ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರುಕಬಡ್ಡಿ ದೇಶೀಯ ಆಟವಾಗಿದ್ದು, ಇದನ್ನು ನಾವೆಲ್ಲರೂ ಪ್ರೋತ್ಸಾಹಿಸಿ ಬೆಳೆಸಬೇಕಾಗಿದೆ ಎಂದು ಕೌಶಲ್ಯಾಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಹಾಗೂ ಕೆಪಿಸಿಸಿ ಉಪಾಧ್ಯಕ್ಷ ಮುರಳೀಧರ ಹಾಲಪ್ಪ ಹೇಳಿದರು.
ನಗರದ ಸದಾಶಿವ ನಗರದಲ್ಲಿರುವ ಸಿದ್ಧಾರ್ಥ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿನಾಯಕ ಸ್ಪೋರ್ಟ್ಸ್ ಕ್ಲಬ್ ಹಾಗೂ ತುಮಕೂರು ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ವತಿಯಿಂದ ಹಮ್ಮಿಕೊಂಡಿದ್ದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದರು. ಆರೋಗ್ಯವನ್ನು ಕಾಪಾಡಿಕೊಳ್ಳಲು ಹಲವು ರೀತಿಯ ದೈಹಿಕ ಕಸರತ್ತು ನಡೆಸುತ್ತಾರೆ. ಆದರೆ ಕಬಡ್ಡಿ ಆಟ ಆಡುವುದರಿಂದ ಒಳ್ಳೆಯ ಆರೋಗ್ಯದ ಜೊತೆಗೆ, ಉತ್ತಮ ದೇಹದಾರ್ಢ್ಯತೆ ಪಡೆಯಲು ಸಾಧ್ಯ ಎಂದು ಹೇಳಿದರು.ದೇಹ ಮತ್ತು ಮನಸ್ಸಿನ ಸಮತೋಲನಕ್ಕೆ ಕ್ರೀಡಾ ಚಟುವಟಿಕೆಗಳು ಅತ್ಯಂತ ಸಹಕಾರಿಯಾಗಿವೆ. ತುಮಕೂರು ಜಿಲ್ಲೆ ಒಂದು ಕಾಲದಲ್ಲಿ ಕಬಡ್ಡಿ, ಖೋಖೋ ಮತ್ತು ಫುಟ್‌ಬಾಲ್ ಆಟಗಳಿಗೆ ಹೆಸರು ವಾಸಿಯಾಗಿತ್ತು. ಇಂದಿಗೂ ಹಳೆಯ ಆಟಗಾರರು ಅದನ್ನು ಮೆಲುಕು ಹಾಕುವುದನ್ನು ನಾವು ಕಾಣಬಹುದು. ಸರ್ಕಾರಿ ಉದ್ಯೋಗ, ಶಿಕ್ಷಣದಲ್ಲಿ ಕ್ರೀಡಾಪಟುಗಳಿಗೆ ಶೇ.2 ರಷ್ಟು ಮೀಸಲಾತಿ ಲಭ್ಯವಿದೆ. ಕ್ರೀಡಾಪಟುಗಳು ಅರ್ಧಕ್ಕೆ ಕ್ರೀಡೆಯನ್ನು ಮೊಟಕುಗೊಳಿಸದೆ, ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡುವಂತಹ ಒಳ್ಳೆಯ ಕ್ರೀಡಾಪಟುಗಳಾಗಬೇಕು ಎಂದು ಸಲಹೆ ನೀಡಿದರು.
ಸಮಾಜ ಸೇವಕ ಪಾಲನೇತ್ರಯ್ಯ ಮಾತನಾಡಿ, ಬಡತನದಿಂದ ಬಂದ ನಮಗೆ ಈ ರೀತಿಯ ಕ್ರೀಡಾ ಚಟುವಟಿಕೆಯಲ್ಲಿ ಪಾಲ್ಗೊಳ್ಳಲು ಅವಕಾಶಗಳೇ ಲಭಿಸುತ್ತಿರಲಿಲ್ಲ. ಹಾಗಾಗಿ ತುಮಕೂರಿನ ಯಾವುದೇ ಶಾಲೆಯಲ್ಲಿ ಕ್ರೀಡಾ ಚಟುವಟಿಕೆಗಳು ನಡೆದರೂ ನನ್ನ ಕೈಲಾದ ಸಹಾಯ ಮಾಡುತ್ತೇನೆ. ಆ ಮಕ್ಕಳ ಆಟ ನೋಡಿ, ನಾನೇ ಆಟವಾಡಿದಷ್ಟು ಆನಂದ ಪಡುತ್ತೇನೆ. ಕ್ರೀಡೆಯಿಂದ ಮನುಷ್ಯನ ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿಸುತ್ತದೆ. ಹಾಗಾಗಿ ಇಂತಹ ಚಟುವಟಿಕೆಯಲ್ಲಿ ಎಲ್ಲರೂ ಪಾಲ್ಗೊಂಡು ರಾಜ್ಯಕ್ಕೆ, ದೇಶಕ್ಕೆ ಹೆಸರು ತರಬೇಕು ಎಂದರು.ಬೆಳ್ಳಾವಿಯ ಶ್ರೀಕಾರದ ವೀರಬಸವ ಮಹಾಸ್ವಾಮೀಜಿ ಮಾತನಾಡಿ, ಮನುಷ್ಯನ ಮಾನಸಿಕ ಮತ್ತು ದೈಹಿಕ ಸಮತೋಲನಕ್ಕೆ ಕ್ರೀಡೆ, ಯೋಗ, ಧ್ಯಾನ, ಪೂಜೆ ಸಹಕಾರಿಯಾಗಿವೆ. ಕ್ರೀಡೆಯು ಎಲ್ಲರೊಂದಿಗೆ ನಾನು ಎಂಬುದನ್ನು ಕಲಿಸುತ್ತದೆ. ಯಾವುದೇ ಕ್ರೀಡೆಗೂ ಪ್ರಪಂಚದಲ್ಲಿ ಬೆಲೆಯಿದೆ. ಭಾರತ ಟಿ.20 ವಿಶ್ವಕಪ್ ಗೆದ್ದಿರುವುದನ್ನು ಇಡೀ ವಿಶ್ವವೇ ಕೊಂಡಾಡಿದೆ ಎಂದರು.
ಮಮತಾ, ಉಪಪ್ರಾಂಶುಪಾಲ ರಮೇಶ್, ಗೂಳೂರು ಶಿವಕುಮಾರ್, ಮುನಿರಾಜು, ಪಾಲಿಕೆ ಮಾಜಿ ಸದಸ್ಯ ಎಚ್.ಡಿ.ಕೆ ಮಂಜುನಾಥ್ ಉಪಸ್ಥಿತರಿದ್ದರು.