ವಿಶಿಷ್ಟ ಆಚರಣೆ ಸಂಪ್ರದಾಯ ಮೂಲಕ ಬುಡಕಟ್ಟು ಮೂಲದ ಕಾಡುಗೊಲ್ಲ ಜನಾಂಗವನ್ನು ಪರಿಶಿಷ್ಟ ಪಂಗಡ ಪಟ್ಟಿಗೆ ಸೇರ್ಪಡೆ ಮಾಡಲು ಕೇಂದ್ರ ಸರ್ಕಾರ ಎಲ್ಲಾ ತಯಾರಿ ನಡೆಸಿದ್ದು, ಶೀಘ್ರದಲ್ಲಿ ಕಾಡು ಗೊಲ್ಲರನ್ನು ಎಸ್ಟಿ ಮೀಸಲು ಪಟ್ಟಿಗೆ ಸೇರ್ಪಡೆ ಮಾಡಲಾಗುವುದು ಎಂದು ಕೇಂದ್ರದ ರೈಲ್ವೆ ಸಚಿವ ವಿ.ಸೋಮಣ್ಣ ತಿಳಿಸಿದರು.

ಕನ್ನಡಪ್ರಭ ವಾರ್ತೆ ಗುಬ್ಬಿ

ವಿಶಿಷ್ಟ ಆಚರಣೆ ಸಂಪ್ರದಾಯ ಮೂಲಕ ಬುಡಕಟ್ಟು ಮೂಲದ ಕಾಡುಗೊಲ್ಲ ಜನಾಂಗವನ್ನು ಪರಿಶಿಷ್ಟ ಪಂಗಡ ಪಟ್ಟಿಗೆ ಸೇರ್ಪಡೆ ಮಾಡಲು ಕೇಂದ್ರ ಸರ್ಕಾರ ಎಲ್ಲಾ ತಯಾರಿ ನಡೆಸಿದ್ದು, ಶೀಘ್ರದಲ್ಲಿ ಕಾಡು ಗೊಲ್ಲರನ್ನು ಎಸ್ಟಿ ಮೀಸಲು ಪಟ್ಟಿಗೆ ಸೇರ್ಪಡೆ ಮಾಡಲಾಗುವುದು ಎಂದು ಕೇಂದ್ರದ ರೈಲ್ವೆ ಸಚಿವ ವಿ.ಸೋಮಣ್ಣ ತಿಳಿಸಿದರು.ತಾಲೂಕಿನ ಸೋಮಲಾಪುರ, ಬಿಳಿಗೆರೆ, ಕಂಬೇರಹಟ್ಟಿ, ಹೊಸಹಟ್ಟಿ, ಹೊಸಹಟ್ಟಿ, ಮೂಡಲಪಾಳ್ಯ ಹಾಗೂ ಜುಂಜಪ್ಪನಹಟ್ಟಿ ಗ್ರಾಮಗಳಲ್ಲಿ ಕಿರ್ಲೋಸ್ಕರ್ ಸಂಸ್ಥೆಯ ಸಿಎಸ್ ಆರ್ ನಿಧಿಯಿಂದ ಶುದ್ಧ ನೀರಿನ ಘಟಕ ನಿರ್ಮಾಣಕ್ಕೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದ ಅವರು, ಅಮಿತ್ ಷಾ ಅವರೊಂದಿಗೆ ಎಸ್ಟಿ ಮೀಸಲು ಬಗ್ಗೆ ಚರ್ಚಿಸಿದ್ದೇನೆ. ಪ್ರಧಾನಮಂತ್ರಿಗಳು ಸಹ ಈ ಬಗ್ಗೆ ಚರ್ಚೆ ಮಾಡಿದ್ದಾರೆ. ಹತ್ತು ತಿಂಗಳಲ್ಲಿ ಕಾಡು ಗೊಲ್ಲರಿಗೆ ಸಿಹಿಸುದ್ದಿ ಸಿಗಲಿದೆ ಎಂದರು.ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಅವಶ್ಯವಿಲ್ಲ. ಯಾವ ಪಕ್ಷದ ಶಾಸಕರಾದರೂ ಅವರೊಂದಿಗೆ ನಾನೇ ಖುದ್ದು ಚರ್ಚಿಸಿ ಕೆಲಸ ನಡೆಸಿದ್ದೇನೆ. ಜಿಲ್ಲೆಯ ಅಭಿವೃದ್ಧಿ ಜೊತೆಗೆ ಜನರ ಮೂಲಭೂತ ಸವಲತ್ತು ಒದಗಿಸುವ ಕೆಲಸ ಬಹಳ ಮುಖ್ಯವಾಗಿದೆ. ಈ ಬಗ್ಗೆ ಪ್ರಧಾನಮಂತ್ರಿ ಮೋದಿ ಅವರೇ ಮಾರ್ಗದರ್ಶನ ನೀಡಿದ್ದಾರೆ ಎಂದ ಅವರು ಗುಬ್ಬಿ ತಾಲೂಕಿನಲ್ಲಿ ಸಾಕಷ್ಟು ಕೆಲಸವನ್ನು ಹುಡುಕಿ ಮಾಡುತ್ತಿದ್ದೇನೆ. ರೈಲ್ವೆ, ಹೆದ್ದಾರಿ ಸೇರಿದಂತೆ ಹಳ್ಳಿಗಾಡಿನ ಜನರ ಬದುಕಿಗೆ ಅತ್ಯವಶ್ಯ ವ್ಯವಸ್ಥೆ ಮಾಡುತ್ತಿದ್ದೇನೆ. ಈ ವಿಚಾರದಲ್ಲಿ ಶಾಸಕರೂ ಸಹ ಸಾಥ್ ನೀಡಿದ್ದಾರೆ ಎಂದರು. ಶಾಸಕ ಎಸ್.ಆರ್.ಶ್ರೀನಿವಾಸ್ ಮಾತನಾಡಿ, ಲೋಕಸಭಾ ಸದಸ್ಯರು ಎಷ್ಟೆಲ್ಲಾ ಕೆಲಸ ಮಾಡಲು ಸಾಧ್ಯ ಎಂಬುದು ಸೋಮಣ್ಣ ಅವರು ರುಜುವಾತು ಮಾಡಿದ್ದಾರೆ. ಚುನಾವಣೆ ಹೊರತಾಗಿ ಶಾಸಕರನ್ನು ವಿಶ್ವಾಸಕ್ಕೆ ಪಡೆದು ಅಭಿವೃದ್ದಿ ಕೆಲಸ ಮಾಡಿದ ಸೋಮಣ್ಣ ಅವರ ನಡೆ ಶ್ಲಾಘನೀಯ ಎಂದರು.ವೇದಿಕೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ರವಿ ಹೆಬ್ಬಾಕ, ಕಾಡು ಗೊಲ್ಲ ಸಮಾಜದ ರಾಜ್ಯಾಧ್ಯಕ್ಷ ರಾಜಣ್ಣ, ಬಿಜೆಪಿ ಮುಖಂಡ ಎಸ್.ಡಿ.ದಿಲೀಪ್ ಕುಮಾರ್, ಜೆಡಿಎಸ್ ಮುಖಂಡರಾದ ಬಿ.ಎಸ್.ನಾಗರಾಜು, ಜಿ.ಎನ್.ಬೆಟ್ಟಸ್ವಾಮಿ, ಕಳ್ಳಿಪಾಳ್ಯ ಲೋಕೇಶ್, ದಿಶಾ ಸಮಿತಿಯ ವೈ.ಎಚ್.ಹುಚ್ಚಯ್ಯ, ಡಾ.ನಾವ್ಯಾಬಾಬು, ಜಿಪಂ ಮಾಜಿ ಸದಸ್ಯ ಪಿ.ಬಿ.ಚಂದ್ರಶೇಖರಬಾಬು, ನಂಜೇಗೌಡ, ಎಸ್.ವಿಜಯ್ ಕುಮಾರ್, ಬಿ. ದೊಡ್ಡಯ್ಯ ವಕೀಲರು ಕಾಡು ಗೊಲ್ಲ ಸಮಾಜದ ಮುಖಂಡರಾದ ಯಶೋಧಮ್ಮ ಶಿವಣ್ಣ, ಕರಿಯಪ್ಪ, ದೊಡ್ಡಯ್ಯ, ಕಿರ್ಲೋಸ್ಕರ್ ಸಂಸ್ಥೆಯ ಕಿರಣ್, ಪ್ರಶಾಂತ್, ವರುಣ್ ಇತರರು ಇದ್ದರು.