ಕಡಪಾಲಪ್ಪ ದೇವಳ ಬ್ರಹ್ಮಕಲಶೋತ್ಸವ

| Published : Apr 23 2024, 12:47 AM IST

ಸಾರಾಂಶ

ದೇವಾಲಯದ ಅರ್ಚಕ ರಾಧಾಕೃಷ್ಣ ಭಟ್ಟ ಉಪಸ್ಥಿತಿಯಲ್ಲಿ ವೈದಿಕ ವಿದ್ವಾಂಸ ಬ್ರಹ್ಮಶ್ರೀ ಉದಯತಂತ್ರಿ ನೇತೃತ್ವದಲ್ಲಿ, ಪೌರೋಹಿತ್ಯ ವಾಚಸ್ಪತಿ ವೇದಮೂರ್ತಿ ಗುರುರಾಜ ಉಪಾಧ್ಯಾಯರ ಮಾರ್ಗದರ್ಶನದಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ನಾಪೋಕ್ಲು

ಬೇಂಗೂರು ಗ್ರಾಮದ ಶ್ರೀ ನಾಡು ಕಡಪಾಲಪ್ಪ ದೇವಾಲಯದ ಪುನರ್ ಪ್ರತಿಷ್ಠಾ ಅಷ್ಟ ಬಂಧ ಬ್ರಹ್ಮಕಲಶೋತ್ಸವವನ್ನು ಉಡುಪಿ ಪೇಜಾವರ ಅಧೋಕ್ಷಜ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ನೆರವೇರಿಸಿದರು.

ದೇವಾಲಯದ ಅರ್ಚಕ ರಾಧಾಕೃಷ್ಣ ಭಟ್ಟ ಉಪಸ್ಥಿತಿಯಲ್ಲಿ ವೈದಿಕ ವಿದ್ವಾಂಸ ಬ್ರಹ್ಮಶ್ರೀ ಉದಯತಂತ್ರಿ ನೇತೃತ್ವದಲ್ಲಿ, ಪೌರೋಹಿತ್ಯ ವಾಚಸ್ಪತಿ ವೇದಮೂರ್ತಿ ಗುರುರಾಜ ಉಪಾಧ್ಯಾಯರ ಮಾರ್ಗದರ್ಶನದಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಯಿತು. ಪ್ರತಿಷ್ಠಾಪನೆಯ ಬಳಿಕ ಮಧ್ಯಾಹ್ನ ಹೂವಿನಿಂದ ಅಲಂಕೃತ ದೇವರ ಬಿಂಬಕ್ಕೆ ವಿಶೇಷ ಮಹಾಪೂಜೆ ಜರುಗಿತು. ಬಳಿಕ ತೀರ್ಥ ಪ್ರಸಾದ ವಿತರಣೆ ಹಾಗೂ ಅನ್ನ ಸಂತರ್ಪಣೆ ನೆರವೇರಿತು.

ಈ ಸಂದರ್ಭ ಕಾರ್ಯಕ್ರಮದಲ್ಲಿ ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ತೇಲಪಂಡ ನಂದ ಮಂದಣ್ಣ, ಉಪಾಧ್ಯಕ್ಷ ಕುಂಚೆಟ್ಟಿರ ಸುಬ್ಬಯ್ಯ, ಕಾರ್ಯದರ್ಶಿ ಕುಂಚೆಟ್ಟಿರ ಗೋಪಾಲ, ಖಜಾಂಚಿ ಪಟ್ಟಮಾಡ ಅಶೋಕ್, ಸದಸ್ಯರಾದ ಕಲ್ಲು ಮಾಡಂಡ ವಾಸು, ಕುಂಚೆಟ್ಟಿರ ರಮೇಶ್, ಚೋಕಿರ ಪೊನ್ನಣ್ಣ, ಕಲ್ಲು ಮಾಡಂಡ ಅಶೋಕ್, ಕುಂಚೆಟ್ಟಿರ ರಮೇಶ್ , ಚೋಕಿರ ಪೊನ್ನಣ್ಣ, ಕೀಪಾಡಂಡ ವಾಸು, ಬೊಳ್ಳಾರ್ಪಂಡ ಚಂಗಪ್ಪ, ತಕ್ಕಮುಖ್ಯಸ್ಥರು, ಚುನಾಯಿತ ಪ್ರತಿನಿಧಿಗಳು ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.ಪುನರ್ ಪ್ರತಿಷ್ಠಾ ಬ್ರಹ್ಮ ಕಲಶೋತ್ಸವದ ಪ್ರಯುಕ್ತ ಏ.25ರ ವರೆಗೆ ವಿವಿಧ ಪೂಜೆ ಹವನ ಧಾರ್ಮಿಕ ಕಾರ್ಯಕ್ರಮ ಜರುಗಲಿದೆ.* ಶ್ರಮದ ಜೊತೆಗೆ ದೇವರ ಅನುಗ್ರಹ ಇದ್ದರಷ್ಟೇ ನೆಮ್ಮದಿ: ಪೇಜಾವರ ಶ್ರೀ

