ಫೆಬ್ರುವರಿ ೨೪, ೨೫ರಂದು ಕದಂಬೋತ್ಸವ

| Published : Feb 08 2024, 01:30 AM IST

ಸಾರಾಂಶ

ಬನವಾಸಿಯಲ್ಲಿ ಫೆ. ೨೪ ಮತ್ತು ೨೫ರಂದು ನಡೆಯುವ ನಾಡಿನ ಪ್ರತಿಷ್ಠಿತ ಕದಂಬೋತ್ಸವ ಮೈದಾನವನ್ನು ಶಾಸಕ ಶಿವರಾಮ ಹೆಬ್ಬಾರ ಮತ್ತು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಪರಿಶೀಲಿಸಿ, ಅಧಿಕಾರಿಗಳೊಂದಿಗೆ ಚರ್ಚಿಸಿ, ಸೂಕ್ತ ಸಲಹೆ-ಸೂಚನೆ ನೀಡಿದರು.

ಶಿರಸಿ:

ಬನವಾಸಿಯಲ್ಲಿ ಫೆ. ೨೪ ಮತ್ತು ೨೫ರಂದು ನಡೆಯುವ ನಾಡಿನ ಪ್ರತಿಷ್ಠಿತ ಕದಂಬೋತ್ಸವ ಮೈದಾನವನ್ನು ಶಾಸಕ ಶಿವರಾಮ ಹೆಬ್ಬಾರ ಮತ್ತು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಪರಿಶೀಲಿಸಿ, ಅಧಿಕಾರಿಗಳೊಂದಿಗೆ ಚರ್ಚಿಸಿ, ಸೂಕ್ತ ಸಲಹೆ-ಸೂಚನೆ ನೀಡಿದರು.ಇದಕ್ಕೂ ಮೊದಲು ಗುಡ್ನಾಪುರಕ್ಕೆ ಭೇಟಿ ನೀಡಿ, ಕದಂಬ ಜ್ಯೋತಿ ಹೊರಡುವ ಸ್ಥಳ ಪರಿಶೀಲಿಸಿದರು. ಆನಂತರ ಮಾತನಾಡಿದ ಶಿವರಾಮ ಹೆಬ್ಬಾರ, ಗುಡ್ನಾಪುರದಿಂದ ಹೊರಡುವ ಕದಂಬ ಜ್ಯೋತಿ ಪ್ರತಿವರ್ಷದಂತೆ ಎಲ್ಲೆಲ್ಲಿ ತೆರಳಬೇಕು ಎಂಬುದನ್ನು ಚರ್ಚಿಸಲಾಗಿದೆ. ಲೋಪದೋಷವಾಗದಂತೆ ಘನತೆಗೆ ಧಕ್ಕೆ ಬರದಂತೆ ಕದಂಬೋತ್ಸವ ಆಚರಿಸಲು ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಪಂಪ ಪ್ರಶಸ್ತಿಯನ್ನು ಕದಂಬೋತ್ಸವದ ವೇದಿಕೆ ಮೇಲೆ ಪ್ರದಾನ ಮಾಡುವುದು ಹಿಂದಿನಿಂದಲೂ ನಡೆಸಿಕೊಂಡ ಬಂದ ಸಂಪ್ರದಾಯ. ಇದರ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಸಚಿವ ಜತೆ ಚರ್ಚಿಸುತ್ತೇನೆ ಎಂದರು.ಬನವಾಸಿಯ ಮಧುಕೇಶ್ವರ ದೇವಸ್ಥಾನ ಮತ್ತು ಗುಡ್ನಾಪುರದ ದೇವಸ್ಥಾನ ಪ್ರಾಚ್ಯವಸ್ತು ಸಂಗ್ರಹಾಲಯ ಇಲಾಖೆಯ ಅಧೀನದಲ್ಲಿದೆ. ಸರ್ಕಾರದಿಂದ ಹಣ ಮಂಜೂರಿ ಮಾಡಲು ಸಾಧ್ಯವಿಲ್ಲ. ದೇವಸ್ಥಾನದ ಮೇಲ್ಚಾವಣಿ ಸೋರಿಕೆಯಾಗದಂತೆ ದುರಸ್ತಿ ಕಾರ್ಯಕ್ಕೆ ₹ ೪೦ ಲಕ್ಷ ಮಂಜೂರಿಯಾ, ಟೆಂಡರ್ ಆಗಿದೆ. ಸದ್ಯದಲ್ಲಿಯೇ ಕಾಮಗಾರಿ ಆರಂಭಿಸುತ್ತೇವೆ ಎಂದು ತಿಳಿಸಿದ್ದಾರೆ. ಹಂತ-ಹಂತವಾಗಿ ಅಭಿವೃದ್ಧಿ ಮಾಡಲಾಗುತ್ತದೆ ಎಂದರು.ಈ ವೇಳೆ ಸಹಾಯಕ ಆಯುಕ್ತೆ ಅಪರ್ಣ ರಮೇಶ, ತಹಸೀಲ್ದಾರ್‌ ಶ್ರೀಧರ ಮುಂದಲಮನಿ, ಸ್ಥಳೀಯರಾದ ದ್ಯಾಮಣ್ಣ ದೊಡ್ಮನಿ, ಶಿವಾಜಿ ಸೇರಿದಂತೆ ಮತ್ತಿತರರು ಇದ್ದರು.ಬನವಾಸಿಯಲ್ಲಿ ಫೆ. ೨೪, ೨೫ರಂದು ನಡೆಯುವ ನಾಡಿನ ಪ್ರತಿಷ್ಠಿತ ಉತ್ಸವಗಳಲ್ಲೊಂದಾಗ ಕದಂಬೋತ್ಸವಕ್ಕೆ ಅನುದಾನದ ಕೊರತೆಯಿಲ್ಲ. ಅನುದಾನ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಇಲಾಖೆ ಸಚಿವರ ಜತೆ ಮಾಡತನಾಡಿದ್ದೇನೆ. ಅದ್ಧೂರಿಯಾಗಿ ಆಚರಣೆ ಮಾಡುವ ಭರವಸೆ ನೀಡಿದ್ದಾರೆ ಎಂದು ಶಿವರಾಮ ಹೆಬ್ಬಾರ ಶಾಸಕ ಹೇಳಿದರು.

ಕದಂಬೋತ್ಸವಕ್ಕೆ ಮುಖ್ಯಮಂತ್ರಿ ಆಗಮಿಸುವ ನಿರೀಕ್ಷೆಯಿದೆ. ಈಗಾಗಲೇ ಮುಖ್ಯಮಂತ್ರಿ ಕಚೇರಿ ಸಂಪರ್ಕಿಸಲಾಗಿದ್ದು, ಸದ್ಯದಲ್ಲಿಯೇ ತಿಳಿಸಲಾಗುತ್ತದೆ ಎಂದು ಗಂಗೂಬಾಯಿ ಮಾನಕರ ಜಿಲ್ಲಾಧಿಕಾರಿ ತಿಳಿಸಿದರು.