ಸಾರಾಂಶ
ಶೇಷಮೂರ್ತಿ ಅವಧಾನಿ
ಕನ್ನಡಪ್ರಭ ವಾರ್ತೆ ಕಲಬುರಗಿಕಲಬುರಗಿ ಲೋಕ ಕದನ ಕಣದಲ್ಲಿ ಕಾಂಗ್ರೆಸ್, ಬಿಜೆಪಿ ಪಕ್ಷಗಳ ಲೀಡರ್‌ಗಳಿಗೆ ತಮ್ಮ ಪಕ್ಷಗಳ ಪರವಾಗಿಯೇ ಇಲ್ಲಿರುವ ಎಲ್ಲ ಅಸೆಂಬ್ಲಿ ಕ್ಷೇತ್ರಗಳಲ್ಲಿ ಹೆಚ್ಚಿನ ಲೀಡ್ ಹೊಂದುವುದೇ ಸವಾಲಾಗಿದೆ.
ಕೈ ತಪ್ಪಿ ಹೋಗಿರುವ ಕಲಬುರಗಿಯನ್ನು ಹೇಗಾದರೂ ಮಾಡಿ ಮರಳಿ ಕೈವಶಕ್ಕೆ ಮುಂದಾಗಿರುವ ಕಾಂಗ್ರೆಸ್ ಪಕ್ಷ, ಅರಳಿದ ಕಮಲ ಮುದುಡದಂತೆ ನೋಡಿಕೊಳ್ಳಲು ದಾಳ ಉರುಳಿಸುತ್ತಿದ್ದಾರೆ.ಯಾದಗಿರಿ ಜಿಲ್ಲೆಯ ಗುರುಮಠಕಲ್ ಅಸೆಂಬ್ಲಿ ಸೇರಿದಂತೆ ಅಫಜಲ್ಪೂರ, ಜೇವರ್ಗಿ, ಚಿತ್ತಾಪುರ, ಸೇಡಂ, ಕಲಬುರಗಿ ಉತ್ತರ, ಕಲಬುರಗಿ ದಕ್ಷಿಣ, ಕಲಬುರಗಿ ಗ್ರಾಮೀಣ ಸೇರಿದಂತೆ 8 ಅಸೆಂಬ್ಲಿ ಕ್ಷೇತ್ರಗಳ ವ್ಯಾಪ್ತಿಯ ಕಲಬುರಗಿ ಲೋಕಸಭಾ ಕದನ ಕಣದಲ್ಲಿ 2019 ರ ಲೋಕ ಸಮರಕ್ಕೂ, 2024 ರ ಲೋಕ ಸಮರದ ಈ ಸಂದರ್ಭಕ್ಕೂ ಅಜಗಜಾಂತರ ವ್ಯತ್ಯಾಸವಿದೆ.
ಎಂಟು ಕ್ಷೇತ್ರಗಳ ಪೈಕಿ ಬಿಜೆಪಿ, ಜೆಡಿಎಸ್ ತಲಾ 1 ರಲ್ಲಿ, ಉಳಿದ 6 ಕಡೆ ಕಾಂಗ್ರೆಸ್ ಶಾಸಕರಿದ್ದಾರೆ. ಕಲಬುರಗಿ ಪಾಲಿಕೆ ಬಿಜೆಪಿ ವಶದಲ್ಲಿದ್ದರೂ, ಕಾಂಗ್ರೆಸ್‌ನ ಸದಸ್ಯರೇ ಅಧಿಕವಾಗಿದ್ದಾರೆ. ಬಿಜೆಪಿ ಇಲ್ಲಿ ಅವರಿವರ ನೆರವಿನಿಂದ ಅಧಿಕಾರ ಗದ್ದುಗೆ ಹತ್ತಿ ಕುಳಿತಿದೆ.