ಸಾರಾಂಶ
ಹಳಿಯಾಳ: ಹಳಿಯಾಳ ಕ್ಷೇತ್ರದ ಸಮಸ್ಯೆ ಪರಿಹರಿಸಲು ಪ್ರಯತ್ನಿಸುತ್ತೇನೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.
ಭಾನುವಾರ ಪಟ್ಟಣದ ಪೇಟೆ ಬಸವೇಶ್ವರ ದೇವಸ್ಥಾನದ ವೃತ್ತದಲ್ಲಿ ಸ್ಥಳಿಯ ಬಿಜೆಪಿ ಘಟಕದವರು ಆಯೋಜಿಸಿದ್ದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು. ಮೋದಿಯವರನ್ನು ಮೂರನೇ ಬಾರಿಗೆ ಪ್ರಧಾನಿಯನ್ನಾಗಿಸಲು ದೇಶದ ಜನತೆ ನೀಡಿದ ಬೆಂಬಲಕ್ಕೆ ಕೃತಜ್ಞತೆ ಸಲ್ಲಿಸಿದರು. ಅಧಿಕಾರಕ್ಕೆ ಬಂದ ನೂರು ದಿನಗಳಲ್ಲಿ ಮೋದಿಯವರು ದೇಶದ ಘನತೆಯನ್ನು ಗೌರವವನ್ನು ಹೆಚ್ಚಿಸಿದ್ದು, ವಿಶ್ವವು ಭಾರತದತ್ತ ನೋಡುತ್ತಿದೆ ಎಂದರು.ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪರ ಮತ ಚಲಾಯಿಸಿ ಬೆಂಬಲಿಸಿದ್ದಿರಿ. ಈಗ ಬಿಜೆಪಿ ಸದಸ್ಯತ್ವ ಪಡೆದು ಸಂಘಟನೆಯಲ್ಲಿ ನಿಮ್ಮೊಂದಿಗೆ ಇದ್ದೇವೆ. ನಾವು ಅಭಿವೃದ್ಧಿ ಪರವಾಗಿದ್ದೇವೆ ಎಂದು ತೋರಿಸಿದ್ದಿರಿ ಎಂದರು.
ಮಾಜಿ ಶಾಸಕ ಸುನೀಲ ಹೆಗಡೆ ಮಾತನಾಡಿ, ಗ್ರಾಮಗಳ ಅಭಿವೃದ್ಧಿಗಾಗಿ ಮೋದಿಯವರು ಹಲವಾರು ಜನಪರ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಅವು ಪರಿಣಾಮಕಾರಿಯಾಗಿ ಜಾರಿಯಾಗಬೇಕಾದರೆ ಬಿಜೆಪಿ ಗ್ರಾಪಂ ಚುನಾವಣೆಯಿಂದ ಹಿಡಿದು ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಚುನಾವಣೆಗಳಲ್ಲಿ ಜಯಭೇರಿ ಗಳಿಸಬೇಕು ಎಂದರು.ಸಂತೆಯಲ್ಲಿ ಸದಸ್ಯತ್ವ ಅಭಿಯಾನ: ಸಂಸದ ಕಾಗೇರಿ, ಮಾಜಿ ಶಾಸಕ ಸುನೀಲ ಹೆಗಡೆ ಹಾಗೂ ಪಕ್ಷದ ಪ್ರಮುಖರೊಂದಿಗೆ ಜತೆಗೂಡಿ ಭಾನುವಾರ ಸಂತೆಯಯಲ್ಲಿ ಅಂಗಡಿಗಳಿಗೆ, ಬೀದಿಬದಿಯ ವ್ಯಾಪಾರಸ್ಥರನ್ನು ಭೇಟಿಯಾಗಿ ಬಿಜೆಪಿಯ ಸಾಧನೆ ವಿವರಿಸಿ ಸದಸ್ಯತ್ವ ಅಭಿಯಾನವನ್ನು ಕೈಗೊಂಡರು.