ಸಾರಾಂಶ
ಗ್ರಾಮದ ರಾಜಬೀದಿಯಲ್ಲಿ ರಥೋತ್ಸವ ಮುಗಿದ ಬಳಿಕ ಭಕ್ತರು ರಥದ ಎರಡೂ ಕಡೆಯಲ್ಲಿರುವ ನಾಲ್ಕು ಕಲ್ಲಿನ ಚಕ್ರಗಳಿಗೆ ಈಡುಗಾಯಿ ಹೊಡೆಯುವ ಮೂಲಕ ತಮ್ಮ ಹರಕೆ ತೀರಿಸಿಕೊಂಡರು.
ಚನ್ನರಾಯಪಟ್ಟಣ : ತಾಲೂಕಿನ ಹಿರೀಸಾವೆ ಹೋಬಳಿಯ ಪುರಾಣ ಪ್ರಸಿದ್ಧ ಶ್ರೀಕ್ಷೇತ್ರ ಕಬ್ಬಳಿ ಗ್ರಾಮದಲ್ಲಿ ಶ್ರೀ ಬಸವೇಶ್ವರಸ್ವಾಮಿಯ ರಥೋತ್ಸವವು ಸಾವಿರಾರು ಮಂದಿ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.
ಈ ಹಿನ್ನೆಲೆಯಲ್ಲಿ ದೇವಾಲಯಕ್ಕೆ ಹೂವಿನ ಚಪ್ಪರ ಹಾಕಲಾಗಿದ್ದು, ತಳಿರು-ತೋರಣಗಳಿಂದ ಸಿಂಗರಿಸಲಾಗಿತ್ತು. ಶ್ರೀ ಬಸವೇಶ್ವರಸ್ವಾಮಿಗೆ ಮುಂಜಾನೆ ೬.೩೦ ರಲ್ಲಿ ಕುಂಕುಮಾರ್ಚಣೆ, ಅಭಿಷೇಕ, ಪಂಚಾಭಿಷೇಕ ಜರುಗಿದ್ದು, ಬಳಿಕ ಉತ್ಸವ ಮೂರ್ತಿಗೆ ಒಡವೆ-ವಸ್ತ್ರಗಳಿಂದ ಅಲಂಕಾರ ನಡೆಯಿತು.
ರಾತ್ರಿ ೭.೩೦ ರ ಸುಮಾರಿನಲ್ಲಿ ಶ್ರೀ ಆದಿಚುಂಚನಗಿರಿ ಹಾಸನ ಶಾಖಾಮಠದ ಶ್ರೀ ಶಂಭುನಾಥ ಸ್ವಾಮೀಜಿಯವರು ರಥದಲ್ಲಿ ಅಲಂಕೃತನಾಗಿದ್ದ ಶ್ರೀ ಬಸವೇಶ್ವರಸ್ವಾಮಿಗೆ ಪ್ರಥಮ ಪೂಜೆ ಸಲ್ಲಿಸುವ ಮೂಲಕ ವೈಭವದ ರಥೋತ್ಸವಕ್ಕೆ ಚಾಲನೆ ನೀಡಿದರು.
ಸಾಂಪ್ರದಾಯದಂತೆ ಗ್ರಾಮದ ಹಿರಿಯರೊಬ್ಬರು ರಥದ ಎದುರಿನಲ್ಲಿ ನೆಡಲಾಗಿದ್ದ ಬಾಳೆಕಂದನ್ನು ವೀರಕತ್ತಿಯಿಂದ ಕತ್ತರಿಸುತ್ತಿದಂತೆಯೇ ಭಕ್ತರು ಜೈಂಕಾರದೊಂದಿಗೆ ರಾಜಬೀದಿಯಲ್ಲಿ ರಥವನ್ನು ಎಳೆದರು. ಮಹಿಳೆಯರು ರಥಕ್ಕೆ ಬಾಳೆಹಣ್ಣು, ಹೂ, ಬಿಲ್ವಪತ್ರೆ ಹಾಗೂ ದವನ ಎಸೆದು ಭಕ್ತಿ ಬಾವದಲ್ಲಿ ತೇಲಿದರು.
