ಸಾರಾಂಶ
ಕನ್ನಡಪ್ರಭ ವಾರ್ತೆ ಕಲಬುರಗಿ
1) ಕಾರ್ಪೋರೇಟರ್‌ಗಳಿಗೆಲ್ಲಾ ಮನೆ,ನಿವೇಶನ- ಮುಜುಗರ ಉಂಟುಮಾಡಿದ ಪ್ರಸ್ತಾವನೆಮಹಾನಗರ ಪಾಲಿಕೆಯ ಎಲ್ಲಾ ಹಾಲಿ ಸದಸ್ಯರಿಗೆ ಪಾಲಿಕೆಯಿಂದಲೇ ನಿವೇಶನ ನೀಡುವ ಕುರಿತು ಸದಸ್ಯ ಸಾಜಿದ್ ಕಲ್ಯಾಣಿ ಮಂಡಿಸಿದ್ದ ಪ್ರಸ್ತಾವನೆ ಇಂದಿಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ತೀವ್ರ ಮುಜುಗರ ಹುಟ್ಟು ಹಾಕಿತು. ಪ್ರಸ್ತಾವನೆ ಓದಿದ ನಂತರ ಮಾತಿಗಿಳಿದ ಸದಸ್ಯ ಸಾಜಿದ್ ಕಲ್ಯಾಣಿ, ಶಾಸಕರಿಗೆ, ಕಮೀಶ್ನರ್‌ಗೆ ಮನೆಗಳಿವೆಯಲ್ಲವೆ? ಅದೇ ಮಾದರಿಯಲ್ಲ್ಲಿ ನಮಗೂ ಮನೆ, ನಿವೇಶನ ಕೊಡಲಿ ಎಂದು ತಮ್ಮ ಪ್ರಸ್ತಾವನೆಗೆ ಬೆಂಬಲವಾಗಿ ಮಾತನಾಡಿದರು.
ಇದೇ ವಿಷಯದ ಚರ್ಚೆಗೆ ಮುಂದಾದ ಮಾಜಿ ಮೇಯರ್ ಸೈಯ್ಯದ್ ಅಹ್ಮದ್ ನಾವು ಜನರಿಗೆ ಸವಲತ್ತು ಕೊಡಲು ಇಲ್ಲಿದ್ದೇವೆ, ರಾಜೀವ್ ಗಾಂಧಿ ಯೋಜನೆಯಡಿ ಮನೆ ಸಿಕ್ಕಿಲ್ಲವೆಂದು, ಆಶ್ರಯ ಮನೆಗಳಿಲ್ಲವೆಂದು ಜನರು ಅನೇಕರು ಪರದಡುವಾಗ ನಾವೇ ನಿವೇಶನ, ಮನೆ ಮಾಡಿಕೊಂಡು ಕುಳಿತರೆ ಹೇಗೆ? ಇಂತಹ ಕುಚೆಷ್ಠೆಯ ಪ್ರಸ್ತಾವನೆ ಕೈಬಿಡುವುದು ಉತ್ತಮ ಎಂದರು.ಪಾಲಿಕೆಯ ಆಡಳಿತ ಹಾಗೂ ವಿರೋಧ ಪಕ್ಷದ ಬಹುತೇಕ ಸದಸ್ಯರು ಸೈಯ್ಯದ್ ಅಹ್ಮದ್ ಮಾತಿಗೆ ಬೆಂಬಲಿಸುತ್ತ ನಾವೇ ಸವಲತ್ತು ಪಡೆದುಕೊಳ್ಳುವ ಇಂತಹ ಪ್ರಸ್ತಾವನೆ ಸರಿಯಲ್ಲವೆಂದರಲ್ಲದೆ ಸದನದ ಸಲಹಾ ಸಮೀತಿ ಅದ್ಹೇಗೆ ಇಂತಹ ಪ್ರಸ್ತಾವನೆ ಚರ್ಚೆಗೆ ಅಳವಡಿಸಿತೋ ಎಂದು ಅಚ್ಚರಿಪಟ್ಟರು.2) ಗಂಡಂದಿರಿಗೆ ಸಭೆಯೊಳಗೆ ಕೂಡಲು ಅವಕಾಶ ಕೊಡಿ!
