ಸಾರಾಂಶ
ರವಿ ಮೇಗಳಮನಿ
ಕನ್ನಡಪ್ರಭ ವಾರ್ತೆ ಹಿರೇಕೆರೂರತಾಲೂಕಿನಲ್ಲಿ ಹಿಂಗಾರಿ ಬೆಳೆದ ಬಿಳಿ ಜೋಳ, ಹುರುಳಿ, ಹೆಸರು ಸೇರಿದಂತೆ ಇತರೆ ಬೆಳೆಗಳು ಮಳೆಯ ಕೊರತೆಯಿಂದ ಬಾಡುತ್ತಿದ್ದು, ಉತ್ತಮ ನಿರೀಕ್ಷೆ ಇಟ್ಟುಕೊಂಡಿದ್ದ ರೈತರು ಈಗ ಮತ್ತೆ ಕಂಗಾಲಾಗಿದ್ದಾರೆ. ಹಿಂಗಾರು ಬೋನಸ್ ಬೆಳೆ ಎಂದುಕೊಂಡಿದ್ದ ರೈತರ ಸ್ಥಿತಿ ಸಾಲದ ಸುಳಿಯಲ್ಲಿ ಬವಣೆ ಪಡುವಂತಾಗಿದೆ.
ಮುಂಗಾರಿನಲ್ಲಿ ಮಳೆರಾಯನ ಅವಕೃಪೆಯಿಂದ ಬಿತ್ತಿದ ಮೆಕ್ಕೆಜೋಳ, ಹತ್ತಿ, ಶೇಂಗಾ ಇನ್ನೂ ಹಲವು ಬೆಳೆಗಳು ಒಣಗಿದ್ದವು. ಸಾಧಾರಣ ಮಳೆಯಾದ ಕಾರಣ ತಾಲೂಕಿನ ಕೆಲವು ಪ್ರದೇಶಗಳ ರೈತರಿಗೆ ಮಾಡಿದ ಖರ್ಚು ಬಂದಿದ್ದರ ಹೊರತಾಗಿ ಉಳಿದ ರೈತರು ಕೈಸುಟ್ಟುಕೊಂಡಿದ್ದರು. ಬೇಸಿಗೆಗೆ ಬೇಕಾಗುವಷ್ಟು ಮೇವು ಸಂಗ್ರಹಿಸಲು ಕೆಲವರಿಗೆ ಸಾಧ್ಯವಾಯಿತು. ಇದರಿಂದ ನಿರಾಶರಾಗಿದ್ದ ರೈತರು ಪಾಲಿಗೆ ಬಂದದ್ದು ಪಂಚಾಮೃತ ಎಂದು ಸಮಾಧಾನ ಮಾಡಿಕೊಂಡು ಹಿಂಗಾರು ಬೆಳೆಗಳ ಮೇಲೆ ಭರವಸೆ ಇಟ್ಟುಕೊಂಡಿದ್ದರು. ಈಗ ಅದು ಕೂಡ ಕೈಕೊಟ್ಟಿದ್ದು, ಗಾಯದ ಮೇಲೆ ಬರೆ ಎಳೆದಂತಾಗಿದೆ. ಮುಂಗಾರಿನಲ್ಲಿ ಸಮರ್ಪಕ ಮಳೆಯಾಗದ ಕಾರಣ ಹಿಂಗಾರಿನಲ್ಲಾದರೂ ಮಳೆಯಾಗುತ್ತದೆ ಎಂಬ ನಿರೀಕ್ಷೆ ರೈತರದಾಗಿತ್ತು. ಪ್ರಾರಂಭದಲ್ಲಿ ಹಿಂಗಾರು ಮಳೆ ಆಶಾದಾಯಕವಾಗಿ ಆಗುವ ಲಕ್ಷಣ ಗೋಚರಿಸಿತು. ಇದರಿಂದ ತಾಲೂಕಿನಲ್ಲಿ ಅತಿ ಹೆಚ್ಚು ರೈತರು ಹುರಳಿ ಮತ್ತು ಜೋಳ ಬಿತ್ತನೆ ಮಾಡಿದ್ದರು. ಬಿತ್ತನೆಯಾಗಿ ತಿಂಗಳುಗಳೇ ಕಳೆದರೂ ಹಿಂಗಾರು ಮಳೆ ಬಿದ್ದಿಲ್ಲ. ಇನ್ನು ಬೋರ್‌ವೇಲ್ ನಂಬಿದ ರೈತರು ಸಹ ಅಂತರ್ಜಲ ಕುಸಿತದಿಂದ ತಾವು ಬಿತ್ತಿದ ಬೆಳೆಗಳನ್ನು ರಕ್ಷಿಸಿಕೊಳ್ಳಲು ಆಗುತ್ತಿಲ್ಲ. ಹಾಗಾಗಿ ಬೆಳೆ ಪೈರಿನ ಹಂತದಲ್ಲೇ ಒಣಗುತ್ತಿದ್ದು, ರೈತರು ಹತಾಶರಾಗಿದ್ದಾರೆ.