ಸಾರಾಂಶ
ಕನ್ನಡಪ್ರಭ ವಾರ್ತೆ ಕನಕಪುರ
ಕಾವೇರಿ ವನ್ಯಜೀವಿ ಅಭಯಾರಣ್ಯದಲ್ಲಿ ಅತಿಕ್ರಮ ಪ್ರವೇಶ ಮಾಡಿ, ಕಡವೆಯನ್ನು ಬೇಟೆಯಾಡಿ ಮಾಂಸವನ್ನು ಸಾಗಿಸುತ್ತಿದ್ದ ಪ್ರಕರಣವನ್ನು ಭೇದಿಸುವಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ಯಶಸ್ವಿಯಾಗಿದ್ದಾರೆ.ಕರಿಯಪ್ಪನ ಮಗ ರಾಮಕೃಷ್ಣ, ಅಲಿಯಾಸ್ ಬೆಟ್ಟಪ್ಪ, ದ್ಯಾವೇಗೌಡನ ಮಗ ಡಿ. ಎನ್. ರವಿರಾಮು, ಅಲಿಯಾಸ್ ಅಡ್ಡಣ್ಣ, ರಾಮು ಮಗ ಎನ್. ಆರ್. ರಾಜು, ಚಂದ್ರಣ್ಣನ ಮಗ ರಾಜೇಶ್, ನಿಂಗಣ್ಣನ ಮಗ ಶಿವಣ್ಣ, ಮುನಿದಾಸನ ಮಗ ಶಿವಸ್ವಾಮಿ, ಶಿವಮುತ್ತು ಮಗ ಮುನಿರಾಜು ಸೇರಿದಂತೆ ಏಳು ಜನ ಆರೋಪಿಗಳು ಕನಕಪುರ ತಾಲೂಕಿನ ಉಯ್ಯಂಬಳ್ಳಿ ಹೋಬಳಿ ನಲ್ಲಹಳ್ಳಿ ಗ್ರಾಮದವರಾಗಿದ್ದು, ನಾಲ್ಕನೇ ಆರೋಪಿ ರಾಜೇಶ್, ಐದನೇ ಆರೋಪಿ ಶಿವಣ್ಣ, ಆರನೇ ಆರೋಪಿ ಶಿವಸ್ವಾಮಿ, ಏಳನೇ ಆರೋಪಿ ಮುನಿರಾಜು ತಲೆ ಮರೆಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಬಂಧಿತ ಆರೋಪಿಗಳಾದ ರಾಮಕೃಷ್ಣ, ಡಿ. ಎನ್. ರವಿ, ಆರ್. ಎನ್. ರಾಜುರವರಿಂದ ಎರಡು ಒಂಟಿ ನಳಿಕೆ, ನಾಡ ಬಂದೂಕು, ಗೋಣಿ ಚೀಲದಲ್ಲಿ ತುಂಬಿದ್ದ ಸುಮಾರು ಇಪ್ಪತ್ತೊಂದು ಕೆಜಿಯಷ್ಟು ಕಡವೆ ಮಾಂಸ, ಒಂದು ಕಡವೆ ತಲೆ, ಅದರ ಚರ್ಮ, ಕಾಲುಗಳು ಹಾಗೂ ಬ್ಯಾಟರಿ, ಮದ್ದು ಗುಂಡುಗಳು, ಸಾಗಾಟಕ್ಕೆ ಬಳಸಿದ ಕೆಎ 42 - 9440 ಸಂಖ್ಯೆಯ ಮಹೀಂದ್ರ ಸುಪ್ರೋ ಮಿನಿ ಟ್ರಕ್ ಅನ್ನು ವಶಕ್ಕೆ ಪಡೆಯಲಾಗಿದೆ.