ಸಾರಾಂಶ
ಕಾಡುಗೊಲ್ಲರ ಸಮಾಜದ ಸಮಾವೇಶದಲ್ಲಿ ವಿಧಾನ ಪರಿಷತ್ ಸದಸ್ಯ ರವಿಕುಮಾರ ಭರವಸೆ
ಕನ್ನಡಪ್ರಭ ವಾರ್ತೆ ಚಿತ್ರದುರ್ಗಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದ್ದು, ಎಸ್‌ಟಿ ಪ್ರವರ್ಗಕ್ಕೆ ಸೇರಿಸುವ ಕಾಡುಗೊಲ್ಲರ ಬಹು ದಿನಗಳ ಬೇಡಿಕೆ ಈಡೇರಲಿದೆ ಎಂದು ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಹೇಳಿದರು.
ದಾವಣಗೆರೆಯಲ್ಲಿ ನಡೆದ ಜಿಲ್ಲಾ ಕಾಡುಗೊಲ್ಲರ ಸಮಾಜದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಾಡುಗೊಲ್ಲರ ಬಹುದಿನದ ಬೇಡಿಕೆ ಎಸ್‌ಟಿ ಗೆ ಸೇರ್ಪಡೆ ಮಾಡಲು ಬಿಜೆಪಿ ಸಿದ್ಧವಿದ್ದು, ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಬೆಂಬಲಿಸಿ ನಮಗೆ ಜಯ ನೀಡಬೇಕಿದೆ ಎಂದರು.ರಾಷ್ಟ್ರ ಮಟ್ಟದಲ್ಲಿ ಎನ್‌ಡಿಎ ಗೆ 400ಕ್ಕೂ ಹೆಚ್ಚು ಸ್ಥಾನಗಳು ಲಭ್ಯವಾಗಲಿವೆ ಎಂಬ ಸಮೀಕ್ಷೆ ಬಂದಿದ್ದು, ಕಾಡುಗೊಲ್ಲರ ಬೇಡಿಕೆ ಶೀಘ್ರವಾಗಿ ಈಡೇರಿಸಲು ಸಾಧ್ಯವಾಗುತ್ತದೆ ಎಂದರು. ಪ್ರಧಾನಿ ಮೋಧಿಯವರು ಆಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡುವುದರ ಮೂಲಕ ಹಿಂದುಗಳ ಕನಸು ನನಸು ಮಾಡಿದ್ದಾರೆ, ಇದನ್ನು ಸಾಕಾರ ಮಾಡುವುದಕ್ಕಾಗಿಯೇ ಭಗವಂತ ಶ್ರೀರಾಮ ಚಂದ್ರನೇ ಮೋದಿಯವರನ್ನು ನಮ್ಮ ಭಾರತ ದೇಶಕ್ಕೆ ಕಳುಹಿಸಿ ಕೊಟ್ಟಿದ್ದಾನೆ ಎಂದರೆ ತಪ್ಪಾಗಲಾರದು. ಇಂತಹ ನಾಯಕ ಇದ್ದರೂ ಸಹ ಮತದಾರರು ಕಾಂಗ್ರೆಸ್ ಗೆ ಮತ ಹಾಕುತ್ತಾರೆ ಎನ್ನುವುದೇ ಆಶ್ಚರ್ಯ ಎಂದು ನುಡಿದರು.
ಕರ್ನಾಟಕ ರಾಜ್ಯ ಕಾಡುಗೊಲ್ಲರ ಸಂಘದ ರಾಜ್ಯಾಧ್ಯಕ್ಷ ರಾಜಣ್ಣ ಮಾತನಾಡಿ, ಕಾಡುಗೊಲ್ಲ ಜನಾಂಗ ಎಸ್‌ಟಿ ಗೆ ಸೇರಿಸಬೇಕೆಂದು ಕಳೆದ 70 ವರ್ಷಗಳಿಂದ ಹೋರಾಟ ಮಾಡುತ್ತಿದೆ, ಅದರೆ ಇದಕ್ಕೆ ಯಾರೂ ಸಹಾ ಸರಿಯಾದ ರೀತಿಯಲ್ಲಿ ಸ್ಪಂದಿಸಿಲ್ಲ, 2014 ರಲ್ಲಿ ಜನಾಂಗವನ್ನು ಎಸ್‌ಟಿ ಗೆ ಸೇರಿಸುವಂತೆ ಆಗ್ರಹಿಸಿ ಕೇಂದ್ರಕ್ಕೆ ರಾಜ್ಯ ಸರ್ಕಾರ ಶಿಫಾರಸ್ಸು ಮಾಡಿದೆ. ಆದರೆ ಅಲ್ಲಿ ನಮ್ಮ ಪರವಾಗಿ ಮಾತನಾಡುವವರು ಯಾರು ಇಲ್ಲದ ಪರಿಣಾಮ ಬೇಡಿಕೆ ಬೇಡಿಕೆಯಾಗಿಯೇ ಉಳಿದಿದೆ. ಈಗ ಬೇಡಿಕೆ ಈಡೇರುವ ಭರವಸೆ ಬಂದಿದೆ. ಈ ಹಿನ್ನೆಲೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಕೂಟದ ಅಭ್ಯರ್ಥಿ ಬೆಂಬಲಿಸಲಾಗುವುದು ಎಂದರು.ಇದೆ ವೇಳೆ ವಿಧಾನ ಪರಿಷತ್ ಸದಸ್ಯ ಎ.ನಾರಾಯಣಸ್ವಾಮಿ, ಚಿತ್ರದುರ್ಗ ಜಿಲ್ಲಾ ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರಳಿ ಮಾತನಾಡಿದರು. ಸಮಾರಂಭದಲ್ಲಿ ಕಾಡುಗೊಲ್ಲರ ಸಂಘದ ರಾಜ್ಯ ಉಪಾಧ್ಯಕ್ಷ ಮಿಸೆ ಮಹಾಲಿಂಗಪ್ಪ, ಕಾಡುಗೊಲ್ಲರ ದಾವಣಗೆರೆ ಜಿಲ್ಲಾಧ್ಯಕ್ಷ ಸುಂಕಪ್ಪ, ತುಮಕೂರಿನ ಶಂಕ್ರಪ್ಪ, ದಾವಣಗೆರೆ ಮಾಜಿ ಜಿಪಂ ಅಧ್ಯಕ್ಷ ಶಶಿಧರ್, ಸಿರಾ ವೀರೇಶ್, ಚಿಕ್ಕಣ್ಣ ಸೇರಿದಂತೆ ಕಾಡುಗೊಲ್ಲರ ಸಮಾಜದ ಹಲವು ಮುಖಂಡರು ಭಾಗವಹಿಸಿದ್ದರು.