ಕಕ್ಕೆಹೊಳೆ: ಶ್ರೀ ಅಯ್ಯಪ್ಪ ಸ್ವಾಮಿ ದೇವಳದಲ್ಲಿ ಮಂಡಲ ಪೂಜೆ

| Published : Dec 28 2024, 01:02 AM IST

ಸಾರಾಂಶ

ಕಕ್ಕೆಹೊಳೆ ಬಳಿಯ ಶ್ರೀ ಮುತ್ತಪ್ಪ ಸ್ವಾಮಿ ಮತ್ತು ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಗುರುವಾರ ಮಂಡಲ ಪೂಜಾ ಮಹೋತ್ಸವ ಶ್ರದ್ಧಾಭಕ್ತಿಯಿಂದ ನಡೆಯಿತು.

ಕನ್ನಡಪ್ರಭ ವಾರ್ತೆ ಸೋಮವಾರಪೇಟೆ

ಕಕ್ಕೆಹೊಳೆ ಬಳಿಯ ಶ್ರೀ ಮುತ್ತಪ್ಪ ಸ್ವಾಮಿ ಮತ್ತು ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಗುರುವಾರ ಮಂಡಲ ಪೂಜಾ ಮಹೋತ್ಸವ ಶ್ರದ್ಧಾಭಕ್ತಿಯಿಂದ ನಡೆಯಿತು.

ಬೆಳಗ್ಗೆ 5 ಗಂಟೆಗೆ ಕ್ಷೇತ್ರದ ಪ್ರಧಾನ ಅರ್ಚಕ ಮಣಿಕಂಠನ್ ನಂಬೂದರಿ ಅವರ ತಾಂತ್ರಿಕತ್ವದಲ್ಲಿ ಶ್ರೀ ಮಹಾಗಣಪತಿ ಹೋಮದೊಂದಿಗೆ ಪೂಜಾ ಕೈಂಕರ್ಯಗಳು ಪ್ರಾರಂಭಗೊಂಡವು.ನಂತರ ದೇವಾಲಯದ ಬಾಗಿಲು ತೆರೆಯಲಾಯಿತು. ನಿರ್ಮಲ್ಯ ದರ್ಶನದ ಬಳಿಕ ಉಷಾಪೂಜೆ ನಡೆದು, ಬೆಳಗ್ಗೆ 9ಕ್ಕೆ ಶ್ರೀ ಅಯ್ಯಪ್ಪ ಸ್ವಾಮಿಗೆ ತುಪ್ಪದ ಅಭಿಷೇಕ ನೆರವೇರಿಸಲಾಯಿತು.ಮಧ್ಯಾಹ್ನ ಶ್ರೀ ಅಯ್ಯಪ್ಪ ಸ್ವಾಮಿಯನ್ನು ವಿಶೇಷವಾಗಿ ಆಭರಣಗಳೊಂದಿಗೆ ಸಿಂಗರಿಸಿ ಉಚ್ಚ ಪೂಜೆಯನ್ನು ನೆರವೇರಿಸಿ ನಂತರ ಮಹಾಮಂಗಳಾರತಿ ಮಾಡಲಾಯಿತು.ಸಂಜೆ ದೀಪಾರಾಧನೆಯೊಂದಿಗೆ ಪೂಜಾ ಕಾರ್ಯಗಳು ನೆರವೇರಿದವು. ನಂತರ 6.30ಕ್ಕೆ ಭಕ್ತರು ಹಾಗೂ ಅಯ್ಯಪ್ಪ ವೃತಧಾರಿಗಳ ಭಜನೆಯೊಂದಿಗೆ ಪಡಿಪೂಜೆಯನ್ನು ನಡೆಸಲಾಯಿತು. ನಂತರ ದೇವರಿಗೆ ಪುಷ್ಪಾಭಿಷೇಕ ನಡೆಸಿದ ಬಳಿಕ ಮಹಾಮಂಗಳಾರತಿ, ಹರಿವಾರಾಸನದೊಂದಿಗೆ ಮಂಡಲ ಪೂಜೋತ್ಸವ ಸಂಪನ್ನಗೊಂಡಿತು.

ಕ್ಷೇತ್ರದಲ್ಲಿ ಭಕ್ತರಿಗೆ ಅನ್ನದಾನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಪೂಜಾ ಕಾರ್ಯದಲ್ಲಿ ಅರ್ಚಕರಾದ ಜಗದೀಶ್‌ ಉಡುಪ, ಚಂದ್ರಶೇಖರ್ ಭಟ್, ಶ್ರೀರಂಗ ಭಟ್, ಚಂದ್ರಹಾಸ ಭಟ್ ಮತ್ತಿರರು ಸಹಕರಿಸಿದರು.

ಕ್ಷೇತ್ರದ ಅಧ್ಯಕ್ಷ ವಿನೋದ್ ಕುಮಾರ್ ನೇತೃತ್ವದಲ್ಲಿ ಪದಾಧಿಕಾರಿಗಳು, ಸದಸ್ಯರು ಹಾಗೂ ಭಕ್ತರ ಸಹಕಾರದೊಂದಿಗೆ ಮಂಡಲ ಪೂಜೋತ್ಸವ ಯಶಸ್ವಿಯಾಗಿ ಜರುಗಿತು.