಬಂದಿತ್ತು. ಗಣಿಗಾರಿಕೆ ವಿರುದ್ಧ ಸಂಘಟನಾತ್ಮಕವಾಗಿ, ಒಗ್ಗಟ್ಟಾಗಿ ನಡೆಸಿದ ಸಮರಕ್ಕೆ ಜಯ ಸಿಕ್ಕಿದೆ. ರೈತರ ಹೃದಯದಂತಿರುವ ಕೆಆರ್‌ಎಸ್‌ಗೆ ಅಪಾಯ ಸೃಷ್ಟಿಸುತ್ತಿದ್ದ ಗಣಿಗಾರಿಕೆಯನ್ನು ನಿಷೇಧಿಸಿರುವುದು ಸಂತಸ, ನೆಮ್ಮದಿ ಮೂಡಿಸಿದೆ. ಕೆಆರ್‌ಎಸ್‌ಗೆ ಎದುರಾಗಿದ್ದ ಕಂಟಕ ತಪ್ಪಿದಂತಾಗಿದೆ.- ಎ.ಎಲ್.ಕೆಂಪೂಗೌಡ, ಜಿಲ್ಲಾಧ್ಯಕ್ಷರು, ರೈತಸಂಘ