ಸಾರಾಂಶ
ರಾಮಕೃಷ್ಣ ದಾಸರಿ
ಕನ್ನಡಪ್ರಭ ವಾರ್ತೆ ರಾಯಚೂರುಪ್ರಸ್ತುತ ನಡೆಯುತ್ತಿರುವ ವಿಧಾನ ಪರಿಷತ್ ಚುನಾವಣೆಯಲ್ಲಿ ಜಿಲ್ಲೆಗೆ ಒಂದಲ್ಲ ಎರಡಲ್ಲ ಮೂರು ಜನರಿಗೆ ಟಿಕೆಟ್ ಕಲ್ಪಿಸಿಕೊಡುವುದರ ಮುಖಾಂತರ ಕೈ ಪಕ್ಷವು ಜಿಲ್ಲೆಗೆ ಬಂಪರ್ ಕೊಡುಗೆ ಕೊಟ್ಟು ಎಲ್ಲರಲ್ಲಿ ಅಚ್ಚರಿ ಮೂಡಿಸಿದೆ.
ಸಚಿವ ಎನ್.ಎಸ್.ಬೋಸರಾಜು, ಕೆಪಿಸಿಸಿ ಕಾರ್ಯಾಧ್ಯಕ್ಷ ಎ.ವಸಂತ ಕುಮಾರ ಹಾಗೂ ಹಿಂದಿನ ಅವಧಿಯಲ್ಲಿ ಕೆಪಿಸಿಸಿ ಯುವ ಘಟಕದ ರಾಜ್ಯಾಧ್ಯಕ್ಷರಾಗಿದ್ದ ಸಿಂಧನೂರಿನ ಬಸನಗೌಡ ಬಾದರ್ಲಿಗೆ ವಿಧಾನ ಪರಿಷತ್ ಸ್ಥಾನ ಲಭಿಸಿರುವುದು ಪಕ್ಷದ ವಲಯದಲ್ಲಿ ಹರ್ಷದ ಹೊನಲನ್ನು ಪಸರಿಸುವಂತೆ ಮಾಡಿದೆ.ಈ ಹಿಂದೆ ಕಾಂಗ್ರೆಸ್ ಸೇರಿ ಆಳುವ ಸರ್ಕಾರಗಳಿಂದ ಸದಾ ತಿರಸ್ಕಾರಕ್ಕೆ ಗುರಿಯಾಗುತ್ತಿದ್ದ ರಾಯಚೂರು ಜಿಲ್ಲೆಗೆ ಇದೀಗ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರವು ಆರಂಭದಿಂದಲೂ ಜಿಲ್ಲೆಗೆ ಆದ್ಯತೆ ನೀಡುತ್ತಾ ಬರುತ್ತಿರುವುದು ವಿಶೇಷವಾಗಿದೆ. ಈ ಅವಧಿ ಸರ್ಕಾರದಲ್ಲಿ ಜಿಲ್ಲೆಯ ನಾಲ್ಕು ಜನ ಶಾಸಕರ ಪೈಕಿ ಮೂರು ಜನರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಲಾಗಿದೆ. ಇದರ ಜೊತೆಗೆ ಎನ್.ಎಸ್.ಬೋಸರಾಜುರನ್ನು ಒಂದು ವರ್ಷದ ಅವಧಿಗೆ ಎಂಎಲ್ಸಿಯನ್ನಾಗಿ ಮಾಡಿ ಸಚಿವರನ್ನಾಗಿಸಿತ್ತು. ಇದೀಗ ಅವರ ಅವಧಿ ಮುಂದುವರೆಸಿ ಮತ್ತೆ ಚಾನ್ಸ್ ಕೊಡುವುದರ ಜೊತೆಗೆ ವಸಂತ ಕುಮಾರ, ಬಸನಗವಡ ಬಾದರ್ಲಿ ಅವರಿಗೂ ಎಂಎಲ್ಸಿಗೆ ಅವಕಾಶ ನೀಡಿದೆ.
