ಕಲಬುರಗಿ ಜಿಲ್ಲೆಯನ್ನು ಗೂಂಡಾ ಸಂಸ್ಕೃತಿ ಆಳುತ್ತಿದೆ: ರವಿಕುಮಾರ್‌

| Published : May 17 2024, 12:30 AM IST

ಸಾರಾಂಶ

ಕಲಬುರಗಿ ಉತ್ತಮ ಸಂಸ್ಕೃತಿಯಿಂದ ಕೂಡಿದ ಜಿಲ್ಲೆಯಾದರೂ ಗೂಂಡಾಗಳಿಂದಾಗಿ ಕೆಟ್ಟಿದೆ, ಗೂಂಡಾ ಸಂಸ್ಕೃತಿ ಪೋಷಿಸುತ್ತಿರೋರು ಯಾರೆಂದು ಎಲ್ಲರಿಗೂ ಗೊತ್ತಿದೆ. ಸೆಕೆಂಡ್‌ ಹ್ಯಾಂಡ್‌ ಕಾರ್‌ ವರ್ತಕನನ್ನು ಅಪಹರಿಸಿ ಮರ್ಮಾಂಗ ಸುಟ್ಟ ಪ್ರಕರಣ ಹೇಯ ಕೃತ್ಯ.

ಕನ್ನಡಪ್ರಭ ವಾರ್ತೆ ಕಲಬರಗಿ

ಕಲಬುರಗಿ ಜಿಲ್ಲೆಯಲ್ಲಿದ್ದಂತಹ ಅತ್ಯುತ್ತಮ ಸಂಸ್ಕೃತಿ, ಪರಂಪರೆಯನ್ನ ಸಚಿವ ಪ್ರಿಯಾಂಕ್‌ ಖರ್ಗೆ ಹಾಳುಗೆಡವಿದ್ದಾರೆಂದು ಎಂಎಲ್‌ಸಿ ಎನ್‌. ರವಿಕುಮಾರ್‌ ಆರೋಪಿಸಿದ್ದಾರೆ.

ಗುರುವಾರ ಇಲ್ಲಿನ ವೀರಶೈವ ಕಲ್ಯಾಣ ಮಂಟಪದಲ್ಲಿ ಈಶಾನ್ಯ ಪದವೀಧರ ಮತಕ್ಷೇತ್ರದಿಂದ ಪಕ್ಷದ ಅಭ್ಯರ್ಥಿ ಅಮರನಾಥ ಪಾಟೀಲ್‌ ನಾಮಪತ್ರ ಸಲ್ಲಿಕೆ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ಬಹಿರಂಗ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಕಲಬುರಗಿ ಉತ್ತಮ ಸಂಸ್ಕೃತಿಯಿಂದ ಕೂಡಿದ ಜಿಲ್ಲೆಯಾದರೂ ಗೂಂಡಾಗಳಿಂದಾಗಿ ಕೆಟ್ಟಿದೆ, ಗೂಂಡಾ ಸಂಸ್ಕೃತಿ ಪೋಷಿಸುತ್ತಿರೋರು ಯಾರೆಂದು ಎಲ್ಲರಿಗೂ ಗೊತ್ತಿದೆ. ಸೆಕೆಂಡ್‌ ಹ್ಯಾಂಡ್‌ ಕಾರ್‌ ವರ್ತಕನನ್ನು ಅಪಹರಿಸಿ ಮರ್ಮಾಂಗ ಸುಟ್ಟ ಪ್ರಕರಣ ಹೇಯ ಕೃತ್ಯ. ಕಲಬುರಗಿ ಕಳಂಕ ಎಂದು ಬಣ್ಣಿಸುತ್ತ ಜಿಲ್ಲೆಯಲ್ಲಿ ಕಾನೂನು- ಸುವ್ಯವಸ್ಥೆ ಹದಗೆಟ್ಟಿದೆ ಎಂದರು.

ಪತ್ರಿಕೆ, ಟೀವಿ ನೋಡಿದರೆ ಸಾಕು, ಕಲಬುರಗಿಯಲ್ಲಿ ಇತ್ತೀಚೆಗೆ ಸಂಭವಿಸಿರುವ ಅಪರಾಧ ಘಟನೆಗಳೇ ದೊಡ್ಡದಾಗಿ ವರದಿಯಾಗುತ್ತಿವೆ. ಅಸಹ್ಯವೆನಿಸುತ್ತಿದೆ, ಇಲ್ಲಿನ ಸಾಮಾನ್ಯ ಜನರ ಪಾಡು ದೇವರೇ ಬಲ್ಲ ಎಂಬಂತಾಗಿದೆ. ಇದಕ್ಕೆಲ್ಲ ಜಿಲ್ಲಾ ಉಸ್ತುವಾರಿ ಸಚಿವರತ್ತ ಬೆರಳು ತೋರುತ್ತ ಜಿಲ್ಲೆಯ ಸಂಸ್ಕೃತಿ ಹಾಳು ಮಾಡಿರುವ ಕೀರ್ತಿ ಅವರಿಗೆ ಸಲ್ಲುತ್ತದೆಂದರು.

