ಸಾರಾಂಶ
ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಶನಿವಾರ ಪಟ್ಟಣದಲ್ಲಿ ತಾಲೂಕಿನ ಜೆಡಿಎಸ್ ಮುಖಂಡರು ಭೇಟಿಯಾಗಿ ಮುಂಬರುವ ಲೋಕಸಭಾ ಚುನಾವಣೆಯ ಸಿದ್ಧತೆಗಳ ಕುರಿತು ಚರ್ಚಿಸಿದರು.
ಕನ್ನಡಪ್ರಭ ವಾರ್ತೆ ಖಾನಾಪುರ
ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಶನಿವಾರ ಪಟ್ಟಣದಲ್ಲಿ ತಾಲೂಕಿನ ಜೆಡಿಎಸ್ ಮುಖಂಡರು ಭೇಟಿಯಾಗಿ ಮುಂಬರುವ ಲೋಕಸಭಾ ಚುನಾವಣೆಯ ಸಿದ್ಧತೆಗಳ ಕುರಿತು ಚರ್ಚಿಸಿದರು. ಪಟ್ಟಣದ ಸಮಾದೇವಿ ಗಲ್ಲಿಯ ರೇವಣಸಿದ್ಧಯ್ಯ ಹಿರೇಮಠ ಅವರ ನಿವಾಸದಲ್ಲಿ ನಡೆದ ಚರ್ಚೆಯಲ್ಲಿ ಜೆಡಿಎಸ್ ಮುಖಂಡರಾದ ರವಿ ಕಾಡಗಿ, ಮೇಘಾ ಕುಂದರಗಿ, ಬಸವಪ್ರಭು ಹಿರೇಮಠ, ವಕೀಲ ಚೇತನ ಮನೇರಿಕರ ಮತ್ತು ಇತರೆ ಮುಖಂಡರು ಹಾಜರಿದ್ದರು.ಒಂದು ಗಂಟೆ ಕಾಲ ನಡೆದ ಚರ್ಚೆಯಲ್ಲಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲ ನೀಡುವಂತೆ ಕಾಗೇರಿ ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರನ್ನು ಕೋರಿದರು. ತಾಲೂಕಿನ ಜೆಡಿಎಸ್ ಪಕ್ಷದಲ್ಲಿರುವ ಭಿನ್ನಾಭಿಪ್ರಾಯಗಳ ಬಗ್ಗೆ ಮತ್ತು ಇತ್ತೀಚೆಗೆ ಪಕ್ಷ ತ್ಯಜಿಸಿ ಕಾಂಗ್ರೆಸ್ ಸೇರಿರುವ ಜೆಡಿಎಸ್ ಮುಖಂಡರ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಅದನ್ನು ಮತ್ತೊಮ್ಮೆ ಪಕ್ಷವನ್ನು ಸಂಘಟಿಸುವಂತೆ ಕಾಗೇರಿ ಸೂಚಿಸಿದರು.
ಬಳಿಕ ವಿಶ್ವೇಶ್ವರ ಹೆಗಡೆ ಕಾಗೇರಿ ತಾಲೂಕಿನ ಗಂದಿಗವಾಡ ಗ್ರಾಮದ ಜೆಡಿಎಸ್ ಮುಖಂಡ ನಾಸೀರ ಬಾಗವಾನ ಅವರ ನಿವಾಸಕ್ಕೆ ತೆರಳಿ ಅವರೊಂದಿಗೂ ಚುನಾವಣೆಯ ಸಿದ್ಧತೆಗಳ ಕುರಿತು ಚರ್ಚಿಸಿ, ಸಹಾಯ-ಸಹಕಾರ ಕೋರಿದರು.ಈ ಸಂದರ್ಭದಲ್ಲಿ ಬಿಜೆಪಿ ಬ್ಲಾಕ್ ಅಧ್ಯಕ್ಷ ಸಂಜಯ ಕುಬಲ, ಶಾಸಕ ವಿಠ್ಠಲ ಹಲಗೇಕರ, ಲೋಕಸಭಾ ಚುನಾವಣೆಯ ತಾಲೂಕು ಉಸ್ತುವಾರಿ ಪ್ರಮೋದ ಕೊಚೇರಿ, ಮಾಜಿ ಶಾಸಕ ಅರವಿಂದ ಪಾಟೀಲ, ಧನಶ್ರೀ ದೇಸಾಯಿ, ಬಾಬುರಾವ್ ದೇಸಾಯಿ, ಜ್ಯೋತಿಬಾ ರೇಮಾಣಿ, ಕಿರಣ ಯಳ್ಳೂಕರ, ರಾಜೇಂದ್ರ ರಾಯ್ಕಾ, ಸದಾನಂದ ಪಾಟೀಲ ಸೇರಿದಂತೆ ತಾಲೂಕಿನ ಜೆಡಿಎಸ್-ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಇದ್ದರು.