ಬಿಜೆಪಿ ಘಟಕ ಅಧ್ಯಕ್ಷ ವಿಠ್ಠಲ ಸಿದ್ದಣ್ಣನವರ, ಪ್ರಧಾನ ಕಾರ್ಯದರ್ಶಿ ಸಂತೋಷ ಘಟಕಾಂಬ್ಳೆ, ಮುಖಂಡರಾದ ಮಂಗೇಶ ದೇಶಪಾಂಡೆ, ಅನಿಲ ಮುತ್ನಾಳೆ, ಶಿವಾಜಿ ನರಸಾನಿ, ಗಣಪತಿ ಕರಂಜೇಕರ, ಶ್ರೀನಿವಾಸ ಘೋಟ್ನೇಕರ, ತುಕಾರಾಮ ಗೌಡಾ, ಉದಯ ಹೂಲಿ, ರಾಜೇಶ್ವರಿ ಹಿರೇಮಠ, ವೀಣಾ ಕುಂಬಾರ, ಚಂದ್ರು ಕಮ್ಮಾರ, ಶಕುಂತಲಾ ಜಾಧವ, ಮಾಲಾ ಹುಂಡೇಕರ ಇತರರು ಇದ್ದರು. ಸಕ್ಕರೆ ಕಾರ್ಖಾನೆ ಸಮಸ್ಯೆ ಪರಿಹಾರಕ್ಕೆ ಯತ್ನ: ಕಾಗೇರಿ
ಹಳಿಯಾಳ: ಸ್ಥಳೀಯ ಸಕ್ಕರೆ ಕಾರ್ಖಾನೆಗೆ ಸಂಬಂಧಿಸಿದಂತೆ ಹಲವಾರು ವಿಷಯಗಳಿದ್ದು, ಮುಖ್ಯವಾಗಿ ಪರಿಸರ ಮಾಲಿನ್ಯದ ಬಗ್ಗೆ ಹಾಗೂ ಕೆಲವು ಬೇಡಿಕೆಗಳಿವೆ. ಅವುಗಳನ್ನು ಪರಿಹರಿಸಲು ಯತ್ನಿಸುತ್ತೇನೆ. ಕೆಸರೊಳ್ಳಿ ಸಕ್ಕರೆ ಕಾರ್ಖಾನೆಯ ಜಮೀನು ಅತಿಕ್ರಮಣ ವಿವಾದವನ್ನು ಇತ್ಯರ್ಥಪಡಿಸುತ್ತೇನೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಭರವಸೆ ನೀಡಿದರು.ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿ, ಕೆಸರೊಳ್ಳಿಯಲ್ಲಿನ ಸಕ್ಕರೆ ಕಾರ್ಖಾನೆ ಸಂಬಂಧಿತ ಜಮೀನು ಅತಿಕ್ರಮಣ ಸಮಸ್ಯೆ ವಿಷಯ ನನ್ನ ಗಮನಕ್ಕೆ ಬಂದಿದ್ದು, ಅದರ ಬಗ್ಗೆ ಸಮಗ್ರ ಅಧ್ಯಯನ ಮಾಡಿ ವಿವಾಧ ಬಗೆಹರಿಸಲಿದ್ದೇನೆ ಎಂದರು.ರಾಮನಗರ- ಗೋವಾ ಹೆದ್ದಾರಿ ಕಾಮಗಾರಿಯನ್ನು ಆದಷ್ಟು ಬೇಗನೆ ಪೂರ್ಣಗೊಳಿಸಲು ಪ್ರಯತ್ನ ಆರಂಭಿಸಿದ್ದೇನೆ ಎಂದರು.ರಾಜೀನಾಮೆ ನೀಡಬೇಕು: ರಾಜ್ಯದ, ಪ್ರಜಾಪ್ರಭುತ್ವದ, ಸಂವಿಧಾನದ ಮರ್ಯಾದೆಯನ್ನು ಉಳಿಸಲು ಸಿದ್ದರಾಮಯ್ಯನವರು ತಕ್ಷಣವೇ ರಾಜೀನಾಮೆ ನೀಡಬೇಕು. ಕಾಂಗ್ರೆಸ್ ಹೈಕಮಾಂಡ್ ತಕ್ಷಣ ಸಿದ್ದರಾಮಯ್ಯನವರ ರಾಜೀನಾಮೆಯನ್ನು ಪಡೆಯಬೇಕೆಂದು ಕಾಗೇರಿ ಆಗ್ರಹಿಸಿದರು. ಸಿದ್ದರಾಮಯ್ಯನವರು ಈವರೆಗೂ ರಾಜೀನಾಮೆ ನೀಡದಿರುವುದು ಖೇದದ ಸಂಗತಿ ಎಂದರು.ಮಾಜಿ ಶಾಸಕ ಸುನೀಲ ಹೆಗಡೆ, ಮಂಗೇಶ ದೇಶಪಾಂಡೆ ಹಾಗೂ ಇತರ ಪ್ರಮುಖರು ಇದ್ದರು.