ಕಡೂರುಹಿಂದಿನ ಶಾಸಕರ ನಿರ್ಲಕ್ಷ್ಯ ಮತ್ತು ನಿಷ್ಕ್ರಿಯತೆಯಿಂದ ಕಡೂರು ತಾಲೂಕು ಇಂದಿಗೂ ಬರ ಪರಿಸ್ಥಿತಿಯಿಂದ ಹೊರಬರಲು ಸಾಧ್ಯವಾಗಿಲ್ಲ. ತಾಲೂಕಿನ ಕೆರೆಗಳಿಗೆ ನೀರು ಹರಿಸುವ ಇಚ್ಛಾಶಕ್ತಿ ಮತ್ತು ಬದ್ಧತೆ ಹಿಂದಿನ ಶಾಸಕರಿಗೆ ಇದ್ದಿದ್ದರೆ ಕಡೂರು ಈ ಮಟ್ಟಿಗೆ ಬರದಿಂದ ಬಳಲುತ್ತಿರಲಿಲ್ಲ ಎಂದು ಶಾಸಕ ಕೆ.ಎಸ್.ಆನಂದ್ ಆರೋಪಿಸಿದರು.
- ಶಾಸಕ ಕೆ.ಎಸ್.ಆನಂದ್ ಆರೋಪ । ಭದ್ರಾ ಉಪಕಣಿವೆ ಯೋಜನೆಯ ಮೂರನೇ ಹಂತದ ಕಾಮಗಾರಿಗಳಿಗೆ ಚಾಲನೆ
ಕನ್ನಡಪ್ರಭ ವಾರ್ತೆ, ಕಡೂರುಹಿಂದಿನ ಶಾಸಕರ ನಿರ್ಲಕ್ಷ್ಯ ಮತ್ತು ನಿಷ್ಕ್ರಿಯತೆಯಿಂದ ಕಡೂರು ತಾಲೂಕು ಇಂದಿಗೂ ಬರ ಪರಿಸ್ಥಿತಿಯಿಂದ ಹೊರಬರಲು ಸಾಧ್ಯವಾಗಿಲ್ಲ. ತಾಲೂಕಿನ ಕೆರೆಗಳಿಗೆ ನೀರು ಹರಿಸುವ ಇಚ್ಛಾಶಕ್ತಿ ಮತ್ತು ಬದ್ಧತೆ ಹಿಂದಿನ ಶಾಸಕರಿಗೆ ಇದ್ದಿದ್ದರೆ ಕಡೂರು ಈ ಮಟ್ಟಿಗೆ ಬರದಿಂದ ಬಳಲುತ್ತಿರಲಿಲ್ಲ ಎಂದು ಶಾಸಕ ಕೆ.ಎಸ್.ಆನಂದ್ ಆರೋಪಿಸಿದರು.ತಾಲೂಕಿನ ತಂಗಲಿ ಕೆರೆ ಬಳಿ ಬುಧವಾರ ಭದ್ರಾ ಉಪಕಣಿವೆ ಯೋಜನೆ 3ನೇ ಹಂತದ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು. ಈ ಹಂತದ ಕಾಮಗಾರಿಗೆ ₹407.50 ಕೋಟಿ ವೆಚ್ಚದ ಅನುಮೋದನೆ ದೊರೆತಿದ್ದು, ಇದೀಗ ಕಾಮ ಗಾರಿಗೆ ಚಾಲನೆ ನೀಡಲಾಗಿದೆ. ಇದರಿಂದ ಕಡೂರು ತಾಲೂಕಿನ ಏಳು ಹಾಗೂ ಚಿಕ್ಕಮಗಳೂರು ತಾಲೂಕಿನ 70 ಕೆರೆಗಳು ಸೇರಿದಂತೆ ಒಟ್ಟು 77 ಕೆರೆಗಳಿಗೆ ನೀರು ಹರಿಯಲಿದೆ ಎಂದರು.