ಸ್ಟ್ಯಾನ್‍ಫೋರ್ಡ್ ವಿಜ್ಞಾನಿಗಳ ಪಟ್ಟಿಯಲ್ಲಿ ಜ್ಞಾನಗಂಗೆ ಪ್ರಾಧ್ಯಾಪಕರು
KannadaprabhaNewsNetwork | Published : Oct 09 2023, 12:45 AM IST
ಸ್ಟ್ಯಾನ್‍ಫೋರ್ಡ್ ವಿಜ್ಞಾನಿಗಳ ಪಟ್ಟಿಯಲ್ಲಿ ಜ್ಞಾನಗಂಗೆ ಪ್ರಾಧ್ಯಾಪಕರು
ಸಾರಾಂಶ
ಕಲಬುರಗಿ ಕೀರ್ತಿ ಪತಾಕೆ ಜಗದಗಲ ಹಾರಿಸಿದ ಜ್ಞಾನಗಂಗೆ ಸಿಯುಕೆ ಪ್ರೊಫೆಸರ್‌ಗಳು
ಕಲಬುರಗಿ: ಕಲಬುರಗಿಯಲ್ಲಿರುವ ಗುಲ್ಬರ್ಗ ವಿವಿ ಜ್ಞಾನಗಂಗೆ ಹಾಗೂ ಆಳಂದ ತಾಲೂಕಿನ ಕಡಗಂಚಿಯಲ್ಲಿರುವ ಕೇಂದ್ರೀಯ ವಿವಿಯ ಗಣಿತ ಹಾಗೂ ಸಂಗೀತ ವಿಭಾಗದ ಪ್ರೊಫೆಸರ್‌ಗಳು ತಮ್ಮ ಕ್ಷೇತ್ರದಲ್ಲಿ ಹೊಸ ಸಾಧನೆ ಮಾಡುವ ಮೂಲಕ ಕಲಬುರಗಿಯ ಕೀರ್ತಿ ಜಗದಗಲ ಪಸರಿಸುವಂತೆ ಮಾಡಿದ್ದಾರೆ. ಜಗತ್ತಿನ ಪ್ರತಿಷ್ಠಿತ ಅಮೆರಿಕ ದೇಶದ ಸ್ಟ್ಯಾನ್‍ಫೋರ್ಡ್ ವಿಶ್ವವಿದ್ಯಾಲಯವು ವಾರ್ಷಿಕವಾಗಿ ಪ್ರಕಟಿಸುವ ವಿಶ್ವದ ಅತ್ಯುತ್ತಮ ವಿಜ್ಞಾನಿಗಳ ಪಟ್ಟಿಯಲ್ಲಿ ಗುಲಬರ್ಗಾ ವಿವಿಯ ಗಣಿತಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಪ್ರಾಧ್ಯಾಕರು ಹಾಗೂ ಖ್ಯಾತ ವಿಜ್ಞಾನಿಗಳಾದ ಪ್ರೊ. ಜೆ.ಸಿ.ಉಮಾವತಿ ಮತ್ತು ಪ್ರೊ. ಸಿ.ಸುಲೋಚನಾ ಖ್ಯಾತ ವಿಜ್ಞಾನಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಇನ್ನೊಂದೆಡೆ ವಿಭಿನ್ನ ರಾಗ-ರಾಗಿಣಿಗಳಿಂದ ಕೂಡಿರುವ ಹಿಂದೂಸ್ಥಾನಿ ಸಂಗೀತದಲ್ಲಿ ಸಿಯುಕೆ ಸಂಗೀತ ವಿಭಾಗದ ಸಹಾಯಕ ಪ್ರಾಧ್ಯಾಪಕ, ಶಾಸ್ತ್ರೀಯ ಗಾಯಕ ಡಾ. ಸ್ವಪ್ನಿಲ್ ಚಾಪೇಕರ್ ಹೊಸ ಮಿಶ್ರ ರಾಗ ಸಾವನಿ ಶಂಕರ ರಚಿಸಿ ಗಮನ ಸೆಳೆದಿದ್ದಾರೆ. ಜ್ಞಾನಗಂಗೆ ಗಣಿತ ತಜ್ಞರಿಗೆ ವಿಶ್ವಮಾನ್ಯತೆ ವಿಶ್ವ ದರ್ಜೆಯ ಮಟ್ಟದಲ್ಲಿ ಕೈಗೊಂಡ ಸಂಶೋಧನಾ ಪ್ರಕಟಣೆಗಳು ಹಾಗೂ ಗುಣಮಟ್ಟದ ಸಂಶೋಧನಾ ಲೇಖನಗಳನ್ನು, ವೆಬ್ ಆಫ್ ಸೈನ್ಸ್, ಸ್ಕೋಪಸ್, ಗೂಗಲ್ ಸ್ಕಾಲರ್, ಎಚ್ ಇಂಡೆಕ್ಸ್, ಇಂಪ್ಯಾಕ್ಟ್ ಫ್ಯಾಕ್ಟರ್ ಹಾಗೂ ಸೈಟೇಶನ್ ಹೀಗೆ ಹಲವಾರು ಸಂಯೋಜಿತ ಮಾನದಂಡಗಳನ್ನು ಆಧರಿಸಿ ವಿಶ್ವದ ಶೇ.2ರಷ್ಟು ಅತ್ಯುತ್ತಮ ಸಂಶೋಧಕರನ್ನು ಗುರುತಿಸಿ ಸ್ಟ್ಯಾನ್‍ಫೋರ್ಡ್ ವಿಶ್ವವಿದ್ಯಾಲಯವು ವಾರ್ಷಿಕವಾಗಿ ಖ್ಯಾತ ವಿಜ್ಞಾನಿಗಳ ಪಟ್ಟಿ ಬಿಡುಗಡೆ ಮಾಡಿದೆ. ವಿಜ್ಞಾನ ಕ್ಷೇತ್ರದಲ್ಲಿ ಗುಣಮಟ್ಟದ ಸಂಶೋಧನಾ ಲೇಖನಗಳನ್ನು ಪ್ರಕಟಿಸಲು ಹೆಸರುವಾಸಿಯಾಗಿರುವ ಎಲ್ಸಿವೆಯರ್ ಸಂಸ್ಥೆ ಸಹಭಾಗಿತ್ವದಲ್ಲಿ ಸ್ಟ್ಯಾನ್‍ಫೋರ್ಡ್ ವಿಶ್ವವಿದ್ಯಾಲಯ ಪಟ್ಟಿ ಸಿದ್ಧಪಡಿಸಿದೆ. ಜಾಗತಿಕ ಮಟ್ಟದ ವಿಜ್ಞಾನಿಗಳ ಪಟ್ಟಿಯಲ್ಲಿ ಹೆಸರು ಪಡೆದಿರುವ ಇಬ್ಬರು ವಿಜ್ಞಾನಿಗಳ ಸಾಧನೆಗೆ ಕುಲಪತಿ ಪ್ರೊ. ದಯಾನಂದ ಅಗಸರ್, ಕುಲಸಚಿವ ಡಾ. ಬಿ. ಶರಣಪ್ಪ ಅಭಿನಂದಿಸಿದ್ದಾರೆ. ವಿಜ್ಞಾನ ಕ್ಷೇತ್ರದಲ್ಲಿ ಜ್ಞಾನಗಂಗೆ ಗಣಿತ ವಿಭಾಗದ ಇಬ್ಬರು ಪ್ರಾಧ್ಯಾಪಕರಾದ ಪ್ರೊ. ಜೆ.ಸಿ.ಉಮಾವತಿ ಮತ್ತು ಪ್ರೊ. ಸಿ.ಸುಲೋಚನಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೈಗೊಂಡ ಗುಣಮಟ್ಟದ ಸಂಶೋಧನೆ ಮತ್ತು ಪ್ರಕಟಣೆಯಿಂದ ಜಗತ್ತಿನ ಖ್ಯಾತ ವಿಜ್ಞಾನಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವುದು ಕಲಬುರಗಿಗೆ ಹೆಮ್ಮೆಯ ಸಂಗತಿ, ವಿಜ್ಞಾನಿಗಳು ನಮ್ಮ ವಿವಿಯಲ್ಲಿ ಸೇವೆ ಸಲ್ಲಿಸುತ್ತಿರುವುದು ಹೆಮ್ಮೆಯ ವಿಷಯ. ಇವರಿಂದ ವಿದ್ಯಾರ್ಥಿಗಳಿಗೆ ಅತ್ಯುತ್ತಮ ಮಾರ್ಗದರ್ಶನ ಮತ್ತು ಪ್ರೇರಣೆ ಸಿಗಲಿ ಎಂದು ಪ್ರೊ. ದಯಾನಂದ ಅಗಸರ್ ಹಾರೈಸಿದ್ದಾರೆ.