ಸಾರಾಂಶ
ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ
ಕಡಬ ತಾಲೂಕು ಮಟ್ಟದ ಅಧಿಕಾರಿಗಳ ನೆರೆ ಮುಂಜಾಗ್ರತಾ ಸಭೆಯಲ್ಲಿ, ಶಾಸಕಿ ಅವರಿಗೆ ಸುಳ್ಳು ಮಾಹಿತಿಗಳ ವರದಿ ಸಲ್ಲಿಸುತ್ತಿದ್ದ ಅಧಿಕಾರಿಗಳನ್ನು ಮಾಧ್ಯಮ ಪ್ರತಿನಿಧಿಗಳು ತರಾಟೆಗೆ ತೆಗೆದುಕೊಂಡ ಘಟನೆ ಬುಧವಾರ ಕಡಬದಲ್ಲಿ ನಡೆಯಿತು.ಸಭೆಯು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅಧ್ಯಕ್ಷತೆಯಲ್ಲಿ ಕಡಬ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಲಾಯಿತು.ಸಭೆಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು, ಗ್ರಾಮ ಕರಣಿಕರು, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳು ಉಪಸ್ಥಿತರಿದ್ದರು. ಕಡಬ ತಹಸೀಲ್ದಾರ್ ಪ್ರಭಾಕರ ಖಜೂರೆ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಭವಾನಿ ಶಂಕರ್, ಕಡಬ ಉಪ ತಹಸೀಲ್ದಾರ್ ಮನೋಹರ್ ಕೆ.ಟಿ. ಉಪಸ್ಥಿತರಿದ್ದರು. ಒಂದೊಂದು ಇಲಾಖೆಯ ಅಧಿಕಾರಿಗಳು ಯಾವುದೇ ಸಮಸ್ಯೆ ಇಲ್ಲದೆ ಎಲ್ಲವೂ ಸುವ್ಯವಸ್ಥಿತವಾಗಿದೆ ಎಂಬಂತೆ ಶಾಸಕಿ ಅವರಿಗೆ ವರದಿ ಒಪ್ಪಿಸಿದರು. ಕಡಬ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಲೀಲಾವತಿ ವರದಿ ನೀಡಿ, ಎಲ್ಲಾ ಚರಂಡಿ ಕೆಲಸ ಆಗಿದೆ, ಯಾವುದೇ ಸಮಸ್ಯೆ ಇಲ್ಲ ಎಂದು ವರದಿ ನೀಡಿದ್ದರು. ಈ ವರದಿಯ ಬಗ್ಗೆ ಮಧ್ಯಪ್ರವೇಶಿಸಿದ ಪತ್ರಕರ್ತರೊಬ್ಬರು, ಕಡಬ ಪಟ್ಟಣ ಪಂಚಾಯಿತಿ ವ್ಯಾಪ್ತಿ ಎಲ್ಲ ಕಡೆ ಚರಂಡಿ ರಿಪೇರಿ ಆಗಿದೆ ಎಂದು ಶಾಸಕಿ ಅವರಿಗೆ ಯಾಕೆ ತಪ್ಪು ಮಾಹಿತಿ ನೀಡುತ್ತಿದ್ದೀರಿ, ಒಂದು ಮಳೆ ಬಂದಾಗ ಕಡಬ ಪೇಟೆ, ಕಳಾರ ಭಾಗ, ಕಡಬ ಕಾಲೇಜು ರಸ್ತೆ, ಹಳೆಸ್ಟೇಷನ್ ಭಾಗದಲ್ಲಿ ಚರಂಡಿ ಸಮಸ್ಯೆಯಿಂದಾಗಿ ರಸ್ತೆಯಲ್ಲಿ ನೀರು ಹರಿಯುತ್ತಿದ್ದರೆ ನೀವಿಲ್ಲಿ ಎಲ್ಲವೂ ಸರಿಯಾಗಿದೆ ಎನ್ನುತ್ತೀರಿ ಎಂದು ತರಾಟೆಗೆ ತೆಗೆದುಕೊಂಡರು. ಬಳಿಕ ಜಿ.ಪಂ. ಇಂಜಿನಿಯರ್ ಹುಕ್ಕೇರಿ ಅವರು ಜಲ ಜೀವನ್ ಮಿಷನ್ ಯೋಜನೆಯಲ್ಲಿ ಪೂರ್ತಿಯಾದ ಗ್ರಾಮಗಳ ಪಟ್ಟಿಯನ್ನು ಶಾಸಕಿ ಅವರಿಗೆ ನೀಡಿದರು. ಇದರಲ್ಲಿ ಕೊಯಿಲ ಗ್ರಾಮವೂ ಸೇರಿತ್ತು. ಆದರೆ ಇದನ್ನು ಆಕ್ಷೇಪಿಸಿದ ಪತ್ರಕರ್ತರೊಬ್ಬರು, ಕೊಯಿಲ ಗ್ರಾಮದಲ್ಲಿ ಜಲಜೀವನ್ ಮಿಷನ್ ಯೋಜನೆಯ ನೀರಾವರಿ ಸರಬರಾಜು ವ್ಯವಸ್ಥೆ ಪೂರ್ತಿಯಾಗಿಲ್ಲ, ಇದಕ್ಕೆ ನಾನೇ ಸಾಕ್ಷಿ ಒದಗಿಸುತ್ತೇನೆ ಎಂದು ಹೇಳಿದರು.
ಶಾಸಕಿ ಪಾಠ ಶಾಸಕಿ ಭಾಗೀರಥಿ ಮುರುಳ್ಯ ಅವರು ಬುಧವಾರ ಇಡೀ ದಿನ ಕಡಬದಲ್ಲಿದ್ದು ಸಾರ್ವಜನಿಕರ ಅಹವಾಲು ಸ್ವೀಕಾರದೊಂದಿಗೆ ಅಧಿಕಾರಿಗಳ ಸಭೆ ನಡೆಸಿದ್ದರು. ಕಡಬ ಮಿನಿ ವಿಧಾನ ಸೌಧದ ಶಾಸಕರ ಕಚೇರಿಯಲ್ಲಿ ಅಹವಾಲು ಸ್ವೀಕರಿಸುತ್ತಿದ್ದ ವೇಳೆ ಸಾರ್ವಜನಿಕರು ಕಂದಾಯ ಇಲಾಖೆಯಲ್ಲಿ ಲಂಚಕ್ಕಾಗಿ ಸತಾಯಿಸುತ್ತಾರೆ ಎನ್ನುವ ದೂರು ನೀಡಿದರು. ವಿದ್ಯಾರ್ಥಿಗಳ ಆದಾಯ ಜಾತಿ ಪ್ರಮಾಣ ಪತ್ರ ಪಡೆಯುವಾಗಲೂ ಲಂಚದ ಬೇಡಿಕೆ ಇಡುತ್ತಾರೆ ಎಂದು ಅಳಲು ತೋಡಿಕೊಂಡರು. ಇದರಿಂದ ತೀವ್ರ ಮನನೊಂದ ಶಾಸಕಿ ಭಾಗೀರಥಿ ಮುರುಳ್ಯ ನೆರೆ ಮುಂಜಾಗ್ರತ ಸಭೆಯಲ್ಲಿ ತನ್ನ ಅಸಮಾಧಾನ ಹೊರ ಹಾಕಿದರು.