ಸಹಸ್ರ ಈಡುಗಾಯಿಗಳ ಮೂಲಕ ಹರಕೆ:
ಗ್ರಾಮದ ರಾಜಬೀದಿಯಲ್ಲಿ ರಥೋತ್ಸವ ಮುಗಿದ ಬಳಿಕ ಭಕ್ತರು ರಥದ ಎರಡೂ ಕಡೆಯಲ್ಲಿರುವ ನಾಲ್ಕು ಕಲ್ಲಿನ ಚಕ್ರಗಳಿಗೆ ಈಡುಗಾಯಿ ಹೊಡೆಯುವ ಮೂಲಕ ತಮ್ಮ ಹರಕೆ ತೀರಿಸಿಕೊಂಡರು. ೮ ಗಂಟೆಯಿಂದ ೯ ರವರೆಗೆ ಸುಮಾರು ೮ ರಿಂದ ೧೦ ಸಾವಿರಕ್ಕೂ ಹೆಚ್ಚು ಈಡುಕಾಯಿ ಒಡೆದು ಸಂಭ್ರಮಿಸಿದರು.
ವಿವಿದೆಡೆಯಿಂದ ಭಕ್ತರ ಆಗಮನ:ಶ್ರೀಕ್ಷೇತ್ರದಲ್ಲಿ ನಡೆದ ರಥೋತ್ಸವಕ್ಕೆ ಮಂಡ್ಯ, ತಿಪಟೂರು, ನಾಗಮಂಗಲ, ತುರುವೇಕೆರೆ, ಅರಸೀಕೆರೆ ಸೇರಿ ವಿವಿಧೆಡೆಯಿಂದ ಸುಮಾರು ೩ ರಿಂದ ೪ ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಜಮಾಯಿಸಿದ್ದು ರಥೋತ್ಸವದ ಬಳಿಕ ಸನ್ನಿಧಿಯಲ್ಲಿ ಶ್ರೀ ಬಸವೇಶ್ವರಸ್ವಾಮಿಗೆ ಹಣ್ಣು, ಕಾಯಿ ಅರ್ಪಿಸಿ ಗಂಧ-ಕರ್ಪೂರ ಬೆಳಗಿಸಿ ದರ್ಶನ ಪಡೆದು ಪುನೀತರಾದರು.
ರಥೋತ್ಸವದಲ್ಲಿ ದಿಡಗ, ಮೂಕಿಕೆರೆ, ನರಿಹಳ್ಳಿ, ಉಳ್ಳಾವಳ್ಳಿ, ಹೊಸಹಳ್ಳಿ, ಮೆಳ್ಳಹಳ್ಳಿ, ಕರಿಕ್ಯಾತನಹಳ್ಳಿ, ದಿ.ತುಮಕೂರು, ಉಂಗರಗೆರೆ, ಶೆಟ್ಟಿಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಪಾಲ್ಗೊಂಡಿದ್ದರು. ಉತ್ಸವ ಮುಗಿದ ಬಳಿಕ ಝಗಮಗಿಸುವ ಚಿಕ್ಕರಸನಹಳ್ಳಿ ಮಂಜುನಾಥ ಡ್ರಾಮ ಸೀನ್ಸ್‌ನಲ್ಲಿ ಗ್ರಾಮಸ್ಥರಿಂದ ಶ್ರೀ ಶನಿ ಪ್ರಭಾವ ಎಂಬ ಪೌರಾಣಿಕ ನಾಟಕ ಪ್ರದರ್ಶನಗೊಂಡಿತು.
ಆದಿಚುಂಚನಗಿರಿ ಹಾಸನ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿಯವರು ರಥೋತ್ಸವಕ್ಕೆ ಚಾಲನೆ ನೀಡಿದ್ದು, ಕಬ್ಬಳಿ ಮಠದ ಶ್ರೀ ಶಿವಪುತ್ರನಾಥ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ಧಾರ್ಮಿಕ ಪೂಜಾ ಕೈಂಕರ್ಯಗಳು ನೆರವೇರಿದವು. ದಿಡಗ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎನ್.ಆರ್.ರತ್ನರಾಜ್, ಗುಡಿಗೌಡ ಪ್ರಕಾಶ್ ಹಾಗೂ ಇತರರು ಪಾಲ್ಗೊಂಡಿದ್ದರು. ರಥೋತ್ಸವಕ್ಕೆ ಹಿರೀಸಾವೆ ಪೊಲೀಸರು ಬಿಗಿ ಭಧ್ರತೆ ಒದಗಿಸಿದ್ದರು.
.