ಸಾರಾಂಶ
ಕನ್ನಡಪ್ರಭ ವಾರ್ತೆ ಕಲಬುರಗಿ
ಕಲಬುರಗಿಗೆ ಕಪ್ಪುಚುಕ್ಕೆಯಾಗಿರುವ ಹನಿಟ್ರ್ಯಾಪ್, ರೇಪ್ ಪ್ರಕರಣ ಸಿಬಿಐ ತನಿಖೆಗೆ ಜಿಲ್ಲಾ ಬಿಜೆಪಿ ಮುಖಂಡರು ಆಗ್ರಹಿಸಿದ್ದಾರೆ.ಇದೇ ಸೆ.17ರಂದು ಕಲಬುರಗಿಯಲ್ಲಿ ನಡೆಯುತ್ತಿರುವ ಸಂಪುಟ ಸಭೆಯಲ್ಲಿ ಮೊದಲು ಈ ನಿರ್ಣಯ ಕೈಗೊಂಡು ಕಲಬುರಗಿ ನೆಮ್ಮದಿ ಹಾಳಾಗಿರೋದನ್ನ ಸರಿಪಡಿಸಿ ಎಂದು ಬಿಜೆಪಿ ವಕ್ತಾರ ರಾಜಕುಮಾರ್ ತೇಲ್ಕೂರ್, ಶಾಸಕರಾದ ಬಸವರಾಜ ಮತ್ತಿಮಡು, ಡಾ. ಅವಿನಾಶ ಜಾಧವ್, ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ್ ರದ್ದೇವಾಡಗಿ, ನಗರಾಧ್ಯಕ್ಷ ಚಂದು ಪಾಟೀಲ್ ಆಗ್ರಹಿಸಿದ್ದಾರೆ.
ಈ ಜಾಲದಲ್ಲಿ ದೂರದ ಮುಂಬೈ, ಗೋವಾ, ಹೈದ್ರಾಬಾದ್, ಆಂಧ್ರ, ತೆಲಂಗಾಣ ರಾಜ್ಯಗಳ ಯುವತಿಯರು, ವರ್ತಕರು, ಅಧಿಕಾರಿಗಳಿರುವ ಗುಮಾನಿ ಕಾಡುತ್ತಿದೆ. ಬಹುದೊಡ್ಡ ಪ್ರಮಾಣದಲ್ಲಿ ಈ ಜಾಲ ಕಲಬುರಗಿ ಕೇಂದ್ರವಾಗಿಸಿಕೊಂಡು ನಡೆದಿದೆ. ಈ ಜಾಲದ ಮೂಲ ಬೇರು ತುಂಡರಿಸಬೇಕೆಂದರೆ ಸಿಬಿಐ ತನಿಖೆಯೇ ನಡೆಯಬೇಕೆಂದರು.ರಾಜ್ಯ ಪೊಲೀಸ್ ತನಿಖೆ ಮೇಲೆ, ಅದರಲ್ಲೂ ಕಲಬುರಗಿ ಪೊಲೀಸರ ತನಿಖೆ ಮೇಲೆ ನಂಬಿಕೆಯೇ ಇಲ್ಲ. ಇವರು ಆಡಳಿತದಲ್ಲಿರೋರ ಮಾತು ಕೇಳಿ ತನಿಖೆ ಮಾಡಿ ಮುಗಿಸಿಬಿಡುತ್ತಾರೆ. ಮತ್ತೆ ದಂಧೆಕೋರರು ಚಿಗುರುತ್ತಾರೆಂದು ದೂರಿದ ತೇಲ್ಕೂರ್ ಹನಿಟ್ರ್ಯಾಪ್ ದಂಧೆಗೆ ಕಾಯಂ ಬ್ರೆಕ್ ಬೀಳಲು ಸಿಬಿಐ ತನಿಖೆಯೇ ನಡೆಯಬೇಕೆಂದರು.