ಹೆಬ್ಬೆ ಜಲಪಾತ ಯೋಜನೆ ಕಾರ್ಯಸಾಧುವಲ್ಲ ಎಂಬ ಕಾರಣಕ್ಕೆ ಪರ್ಯಾಯವಾಗಿ ಗೊಂದಿ ಯೋಜನೆ ರೂಪಿಸಲಾಗಿತ್ತು. ಬಳಿಕ ಅದು ಭದ್ರಾ ಉಪಕಣಿವೆ ಯೋಜನೆಯಾಗಿ ರೂಪುಗೊಂಡು ಹಿಂದಿನ ಸರ್ಕಾರ ₹1,281 ಕೋಟಿ ವೆಚ್ಚದ ಯೋಜನೆಗೆ ಅನುಮೋದನೆ ನೀಡಿದ್ದರೂ ಅನುದಾನ ಮೀಸಲಿಟ್ಟಿರಲಿಲ್ಲ. ತಾವು ಶಾಸಕರಾಗಿ ಆಯ್ಕೆಯಾದಾಗ ಯೋಜನೆ ಪ್ರಾರಂಭಿಕ ಹಂತದಲ್ಲಿತ್ತು. ನಿರಂತರ ಪ್ರಯತ್ನದ ಫಲವಾಗಿ ಮೊದಲ 2 ಹಂತಗಳ ಕಾಮಗಾರಿಗೆ ಅನುದಾನ ಮಂಜೂರು ಮಾಡಿಸಿ, 3ನೇ ಹಂತಕ್ಕೆ ನಬಾರ್ಡ್ ಮೂಲಕ ₹450 ಕೋಟಿ ಅನುದಾನ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.ಈ ನಿಟ್ಟಿನಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜಲಸಂಪನ್ಮೂಲ ಸಚಿವರಾಗಿದ್ದ ಡಿ.ಕೆ.ಶಿವಕುಮಾರ್ ಸಹಕಾರ ಮಹತ್ವದ್ದಾಗಿದ್ದು, ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.ಮಲ್ಲಘಟ್ಟದಿಂದ ಸಿಂಗಟಗೆರೆ ಭಾಗದ 36 ಕೆರೆಗಳಿಗೆ ನೀರು ತುಂಬಿಸುವ ₹1,600 ಕೋಟಿ ವೆಚ್ಚದ ಪರಿಷ್ಕೃತ ಡಿಪಿಆರ್ ಅನ್ನು ಮಂಡಳಿ ಸಭೆಯಲ್ಲಿ ಮಂಡಿಸಲಾಗಿದೆ. ಶೀಘ್ರ ಅನುಮೋದನೆ ದೊರೆತು ಕಾಮಗಾರಿ ಆರಂಭವಾಗುವ ನಿರೀಕ್ಷೆಯಿದೆ. ಮುಂದಿನ ಜೂನ್ ಒಳಗೆ 2ನೇ ಹಂತದ ಕಾಮಗಾರಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದರು.ಭದ್ರಾ ನೀರನ್ನು ಪ್ರಾಯೋಗಿಕವಾಗಿ ಹರಿಸಿದಾಗ ವಿರೋಧಿಗಳು ಅದು ತಾತ್ಕಾಲಿಕ ವ್ಯವಸ್ಥೆ, ಪ್ರಯೋಗ ವಿಫಲವಾಗಿದೆ ಎಂದು ಟೀಕಿಸಿದ್ದರು. ಇದೀಗ ಕಾಮಗಾರಿಗಳ ಪ್ರಗತಿ ಆ ಟೀಕೆಗಳಿಗೆ ಉತ್ತರ ನೀಡಿದೆ. ಅಧಿವೇಶನದಲ್ಲಿ ಒಮ್ಮೆಯೂ ಈ ಭಾಗದ ನೀರಿನ ಸಮಸ್ಯೆ ಕುರಿತು ಧ್ವನಿ ಎತ್ತದವರು ಈಗ ಕೆರೆಗಳಿಗೆ ಬಾಗಿನ ಅರ್ಪಿಸಲು ಮುಂದಾಗುತ್ತಿದ್ದಾರೆ ಎಂದು ಹಿಂದಿನ ಶಾಸಕರ ವಿರುದ್ಧ ವಾಗ್ದಾಳಿ ನಡೆಸಿದರು.ಕಡೂರು ಕ್ಷೇತ್ರಕ್ಕೆ ಮಂಜೂರಾಗಿದ್ದ 1.45 ಟಿಎಂಸಿ ನೀರಿನಲ್ಲಿ ಅರ್ಧದಷ್ಟು ನೀರನ್ನು ಅಂದು ಜಿಲ್ಲಾ ಉಸ್ತುವಾರಿ ಸಚಿವ ರಾಗಿದ್ದ ಸಿ.