ಕಡಗದಾಳು ಶಾಲೆ ಶಿಕ್ಷಕರು, ವಿದ್ಯಾರ್ಥಿಗಳಿಗೆ ದಲಿತ ಸಂಘರ್ಷ ಸಮಿತಿ ಸನ್ಮಾನ

| Published : Jul 08 2024, 12:39 AM IST

ಕಡಗದಾಳು ಶಾಲೆ ಶಿಕ್ಷಕರು, ವಿದ್ಯಾರ್ಥಿಗಳಿಗೆ ದಲಿತ ಸಂಘರ್ಷ ಸಮಿತಿ ಸನ್ಮಾನ
Share this Article
  • FB
  • TW
  • Linkdin
  • Email

ಸಾರಾಂಶ

ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಹಾಗೂ ಶೇ. 100 ಫಲಿತಾಂಶ ಬರಲು ಕಾರಣರಾದ ಶಿಕ್ಷಕರನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಗೌರವಿಸಲಾಯಿತು. ಈ ಸಂದರ್ಭ ಸಂಘಟನೆಯ ಜಿಲ್ಲಾ ಸಂಚಾಲಕ ಎಚ್‌.ಎಲ್‌. ದಿವಾಕರ್‌ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

2023- 24ನೇ ಸಾಲಿನಲ್ಲಿ ಕಡಗದಾಳು ಪ್ರೌಢಶಾಲೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಹಾಗೂ ಶೇ.100 ರಷ್ಟು ಫಲಿತಾಂಶ ಬರಲು ಕಾರಣರಾದ ಶಿಕ್ಷಕರನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು.

ಶಾಲೆಯ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದ ಸಮಾಜ ಸೇವಕ ಹಾಗೂ ದಾನಿಗಳಾದ ಟಿ.ಆರ್. ವಾಸುದೇವ್, ನಾವು ಶಿಕ್ಷಕರಲ್ಲಿ ದೇವರನ್ನು ಕಾಣುತ್ತಿದ್ದೇವೆ. ಶಿಕ್ಷಕರನ್ನು ಗೌರವಿಸಿದರೆ ಎಲ್ಲ ಕೆಲಸ ಕಾರ್ಯಗಳು ನೆರವೇರುತ್ತದೆ ಎಂದರು. ವಿದ್ಯಾರ್ಥಿಗಳು ಮೊಬೈಲ್‌ನಿಂದ ದೂರವಿದ್ದು, ಉತ್ತಮವಾಗಿ ಓದಿ ಶಾಲೆಗೆ ಒಳ್ಳೆಯ ಹೆಸರು ತರಬೇಕು ಮತ್ತು ಸಮಾಜದಲ್ಲಿ ಒಳ್ಳೆಯ ಪ್ರಜೆಗಳಾಗಬೇಕು ಎಂದು ಕರೆ ನೀಡಿದರು.

ಸಂಘಟನೆಯ ಜಿಲ್ಲಾ ಸಂಚಾಲ ಎಚ್‌.ಎಲ್‌. ದಿವಾಕರ್ ಪ್ರಾಸ್ತವಿಕವಾಗಿ ಮಾತನಾಡಿ, ಕೊಡಗಿನ ಎಲ್ಲ ಸರ್ಕಾರಿ ಶಾಲಾ, ಕಾಲೇಜುಗಳಲ್ಲಿ ಶೇ.100ರಷ್ಟು ಫಲಿತಾಂಶ ಬರಬೇಕು ಎಂಬ ಉದ್ದೇಶದಿಂದ ಸಂಘಟನೆಯ ವತಿಯಿಂದ ಸುಮಾರು 10 ವರ್ಷಗಳಿಂದ ಉತ್ತಮ ಫಲಿತಾಂಶ ಬಂದ ಸರ್ಕಾರಿ ಪ್ರೌಢಶಾಲೆ, ಪದವಿ ಪೂರ್ವ ಕಾಲೇಜು ಹಾಗೂ ಪದವಿ ಕಾಲೇಜುಗಳಿಗೆ ಭೇಟಿ ನೀಡಿ ಶಿಕ್ಷಕರನ್ನು ಹಾಗೂ ಉಪನ್ಯಾಸಕರನ್ನು ಸನ್ಮಾನಿಸಿ ಗೌರವಿಸಲಾಗುತ್ತಿದೆ ಎಂದರು.