ಪಾಲಿಕೆ ಸಾಮಾನ್ಯ ಸಭೆಯಲ್ಲಿ ತಮ್ಮ ಗಂಡಂದಿರಿಗೆ ಕೂಡ್ರಲು ಅವಕಾಶ ಕಲ್ಪಿಸಿಕೊಡದಿದ್ದರೆ ತಾವೇ ಸಭೆಯಿಂದ ಹೊರಗೆ ಹೋಗೋದಾಗಿ ಪಾಲಿಕೆ ಮಹಿಳಾ ಸದಸ್ಯೆಯರು ಪಕ್ಷಭೇದ ಮರೆತು ಧಮ್ಕಿ ಹಾಕಿದ ಪ್ರಸಂಗ ನಡೆಯಿತು.ಕಳೆದ ಬಾರಿಯ ಸಭೆಯಲ್ಲಿ ಗಲಾಟೆ ನಡೆದು ಹೊರಗಿನವರೇ ಹೆಚ್ಚು ಸಭೆಯೊಳಗೆ ಕಂಡುಬಂದು ಜಗಳವಾದ ಬೆನ್ನಲ್ಲೇ ಮೇಯರ್ ಇಂದಿನ ಸಭೆಯ ಹೊತ್ತಲ್ಲಿ ಸಭಾಂಗಣದಲ್ಲಿ ಪಾಲಿಕೆ ಸದಸ್ಯರು, ಅಧಿಕಾರಿ, ಮಾಧ್ಯಮ ಸದಸ್ಯರು ಹೊರತುಪಡಿಸಿ ಉಳಿದವರಿಗೆ ಪ್ರವೇಶವಿಲ್ಲವೆಂದು ಖಡಕ್ಕಾಗಿ ಹೇಳಿದ್ದರು.
ಈ ಹಂತದಲ್ಲಿ ಮಹಿಳಾ ಸದಸ್ಯರ ಪತಿದೇವರು, ಅವರ ಮಕ್ಕಳು ಹಲವರು ಪಾಲಿಕೆ ಸಭಾಂಗಣದ ಹೊರಗೆ ಸುತ್ತಾಡಿಕೊಂಡಿದ್ದರಲ್ಲದೆ ಒಂದು ಹಂತದಲ್ಲಿ ತಮ್ಮ ಹೆಂಡಂದಿರಿಗೆ ಫೋನ್ ಕರೆ ಮಾಡುತ್ತ ಒಳಗೆ ಕೂಡ್ರಲು ಅವಕಾಶ ಕೇಳಿ, ಇಲ್ಲದಿದ್ರೆ ನೀವು ಹೊರಗೆ ಬನ್ನಿರೆಂದು ಆಗ್ರಹಿಸಿದಾಗ ಅನೇಕ ಮಹಿಳಾ ಸದಸ್ಯರು ಗಂಡಂದಿರಿಗೆ ಅವಕಾಶ ಕೊಡುವಂತೆ ಬೇಡಿಕೆ ಮಂಡಿಸಿದರು.ಮಹಿಳಾ ಸದಸ್ಯರ ಬೇಡಿಕೆ ಮನ್ನಿಸಿದ ಮೇಯರ್ ವಿಶಾಲ ಧರ್ಗಿ ಸಭಾಂಗಣದಲ್ಲಿ ಶಿಸ್ತು ಕಾಪಾಡಲು ಹೀಗೆ ಮಾಡಿದ್ದೇವೆ. ಸಭೆಗೆ ಪಾಸ್ ನೀಡುವ, ಪಬ್ಲಿಕ್ ಗ್ಯಾಲರಿ ಮಾಡಲು ಕ್ರಮ ಕೈಗೊಳ್ಳುತ್ತೇವೆ. ಈ ಸಭೆಯಲ್ಲಿ ಮಹಿಳಾ ಸದಸ್ಯರ ಗಂಡಂದಿರಿಗೆ ಕೂಡಲು ಅವಕಾಶ ಕೊಡುತ್ತೇವೆಂದಾಗ ಅನೇಕ ಪತಿದೇವರು ಸಭೆಯ ಅಂಚಲ್ಲಿ ಕುರ್ಚಿಯಲ್ಲಿ ಬಂದು ಕುಳಿತರು.
