ಸಾರಾಂಶ
ಕನ್ನಡಪ್ರಭ ವಾರ್ತೆ ಕಲಬುರಗಿ
ಜಿಲ್ಲಾ ಪತ್ರಕರ್ತರು ಸದಾ ಕ್ರಿಯಾಶೀಲರು, ಒಂದಿಲ್ಲೊಂದು ಚಟುವಟಿಕೆಯಲ್ಲಿರುತ್ತಾರೆ. ಸರ್ಕಾರದ ಲೋಪಗಳನ್ನು ಎತ್ತಿ ತೋರಿಸುವ ಕೆಲಸ ಕಲಬುರಗಿ ಪತ್ರಕರ್ತರು ಬಹಳ ಅಚ್ಚುಕಟ್ಟಾಗಿ ಮಾಡುತ್ತಿದ್ದಾರೆ. ಅದಕ್ಕೆ ಕಲಬುರಗಿಯಲ್ಲಿ ಪತ್ರಿಕೋದ್ಯಮ ಜಗತ್ತು ಜೀವಂತವಾಗಿದೆ ಎಂದು ವೈದ್ಯಕೀಯ ಶಿಕ್ಷಣ ಖಾತೆ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಮೆಚ್ಚುಗೆ ಮಾತನ್ನಾಡಿದ್ದಾರೆ.ಇಂದಿಲ್ಲಿ ನಡೆದ ಪತ್ರಿಕಾ ದಿನ, ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪತ್ರಿಕೋದ್ಯಮ ಸ್ವತಂತ್ರವಾಗಿದ್ದಾಗ ಪ್ರಜಾಪ್ರಭುತ್ವ ಜೀವಂತ ಇರಲು ಸಾಧ್ಯ ಎಂದರು.
ಪತ್ರಿಕೆಗಳು ಹಿಂದೆ ಮಿಡಿಯಾ ಹೌಸ್‌ಗಳು ನಡೆಸುತ್ತಿದ್ದವು. ಆದರೆ ಈಗ ಕಾರ್ಪೊರೇಟ್ ಸಂಸ್ಥೆಗಳು ಪತ್ರಿಕೆಗಳು ನಡೆಸುತ್ತಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗಿದೆ. ನಿರ್ಭೀತ ಪತ್ರಿಕೋದ್ಯಮಕ್ಕೆ ಇದರಿಂದ ಕೊಡಲಿ ಪೆಟ್ಟು. ಮುಂದಿನ ಪೀಳಿಗೆಗೆ ಯಾವುದು ಸರಿ ಯಾವುದು ತಪ್ಪು ಅನ್ನೋದನ್ನು ತಿಳಿಸಿ ಹೇಳುವ ಗುರುತರ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.ಸಿನಿಮಾಗಳಲ್ಲಿ ಕೂಡ ವಿಲನ್ ಗಳನ್ನು ವೈಭವಿಕರಿಸುವ ಕೆಲಸ ಮಾಡುತ್ತಿರುವುದರಿಂದ ಯುವ ಜನಾಂಗ ಅಡ್ಡ ದಾರಿಗೆ ಹೋಗುತ್ತಿದೆ. ಯುವ ಪೀಳಿಗೆಯನ್ನು ಸರಿದಾರಿಗೆ ತರುವ ಕೆಲಸ ನಾವೆಲ್ಲರೂ ಸೇರಿ ಮಾಡಬೇಕಾಗಿದೆ ಎಂದರು.
ನಿವೃತ್ತ ಪತ್ರಕರ್ತರ ಪಿಂಚಣಿ ಕಾರ್ಯಕ್ರಮವನ್ನು ಸರ್ಕಾರ ರೂಪಿಸಿದ್ದು ಕಲಬುರಗಿ ಜಿಲ್ಲೆಯಿಂದ ಕೇವಲ ಒಬ್ಬರೆ ಪಿಂಚಣಿ ಪಡೆದುಕೊಳ್ಳುತ್ತಿದ್ದಾರೆಂದು ಕೇಳಿ ಆಶ್ಚರ್ಯವಾಗಿದೆ. ಹೆಚ್ಚಿನವರಿಗೆ ಯಾಕೆ ಸಿಗುತ್ತಿಲ್ಲ ಎನ್ನುವುದಕ್ಕೆ ನಾನು ಪರಿಶೀಲನೆ ಮಾಡಿ ವ್ಯಾಪಕವಾಗಿ ಪತ್ರಕರ್ತರು ಈ ಯೋಜನೆಯಲ್ಲಿ ಅರ್ಹರಾಗುವಂತೆ ಕ್ರಮ ಕೈಗೊಳ್ಳಲಾಗುವುದೆಂದರು..ಪತ್ರಿಕೋದ್ಯಮದ ಆಯಾಮಗಳು ಬದಲಾಗಿವೆ. ಸ್ವಾತಂತ್ರೋತ್ತರ ಭಾರತ ಮತ್ತು ಸ್ವಾತಂತ್ರ್ಯದ ಬಳಿಕ ಮುದ್ರಣ ಮಾಧ್ಯಮಕ್ಕೆ ಬಹಳ ಮಹತ್ವ ಇತ್ತು. ಅದು ಈಗಲೂ ಉಳಿಸಿಕೊಂಡಿದೆ. ಸಮಾಜದಲ್ಲಿ ಸಮಾನತೆ, ಪ್ರಜಾಪ್ರಭುತ್ವದ ಮೇಲೆ ಜನರ ವಿಶ್ವಾಸ ಜನರಲ್ಲಿ ಬರುವಂತೆ ಮಾಡುವಲ್ಲಿ ಪತ್ರಿಕೆಗಳು ಮಹತ್ವದ ಪಾತ್ರ ವಹಿಸುತ್ತವೆ.
