ರಾಮನಗರ ಜಿಲ್ಲಾ ಮಾವು ಮತ್ತು ತೋಟದ ಬೆಳೆಗಾರರ ಮಾರಾಟ ಸಂಘ ಹಾಗೂ ತೋಟಗಾರಿಕಾ ಇಲಾಖೆ ಸಹಕಾರದಲ್ಲಿ ನೈಸರ್ಗಿಕವಾಗಿ ಬೆಳೆದ ಮಾವಿನ ಹಣ್ಣುಗಳ ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಮಂಗಳೂರಿನ ಕದ್ರಿ ಪಾರ್ಕ್‌ನಲ್ಲಿ ಗುರುವಾರ ಚಾಲನೆ ನೀಡಲಾಯಿತು.
ಮಂಗಳೂರು: ರಾಮನಗರ ಜಿಲ್ಲಾ ಮಾವು ಮತ್ತು ತೋಟದ ಬೆಳೆಗಾರರ ಮಾರಾಟ ಸಂಘ ಹಾಗೂ ತೋಟಗಾರಿಕಾ ಇಲಾಖೆ ಸಹಕಾರದಲ್ಲಿ ನೈಸರ್ಗಿಕವಾಗಿ ಬೆಳೆದ ಮಾವಿನ ಹಣ್ಣುಗಳ ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಮಂಗಳೂರಿನ ಕದ್ರಿ ಪಾರ್ಕ್‌ನಲ್ಲಿ ಗುರುವಾರ ಚಾಲನೆ ನೀಡಲಾಯಿತು.
ಈ ಮಾವು ಮೇಳ ಮೇ 31ರ ವರೆಗೆ ನಾಲ್ಕು ದಿನಗಳ ಕಾಲ ನಡೆಯಲಿದ್ದು, ಬೆಳಗ್ಗೆ 9 ರಿಂದ ರಾತ್ರಿ 9 ರ ವರೆಗೆ ಗ್ರಾಹಕರ ವೀಕ್ಷಣೆಗೆ ತೆರೆದಿರಲಿದೆ. ಮೇಳದಲ್ಲಿ ಸುಮಾರು 16 ಸ್ಟಾಲ್‌ಗಳಲ್ಲಿ 13 ವಿಧದ ಮಾವುಗಳು ಲಭ್ಯವಿದೆ.ಮಾವು ಮೇಳಕ್ಕೆ ಕದ್ರಿ ಪಾರ್ಕ್ ಅಭಿವೃದ್ಧಿ ಸಮಿತಿ ಸದಸ್ಯ ಜಗನ್ನಾಥ ಗಂಭೀರ ಚಾಲನೆ ನೀಡಿದರು.
ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಪ್ರವೀಣ್ ಮಾತನಾಡಿ, ರಾಮನಗರ ಜಿಲ್ಲಾ ಮಾವು ಮತ್ತು ತೋಟದ ಬೆಳೆಗಾರರ ಮಾರಾಟ ಸಂಘದಿಂದ ಇಲ್ಲಿ ಮೂರನೇ ಬಾರಿ ಮಾವು ಮೇಳ ನಡೆಯುತ್ತಿದೆ. ನೈಸರ್ಗಿಕವಾಗಿ ಮಾಗಿಸಿದ ಮಾವು ಪ್ರದರ್ಶನ ಮತ್ತು ಮಾರಾಟ ಇಲ್ಲಿನ ವಿಶೇಷ. ಕೃತಕವಾಗಿ ಮಾಗಿಸುವ ಮಾವಿನ ಬದಲು ನೈಸರ್ಗಿಕವಾಗಿ ಮಾಗಿಸಿದ ಮಾವು ಆರೋಗ್ಯಕ್ಕೂ ಪೂರಕವಾಗಿದ್ದು, ಈ ನಿಟ್ಟಿನಲ್ಲಿ ಮಾವು ಬೆಳೆಗಾರರಿಗೂ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತಿದೆ. ಗ್ರಾಹಕರೂ ಇವರನ್ನು ಬೆಂಬಲಿಸಬೇಕು ಎಂದರು.ರಾಮನಗರ ಜಿಲ್ಲಾ ಮಾವು ಮತ್ತು ತೋಟದ ಬೆಳೆಗಾರರ ಮಾರಾಟ ಸಂಘದ ಪ್ರಮುಖರಾದ ವಾಸು, ಆತ್ಮಪ್ರಕಾಶ್ ಕನಕಪುರ, ನಿಂಗರಾಜು, ಮಾದೇಶ್, ಪ್ರವೀಣ್, ಶಿವಪ್ರಸಾದ್, ಮಧುಕುಮಾರ್, ಇಂದ್ರಮ್ಮ ಮತ್ತಿತರರು ಇದ್ದರು. ಬಾಕ್ಸ್---
ನೈಸರ್ಗಿಕವಾಗಿ ಮಾಗಿದ ಮಾವಿಗೆ ಬಾಗಿದ ಗ್ರಾಹಕರು!ಈ ಮೇಳದಲ್ಲಿ ತರಹೇವಾರಿ ಮಾವುಗಳ ಪ್ರದರ್ಶನ ಮತ್ತು ಮಾರಾಟ ಇದೆ. ಮುಖ್ಯವಾಗಿ ಆಲ್ಫೋನ್ಸ್, ಬಾದಾಮಿ, ಇಮಾಮ್ ಪಸಂದ್, ಕೇಸರ, ಮಲಗೋವಾ, ದಶೇರಿ, ಸಕ್ಕರೆಗುತ್ತಿ, ಕಾಲಪ್ಪಾಡಿ, ಸಿಂಧೂರ, ಮಲ್ಲಿಕಾ, ಮಾಯಾ, ಬ್ರೂನೈ ಕಿಂಗ್, ಶುಗರ್ ಬೇಬಿ, ರಾಸ್‌ಪುರಿ, ತೋತಾಪುರಿ ಮತ್ತಿತರ ತಳಿಗಳಿವೆ. ಈ ಎಲ್ಲ ತಳಿಗಳನ್ನು ನೈಸರ್ಗಿಕವಾಗಿ ಮಾಗಿಸಿರುವುದು ಗಮನಾರ್ಹ. ನೈಸರ್ಗಿಕವಾಗಿ ಮಾಗಿದ ಮಾವುಗಳ ಮಾರಾಟ, ಪ್ರದರ್ಶನ ಹಿನ್ನೆಲೆಯಲ್ಲಿ ಮೊದಲ ದಿನವೇ ಮಾವು ಮೇಳ ಗ್ರಾಹಕರನ್ನು ಸೆಳೆಯುತ್ತಿದ್ದು, ಮಳಿಗೆಗಳಲ್ಲಿ ಗ್ರಾಹಕ ಸಂದಣಿ ಕಂಡುಬಂದಿದೆ.