3) ಮೀಟಿಂಗ್ ನಡ್ದಾಗೊಮ್ಮೆ ಹೀಂಗ ಬಂದು ಕುಂತ್ರ ಹ್ಯಾಂಗ್ರಿ?ಮಂಗಳವಾರ ಟೌನ್ ಹಾಲ್ ಇಂದಿರಾ ಸ್ಮಾರಕ ಭವನದಲ್ಲಿ ನಡೆದ ಪಾಲಿಕೆ ಮುಂದುವರಿದ ಸಾಮಾನ್ಯ ಸಭೆಯಲ್ಲಿ ಮತ್ತೆ ಶ್ವಾನಕಾಟ ಕಾಡಿತ್ತುಪ. ಸಭೆ ಆರಂಭದಲ್ಲೇ ಸದಸ್ಯ ಸಾಜಿದ್ ಕಲ್ಯಾಣಿ ತಮ್ಮ ಬಡಾವಣೆಯ 6 ವರ್ಷದ ಬಾಲಕಿಗೆ ಶ್ವಾನ ಕಡಿದು ಜೀವನ್ಮರಣ ಹೋರಾಟದಲ್ಲಿದ್ದಾಳೆ. ಆಕೆಗೆ 5 ಲಕ್ಷ ರು ಪರಿಹಾರ ಕೊಡುವ, ಆಸ್ಪತ್ರೆ ವೆಚ್ಚ ಭರಿಸುವ ಪಾಲಿಕೆ ಸಭೆಯ ಠರಾವು ಇನ್ನೂ ಜಾರಿಯಾಗಿಲ್ಲ. ಹಣ ಕೊಡುವವರೆಗೂ ತಾವು ಇಲ್ಲೇ ಕೂಡೋದಾಗಿ ಹೇಳುತ್ತ ಸದನದ ಬಾವಿಗೆ ಬಂದು ಕುಳಿತರು.
ಸದಸ್ಯರ ಈ ಧೋರಣೆ ಮೇಯರ್ ಕೋಪಗೊಂಡರು. ಮೀಟಿಂಗ್ ನಡ್ದಾಗೊಮ್ಮೆ ಹೀಂಗ ಕುಂತ್ರ ಹ್ಯಾಂಗೆ? ಎಂದು ಪ್ರಶ್ನಿಸುತ್ತ ಪರಿಹಾರ ಕೊಡುವ ಠರಾವಾಗಿದೆ. ಮೀಟಿಂಗ್ ನಡಾವಳಿಯಾಗಲಿ, ಮುಂದೆ ವಾರದೊಳಗೆ ಕ್ರಮ ಜರುಗಿಸುತ್ತೇವೆ ಎಂದರು.ಪಾಲಿಕೆ ಕಮೀಶ್ನರ್ ಭುವನೇಶ, ವಿಪಕ್ಷ ನಾಯಕ ಅಜ್ಮಲ್ ಗೋಲಾ ಸೇರಿದಂತೆ ಹಲವರು ಇದೇ ವಿಚಾರ ಮಾತನಾಡುತ್ತ ಧರಣಿ ಸರಿಯಲ್ಲ, ತಾಳ್ಮೆ ಇರಲಿ ಎಂದಾಗ ಸದಸ್ಯ ಸಾಜಿದ್ ಕಲ್ಯಾಣಿ ಸದನದ ಬಾವಿಯಿಂದ ಜಾಗ ಖಾಲಿ ಮಾಡಿದರು.4) ಕಮೀಶ್ನರ್ ಸಾಹೇಬ್ರ ಸಿಬ್ಬಂದಿ ನಿಮ್ಮ ಮಾತಿಗೆ ಕ್ಯಾರೆ ಎನ್ನುತ್ತಿಲ್ಲ!
