ಸಾರಾಂಶ
ಪ್ರಸ್ತುತ ಅಧಿವೇಶನದಲ್ಲಿ ಡಾ.ಸರೋಜಿನಿ ಮಹಿಷಿ ಪರಿಷ್ಕೃತ ವರದಿಯನ್ನು ಯಥಾವತ್ತಾಗಿ ಕಾಯ್ದೆ ರೂಪದಲ್ಲಿ ಜಾರಿಗೆ ತರುವಂತೆ ಆಗ್ರಹಿಸಿ ಕದಂಬ ಸೈನ್ಯ ಪದಾಧಿಕಾರಿಗಳು ನಗರದಲ್ಲಿ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಕನ್ನಡಪ್ರಭ ವಾರ್ತೆ ವಿಜಯಪುರ
ಪ್ರಸ್ತುತ ಅಧಿವೇಶನದಲ್ಲಿ ಡಾ.ಸರೋಜಿನಿ ಮಹಿಷಿ ಪರಿಷ್ಕೃತ ವರದಿಯನ್ನು ಯಥಾವತ್ತಾಗಿ ಕಾಯ್ದೆ ರೂಪದಲ್ಲಿ ಜಾರಿಗೆ ತರುವಂತೆ ಆಗ್ರಹಿಸಿ ಕದಂಬ ಸೈನ್ಯ ಪದಾಧಿಕಾರಿಗಳು ನಗರದಲ್ಲಿ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು. ಕನ್ನಡಿಗರ ಉದ್ಯೋಗದಾತೆ ಡಾ.ಸರೋಜಿನಿ ಮಹಿಷಿ ಪರಿಷ್ಕೃತ ವರದಿಯನ್ನು 2017 ರಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮುಖ್ಯ ಮಂತ್ರಿಗಳಿಗೆ ವರದಿ ಸಲ್ಲಿಸಿತು. ಈ ವರದಿಯನ್ನು ಕಾಯ್ದೆಯಾಗಿ ಜಾರಿಗೆ ತರಲೇ ಇಲ್ಲ. ವರದಿಯಲ್ಲಿ ಒಟ್ಟು 3 ಭಾಗಗಳಿದ್ದು, ರಾಜ್ಯ ಸರ್ಕಾರ ಅನುಷ್ಠಾನಗೊಳಿಸಬೇಕಾದ 14 ಅಂಶಗಳ ಶಿಪಾರಸುಗಳು, ಕೇಂದ್ರ ಸರ್ಕಾರಕ್ಕೆ 9 ಅಂಶಗಳ ಶಿಫಾರಸುಗಳನ್ನು ಕಳುಹಿಸಿಕೊಡಬೇಕು. ಕಲಾಪದಲ್ಲಿ ಮಹಿಷಿ ವರದಿಯನ್ನು ಕಾಯ್ದೆಯಾಗಿ ಜಾರಿಗೆ ತಂದರೆ ಮಾತ್ರ ಕನ್ನಡಿಗರ ಉದ್ಯೋಗ ಲಭಿಸುತ್ತದೆ ಎಂದರು. ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಕಡ್ಡಾಯಗೊಳಿಸಿ, ಸುಗ್ರಿವಾಜ್ಞೆ ಜಾರಿ ಮಾಡಿದೆ. ಇದು ಸರಿಯಾಗಿದ್ದು, ರಾಜ್ಯ ಸರ್ಕಾರ ವಿಧಾನ ಮಂಡಲದ ಉಭಯ ಸದನಗಳಲ್ಲಿ ಮಂಡಿಸಿರುವಂತೆ ಕಾಯ್ದೆಯಾಗಿ ಜಾರಿಗೆ ತರಬೇಕು ಎಂದು ಆಗ್ರಹಿಸಿದರು.ಹಿಂದಿ ಹೇರಿಕೆ ಬೇಡ ಮುಂದೆ ತ್ರಿಭಾಷೆ ಬೇಡ, ದ್ವಿಭಾಷೆ ನೀತಿ ಬೇಕು. ರಾಜ್ಯದ ಮೇಲೆ ಹಿಂದಿ ಹೇರಿಕೆ ಬಗ್ಗೆ ರಾಜ್ಯ ಸರ್ಕಾರ ಸ್ಪಷ್ಟ ನಿಲುವು ತೆಗೆದುಕೊಳ್ಳಲೇಬೇಕು. ಹಿಂದಿ ಭಾಷಿಕರಿಂದ ಕನ್ನಡಿಗರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಭಾರತ ಅನೇಕ ರಾಜ್ಯಗಳ ಒಕ್ಕೂಟ, ಉತ್ತರ ಭಾರತದ ರಾಜ್ಯಗಳಲ್ಲಿ ಬರಿ ದ್ವಿಭಾಷೆ ಸೂತ್ರ ಇದೆ. ನಮಗೇಕೆ ಮಲತಾಯಿ ಧೋರಣೆ. ಕನ್ನಡ ಮೊದಲ ಚಕ್ರವರ್ತಿ ಕದಂಬ ಮಯೂರವರ್ಮ, ಚಾಲುಕ್ಯ ಪರಮೇಶ್ವರ ದಕ್ಷಿಣ ಪಥೇಶ್ವರ, ಇಮ್ಮಡಿ ಪುಲಕೇಶಿ ಪುತ್ಥಳಿಗಳನ್ನು ಸ್ಥಾಪಿಸಬೇಕು ಎಂದು ಆಗ್ರಹಿಸಿದರು.
ರಾಜ್ಯ ಕಾರ್ಯದರ್ಶಿ ಎನ್.ಸಿ ಕಾಂಬಳೆ, ಜಿಲ್ಲಾಧ್ಯಕ್ಷ ವಿನಾಯಕ ಸಂಡೂರ, ಕಾರ್ಯದರ್ಶಿ ಸಂತೋಷ ಭಾಸ್ಕರ್, ರಾಹುಲ ಮಾನಕರ, ಪರಶುರಾಮ ಚಲವಾದಿ, ಉದಯಕುಮಾರ ಆಕಾಶಿ, ಸೋಮನಿಂಗ ರಣದೇವ ಮುಂತಾದವರು ಇದ್ದರು.