ಹನಿಟ್ರ್ಯಾಪ್ ವಿಚಾರವಾಗಿ ಸರಕಾರ ಇನ್ನೂ ಸರಿಯಾಗಿ ಸ್ಪಂದಿಸುತ್ತಿಲ್ಲ, ಇದನ್ನು ಗಮನಿಸಿದರೆ ಅದೆಲ್ಲಿ ಸರಕಾರದ ಹಲವರು ಇದಕ್ಕೆ ಒತ್ತಾಸೆಯಾಗಿದ್ದಾರೆಯೆ? ಎಂಬ ಗುಮಾನಿಯೂ ಬರುತ್ತಿದೆ. ಕಲಬುರಗಿ ನಗರದಲ್ಲಿ ಇದೆಲ್ಲವೂ ನಡೆಯುತ್ತಿದ್ದರೂ ಉಸ್ತುವಾರಿ ಸಚಿವರು ಮೌನವಾಗಿದ್ದಾರೆ. ಎಲ್ಲದರ ಬಗ್ಗೆ ಹೇಳಿಕೆ ಕೊಡುವ ಸಚಿವರು ಇದರ ಬಗ್ಗೆ ಯಾಕೆ ಮೌನ? ಎಂದರು.ಹಣಮಂತ ಯಳಸಂಗಿ ಮತ್ತವರ ಗ್ಯಾಂಗ್ ಬಂಧನವಾಗಿದೆ. ಆದರೆ ಈ ಬಂಧನ ತೋರಿಕೆಗೆ ಆಗಬಾರದು. ಆರೋಪಗಳ ಸಂಪೂರ್ಣ ತನಿಖೆಯಾಗಬೇಕು. ಆರೋಪಿಗಳು ಕಂಬಿ ಎಣಿಸುವಂತಾಗಬೇಕು. ಪ್ರಕರಣ ಮುಚ್ಚಿಹೋಗುವ ಭೀತಿ ಕಾಡುತ್ತಿದೆ. ಆರೋಪಿಗಳು ಪ್ರಭಾವಿಗಳಾಗಿದ್ದಾರೆ. ಇದನ್ನೆಲ್ಲ ಮೀರಿದ ತನಿಖೆ ನಡೆಯಬೇಕೆಂದರೆ ಸಿಬಿಐ ಒಂದೇ ಪರಿಹಾರವೆಂದರು.
ಸಂತ್ರಸ್ತ ಯುವತಿಯರಿಗೆ ಪೊಲೀಸ್ ರಕ್ಷಣೆಗೆ ಕೊಡಿ: ಸದರಿ ಹನಿಟ್ರ್ಯಾಪ್‌ನಲ್ಲಿ ಮುಂಬೈನ ಸಂತ್ರಸ್ತೆ ಯುವತಿ ದೂರು ನೀಡಿದ್ದಾಳೆ, ಆಕೆಗೂ ಜೀವ ಬೆದರಿಕೆ ಒಡ್ಡಿದ್ದಾರೆ ದುಷ್ಠರು. ಹೀಗಾಗಿ ಆಕೆಗೆ ಪೊಲೀಸ್ ರಕ್ಷಣೆ ಕೊಡುವಂತೆಯೂ ಬಿಜೆಪಿ ಮುಖಂಡರು ಆಗ್ರಹಿಸಿದರು.ಇದಲ್ಲದೆ ಇನ್ನೂ 30ರಿಂದ 50 ಯುವತಿರು, ಗೃಹಿಣಿಯರು ಈ ಗ್ಯಾಂಗ್‌ನಿಂದ ಸಂತ್ರಸ್ತರಾಗಿರುವ ಶಂಕೆ ಇದೆ. ಸಂತ್ರಸ್ತೆಯರೇ ಬಾಯಿ ಬಿಟ್ಟಿದ್ದಾರೆ. ಪೊಲೀಸರ ತನಿಖೆ ಮೇಲೆ ನಂಬಿಕೆಯೇ ಇಲ್ಲವಾಗಿದೆ. ಮುಚ್ಚಿಹಾಕುವ ಕೆಲಸವಾಗಬಾರದು ಎಂದರೆ ಪ್ರಕರಣದ ಸಿಬಿಐ ತನಿಖೆಯಾಗಲಿ, ಈ ದುಷ್ಟರ ಕೂಟದ ಹೆಡಮುರಿ ಕಟ್ಟಲು ಸರಕಾರ ತನ್ನ ಬದ್ಧತೆ ತೋರಿಸಲಿ ಎಂದರು.
ಕಲಬುರಗಿ ಜಿಲ್ಲೆ ಘನಘೋರ ಅಪರಾಧಗಳ ಗೂಡಾತ್ತಿದ್ದರೂ ಜಿಲ್ಲಾ ಉಸ್ತುವಾರಿ ಸಚಿವರು ಮೌನವಾಗಿದ್ದಾರೆ. ಆಡಳಿತದಲ್ಲಿ ಬಿಗಿ ಇಲ್ಲ, ಹಿಡಿತವಿಲ್ಲ. ಹೀಗಾಗಿ ಸಾಮಾನ್ಯ ಜನರೂ ಗೋಳಾಡುತ್ತಿದ್ದರೆ. ಇನ್ನಾದರೂ ಸಚಿವರು ಕ್ರಿಯಾಶೀಲರಾಗಿ ನೊಂದವರ ಕಣ್ಣೀರು ಒರೆಸಲಿ, ಪೊಲೀಸ್, ಜಿಲ್ಲಾಡಳಿತವನ್ನ ಬಿಗಿ ಮಾಡಿ ನೈತಿಕ ಬೆಂಬಲ ನೀಡಲಿ ಎಂದು ರಾಜಕುಮಾರ್ ತೇಲ್ಕೂರ್ ಆಗ್ರಹಿಸಿದರು. ವೆಂಕಟೇಶ ಮಲೆಪಾಟಿ, ಅಶೋಕ ಬಗಲಿ, ಸಂತೋಷ ಹಾದಿಮನಿ ಇದ್ದರು.