ಪಾಲಿಕೆ ಸಾಮಾನ್ಯ ಸಭೆಗೆ ವಿವಿಧ ವಿಭಾಗಗಳ ಹಿರಿಯ ಅಧಿಕಾರಿಗಳು ಗೈರು ಹಾಜರಾಗಿ ತಮ್ಮ ಸಹಾಯಕರನ್ನು ಕಳುಹಿಸಿದ್ದಕ್ಕೆ ಆಕ್ಷೇಪಿಸಿದ ಸದಸ್ಯರು ಅನೇಕರು ಹೀಗಿದ್ದರೆ ಸಭೆ ಯಾಕೆ ಮಾಡಬೇಕು? ನಾವು ಕಳುವ ಯಾವ ಸಂಗತಿಯೂ ಸಭೆಯಲ್ಲಿ ಬಂದವರಿಗೆ ಗೊತ್ತಿಲ್ಲ. ಹಿರಿಯ ಅಧಿಕಾರಿ ಬಾರದೆ ಹೋದಲ್ಲಿ ಬೆಯೇ ಬೇಡ ಎಂದು ಆಕ್ಷೇಪಿಸಿದಾಗ ಕಮೀಶ್ನರ್ ಭುವನೇಶ ಪಾಟೀಲ್ ಕೋಪಗೊಂಡರು. ಅಧಿಕಾರಿಗಳನ್ನೇ ಗುರಿಯಾಗಿಸಿಕೊಂಡು ನೀವು ಎಲ್ಲರು ನಿಮ್ಮ ಸೆಕ್ಷನ್ ಬಗ್ಗೆ ಹೊಣೆಗಾರಿಕೆ ಅರಿತು ಸಬೆಗೆ ಬನ್ನಿ. ನಿಮ್ಮ ವಿಷಯಗಳು ನೀವೇ ಸಭೆಯಲ್ಲಿ ಹೇಳದೆ ಇನ್ನಾರಾದರೂ ಹೇಳಿದರೆ ಹೇಗೆ ಸಾಧ್ಯ? ಎಂದು ಪ್ರಶ್ನಿಸಿದರು.ಈ ಹಂತದಲ್ಲಿ ಮೇಯರ್ ಹಾಗೂ ಸದಸ್ಯರು ಹಲವರು ಮಧ್ಯಪ್ರವೇಶಿಸಿ ಸಾರ್, ನೀವು ಕಳೆದ ಸಭಾದಾಗೂ ಹೀಗೇ ಕೋಪ ಮಾಡಿಕೊಂಡಿದ್ರಿ, ಈಗಲೂ ಅದೇ ಕೋಪ, ಆದರೆ ಫಲಿತಾಂಶ ಶೂನ್ಯ. ಅಧಿಕಾರಿಗಳು ನಿಮ್ಮ ಮಾತು ಕೇಳುತ್ತಿಲ್ಲ, ಶಿಸ್ಸುತ ಕ್ರಮಕ್ಕೆ ಮುಂದಾಗ್ರಿ ಎಂದು ಸಲಹೆ ನೀಡಿದರು. ಸದಸ್ಯರು ಹಾಗೂ ಮೇಯರ್ ಸಲೆಹೆ ಆಳಿಸಿದರಾದರೂ ಕಮೀಶ್ನರ್ ಶಿಸ್ಸುತ ಕ್ರಮದ ಬಗ್ಗೆ ಏನನ್ನೂ ಸಬೆಯಲ್ಲಿ ಬಾಯಿ ಬಿಡಲಿಲ್ಲ, ಬದಲಾಗಿ ಹಾಗೇ ನಕ್ಕು ತಲೆ ಎಲ್ಲಾಡಿಸುತ್ತ ಸಭೆ ಕಲಾಪ ಮುಮದುವರಿಸಿದರು.