ಬೆಂಗಳೂರು : 51 ಕಿ.ಮೀ ಮಾನವ ಸರಪಳಿ ರಚಿಸಿ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ

| Published : Sep 12 2024, 01:49 AM IST / Updated: Sep 12 2024, 06:11 AM IST

human chain ldf
ಬೆಂಗಳೂರು : 51 ಕಿ.ಮೀ ಮಾನವ ಸರಪಳಿ ರಚಿಸಿ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ
Share this Article
  • FB
  • TW
  • Linkdin
  • Email

ಸಾರಾಂಶ

ಸೆ.15ರ 51 ಕಿ.ಮೀ ಮಾನವ ಸರಪಳಿ ನಿರ್ಮಿಸುವ ಮೂಲಕ ‘ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ’ ಆಚರಿಸಲಾಗುವುದು ಎಂದು ಕೆ.ಎ.ದಯಾನಂದ್‌ ತಿಳಿಸಿದರು.

 ಬೆಂಗಳೂರು :  ಪ್ರಜಾಪ್ರಭುತ್ವದ ಮೌಲ್ಯಗಳು ಹಾಗೂ ತತ್ವಗಳ ಬಗ್ಗೆ ನಾಗರಿಕರಿಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಸೆ.15ರ ಭಾನುವಾರ ಹೊಸಕೋಟೆ ಟೋಲ್‌ನಿಂದ ಕುಂಬಳಗೂಡಿನ ಹೆಜ್ಜಾಲದ ವರೆಗೆ ಒಟ್ಟು 51 ಕಿ.ಮೀ ಮಾನವ ಸರಪಳಿ ನಿರ್ಮಿಸುವ ಮೂಲಕ ‘ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ’ ಆಚರಿಸಲಾಗುವುದು ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ.ಎ.ದಯಾನಂದ್‌ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಈ ಬಾರಿಯ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನು ವಿಶೇಷವಾಗಿ ಆಚರಿಸಲು ನಿರ್ಧರಿಸಿದೆ. ಇದರ ಭಾಗವಾಗಿ ರಾಜ್ಯದಲ್ಲಿ 2,800 ಕಿ.ಮೀ ಉದ್ದದ ಮಾನವ ಸರಪಳಿ ರಚನೆಗೆ ಈಗಾಗಲೇ ಸಿದ್ಧತೆ ಮಾಡಿಕೊಳ್ಳಲಾಗಿದೆ. ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿ ಒಟ್ಟು 51 ಕಿ.ಮೀ ಉದ್ದ ಮಾನವ ಸರಪಳಿ ರಚನೆಗೆ ಜಿಲ್ಲಾಡಳಿತ ಯೋಜಿಸಿದೆ.

ಅಂದು ಬೆಳಗ್ಗೆ ಬೆಳಗ್ಗೆ 9.30ಕ್ಕೆ ಹೊಸಕೋಟೆ ಟೋಲ್‌ನಿಂದ ಮಾನವ ಸರಪಳಿ ಆರಂಭಗೊಂಡು, ಕೋನದಾಸಪುರ, ಅವಲಹಳ್ಳಿ, ಮೇಡಹಳ್ಳಿ, ಕೆ.ಆರ್‌.ಪುರ, ಸಂತೆಮಾರನಹಳ್ಳಿ, ಸಿ.ವಿ.ರಾಮನ್‌ ನಗರದ ಸ್ವಾಮಿ ವಿವೇಕಾನಂದ ರಸ್ತೆ, ಇಂದಿರಾ ನಗರ, ಕಬ್ಬನ್‌ ರಸ್ತೆ, ವಿಧಾನಸೌಧದ ಅಂಬೇಡ್ಕರ್‌ ವೀಧಿ, ಮೈಸೂರು ರಸ್ತೆ, ನಾಯಂಡನಹಳ್ಳಿ, ರಾಷ್ಟ್ರೀಯ ಹೆದ್ದಾರಿ 275ರ ಮೂಲಕ ಸಾಗಿ ಕುಂಬಳಗೂಡಿನ ಹೆಜ್ಜಾಲದ ಬಸ್‌ ನಿಲ್ದಾಣದ ವರೆಗೆ ಮಾನವ ಸರಪಳಿ ನಿರ್ಮಿಸಲಾಗುವುದು ಎಂದು ತಿಳಿಸಿದರು.

