ಸಾರಾಂಶ
ಕಾಂಗ್ರೆಸ್ ಪಾಲಿಕೆ ಮಾಜಿ ಸದಸ್ಯ, ಸಹಚರರ ಹೇಳಿಕೆಗೆ ಗೃಹ ಸಚಿವರ ಸ್ಪಷ್ಟನೆಗೆ ಆಗ್ರಹ
ಕನ್ನಡಪ್ರಭ ವಾರ್ತೆ ದಾವಣಗೆರೆವಕ್ಫ್ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸುವ ಭರದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಕಾಂಗ್ರೆಸ್ ಪಕ್ಷದ ಪಾಲಿಕೆ ಮಾಜಿ ಸದಸ್ಯ ಕಬೀರ್ ಖಾನ್ ಹಾಗೂ ಸಹಚರರ ಪ್ರಚೋದನಾಕಾರಿ ಹೇಳಿಕೆಗೆ ಆಳುವ ಸರ್ಕಾರದ ಕುಮ್ಮಕ್ಕು ಇರುವುದು ಸ್ಪಷ್ಟವಾಗಿದೆ. ಕಬೀರ್, ಇತರರನ್ನು ಕೂಡಲೇ ಗಡೀಪಾರು ಮಾಡಬೇಕು ಎಂದು ಬಿಜೆಪಿ ನಿಕಟ ಪೂರ್ವ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್ ಒತ್ತಾಯಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್ ಪಕ್ಷದ ಮಾಜಿ ಪಾಲಿಕೆ ಸದಸ್ಯ ಕಬೀರ ಖಾನ್ ಹಾಗೂ ಇತರರು ವಕ್ಫ್ ಕಾಯ್ದೆ ವಿರೋಧಿಸುವ ಭರದಲ್ಲಿ ಪ್ರಚೋದನಾತ್ಮಕ ಹೇಳಿಕೆ ನೀಡಿದ್ದನ್ನು ಗಮನಿಸಿದರೆ, ಜಿಲ್ಲಾ ಸಚಿವರ ಕುಮ್ಮಕ್ಕು ಇರುವ ಅನುಮಾನವೂ ಇದೆ ಎಂದರು.ದಾವಣಗೆರೆಯಲ್ಲಿ ಯಾವ ಕೋಮು ಗಲಭೆಯಾದರೂ ಹಿಂದು ಸಂಘಟನೆಗಳು, ಬಿಜೆಪಿ ಪಕ್ಷ, ಸಂಘದ ಮುಖಂಡರನ್ನು ವಿನಾಕಾರಣ ಟೀಕೆ ಮಾಡಲಾಗುತ್ತಿದೆ. ಇದರಿಂದ ಇಂತಹ ಕಿಡಿಗೇಡಿಗಳಿಗೆ ಪುಷ್ಟಿ, ಪ್ರೋತ್ಸಾಹ ನೀಡಿದಂತಾಗುತ್ತದೆ. ಇಂತಹದ್ದೊಂದು ಪ್ರಚೋದನಾಕಾರಿ ಹೇಳಿಕೆ ನೀಡಿರುವ ಕಾಂಗ್ರೆಸ್ ಪಕ್ಷದ ಕಬೀರ್ ಖಾನ್ ಮತ್ತು ಸಹಚರರ ಕುರಿತಂತೆ ಜಿಲ್ಲಾ ಸಚಿವರು ಹಾಗೂ ಗೃಹ ಸಚಿವರು ತಕ್ಷಣ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದರು.
