ಸಾರಾಂಶ
ಕನ್ನಡಪ್ರಭ ವಾರ್ತೆ ಕಲಬುರಗಿ
ರೈತ ಸಮುದಾಯದ ಸುಗ್ಗಿ ಕಾಲದ ಹಬ್ಬ ರೈತರು ಆಚರಿಸುವ ಎಳ್ಳು ಅಮಾವಾಸ್ಯೆ ಗುರುವಾರ ಜಿಲ್ಲಾದ್ಯಂತ ಮಣ್ಣಿನ ಮಕ್ಕಳು, ಪರಿವಾರ ಸಮೇತರಾಗಿ ಸಂಭ್ರಮದಿಂದ ಆಚರಿಸಿದರು.ಹಬ್ಬದಂದು ತಮ್ಮ ತಮ್ಮ ಹೊಲಗಳಿಗೆ ಹೋಗಿ ಭೂಮಿ ತಾಯಿಗೆ ಪೂಜೆ ಮಾಡಿ, ವಿಶೇಷ ಅಡುಗೆ ಮಾಡಿ ಹೊಲದಲ್ಲಿಯೇ ಕುಟುಂಬ ಸಮೇತ ಊಟ ಮಾಡಿ ಸಂಭ್ರಮಸಿದರು. ಜೊತೆಗೆ ಬಂಧು ಬಾಂಧರನ್ನು ಕರೆದೊಯ್ದು ಸಂಭ್ರಮಪಟ್ಟರು. ಹೊಲಗದ್ದೆಗಳಲ್ಲಿ ರೈತರೆಲ್ಲರೂ ಗುಂಪಾಗಿ ಕುಳಿತು ಹಬ್ಬದ ಸಂತಸದಲ್ಲಿರುವ ನೋಟಗಳಿಂದು ಜಿಲ್ಲಾದ್ಯಂತ ಎಲ್ಲೆಡೆ ಕಂಡವು.
ಗ್ರಾಮೀಣ, ನಗರದಲ್ಲಿ ವಾಸಿಸುವ ರೈತಾಪಿ ಹಿನ್ನಲೆಯ ಪ್ರತಿಯೊಂದು ಕುಟುಂಬದ ಮನೆ ಮಂದಿ ಅಕ್ಕ ಪಕ್ಕದ ಜನರೊಂದಿದೆ ಮನೆಯಲ್ಲಿ ಮಾಡಿದ ತರತರಹದ ಆಹಾರ ಪದಾರ್ಥಗಳನ್ನು ಕಟ್ಟಿಕೊಂಡು ಜೊತೆ ಜೊತೆಯಾಗಿ ಜನರು ಕೂಡಿಕೊಂಡು ಮೊದಲು ಎತ್ತಿನಬಂಡಿಯಲ್ಲಿ ಜಮೀನ ಸಮೀಪವಿದ್ದಲ್ಲಿ ಕಾಲುನಡೆಗೆಯಲ್ಲಿ, ಹೋಗುವ ದೃಶ್ಯಗಳು ಕಂಡವು.ಎಳ್ಳ ಅಮಾವ್ಯಾಸೆಯನ್ನು ನೆಲದಾಯಿ ಬಯಕೆ ಊಟ, ಚರಗ ಚೆಲ್ಲುವ ಹಬ್ಬ ಹೀಗೆ ಬೇರೆ ಬೇರೆ ಹೆಸರಿನಲ್ಲಿ ಕರೆಯುವ ವಾಡಿಕೆ. ತುಂಬು ಗರ್ಭಿಣಿಯ ಮಹಿಳೆಗೆ ಹೇಗೆಲ್ಲಾ ತರಹತರದ ಅಡಿಗೆ ಮಾಡಿ ಊಣಬಡಿಸುವ ಮೂಲಕ ಅವಳ ಬಯಕೆಗಳನ್ನು ಈಡೆರಿಸುವಂತೆ, ಜಮೀನದಲ್ಲಿ ಬಿತ್ತಿದ ಬೆಳೆಬೆಳೆದು ಹಸಿರಿನಿಂದ ಕಂಗೋಳಿಸುವ ಭೂತಾಯಿಯನ್ನು ತುಂಬು ಗರ್ಭಣಿಯ ರೂಪದಲ್ಲಿ ಕಾಣುವ ನಮ್ಮ ಒಕ್ಕಲಿಗರು ಬಯಕೆ ಊಟವನ್ನು ಮಾಡಿಸುವ ಸಂಪ್ರದಾಯ ನೆಲದಾಯಿ ಬಯಕೆ ಊಟದಬ್ಬದ ಹಿನ್ನಲೆಯಾದರೆ ಚರಗ ಚೆಲ್ಲುವ ಹಬ್ಬದ ರೂಢಿಯಲ್ಲಿ ಅಂದು ಹೊಲದ ಬನ್ನಿಗಿಡದ ಕೆಳಗೆ ಸಣ್ಣ ಸಣ್ಣ ಕಲ್ಲುಗಳ ಪಾಂಡವರ ಮತ್ತು ಕಳ್ಳರ ಉತ್ಸವ ಮೂರ್ತಿಗಳಿಗೆ ವಿಭೂತಿ ಕುಂಕುಮ ಆರಿಷಿಣದಿಂದ ಸಿಂಗರಿಸಿ ಭಕ್ತಿಭಾವದಿಂದ ಪೂಜೆ ಸಲ್ಲಿಸುವ ಸಂಪ್ರದಾಯದಲ್ಲಿ ನಮ್ಮ ಪ್ರಕೃತಿ ಪ್ರೇಮ ಕಾಣಬಹುದಾಗಿದೆ.
ಪೂಜೆಯ ಸಮಯದಲ್ಲಿ ಮಾಡಿದ ನೈವೇದ್ಯವನ್ನು ಇಡಿ ಹೊಲದ ಸುತ್ತ ತಿರುಗಿ ಚರಗ ಚೆಲ್ಲುವರು. ಬೆಳೆ ವಿಫುಲವಾದ ಇಳುವರಿ ಬರುವಂತಾಗಲೆಂದು ಭೂತಾಯಿಗೆ ಬಯಕೆ ಊಟ ಮಾಡಿಸುವ ಅಚಲವಾದ ನಂಬಿಕೆ ನಮ್ಮ ಪೂರ್ವಿಕರಿಗಿತ್ತು. ಇದೇ ನಂಬಿಕೆಯಂತೆಯೇ ಇಂದೂ ಕೂಡಾ ರೈತರು ಕುಟುಂಬ ಸಮೇತರಾಗಿ ಸುಮಂಗಲೀಯರೊಂದಿಗೆ ಸೇರಿಕೊಂಡು ಹೊಲದಲ್ಲೆಲ್ಲಾ ಚೆರಗಾ ಚೆಲ್ಲಿದರು.ಎಳ್ಳು ಹಚ್ಚಿದ ಜೋಳ ಸಜ್ಜೆಯ ರೋಟ್ಟಿ ಚಪಾತಿ, ಶೇಂಗಾ, ಅಗಸಿ, ಕೆಂಪು ಮಣಸಿಕಾಯಿ ಚಟ್ನಿ, ತರಹ ತರಹದ ಉಪ್ಪಿನಕಾಯಿ, ಮೊಸರು, ಎಣ್ಣೆ ಬದನಿಕಾಯಿ, ಹೆಸರು, ಮಡಕಿ, ಹುಳ್ಳಿ ಕಾಳಿನಪಲ್ಯ, ಜೊತೆಗೆ ಕುಚ್ಚಿದ ಮೆಣಸಿಕಾಯಿ, ಪುಂಡಿ, ಸಬ್ಬಸ್ಸಿಗಿ ಪಲ್ಲೆ ಮತ್ತು ಮೂಲಂಗಿ, ಮೆಂತೆ, ಹಕ್ಕರಕಿ, ಹಸಿ ಉಳ್ಳಾಗಡ್ಡಿ, ಗಜ್ಜರಿ, ಸವತೆ ಕಾಯಿ, ಈರುಳ್ಳಿಯಂತಹ ಹಸಿ ತರಕಾರಿಗಳು, ಕಡಬು ಕರಚಿಕಾಯಿ ಸೇಂಗಾ, ಎಳ್ಳು ಎಣ್ಣೆಹೊಳಿಗೆಗಳು. ಕರಗಡಬು, ಸುಳ್ಳಹೊಳಿಗೆ ವಿವಿಧ ತರಹದ ಖ್ಯಾದ್ಯ ಉಂಡಿ ಚಿತ್ರನ್ನ, ಮೊಸರನ್ನ, ಅನ್ನಸಾರು, ಸಂಡಿಗೆ, ಹಪ್ಪಳ , ಬಜಿ ಮಿರ್ಚಿ ಸೇರಿದಂತೆ ತರಹೇವಾರಿ ಪದಾರ್ಥಗಳಿಂದ ಕೂಡಿದ ಭೋಜನ ಸವಿದರು.
