ಸಾರಾಂಶ
ಬನವಾಸಿ:
ಬನವಾಸಿಯ ಐತಿಹಾಸಿಕ ಚಿತ್ರಣಕ್ಕೆ ಕದಂಬೋತ್ಸವ ಸುವರ್ಣದ ಚೌಕಟ್ಟು ನೀಡಿದೆ ಎಂದು ಸಾಹಿತಿ ಡಾ. ಸಯ್ಯದ್ ಝಮೀರುಲ್ಲಾ ಷರೀಫ್ ಹೇಳಿದರು.ಅವರು ಬುಧವಾರ ತಾಲೂಕಿನ ಬನವಾಸಿಯ ಕದಂಬೋತ್ಸವ ಮೈದಾನದ ಮಯೂರ ವರ್ಮ ವೇದಿಕೆಯಲ್ಲಿ ನಡೆದ ಕದಂಬೋತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.ಮಧುಕೇಶ್ವರನ ನೆಲ ದಕ್ಷಿಣದ ಕಾಶಿ ಎಂದು ಪ್ರಸಿದ್ಧಿ ಪಡೆದಿರುವ ಮತ್ತು ಸುಂದರವಾಗಿರುವ ಸಸ್ಯಗಳಲ್ಲಿ ದೈವೀ ಸ್ವರೂಪಿ ಆಗಿರುವುದರಿಂದ ಸಸ್ಯ ಕಾಶಿ ಎಂದೂ ಪ್ರಸಿದ್ಧಿ ಪಡೆದಿರುವ ಬನವಾಸಿಯಲ್ಲಿ ಕದಂಬೋತ್ಸವ ವಿಜೃಂಭಣೆಯಿಂದ ಆಚರಿಸುತ್ತಿರುವುದು ಅತ್ಯಂತ ಸಂತೋಷದ ಸಂಗತಿ ಎಂದರು.ವಯೂರವರ್ಮ ಆಳ್ವಿಕೆ ನಡೆಸಿದ ಕನ್ನಡದ ನೆಲದಲ್ಲಿ ಉತ್ಸವ ಆಚರಿಸುತ್ತಿದ್ದೇವೆ. ಕನ್ನಡದ ನೆಲ ಬೇರೆಯವರಿಗೆ ಆಕರ್ಷಣೀಯ ನೆಲವಾಗಿದೆ. ಕದಂಬ ರಾಜ್ಯವನ್ನು ಕಟ್ಟಿದ ಪ್ರತಿಯೊಬ್ಬ ಮಹನೀಯರನ್ನು ನೆನೆಯಬೇಕು. ಅವಮಾನವನ್ನೇ ಬದುಕಾಗಿ ರೂಪಿಸುವ ಮಾರ್ಗವನ್ನಾಗಿ ಯುವ ಪೀಳಿಗೆ ಮಾಡಿಕೊಳ್ಳಬೇಕು ಎಂಬ ಸಂದೇಶವನ್ನು ಮಯೂರವರ್ಮ ನೀಡಿದ್ದರು. ಅಹಂಕಾರ ಪ್ರತಿಭೆಯನ್ನು ನುಂಗಿ ಹಾಕುತ್ತದೆ. ಅಹಂಕಾರದಿಂದ ಮೆರೆಯಬಾರದು. ಬಾಗಿ ನಡೆಯಬೇಕು ಎಂದರು.ಬುಡಕಟ್ಟು ಅಧ್ಯಯನ ಮಾಡುವ ವಿಶ್ವವಿದ್ಯಾಲಯವನ್ನು ರಾಜ್ಯ ಸರ್ಕಾರ ಬನವಾಸಿಯಲ್ಲಿ ಸ್ಥಾಪಿಸಬೇಕು. ಇಲ್ಲವಾದಲ್ಲಿ ಬುಡಕಟ್ಟು ಅಧ್ಯಯನ ಕೇಂದ್ರವನ್ನಾದರು ಸ್ಥಾಪಿಸಬೇಕು ಎಂದರು.ಪಂಪನನ್ನು ನೆನೆಯದೇ ಈ ನೆಲದಿಂದ ತೆರಳಲು ಸಾಧ್ಯವಿಲ್ಲ. ಮನುಷ್ಯ ತಾನೊಂದೆ ವಲಂ ಎಂದು ಹೇಳಿದ್ದಾರೆ. ಇಡೀ ಮನುಷ್ಯ ಕುಲ ಒಂದೇ ಎಂಬ ಭಾವನೆ ನಮ್ಮಲ್ಲಿ ಮೂಡಬೇಕು ಎಂದ ಅವರು, ಕಲಾವಿದರು ನಮ್ಮ ಸಂಸ್ಕೃತಿಯನ್ನು ಸಂರಕ್ಷಿಸುವವರು. ಕಲಾವಿದರು ಕಲಾ ತಪಸ್ವಿಗಳು. ಅವರನ್ನು ಗೌರವಿಸಬೇಕು ಎಂದು ಹೇಳಿದರು.ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಅಧ್ಯಕ್ಷೆ ಬಿಬಿ ಆಯಿಷಾ ಖಾನ್, ಜಿಲ್ಲಾ ನಗರಾಭಿವೃದ್ಧಿ ಕೋಶದ ಜಿಲ್ಲಾ ಯೋಜನಾಧಿಕಾರಿ ಸ್ಟೆಲ್ಲಾ ವರ್ಗಿಸ್, ಶಿರಸಿ ಸಹಾಯಕ ಆಯುಕ್ತೆ ಅಪರ್ಣಾ ರಮೇಶ, ತಹಸೀಲ್ದಾರ್ ಶ್ರೀಧರ ಮುಂದಲಮನಿ ಉಪಸ್ಥಿತರಿದ್ದರು. ಅಪರ ಜಿಲ್ಲಾಧಿಕಾರಿ ಪ್ರಕಾಶ ರಜಪೂತ ಸ್ವಾಗತಿಸಿದರು. ಭಾಗ್ಯಶ್ರೀ ಗೌಡ ಚಿಕ್ಕಮಗಳೂರು ನಾಡಗೀತೆ ಹಾಡಿದರು. ಖ್ಯಾತ ನಿರೂಪಕಿ ಸ್ನೇಹಾ ನಿರೂಪಿಸಿದರು.ಸ್ಥಳೀಯ ಶಾಸಕ ಅನುಪಸ್ಥಿತಿಬನವಾಸಿ ಕದಂಬೋತ್ಸವದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಬೇಕಿದ್ದ ಶಾಸಕ ಶಿವರಾಮ ಹೆಬ್ಬಾರ ಅನುಪಸ್ಥಿತಿಯು ಸ್ಥಳೀಯರು ಬೇಸರ ವ್ಯಕ್ತಪಡಿಸಿದರು.ಆದಿತ್ಯಗೆ ಕದಂಬ ಕೇಸರಿ ಪ್ರಶಸ್ತಿಕದಂಬೋತ್ಸವ ಮೈದಾನದಲ್ಲಿ ಪಪ್ರಥಮ ಬಾರಿಗೆ ಜಿಲ್ಲಾಡಳಿತದಿಂದ ಆಯೋಜಿಸಿದ್ದ ಜಿಲ್ಲಾ ಮತ್ತು ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿಯು ಈ ವರ್ಷದ ಪ್ರಮುಖ ಆಕರ್ಷಣೀಯವಾಗಿತ್ತು. ಬೆಳಗ್ಗೆಯಿಂದ ಆರಂಭವಾದ ಕುಸ್ತಿ ಪಂದ್ಯಾವಳಿ ಸಂಜೆ ವರೆಗೆ ನಡೆಯಿತು. ಸಾವಿರಾರು ಪ್ರೇಕ್ಷಕರು ಕುತೂಹಲದಿಂದ ಕುಸ್ತಿ ವೀಕ್ಷಿಸಿದರು. ಕುಸ್ತಿ ಪಂದ್ಯಾವಳಿಯಲ್ಲಿ ಧಾರವಾಡದ ಆದಿತ್ಯ ಪ್ರಥಮ ಸ್ಥಾನಗಳಿಸಿ ಕದಂಬೋತ್ಸವ ಸಮಿತಿ ನೀಡುವ ₹ 10 ಸಾವಿರ ಹಾಗೂ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ನೀಡಿದ ₹ 10 ಸಾವಿರ, ಬೆಳ್ಳಿ ಗದೆ ಹಾಗೂ ಕದಂಬ ಕೇಸರಿ ಪ್ರಶಸ್ತಿಗೆ ಭಾಜನಾದರರು. ಶರತ್ ಗೌಡ ದಾವಣಗೆರೆ ದ್ವಿತೀಯ ಬಹುಮಾನ ತನ್ನದಾಗಿಸಿಕೊಂಡರು. ತೃತೀಯ ಹಾಗೂ ಚತುರ್ಥ ಬಹುಮಾನವನ್ನು ಶಿವಯ್ಯ ಪೂಜಾರಿ ಬಸವ ದಾವಣಗೆರೆ ಪಡೆದುಕೊಂಡರು. ಮಹಿಳಾ ವಿಭಾಗದಲ್ಲಿ ಶಾಲಿನಿ ಸಿದ್ಧಿ ಪ್ರಥಮ ಬಹುಮಾನ ₹ 6 ಸಾವಿರ ಹಾಗೂ ಜಿಲ್ಲಾಧಿಕಾರಿ ನೀಡಿದ ₹ ೧೦ ಸಾವಿರ, ಬೆಳ್ಳಿಗದೆ ಮತ್ತು ಕದಂಬ ಕೇಸರಿ ಪ್ರಶಸ್ತಿ ಪಡೆದುಕೊಂಡರು. ರಿಸಿಟಾ ಸಿದ್ದಿ ದ್ವಿತೀಯ ಬಹುಮಾನ ಪಡೆದರು. ವಿಜೇತ ಕುಸ್ತಿಪಟುಗಳಿಗೆ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್, ಎಡಿಸಿ ಪ್ರಕಾಶ ರಜಪೂತ, ಶಿರಸಿ ಸಹಾಯಕ ಆಯುಕ್ತೆ ಅಪರ್ಣಾ ರಮೇಶ, ತಹಸೀಲ್ದಾರ್ ಶ್ರೀಧರ ಮುಂದಲಮನಿ ಉಪಸ್ಥಿತರಿದ್ದರು.