ಕಬೀರ್ ಖಾನ್ ಹಾಗೂ ಇತರರು ವಕ್ಫ್ ಕಾಯ್ದೆ ವಿರೋಧಿಸಿ, ಪ್ರಚೋದನಾಕಾರಿ ಹೇಳಿಕೆ ನೀಡಿದ್ದರೂ ಸಹ ಇದುವರೆಗೆ ಯಾರನ್ನೂ ಜಿಲ್ಲಾ ಪೊಲೀಸ್ ಇಲಾಖೆ ಬಂಧಿಸಿಲ್ಲ. ಒಂದೇ ಕ್ಷೇತ್ರದಲ್ಲಿ ಸುಮಾರು 35-40 ಸಾವಿರ ಮತ ಸಿಗುತ್ತವೆಂಬ ಕಾರಣಕ್ಕೆ ಅಂತಹವರ ಬಗ್ಗೆ ಮೃದು ಧೋರಣೆಯೂ ಸರಿಯಲ್ಲ. ಪ್ರಚೋದನಾಕಾರಿ ಹೇಳಿಕೆ ನೀಡಿರುವ ಕಬೀರ್ ಖಾನ್ ಇತರರನ್ನು ಗೂಂಡಾ ಕಾಯ್ದೆಯಡಿ ತಕ್ಷಣವೇ ಬಂಧಿಸಿ, ಜಿಲ್ಲೆಯಿಂದ ಗಡೀಪಾರು ಮಾಡಬೇಕು ಎಂದರು.ವಕ್ಫ್ ತಿದ್ದುಪಡಿ ಮಸೂದೆ ಕಾಯ್ದೆಯ ಕುರಿತಂತೆ ಮುಖ್ಯಮಂತ್ರಿಗೆ, ಜಿಲ್ಲಾ ಮಂತ್ರಿಗಳಿಗೆ ಮನವಿ ಸಲ್ಲಿಸುವುದರಿಂದ ಯಾವುದೇ ಪ್ರಯೋಜನ ಇಲ್ಲ. ಹಾಗಾಗಿ ಮುಸ್ಲಿಂ ಬಾಂಧವರು ಬೀದಿಗಿಳಿದು, ಬಸ್ಸು ಹಾಗೂ ರೈಲುಗಳಿಗೆ ಬೆಂಕಿ ಹಚ್ಚಬೇಕು. ಪ್ರತಿ ಗ್ರಾಮಗಳಲ್ಲೂ ಧಂಗೆ ಎಬ್ಬಿಸಿ, ಜನರ ಪ್ರಾಣ ತೆಗೆಯಿರಿ, ಹುತಾತ್ಮರಾಗಿ ಎಂದು ಕರೆ ನೀಡುವ ಮೂಲಕ ಇಡೀ ಜಿಲ್ಲಾ ಕೇಂದ್ರದ ಸಾಮರಸ್ಯ ಕದಡುವ ಕೆಲಸವನ್ನು ಕಬೀರ್ ಖಾನ್ ಮತ್ತಿತರೆ ಸಹಚರರು ಮಾಡಿದ್ದಾರೆ ಎಂದು ಆರೋಪಿಸಿದರು.
ಕಾಂಗ್ರೆಸ್‌ನ ಕಬೀರ್ ಖಾನ್, ಇತರರು ಇಂತಹ ಉದ್ಧಟತನ ಮೆರೆಯಲು ಕಾಂಗ್ರೆಸ್ ಪಕ್ಷ, ಆ ಪಕ್ಷದ ಮುಖಂಡರ ವರ್ತನೆಯೂ ಕಾರಣವಾಗಿದೆ. ಮತ ಬ್ಯಾಂಕ್‌ಗಳ ಓಲೈಕೆ ರಾಜಕಾರಣ ಮಾಡುತ್ತಿರುವುದರಿಂದ ತಾವು ಏನೇ ಮಾಡಿದರೂ ಕಾಂಗ್ರೆಸ್ ಪಕ್ಷ, ಕಾಂಗ್ರೆಸ್ ಸರ್ಕಾರ ತಮ್ಮನ್ನು ರಕ್ಷಿಸುತ್ತದೆಂಬ ಕಾರಣಕ್ಕೆ ಇಂತಹ ಉದ್ಧಟತನದ, ಪ್ರಚೋದನಾಕಾರಿ ಹೇಳಿಕೆ ನೀಡುತ್ತಿದ್ದಾರೆ. ತಕ್ಷಣವೇ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಜಿಲ್ಲಾ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಈ ಬಗ್ಗೆ ಸ್ಪಷ್ಟನೆ ನೀಡಬೇಕು. ಈ ಬಗ್ಗೆ ಉದಾಸೀನ ಮಾಡಿದರೆ ತೀವ್ರ ಸ್ವರೂಪದ ಹೋರಾಟ ನಡೆಸಬೇಕಾದೀತು ಎಂದು ಎಚ್ಚರಿಸಿದರು.ಬಿಜೆಪಿ ಮುಖಂಡರಾದ ರಾಜನಹಳ್ಳಿ ಶಿವಕುಮಾರ, ಟಿಂಕರ್ ಮಂಜಣ್ಣ, ಜಿ.ಕಿಶೋರಕುಮಾರ, ಶಿವನಗೌಡ ಪಾಟೀಲ, ಕುಮಾರ ಘಾಟ್ಗೆ, ಹನುಮಂತಪ್ಪ, ರಾಜು ಇತರರು ಇದ್ದರು.