ಕಡವೆ ಬೇಟೆ: ಆರೋಪಿ ಬಂಧನ

| Published : Mar 17 2024, 01:52 AM IST

ಸಾರಾಂಶ

ಅರಣ್ಯಕ್ಕೆ ಅತಿಕ್ರಮ ಪ್ರವೇಶ ಮಾಡಿ ಕಡವೆ ಬೇಟೆಯಾಡಿ ಮಾಂಸ ಸಾಗಾಟ ಮಾಡುತ್ತಿದ್ದ ಆರೋಪಿರ್ಯೋವನನ್ನು ಕಾವೇರಿ ವನ್ಯಜೀವಿಧಾಮದ ಅಧಿಕಾರಿಗಳು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಹನೂರು

ಅರಣ್ಯಕ್ಕೆ ಅತಿಕ್ರಮ ಪ್ರವೇಶ ಮಾಡಿ ಕಡವೆ ಬೇಟೆಯಾಡಿ ಮಾಂಸ ಸಾಗಾಟ ಮಾಡುತ್ತಿದ್ದ ಆರೋಪಿರ್ಯೋವನನ್ನು ಕಾವೇರಿ ವನ್ಯಜೀವಿಧಾಮದ ಅಧಿಕಾರಿಗಳು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹನೂರು ತಾಲೂಕಿನ ಮರಿಯಮಂಗಲ ಗ್ರಾಮದ ಅರ್ಪದರಾಜು (59) ಬಂಧಿತ ಆರೋಪಿಯಾಗಿದ್ದು, ಇದೇ ಗ್ರಾಮದ ಜಾನು ಹಾಗೂ ಕರಿಯಪ್ಪ ಪರಾರಿಯಾಗಿರುವ ಆರೋಪಿಗಳಾಗಿದ್ದಾರೆ. ಘಟನೆ ವಿವರ: ಕಾವೇರಿ ಅಭಯಾರಣ್ಯದ ಕಂಪಾರ್ಟ್ಮೆಂಟ್ 26 ರ ಹನೂರು ವನ್ಯಜೀವಿ ವಲಯದ ಶಾಗ್ಯಂ ಶಾಖೆಯ ಕಾರಯ್ಯನ ಬೆಟ್ಟ ಗಸ್ತಿನ ಬೂದಿಕುಂಟೆ ಕಾಲುದಾರಿ ಅರಣ್ಯ ಪ್ರದೇಶಕ್ಕೆ ಮೂವರು ವ್ಯಕ್ತಿಗಳು ಅತಿಕ್ರಮ ಪ್ರವೇಶ ಮಾಡಿ ನಾಡ ಬಂದೂಕಿನ ಮೂಲಕ ಕಡವೆ ಬೇಟೆಯಾಡಿ ಮಾಂಸ ಸಾಗಾಟ ಮಾಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಕಾವೇರಿ ವನ್ಯಜೀವಿಧಾಮದ ಡಿಸಿಎಫ್ ಸುರೇಂದ್ರ ಹಾಗೂ ಎಸಿಎಫ್ ಅಂಕರಾಜು ಮಾರ್ಗದರ್ಶನದಲ್ಲಿ ಆರ್‌ಎಫ್ಓ ನಿರಂಜನ್ ಹಾಗೂ ಸಿಬ್ಬಂದಿ ದಾಳಿ ನಡೆಸಿ ಓರ್ವ ಆರೋಪಿಯನ್ನು ಬಂಧಿಸಿ, ಜೆಎಂಎಫ್‌ಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ದಾಳಿಯ ವೇಳೆ ಇನ್ನಿಬ್ಬರು ಆರೋಪಿಗಳು ಪರಾರಿಯಾಗಿದ್ದು ಇವರ ಬಂಧನಕ್ಕೆ ಈಗಾಗಲೇ ತಂಡ ರಚನೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಬಂಧಿತನಿಂದ ನಾಡ ಬಂದೂಕು, ನೂರು ಕೆಜಿ ಕಡವೆ ಹಸಿಮಾಂಸ, ಕಬ್ಬಿಣದ ಚಾಕು, ಮದ್ದು ತುಂಬಿದ ಪ್ಲಾಸ್ಟಿಕ್ ಚೀಲ, ಕಬ್ಬಿಣದ ಗುಂಡು, ಕಬ್ಬಿಣದ ಮೊಳೆ, ಕಬ್ಬಿಣದ ಬಾಲ್ಸ್ ತುಂಬಿದ ಪ್ಲಾಸ್ಟಿಕ್ ಡಬ್ಬಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿದೆ.ದಾಳಿಯಲ್ಲಿ ಉಪವಲಯ ಅರಣ್ಯ ಅಧಿಕಾರಿಗಳಾದ ಶ್ರೀನಿ ಆನಂದ್ ಗಸ್ತು ವನಪಾಲಕ ಯಲಗೂರಪ್ಪ ಗುಬ್ಬಿ ಶಿವಲಿಂಗಪ್ಪ, ಎಪಿ ಕ್ಯಾಂಪ್‌ನ ಸಿಬ್ಬಂದಿ ಪಾಲ್ಗೊಂಡಿದ್ದರು.