ಟಿ.ರವಿ ಚಿಕ್ಕಮಗಳೂರು ಭಾಗಕ್ಕೆ ಪಡೆದುಕೊಂಡಿದ್ದು, ಇದರಿಂದ ಕಡೂರು ಕ್ಷೇತ್ರಕ್ಕೆ ಹಿನ್ನಡೆಯಾಗಿದೆ. ನಮ್ಮ ಪಾಲಿನ ನೀರು ಮರಳಿ ಪಡೆಯುವುದು ತಮ್ಮ ಗುರಿಯಾಗಿದ್ದು, ಅದನ್ನು ಸಾಧಿಸಿಯೇ ತೀರುತ್ತೇನೆ ಎಂದು ಹೇಳಿದರು.ವಿಶ್ವೇಶ್ವರಯ್ಯ ಜಲ ನಿಗಮದ ಕಾರ್ಯಪಾಲಕ ಎಂಜಿನಿಯರ್ ಶ್ರೀಹರ್ಷ ಮಾತನಾಡಿದರು. ಚಿಕ್ಕಂಗಳ ಎಂ.ಪ್ರಕಾಶ ನಾಯ್ಕ, ಸತೀಶ್ ನಾಯ್ಕ, ಕರಿಬಡ್ಡೆ ಶ್ರೀನಿವಾಸ್, ಕುಮಾರ ನಾಯ್ಕ ಹಾಗೂ ಗುತ್ತಿಗೆದಾರ ರವಿ ಉಪಸ್ಥಿತರಿದ್ದರು.--- ಬಾಕ್ಸ್---ಭದ್ರಾ ಉಪಕಣಿವೆ ಯೋಜನೆ: 197 ಕೆರೆಗಳಿಗೆ ನೀರುಕಡೂರು: ತರೀಕೆರೆ, ಚಿಕ್ಕಮಗಳೂರು ಹಾಗೂ ಅರಸೀಕೆರೆ ತಾಲೂಕುಗಳ ಒಟ್ಟು 197 ಕೆರೆಗಳಿಗೆ ನೀರು ಹರಿಸುವ ಭದ್ರಾ ಉಪಕಣಿವೆ ಯೋಜನೆಗೆ ₹1,281.80 ಕೋಟಿ ವೆಚ್ಚವಾಗಲಿದೆ. ಯೋಜನೆಯಲ್ಲಿ ಒಟ್ಟು 1.45 ಟಿಎಂಸಿ ನೀರು ಬಳಕೆಯಾಗಲಿದೆ.ಮೊದಲ ಹಂತದ ಕಾಮಗಾರಿ ಪೂರ್ಣಗೊಂಡಿದ್ದು, ತರೀಕೆರೆ 50 ಹಾಗೂ ಕಡೂರಿನ ನಾಲ್ಕು ಕೆರೆಗಳಿಗೆ ಪ್ರಾಯೋಗಿಕವಾಗಿ ನೀರು ಹರಿಸಲಾಗಿದೆ. 2ನೇ ಹಂತದ ಕಾಮಗಾರಿ ಅಂತಿಮ ಹಂತದಲ್ಲಿದ್ದು, ತರೀಕೆರೆ, ಅರಸೀಕೆರೆ ಮತ್ತು ಕಡೂರಿನ 78 ಕೆರೆಗಳಿಗೆ ನೀರು ಹರಿಸಲಾಗುತ್ತಿದೆ.3ನೇ ಹಂತದಲ್ಲಿ ಕಡೂರಿನ ಏಳು ಹಾಗೂ ಚಿಕ್ಕಮಗಳೂರಿನ 70 ಕೆರೆಗಳಿಗೆ ನೀರು ಹರಿಸಲು ಉದ್ದೇಶಿಸಲಾಗಿದೆ. ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಗುತ್ತಿಗೆದಾರರಿಗೆ ಕಾಮಗಾರಿ ವಹಿಸಲಾಗಿದೆ. 3 ಹಂತಗಳ ಕಾಮಗಾರಿ ಪೂರ್ಣಗೊಂಡ ಬಳಿಕ 0.74 ಟಿಎಂಸಿ ನೀರಿನ ಮೂಲಕ ಕಡೂರು ತಾಲೂಕಿನ 114 ಕೆರೆಗಳಿಗೆ ನೀರು ಹರಿಯಲಿದೆ.