ವಿಜಯಪುರ : ಮೋದಿ ಸರ್ಕಾರದ ಸಾಧನೆಗೆ ಕೈ ನಾಯಕರು ಹತಾಶ

| Published : Apr 22 2024, 02:15 AM IST / Updated: Apr 22 2024, 12:40 PM IST

ವಿಜಯಪುರ : ಮೋದಿ ಸರ್ಕಾರದ ಸಾಧನೆಗೆ ಕೈ ನಾಯಕರು ಹತಾಶ
Share this Article
  • FB
  • TW
  • Linkdin
  • Email

ಸಾರಾಂಶ

 ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಸಾಧನೆಗಳನ್ನು ಕಂಡು ಕಾಂಗ್ರೆಸ್ ನಾಯಕರು ಹತಾಶರಾಗಿದ್ದಾರೆ - ಉಸ್ತುವಾರಿ ಕಾಸುಗೌಡ ಬಿರಾದಾರ 

 ವಿಜಯಪುರ :  ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಸಾಧನೆಗಳನ್ನು ಕಂಡು ಕಾಂಗ್ರೆಸ್ ನಾಯಕರು ಹತಾಶರಾಗಿದ್ದಾರೆ. ಕಾಂಗ್ರೆಸ್‌ನಿಂದ 70 ವರ್ಷದಲ್ಲಾಗದ ಅಭಿವೃದ್ಧಿ ಕೆಲಸಗಳನ್ನು ಮೋದಿಯವರು ಹತ್ತು ವರ್ಷಗಳಲ್ಲಿ ಮಾಡಿ ತೋರಿಸಿದ್ದಾರೆ ಎಂದು ಬಿಜೆಪಿ ಪ್ರಚಾರ ಉಸ್ತುವಾರಿ ಕಾಸುಗೌಡ ಬಿರಾದಾರ ಟೀಕಿಸಿದರು.

ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಜನರಿಗಾಗಿ ಹಲವಾರು ಜನಪರ ಯೋಜನೆ ರೂಪಿಸಿ, ಕಾರ್ಯರೂಪಕ್ಕೆ ತಂದು ಜನರ ಸೇವೆಗಾಗಿ ಶ್ರಮಿಸುತ್ತಿದ್ದಾರೆ. ಸಂಸದ ರಮೇಶ ಜಿಗಜಿಣಿಗಿ ಅವರು ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಇಂದು ಕಾಂಗ್ರೆಸ್ ಸರ್ಕಾರ ಅಭಿವೃದ್ಧಿ ವಿಷಯದಲ್ಲಿ ಸಂಪೂರ್ಣ ವಿಫಲವಾಗಿದೆ. ಆದ್ದರಿಂದ ಈಗ ಮತ್ತೆ ಸಂಸದ ರಮೇಶ ಜಿಗಜಿಣಿಗಿ ಅವರಿಗೆ ಮತ ನೀಡಬೇಕು. ಅವರು ಜಿಲ್ಲೆಯಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿದ್ದು, ಈಗ ಮತ್ತೆ 3 ಲಕ್ಷದವರೆಗೂ ಅಧಿಕ ಅಂತರದಿಂದ ಗೆಲ್ಲಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ವಿಜಯಪುರ ನಗರ ಮತ ಕ್ಷೇತ್ರದಲ್ಲಿ‌ ಎರಡು ದಿನಗಳ ಕಾಲ ಬಿಜೆಪಿ ಪ್ರಚಾರಾರ್ಥ ಕಾರ್ಯವಾಗಿ ಉಸ್ತುವಾರಿಯಾಗಿ ನೇಮಕವಾಗಿದ್ದೇನೆ.‌ ನಗರದ ಎರಡು ದಿನಗಳ ಪ್ರಚಾರದಲ್ಲಿ ಬಿಜೆಪಿ ಪರ ಅತ್ಯುತ್ತಮ ಬೆಂಬಲ ವ್ಯಕ್ತವಾಗಿದೆ. ನಿಜಕ್ಕೂ ಅಭ್ಯರ್ಥಿ ಜಿಗಜಿಣಗಿ ಅವರು ಅತ್ಯಧಿಕ‌ ಮತಗಳಿಂದ‌ ಗೆದ್ದು ಬರುವ ವಿಶ್ವಾಸ ಮೂಡಿಸಿದೆ. ಸಂಸದ ರಮೇಶ ಜಿಗಜಿಣಗಿ, ಶಾಸಕ ಬಸನಗೌಡ ಪಾಟೀಲ ಯತ್ನಾಳ ಹಾಗೂ ಪಾಲಿಕೆ ಸದಸ್ಯರು ನಗರದಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳು ಮತ್ತು ಬದಲಾವಣೆಗಳನ್ನು ಜನತೆ ಮೆಚ್ಚಿಕೊಂಡಿದ್ದಾರೆ ಎಂದರು.