ಜೀವನದಲ್ಲಿ ನಾವು ಸುಖ ಶಾಂತಿ ನೆಮ್ಮದಿಯನ್ನು ಬಯಸುತ್ತೇವೆ. ನಾವು ಬಯಸಿದ ಕ್ಷಣ ಎಲ್ಲವೂ ನಮ್ಮ ಬಳಿಗೆ ಬರುವುದಿಲ್ಲ. ಅವುಗಳನ್ನು ಪಡೆಯಲು ಸತತ ಶ್ರಮ ಬೇಕು. ಶ್ರಮದ ಜೊತೆಗೆ ದೇವರ ಅನುಗ್ರಹ ಇದ್ದರಷ್ಟೇ ಸುಖ ಶಾಂತಿ ನೆಮ್ಮದಿಯನ್ನು ಗಳಿಸಲು ಸಾಧ್ಯ ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.

ಕಡಪಾಲಪ್ಪ ದೇವಳ ಬ್ರಹ್ಮಕಲಶೋತ್ಸವ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.ದೇವರು ಗುಡಿಯಲ್ಲಿ ಮಾತ್ರ ನೆಲೆಸಿರುವುದಲ್ಲ, ಸಮಾಜದ ಎಲ್ಲರ ಹೃದಯದಲ್ಲೂ ನೆಲೆಸಿದ್ದಾರೆ. ಬದುಕಿಗಾಗಿ ನಾವು ಒಂದು ವೃತ್ತಿಯನ್ನು ಆಯ್ದುಕೊಂಡಿರುತ್ತೇವೆ. ಅದು ಬರೀ ಹಣ ಸಂಪಾದನೆಗಾಗಿ ಮಾತ್ರ ಅಲ್ಲ. ಆ ವೃತ್ತಿಯ ಮೂಲಕ ಸಮಾಜದ ಸೇವೆ ಮಾಡುತ್ತಿದ್ದೇವೆ ಎನ್ನುವ ಅರಿವು ನಮ್ಮಲ್ಲಿದ್ದರೆ ವೃತ್ತಿಗೆ ಗೌರವವಿರುತ್ತದೆ. ವೃತ್ತಿಯಲ್ಲಿ ಮೋಸ, ಅವ್ಯವಹಾರಕ್ಕೆ ಎಡೆ ಇರಬಾರದು. ಮೋಸ, ಅವ್ಯವಹಾರ ರಹಿತ ವೃತ್ತಿಯೇ ದೇವರ ಪೂಜೆ. ಭಗವಂತನ ಆರಾಧನೆ ಎಂಬುದು ಒಂದು ಕೆಲಸ ಆಗಬಾರದು. ಅದಕ್ಕೆ ಒಂದು ಸಮಯದ ಮಿತಿ ಹೇರಬಾರದು ಎಂದರು.

ಎಲ್ಲ ಕೆಲಸಕ್ಕೂ ಸಮಯವನ್ನು ನಿಗದಿ ಮಾಡುತ್ತೇವೆ, ಉಸಿರಾಟಕ್ಕೆ ಸಮಯ ನಿಗದಿಪಡಿಸಲು ಸಾಧ್ಯವೇ? ಅದೇ ರೀತಿ ಭಗವಂತನ ಆರಾಧನೆಗೆ ಸಮಯದ ಮಿತಿ ಇರಬಾರದು ಎಂದು ಹೇಳಿದರು.

ಬಳಿಕ ನೆರೆದ ಭಕ್ತರು ಸ್ವಾಮೀಜಿಯವರ ಆಶೀರ್ವಾದ ಪಡೆದು ಫಲವನ್ನು ಸ್ವೀಕರಿಸಿ ಪುನೀತ ಭಾವ ಹೊಂದಿದರು.