ಮಾಧ್ಯಮದ ಮೂಲಕ ಮಾಹಿತಿ ಜನರಿಗೆ ಮುಟ್ಟಿದಾಗ ಅದು ಸತ್ಯ ಎನ್ನುವ ಭಾವನೆ ಜನರಲ್ಲಿದೆ. ಆದರೆ ಇತ್ತಿಚಿನ ದಿನಗಳಲ್ಲಿ ಎಲೆಕ್ಟ್ರಾನಿಕ್ ಮಾಧ್ಯಮದ ಪ್ರಭಾವ ಹೆಚ್ಚಾಗಿ ಮುದ್ರಣ ಮಾಧ್ಯಮದಿಂದ ಓದುಗರು ವಿಮುಖರಾಗುತ್ತಿದ್ದಾರೆ. ಇದರ ನಡುವೆಯೂ ಪತ್ರಿಕೆಗಳು ತನ್ನ ಮಹತ್ವ ಉಳಿಸಿಕೊಂಡಿವೆ ಎಂದರು.ಯುವ ಜನಾಂಗ ಸೋಷಿಯಲ್ ಮಿಡಿಯಾದತ್ತ ವಾಲಿದ್ದರಿಂದ ಪತ್ರಿಕೆಗಳು ಕೈಯಲ್ಲಿ ಹಿಡಿದು ಓದುವುದನ್ನು ಕಡಿಮೆ ಮಾಡಿದ್ದಾರೆ. ಇದು ನಿಜಕ್ಕೂ ಸರಿಯಾದ ಬೆಳವಣಿಗೆಯಲ್ಲ. ಸೋಷಿಯಲ್ ಮಿಡಿಯಾಗಿಂತ ಪತ್ರಿಕೆಗಳ ಕ್ರೆಡಿಬಲಿಟಿ ಜಾಸ್ತಿ.
ಎಲ್ಲಾ ಪತ್ರಿಕೆಗಳು ಇ ಪೇಪರ್ ಆಗಿವೆ. ಆದರೂ ಜನರಿಗೆ ಓದಲು ಸಮಯವಿಲ್ಲ. ಭವಿಷ್ಯದ ದೃಷ್ಟಿಯಿಂದ ಪತ್ರಿಕೋದ್ಯಮ ಬದಲಾವಣೆಗಳನ್ನು ಮಾಡಿಕೊಳ್ಳಬೇಕೆಂದರು.ಸಂಸದ ಡಾ. ಉಮೇಶ ಜಾಧವ ಮಾತನಾಡುತ್ತ ಯಾವುದೇ ಸೋಷಿಯಲ್ ಮಿಡಿಯಾ ಬಂದು ಎಷ್ಟು ಪ್ರಭಾವಿಯಾಗಿ ಬೆಳೆದರೂ ಕೂಡ ಮುದ್ರಣ ಮಾಧ್ಯಮಕ್ಕೆ ಸರಿಸಾಟಿಯಾಗಿ ನಿಲ್ಲಲಾರದು. ಪತ್ರಕರ್ತರ ಜವಾಬ್ದಾರಿ ಬಹಳ ದೊಡ್ಡದಾಗಿದೆ. ಅದನ್ನು ನೀವು ಸಮರ್ಥವಾಗಿ ನಿಭಾಯಿಸುತ್ತಿದ್ದೀರಿ ಎಂದರು.
ಪತ್ರಿಕೆಗಳು ನಮ್ಮ ಕಾರ್ಯದ ಬಗ್ಗೆ ಬರೆದಾಗ ಅದನ್ನು ಸಕಾರಾತ್ಮಕ ರೀತಿಯಲ್ಲಿ ಸ್ವಿಕರಿಸಿ ನಮ್ಮ ತಪ್ಪುಗಳನ್ನು ಸರಿಪಿಸಿಕೊಳ್ಳುವ ಕೆಲಸ ಮಾಡಿದಾಗ ಜನ ನಮ್ಮನ್ನು ಒಪ್ಪುತ್ತಾರೆ ಇಲ್ಲದಿದ್ದರೆ ತಿರಸ್ಕರಿಸುತ್ತಾರೆ. ಪತ್ರಿಕೆಗಳು ಮತ್ತು ಪತ್ರಕರ್ತರು ವೃತ್ತಿಧರ್ಮವನ್ನು ಬಿಡಬಾರದು. ಕಲಬುರಗಿಯಲ್ಲಿ ಪ್ರೆಸ್ ಕ್ಲಬ್ ಆಗಬೇಕು. ಪತ್ರಕರ್ತರಿಗೆ ಸಾಕಷ್ಟು ಆರೋಗ್ಯ ಸಮಸ್ಯೆಗಳಿವೆ. ಹೀಗಾಗಿ ಪತ್ರಕರ್ತರ ಆರೋಗ್ಯದ ನೀಗಾ ಇಡುವ ಕೆಲಸ ಸರ್ಕಾರದಿಂದ ಆಗಬೇಕು. ಎಂದರು.ಸಂಸದ ಡಾ. ರಾಧಾಕೃಷ್ಣ ದೊಡ್ಮನಿ, ಶಾಸಕರಾದ ಅಲ್ಲಮಪ್ರಭು ಪಾಟೀಲರು ಪತ್ರಕರ್ತರ ನೆರವಿಗಾಗಿ ಸದಾ ಸಿದ್ಧ ಎಂದರು.