ಪ್ರಸ್ತುತ ದಿನಗಳಲ್ಲಿ ಜಿಲ್ಲೆಯಲ್ಲಿ ಉತ್ತಮ ಫಲಿತಾಂಶ ಬರುತ್ತಿದ್ದು, ಮುಂದಿನ ದಿನಗಳಲ್ಲಿ ಇಂತಹ ಕಾರ್ಯಕ್ರಮ ನಡೆಸುವುದಾಗಿ ತಿಳಿಸಿದರು.

ಸಮಾಜ ಸೇವಕ ಉಣ್ಣಿಕೃಷ್ಣ ಮಾತನಾಡಿ, ಸಂಘಟನೆ ವತಿಯಿಂದ ಉತ್ತಮ ಕಾರ್ಯಕ್ರಮ ನಡೆಸಲಾಗುತ್ತಿದ್ದು, ವಿದ್ಯಾರ್ಥಿಗಳ ಸಮಸ್ಯೆಗಳನ್ನು ಅರಿತು ಸಂಘಟನೆಗಳು ಸ್ಪಂದಿಸುವಂತಾಗಬೇಕು ಎಂದರು.

ಉದ್ಯಮಿ ಕಿರಣ್ ಮಾತನಾಡಿ, ಸರ್ಕಾರಿ ಶಾಲೆಯಲ್ಲಿ ಓದುವ ವಿದ್ಯಾರ್ಥಿಗಳು ಬುದ್ಧಿವಂತರು, ಹಲವು ಸಮಸ್ಯೆಗಳ ನಡುವೆಯೂ ಉತ್ತಮ ಅಂಕ ಪಡೆಯುತ್ತಿರುವುದು ಶ್ಲಾಘನೀಯ ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಲೆಯ ಶಿಕ್ಷಕ ದೀಪಕ್, ಶಿಕ್ಷಕ ವೃತ್ತಿಯನ್ನು, ಅವರ ಶ್ರಮವನ್ನು ಗುರುತಿಸಿ ಸನ್ಮಾನ ಮಾಡುವುದು ಶ್ಲಾಘನೀಯ ಕಾರ್ಯ ಎಂದು ಸಂಘಟನೆಗೆ ಅಭಿನಂದನೆ ಸಲ್ಲಿಸಿದರು.

ಮುಖ್ಯ ಶಿಕ್ಷಕಿ ಭವತಿ ಮಾತನಾಡಿ, ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಶ್ರಮವನ್ನು ಗುರುತಿಸಿ ಸನ್ಮಾನ ಮಾಡಿದ ದಲಿತ ಸಂಘರ್ಷ ಸಮಿತಿ ಮತ್ತು ಶಾಲೆಯ ಶೈಕ್ಷಣಿಕ ಅಭಿವೃದ್ಧಿಗೆ ಸಹಕಾರ ನೀಡುತ್ತಿರುವ ಶಾಲೆಯ ಆಡಳಿತ ಮಂಡಳಿಗೆ ಅಭಿನಂದನೆ ಸಲ್ಲಿಸಿದರು.

ಶಾಲೆಯ ಅಭಿವೃದ್ಧಿ ಸಮಿತಿ ಅಧ್ಯಕ್ಷ ನಾಸಿರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕಡಗದಾಳು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭಾರತಿ, ಅಭಿವೃದ್ಧಿ ಅಧಿಕಾರಿ ಅನಿತಾ, ಮೊದೂರು ತೋಟದ ಮಾಲಕ ತಿಮ್ಮಯ್ಯ ಹಾಜರಿದ್ದರು. ಸಂಘಟನೆಯ ಮಹಿಳಾ ಜಿಲ್ಲಾ ಸಂಚಾಲಕಿ ಪ್ರೇಮ ಕೃಷ್ಣಪ್ಪ ಸ್ವಾಗತಿಸಿದರು, ಆರತಿ ನಿರೂಪಿಸಿದರು, ಶಿಕ್ಷಕಿ ಭಾರತಿ ವಂದಿಸಿದರು.