ಎಳ್ಳ ಅಮಾವ್ಯಾಸೆಯ ಆಚರಣೆ ಹಿಂದೆ ವೈಜ್ಞಾನಿಕ ಸತ್ಯಯೊಂದು ಅಡಗಿದೆ. ಈ ಹಬ್ಬದ ಆಚರಣೆಯ ಸನಿಯದಲ್ಲಿ ಹಿಂಗಾರು ಪಸಲು ಬೆಳೆದು ನಿಂತಿರುತ್ತದೆ. ಕಡಲಿ, ಜೋಳ ಬೆಳೆಗೆ ಕಾಯಿಕೊರಕ ಹುಳು ಬಿದ್ದು ಹಾನಿಮಾಡುತ್ತದೆ. ಆದ್ದರಿಂದ ಚರಗ ಸಮಯದಲ್ಲಿ ಚೆಲ್ಲುವ ಸಿಹಿಖಾದ್ಯವನ್ನು ತಿನ್ನಲು ಹಕ್ಕಿಗಳು ಬಂದಾಗ ಹೊಲದ ಫಸಲಿಲ್ಲರುವ ಕಾಯಿಕೊರಕ ಹುಳು ಕಣ್ಣಿಗೆ ಬಿಳುತ್ತದೆ. ಆಗ ಹಕ್ಕಿಗಳು ಕಾಯಿಕೊರಕ ಹುಳುಗಳನ್ನು ತಿನ್ನುತ್ತದೆ. ಇದರಿಂದ ಪಸಲು ರಕ್ಷಣಗೊಂಡು ಉತ್ತಮವಾಗಿ ಬೆಳೆಯುತ್ತವೆ.ಹೊಲಗದ್ದೆ ಇಲ್ಲದವರು ಕುಟುಂಬ ಸಮೇತರಾಗಿ ಕಲಬುರಗಿಯಲ್ಲಿ ಉದ್ಯಾನವನಗಳಲ್ಲಿ ಸೇರಿ ಊಟ ಸವದರು. ಹಸಿರಿನಲ್ಲಿ ಕುಳಿತು ಅತ್ತಿತ್ತ ವಿಹರಿಸುತ್ತ ಕುಟುಂಬದವರೊಂದಿಗೆ ಮಾತುಕತೆ ನಡೆಸಿದ ನೋಟಗಳು ಕಂಡವು. ಈ ಬಾರಿ ಹಸಿ ಬರಗಾಲ, ಇಳುವರಿಯಲ್ಲಿ ಭಾರಿ ಕುಸಿತ ಕಂಡಿದ್ದರೂ ರೈತರ ಯಳ್ಳಮವಾಸ್ಯೆ ಸಂಭ್ರಮಕ್ಕೆ ಕೊರತೆ ಆಗಿರಲಿಲ್ಲ ಎಂಬುದು ಅವರ ಸಂಭ್ರಮದಲ್ಲಿಯೇ ಕಂಡು ಬಂತು.