ಬಿಜೆಪಿ ಮುಖಂಡ ವಿವೇಕಾನಂದ ಡಬ್ಬಿ ಮಾತನಾಡಿ, ಕಾಂಗ್ರೆಸ್ ಅಭ್ಯರ್ಥಿ ರಾಜು ಅಲಗೂರ ಅವರು 1999 ಹಾಗೂ 2013 ರಲ್ಲಿ 2 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಆದರೆ 2004 ರಲ್ಲಿ ಮತ್ತೆ ಚುನಾವಣೆ ನಾಮಪತ್ರ ಸಲ್ಲಿಸಲು ಹೋದಾಗ ಅದೇ ನಾಗಠಾಣ ಮತ ಕ್ಷೇತ್ರದ ಕಾಂಗ್ರೆಸ್ ಕಾರ್ಯರ್ತರು ಅಲಗೂರರಿಗೆ ಯಾವುದೇ ಅಭಿವೃದ್ಧಿ ಕಾರ್ಯಕ್ರಮಗಳನ್ನು ಮಾಡಿಲ್ಲ ಎಂದು ನಾಮಪತ್ರವನ್ನು ಸಲ್ಲಿಸಲು ಅಡ್ಡಿಪಡಿಸಿದರು. 

ಅಲಗೂರ ಅವರು ಯಾವುದೇ ಅಭಿವೃದ್ಧಿ ಕಾರ್ಯ ಮಾಡುತ್ತಿಲ್ಲ ಎಂಬ ಕಾರಣಕ್ಕೆ 2018 ಹಾಗೂ 2023 ರಲ್ಲೂ ಇವರಿಗೆ ಕಾಂಗ್ರೆಸ್‌ ಪಕ್ಷದಿಂದ ಎಂಎಲ್ಎ ಟಿಕೆಟ್‌ ನೀಡಲಿಲ್ಲ. 2019 ರ ಲೋಕಸಭೆ ಚುನಾವಣೆಗೂ ಕೂಡ ಟಿಕೆಟ್‌ ನೀಡಲಿಲ್ಲ.

 ಇದನ್ನು ಕಾಂಗ್ರೆಸ್ ಅಭ್ಯರ್ಥಿ ಮರೆತಿದ್ದಾರೆ ಎಂದು ಕುಟುಕಿದರು.ಈ ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಅಭ್ಯರ್ಥಿ, ಸಂಸದ ರಮೇಶ ಜಿಗಜಿಣಗಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಾಬೂ ಮಾಶ್ಯಾಳ, ಪ್ರಧಾನ ಕಾರ್ಯದರ್ಶಿ ಈರಣ್ಣ ರಾವೂರ, ನಗರ ಮಂಡಲ ಅಧ್ಯಕ್ಷ ಶಂಕರ ಹೂಗಾರ ಇದ್ದರು.ಕೋಟ್‌2004 ರಲ್ಲಿ ಚುನಾವಣೆ ನಾಮಪತ್ರ ಸಲ್ಲಿಸಲು ಹೋದಾಗ ನಾಗಠಾಣ ಕ್ಷೇತ್ರದ ಕಾಂಗ್ರೆಸ್ ಕಾರ್ಯರ್ತರು ಅಲಗೂರರಿಗೆ ಯಾವುದೇ ಅಭಿವೃದ್ಧಿ ಕಾರ್ಯ ಮಾಡಿಲ್ಲ ಎಂದು ನಾಮಪತ್ರವನ್ನು ಸಲ್ಲಿಸಲು ಅಡ್ಡಿಪಡಿಸಿದ್ದರು. ಅಲಗೂರ ಅವರು ಯಾವುದೇ ಅಭಿವೃದ್ಧಿ ಕಾರ್ಯ ಮಾಡುತ್ತಿಲ್ಲ ಎಂಬ ಕಾರಣಕ್ಕೆ 2018 ಹಾಗೂ 2023 ರಲ್ಲೂ ಇವರಿಗೆ ಕಾಂಗ್ರೆಸ್‌ ಪಕ್ಷದಿಂದ ಎಂಎಲ್ಎ ಟಿಕೆಟ್‌ ನೀಡಲಿಲ್ಲ. 2019 ರ ಲೋಕಸಭೆ ಚುನಾವಣೆಗೂ ಕೂಡ ಟಿಕೆಟ್‌ ನೀಡಲಿಲ್ಲ. ಇದನ್ನು ಕಾಂಗ್ರೆಸ್ ಅಭ್ಯರ್ಥಿ ಮರೆತಿದ್ದಾರೆ.ವಿವೇಕಾನಂದ ಡಬ್ಬಿ, ಬಿಜೆಪಿ ಮುಖಂಡ