ಸಾರಾಂಶ
ರಾಯಚೂರು, ಸಿಂಧನೂರಿನಲ್ಲಿ ಸಿಪಿಐಎಂಎಲ್ ಲಿಬರೇಶನ್, ರೆಡ್ ಸ್ಟಾರ್ ವತಿಯಿಂದ ಹೋರಾಟ. ಸಿಎಎ ಕಾಯ್ದೆಯು ಆರಂಭದಿಂದಲೂ ವಿವಾದಾತ್ಮಕವಾಗಿಯೇ ಇದೆ. ಇದು ಅಸಾಂವಿಧಾನಿಕ, ತಾರತಮ್ಯದಿಂದ ಕೂಡಿರುವಂಥದ್ದು ಎಂಬ ಟೀಕೆಗೆ ಗುರಿಯಾಗಿದೆ ಎಂದು ಆರೋಪ.
ಕನ್ನಡಪ್ರಭ ವಾರ್ತೆ ರಾಯಚೂರು/ಸಿಂಧನೂರು
ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸಿಎಎ ಕಾಯ್ದೆಯನ್ನು ಕೈಬಿಡುವಂತೆ ಆಗ್ರಹಿಸಿ ರಾಯಚೂರು ಮತ್ತು ಸಿಂಧನೂರು ನಗರದಲ್ಲಿ ಸಿಪಿಐಎಂಎಲ್ ಲಿಬರೇಶನ್ ಹಾಗೂ ರೆಡ್ ಸ್ಟಾರ್ ವತಿಯಿಂದ ಶನಿವಾರ ಪ್ರತಿಭಟನೆ ನಡೆಸಲಾಯಿತು.ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೊಳಿಸಲು ಬೇಕಿರುವ ನಿಯಮಗಳನ್ನು ಅಧಿಸೂಚನೆಯಲ್ಲಿ ಪ್ರಕಟಿಸಿದ ಕೇಂದ್ರ ಸರ್ಕಾರದ ನಡೆಯ ಹಿಂದೆ ಚುನಾವಣಾ ಲೆಕ್ಕಾಚಾರ ಇರುವುದು ಸ್ಪಷ್ಟ. ಈ ಕಾಯ್ದೆಯ ಜಾರಿಗೆ ನಾಲ್ಕು ವರ್ಷಗಳಿಂದ ಯಾವ ಕ್ರಮವನ್ನೂ ಕೇಂದ್ರವು ಕೈಗೊಂಡಿರಲಿಲ್ಲ. ಭಾರತದ ನೆರೆ ಹೊರೆಯ, ಮುಸ್ಲಿಂ ಬಾಹುಳ್ಯದ ದೇಶಗಳಾದ ಪಾಕಿಸ್ತಾನ, ಅಪ್ಘಾನಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ದೌರ್ಜನ್ಯಕ್ಕೆ ಗುರಿಯಾಗಿ 2014ರ ಡಿಸೆಂಬರ್ 31ಕ್ಕೆ ಮೊದಲು ಭಾರತ ಪ್ರವೇಶಿಸಿದ ಹಿಂದೂ, ಪಾರ್ಸಿ, ಸಿಖ್, ಜೈನ, ಬೌದ್ಧ, ಕ್ರೈಸ್ತ ಸಮುದಾಯದವರಿಗೆ ಭಾರತದ ಪೌರತ್ವ ನೀಡುವ ಉದ್ದೇಶವನ್ನು ಸಿಎಎ ಹೊಂದಿದೆ. ದೇಶದ ಸಂವಿಧಾನವು ಪೌರತ್ವದ ವಿಚಾರವಾಗಿ ಹೊಂದಿರುವ ಆಶಯಗಳಿಗೆ ವಿರುದ್ಧವಾಗಿದೆ. ಆದ್ದರಿಂದ ಈ ಕಾಯ್ದೆಯು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.
ಈ ಕಾಯ್ದೆಯು ಆರಂಭದಿಂದಲೂ ವಿವಾದಾತ್ಮಕವಾಗಿಯೇ ಇದೆ. ಇದು ಅಸಾಂವಿಧಾನಿಕ, ತಾರತಮ್ಯದಿಂದ ಕೂಡಿರುವಂಥದ್ದು ಎಂಬ ಟೀಕೆಗೆ ಗುರಿಯಾಗಿದೆ. ಈ ಕಾಯ್ದೆಗೆ ಅಸ್ಸಾಂ ಮತ್ತು ದೆಹಲಿ ಸೇರಿದಂತೆ ದೇಶದ ಹಲವು ಕಡೆಗಳಲ್ಲಿ ತೀವ್ರ ಪ್ರತಿರೋಧ ಕೂಡ ವ್ಯಕ್ತವಾಗಿದೆ. ಕಾಯ್ದೆಯನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆ. ಕಾಯ್ದೆಯ ವಿಚಾರವಾಗಿ ಸುಪ್ರೀಂ ಕೋರ್ಟ್ ತನ್ನ ನಿಲುವು ಹೇಳಿಲ್ಲ. ಸರ್ಕಾರ ಇರಿಸಿರುವ ಹೆಜ್ಜೆಯು ಸಮಾಜವನ್ನು ಧ್ರುವೀಕರಿಸುವ, ಮತದಾರರನ್ನು ಧರ್ಮದ ಆಧಾರದಲ್ಲಿ ವಿಭಜಿಸಲು ಹೊರಟಿರುವ ಕೇಂದ್ರ ಸರ್ಕಾರ ನೀತಿಯು ಖಂಡನೀಯವಾಗಿದೆ ಎಂದು ದೂರಿದರು. ಪ್ರತಿಭಟನೆಯಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು ಇದ್ದರು.