ಖರ್ಗೆ ಭಂಟ ವಸಂತ:ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಭಂಟ ಕೆಪಿಸಿಸಿ ಕಾರ್ಯಾಧ್ಯಕ್ಷ ಎ.ವಸಂತ ಕುಮಾರ ಎಂಎಲ್ಸಿ ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ಕೊನೆಗೂ ಯಶಸ್ಸು ಕಂಡಿದ್ದಾರೆ. ಪಕ್ಷದಲ್ಲಿ ಡಿಸಿಸಿ, ಕಾಡಾ ಅಧ್ಯಕ್ಷರಾಗಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿದ್ದ ವಸಂತ ಕುಮಾರಗೆ ಇತ್ತೀಚೆಗಷ್ಟೇ ಕಾರ್ಯಾಧ್ಯಕ್ಷರನ್ನಾಗಿ ಮಾಡಲಾಗಿತ್ತು, ಇದೀಗ ಖರ್ಗೆ ಕೃಪೆಯಿಂದ ಅವರಿಗೆ ಎಂಎಲ್ಸಿ ಸ್ಥಾನ ಲಭಿಸಿದೆ.ಬಂಡಾಯದ ಅಸ್ತ್ರ ಸಿಕ್ಕ ಅವಕಾಶ:ಇನ್ನು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸಿಂಧನೂರು ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಬಸನಗೌಡ ಬಾದರ್ಲಿ ಅವರು ಬಂಡಾಯದ ಅಸ್ತ್ರ ಪ್ರಯೋಗಿಸಿದ್ದರು ಅದರ ಪರಿಣಾಮವಾಗಿ ಪಕ್ಷದ ವರಿಷ್ಠ ಸುರ್ಜೇವಾಲಾ ಅವರು ಬಂದು ಬಂಡಾಯ ಶಮನಗೊಳಿಸಿ, ಮುಂದಿನ ದಿನಗಳಲ್ಲಿ ಸೂಕ್ತ ಸ್ಥಾನ-ಮಾನ ಕಲ್ಪಿಸಿಕೊಡುವುದಾಗಿ ಭರವಸೆ ನೀಡಿದ್ದರು, ಅದರಂತೆ ಇಂದು ಅವರಿಗೆ ಎಂಎಲ್ಸಿ ಅವಕಾಶ ಸಿಕ್ಕಂತಾಗಿದೆ. ಮಾಜಿ ಸಿಎಂ ಜಗದೀಶ ಶೆಟ್ಟರ್ ಅವರಿಂದ ತೆರವಾಗಿರುವ ಸ್ಥಾನದ ಉಳಿದ ಅವಧಿಗೆ ಇವರನ್ನು ಆಯ್ಕೆ ಮಾಡಲಾಗುತ್ತಿದೆ.
ಬಣ ಸಂಘರ್ಷದ ಬಲಾಬಲಜಿಲ್ಲಾ ಕಾಂಗ್ರೆಸ್ ಸಮಿತಿಯಲ್ಲಿ ಬಣ ರಾಜಕೀಯದ ಬಲಾಬಲದ ಸಂಘರ್ಷದ ಫಲವಾಗಿಯೇ ಮೂರು ಎಂಎಲ್ಸಿ ಸ್ಥಾನಗಳು ಪಡೆಯಲು ಸಾಧ್ಯವಾಗಿದೆ. ಹೈಕಮಾಂಡ್ ಜೊತೆಗೆ ಉತ್ತಮ ಬಾಂಧವ್ಯ ಹೊಂದಿರುವ ಎನ್.ಎಸ್.ಬೋಸರಾಜು ಶಾಸಕರಾಗದೇ ಸಚಿವ ಸ್ಥಾನ ಪಡೆದು ಎಂಎಲ್ಸಿಯಾಗಿದ್ದರು. ಇದೀಗ ಅದೇ ಶಕ್ತಿ ಉಪಯೋಗಿಸಿ ಮುಂದಿನ ಅವಧಿಗೂ ಎಂಎಲ್ಸಿ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ಸು ಕಂಡಿದ್ದಾರೆ. ಅದೇ ರೀತಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆರ ಅನುಯಾಯಿ ಎ.ವಸಂತ ಕುಮಾರ ಸಹ ತಮ್ಮ ಶಕ್ತಿ ಪ್ರದರ್ಶಿಸಿ ಎಂಎಲ್ಸಿ ಸ್ಥಾನ ಪಡೆದುಕೊಂಡಿದ್ದಾರೆ. ಇನ್ನು ಡಿಸಿಎಂ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಆಪ್ತರ ವಲಯದಲ್ಲಿ ಗುರುತಿಸಿಕೊಂಡ ಸಿಂಧನೂರಿನ ಬಸನಗೌಡ ಬಾದರ್ಲಿ ಸಹ ಎಂಎಲ್ಸಿ ತಮ್ಮದಾಗಿಸಿಕೊಳ್ಳುವಲ್ಲಿ ಗೆದಿದ್ದಾರೆ.