ಪ್ರತಿ 100 ಮೀಟರ್‌ ಗೆ 80 ಜನರಂತೆ 51 ಕಿ.ಮೀಗೆ ಸುಮಾರು 50000 ಮಂದಿಯಿಂದ ಮಾನವ ಸರಪಳಿ ರಚನೆಗೆ ಯೋಜನೆ ರೂಪಿಸಲಾಗಿದೆ. ಮಾನವ ಸರಪಳಿ ರಚಿಸುವ ಸಮೀಪದಲ್ಲಿರುವ ಎಲ್ಲ ಶಾಲಾ ಕಾಲೇಜು ವಿದ್ಯಾರ್ಥಿಗಳು ಕಡ್ಡಾಯವಾಗಿ ಭಾಗವಹಿಸಲು ಸೂಚಿಸಲಾಗಿದೆ. ಜತೆಗೆ ನಗರದ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತರು, ಪೌರಕಾರ್ಮಿಕರು, ಸಂಘ ಸಂಸ್ಥೆಗಳು, ಎನ್‌ಜಿಒಗಳು ಭಾಗವಹಿಸುವಂತೆ ತಿಳಿಸಲಾಗಿದೆ. ನಾಗರಿಕರೂ ಸಹ ಸ್ವಯಂ ಪ್ರೇರಿತವಾಗಿ ಭಾಗವಹಿಸಬಹುದಾಗಿದೆ ಎಂದು ವಿವರಿಸಿದರು.

ಭಾಗವಹಿಸುವವರು https://democracydaykarnataka.in/ ನೋಂದಣಿ ಮಾಡಿಕೊಳ್ಳಬಹುದು. ನೋಂದಣಿ ಮಾಡಿಕೊಂಡವರಿಗೆ ಪ್ರಮಾಣ ಪತ್ರ ನೀಡಲಾಗುವುದು. ನೋಂದಣಿ ಇಲ್ಲದೆಯೂ ಭಾಗವಹಿಸಬಹುದಾಗಿದೆ ಎಂದರು.

ಮಾನವ ಸರಪಳಿ ರಚನೆಯ ಉಸ್ತುವಾರಿಗೆ ಪ್ರತಿ 100 ಮೀಟರ್‌ ಗೆ ಒಬ್ಬರಂತೆ 530 ಶಿಕ್ಷಕರನ್ನು ಮಾನಿಟರ್‌ ಆಗಿ ನೇಮಕ ಮಾಡಲಾಗಿದೆ. ಪ್ರತಿ ಕಿ.ಮೀ.ಗೆ ಒಬ್ಬರನ್ನು ಲೀಡರ್‌, ಪ್ರತಿ 2 ಕಿ.ಮೀಗೆ 21 ಮಂದಿ ಕ್ಯಾಪ್ಟನ್‌ ಹಾಗೂ ಪ್ರತಿ 5 ಕಿ.ಮೀ ಒಬ್ಬರಂತೆ ಕಮಾಂಡೋ ನೇಮಕ ಮಾಡಲಾಗಿದೆ. ಸರ್ಕಾರದ ಎಲ್ಲ ಇಲಾಖೆಯ ಅಧಿಕಾರಿ ಸಿಬ್ಬಂದಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಭಾಗವಹಿಸುವವರು ಭಾನುವಾರ ಬೆಳಗ್ಗೆ 8.30ಕ್ಕೆ ಹಾಜರಾಗುವಂತೆ ಸೂಚಿಸಲಾಗಿದೆ. 9 ಗಂಟೆಗೆ ಮಾನವ ಸರಪಳಿಗೆ ಸಿದ್ದರಾಗಬೇಕು. 9.15ರ ವರೆಗೆ ಪ್ರಜಾಪ್ರಭುತ್ವದ ಮಹತ್ವ ಹಾಗೂ ಸಂವಿಧಾನದ ಆಶಯಗಳನ್ನು ಆಯಾ ಮಾನಿಟರ್‌ಗಳು ವಿವರಣೆ ನೀಡಲಿದ್ದಾರೆ. 9.15 ರಿಂದ 9.20ರ ವರೆಗೆ ಸಂವಿಧಾನದ ಪೀಠಿಕೆ ಓದುವುದು. 9.20 ರಿಂದ 9.30ರ ವರೆಗೆ ಮಾನವ ಸರಪಳಿ ರಚನೆ ಮಾಡಬೇಕು ಎಂದು ತಿಳಿಸಲಾಗಿದೆ. 9.30 ರಿಂದ 9.35ರ ವರೆಗೆ ಸ್ಥಳಾವಕಾಶ ಇರುವ ಕಡೆ ಗಿಡ ನಡೆಯುವ ಕಾರ್ಯ ನಡೆಸುವಂತೆ ಸೂಚಿಸಲಾಗಿದೆ ಎಂದು ಹೇಳಿದರು.