ಶನಿವಾರ ರಾತ್ರಿ ಸುಮಾರು ಏಳು ಗಂಟೆ ಸಮಯದಲ್ಲಿ ಖಚಿತ ಮಾಹಿತಿ ಮೇರೆಗೆ ಉಪಅರಣ್ಯ ಸಂರಕ್ಷಣಾಧಿಕಾರಿ ಸುರೇಂದ್ರರವರ ಮಾರ್ಗದರ್ಶನದಂತೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನಾಗೇಂದ್ರ ಪ್ರಸಾದ್ ನೇತೃತ್ವದಲ್ಲಿ ವಲಯ ಅರಣ್ಯಾಧಿಕಾರಿ ಅನಿಲ್ ತಂಡ ರಚಿಸಿ, ಸಂಗಮ ವನ್ಯಜೀವಿ ವಲಯದ ದೊಡ್ಡಾಲಹಳ್ಳಿ ಶಾಖೆಯ ಬೆಂಡಗೋಡು ಚೆಕ್ ಪೋಸ್ಟ್ ನಲ್ಲಿ ವಾಹನಗಳ ತಪಾಸಣೆ ಮಾಡುತ್ತಿದ್ದಾಗ, ಮೇಲ್ಕಂಡ ವಾಹನದಲ್ಲಿದ್ದ ನಾಲ್ಕು ಜನ ಆರೋಪಿಗಳು ವಾಹನದಿಂದ ಇಳಿದು ತಪ್ಪಿಸಿಕೊಂಡು ಹೋಗುತ್ತಿದ್ದರು. ಕೂಡಲೇ ಉಪ ವಲಯ ಅರಣ್ಯಾಧಿಕಾರಿ ಮತ್ತು ಸಿಬ್ಬಂದಿ ವಾಹನ ಸುತ್ತುವರಿದು, ಚಾಲಕ ಹಾಗೂ ಇಬ್ಬರು ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡಿದ್ದು, ಉಳಿದ ಆರೋಪಿಗಳು ತಪ್ಪಿಸಿಕೊಂಡಿದ್ದಾರೆ.
ವನ್ಯಜೀವಿ ಅರಣ್ಯ ಸಂರಕ್ಷಣಾ ಕಾಯ್ದೆಯಡಿ ಆರೋಪಿಗಳ ವಿರುದ್ಧ ದೂರು ದಾಖಲಿಸಿ, ಮೂರು ಜನ ಆರೋಪಿಗಳನ್ನು ಕನಕಪುರ ಜೆಎಂಎಫ್ ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ, ತಲೆ ಮರೆಸಿಕೊಂಡಿರುವ ಆರೋಪಿಗಳಿಗಾಗಿ ವಲಯ ಅರಣ್ಯಾಧಿಕಾರಿಗಳು ಬಲೆ ಬೀಸಿದ್ದಾರೆ.ಕಾರ್ಯಾಚರಣೆಯಲ್ಲಿ ಉಪ ವಲಯ ಅರಣ್ಯಾಧಿಕಾರಿ ಸದಾಶಿವ ಉಪ್ಪಾರ, ಭೂಹಳ್ಳಿ ವಲಯ ಪ್ರಭಾರ ಶರಣಪ್ಪ, ವಿಜಯ್, ಅರಣ್ಯಾಧಿಕಾರಿಗಳಾದ ಮಂಜುನಾಥ್ ನಾಟೇಕಾರ್, ಸುಭಾಷ್ ಸಾವಳಗಿ, ಮಲ್ಲಿಕಾರ್ಜುನ್ ಪೂಜಾರಿ, ಐಸಿಟಿ ಪ್ರವೀಣ್, ಚೆಕ್ ಪೋಸ್ಟ್ ವಾಚರ್ಸ್ ಗಳಾದ ಸಿದ್ದರಾಜು, ಕೆಂಪರಾಜು, ಗಿರಿ ಹಾಗೂ ಸಿಬ್ಬಂದಿ ವರ್ಗ ಭಾಗಿಯಾಗಿದ್ದರು.