ಇಂತಹ ಗೂಂಡಾ ಸಂಸ್ಕೃತಿಯಿಂದ ಕಲಬುರಗಿಯನ್ನು ರಕ್ಷಿಸಲು ಪದವೀಧರರು ಪರಿಷತ್‌ನ ಚುನಾವಣೆಯಲ್ಲಿ ಈಶಾನ್ಯದಿಂದ ಕಮಲ ಅರಳುವಂತೆ ಮಾಡಬೇಕು, ಆ ಮೂಲಕ ಗೂಂಡಾ ಸಂಸ್ಕೃತಿ ಪೋಷಿಸುತ್ತಿರೋರಿಗೆ ಉತ್ತರ ನೀಡಬೇಕಾಗಿದೆ ಎಂದು ರವಿಕುಮಾರ್‌ ಹೇಳಿದರು.

ಈಶಾನ್ಯ ಪದವೀಧರ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಮರನಾಥ ಪಾಟೀಲ್‌ ಮಾತನಾಡುತ್ತ, ತಾವು ಹಿಂದೆ ಎಂಎಲ್ಸಿಯಾಗಿದ್ದಾಗಲೂ ಪದವೀಧರರ ಸಮಸ್ಯಗಳಿಗೆ ಸ್ಪಂದಿಸುವ ಪ್ರಾಮಾಣಿಕ ಯತ್ನ ಮಾಡಿದ್ದಾಗಿ ಹೇಳುತ್ತ ಈಗಲೂ ಪದವೀಧರರು ಬೆಂಬಲಿಸಿದರೆ ಸದನದಲ್ಲಿ ಒಳಗು, ಹೊರಗು ಕೆಲಸ ಮಾಡುವೆ, ಪದವೀಧರರ ಹೀತಾಸಕ್ತಿ ಕಾಪಡುವೆ ಎಂದರು.

ಕಲಂ371(ಜೆ) ಅಡಿಯಲ್ಲಿ ಮೀಸಲಾತಿ ಸಿಗುವಂತಾಗಬೇಕು, ಕಕ ಭಾಗದಲ್ಲಿರುವ ಖಾಲಿ ಹುದ್ದೆಗಳ ನಿಖರ ಭರ್ತಿಯಾಗಬೇಕು, ಈ ಭಾಗದಲ್ಲಿನ ಪದವೀಧರರು ಸೇವೆಗೆ ಅವಕಾಶ ನೀಡಿದಲ್ಲಿ ತಾವು ಹರಪನಹಳ್ಳಿಯಿಂದ ಬೀದರ್‌ನ ಔರಾದ್‌ವರೆಗೂ ಇರುವ ಈಶಾನ್ಯ ಪದವೀಧರರ ಸೇವೆಗೆ ಸದಾ ಸಿದ್ಧನೆಂದರು.

ಶಾಸಕ ಡಾ. ಅವಿನಾಶ ಜಾಧವ್‌, ಮಾಜಿ ಶಾಸಕ ಸುಭಾಸ ಗುತ್ತೇದಾರ್‌, ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ್‌ ರದ್ದೇವಾಡಗಿ, ಬಿಜೆಪಿ ನಗರಾಧ್ಯಕ್ಷ ಚಂದು ಪಾಟೀಲ್‌, ಎಂಎಲ್‌ಸಿ ಸುನೀಲ್‌ ವಲ್ಯಾಪೂರೆ, ಮೇಯರ್‌ ವಿಶಾಲ ಧರ್ಗಿ, ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್‌ ರೇವೂರ್‌, ವಿದ್ಯಾಸಾಗರ ಕುಲಕರ್ಣಿ, ರಾಘವೇಂದ್ರ ಕೋಗನೂರ್‌ ಸೇರಿದಂತೆ ಬಿಜೆಪಿ ವಿವಿಧ ಮೋರ್ಚಾಗಳ ಮುಖ್ಯಸ್ಥರು, ಜಿಲ್ಲಾ ಮಟ್ಟದ ಮುಖಂಡರು, ಪದವೀಧರರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.