ಬೆಳೆ ವಿಮೆಯತ್ತ ರೈತರ ಚಿತ್ತ: ಹಿಂಗಾರು ಕೈಕೊಟ್ಟ ಹಿನ್ನೆಲೆಯಲ್ಲಿ ರೈತರು ತಾವು ಬೆಳೆಗೆ ಮಾಡಿದ ಖರ್ಚಾನ್ನಾದರೂ ಪಡೆಯಲು ಬೆಳೆವಿಮೆಗೆ ಅವಲಂಬಿತರಾಗಿದ್ದು, ಸರ್ಕಾರ ಬೆಳೆ ವಿಮೆ ಮತ್ತು ಬೆಳೆ ಪರಿಹಾರ ನೀಡುತ್ತೆ ಎಂಬ ಆಶಾಭಾವನೆ ಹೊಂದಿರುವ ರೈತರ ಆಸರೆಗೆ ಸರ್ಕಾರ ಧಾವಿಸುತ್ತದೆಯೋ, ಇಲ್ಲವೋ ಎಂಬದನ್ನು ಕಾದು ನೋಡಬೇಕಿದೆ.
ತಾಲೂಕಿನಲ್ಲಿ 2022-23ನೇ ಸಾಲಿನ ಹಿಂಗಾರು ಹಂಗಾಮಿನಲ್ಲಿ ರೈತರು ಹುರುಳಿ ಹೆಚ್ಚು ಬಿತ್ತನೆ ಮಾಡಿದ್ದು, ನಾನಾ ಹಂತದಲ್ಲಿ ಬಿತ್ತನೆಯಾಗಿರುವ ಬಿಳಿ ಜೋಳ, ಹುರುಳಿ ಬೆಳೆ ಮಳೆಯಿಲ್ಲದ ಕಾರಣ ಒಣಗುತ್ತಿದೆ. ಕಳೆದ ವಾರ ಮೋಡದ ವಾತಾವರಣವಿದ್ದರೂ ಮಳೆ ಬೀಳಲಿಲ್ಲ. ಬೆಳೆ ಒಣಗುತ್ತಿರುವ ಬಗ್ಗೆ ಬೇಸರವಾಗಿದೆ ಎನ್ನುತ್ತಾರೆ ಸಹಾಯಕ ಕೃಷಿ ನಿರ್ದೇಶಕ ಎಚ್.ಬಿ. ಗೌಡಪ್ಪಗೌಡ್ರ.ಈ ಸಲ ಮುಂಗಾರು ಬೆಳೆ ಬಾರದ ಕಾರಣ ಹಿಂಗಾರು ಬೆಳೆ ಚೆನ್ನಾಗಿ ಬರುತ್ತೆ ಎಂಬ ಆಶಾಭಾವನೆ ಇತ್ತು. ಮಳೆ ಬಾರದ ಕಾರಣ ಹಿಂಗಾರಿ ಬೆಳೆ ಸಹ ದಿನೇ ದಿನೇ ಒಣಗುತ್ತಿದೆ. ರೈತರು ಮಾಡಿದ ಖರ್ಚು ಹಿಂಪಡೆಯಲು ಬೆಳೆ ವಿಮೆ ಮತ್ತು ಸರ್ಕಾರ ನೀಡುವ ಬೆಳೆ ಪರಿಹಾರದ ಮೇಲೆ ಅವಲಂಬನೆ ಆಗಬೇಕಿದೆ. ಆ ನಿಟ್ಟಿನಲ್ಲಿ ಸರ್ಕಾರ ರೈತರ ಪರವಾಗಿ ನಿಲ್ಲಬೇಕು ಎನ್ನುತ್ತಾರೆ ಹೋಲಬಿಕೊಂಡ ಗ್ರಾಮದ ರೈತ ರಾಜಶೇಖರ ದೂದಿಹಳ್ಳಿ.