ಇನ್ನು ಗ್ರಾಮೀಣ ಭಾಗದಲ್ಲಿ ಜಿಪಂ, ತಾಪಂ ಸದಸ್ಯರಿಲ್ಲ. ಮತದಾರರೊಂದಿಗೆ ನೇರ ಸಂವಹನ ಹೊಂದಿರುವ ಇವರಿಲ್ಲದೆ ಅದ್ಹೇಗೆ ಲೀಡ್ ತರೋದು ಎಂದು ಆಯಾ ಪಕ್ಷಗಳ ನಾಯಕರು, ಶಾಸಕರುಗಳು ಚಿಂತೆಯಲ್ಲಿ ಮುಳುಗಿದ್ದಾರೆ. ಆದಾಗ್ಯೂ ಪಕ್ಷದ ಬೇುರು ಮಟ್ಟದ ಕಾರ್ಯಕರ್ತರನ್ನೆಲ್ಲ ಒಗ್ಗೂಡಿಸಿ ಏಣಿ ರೀತಿ ಅವರನ್ನೇ ಹೆಣೆದು ಜಾಲ ಭದ್ರಪಡಿಸಿ ಕೆಲಸಕ್ಕೆ ಮುಂದಾಗಿದ್ದಾರೆ. ಹೀಗೆಲ್ಲ ಹರಸಾಹಸ ಮಾಡಿದರೂ ಕೂಡಾ ಅಸೆಂಬ್ಲಿ ವಾರು, ಜಿಪಂ, ತಾಪಂ ಕ್ಷೇತ್ರವಾರು ಲೀಡ್ ಲೆಕ್ಕಹಾಕಿ ಅದನ್ನು ಪಡೆಯೋ ದಿಶೆಯಲ್ಲಿ ಸಾಗೋದು ಹರಸಾಹಸದ ಕೆಲಸವೇ ಆಗಿದೆ.
ಕಳೆದೆರಡು ಲೋಕ ಸಮರಗಳು, ಅಲ್ಲಿನ ಲೀಡ್ ಸ್ಥಿತಿಗತಿಯನ್ನೊಮ್ಮೆ ಅವಲೋಕಿಸಿದಾಗ ಕಲಬುರಗಿ ಲೋಕ ಕಣದಲ್ಲಿನ ವಿಚಿತ್ರ ನಡಾವಳಿ ಗಮನ ಸೆಳೆಯುತ್ತದೆ, ಒಮ್ಮೆ ಹಂಗೇ, ಒಮ್ಮೆ ಹೀಂಗೆ ಆಗೋ ಮೂಲಕ ಈ ಕದನ ಕಣದಲ್ಲಿನ ಲೀಡ್ ರಾಜಕಾರಣ ಕಷ್ಟಕಷ್ಟ ಎಂಬಂತಾಗಿದೆ.2014ರಲ್ಲಿ ಕಲಬುರಗಿ ಮತದಾರರ ಲೀಡ್ ಕೊಡೋ ಮೂಡ್ ವಿಚಿತ್ರವಾಗಿತ್ತು ಎನ್ನಬಹುದು. ಅಂದು ಕಾಂಗ್ರೆಸ್ ಹುರಿಯಳಾಗಿದ್ದ ಡಾ. ಖರ್ಗೆ 5 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದರೆ, ಬಿಜೆಪಿಯ ರೇವು ನಾಯಕ ಬೆಳಮಗಿ 3 ರಲ್ಲಿ ಮಾತ್ರ ಲೀಡ್ ಗಳಿಸಿದ್ದರು. ಬಿಜೆಪಿಗೆ ಅಂದು ಅಫಜಲ್ಪುರದಿಂದ 4, 125, ಜೇವರ್ಗಿಯಿಂದ 1, 028, ಕಲಬುರಗಿ ಗ್ರಾಮೀಣದಿಂದ 84 ಮತಗಳ ಮುನ್ನಡೆ ದೊರಕಿ ಎಲ್ಲರ ಕಣ್ಣು ಕುಕ್ಕಿತ್ತು. ಇವೆಲ್ಲವೂ ಕಾಂಗ್ರೆಸ್ ಶಾಸಕರಿರೋ ಕ್ಷೇತ್ರಗಳಾಗಿದ್ದರೂ ಬಿಜೆಪಿಗೆ ಲೀಡ್ ದೊರಕಿದ್ದು ಹೇಗೆಂಬುದೇ ಅಂದು ಭಾರಿ ಚರ್ಚೆಯ ವಿಷಯವಾಗಿತ್ತು.
ಖರ್ಗೆಯವರಿಗೆ 2019 ರಲ್ಲಿ ಕಲಬುರಗಿ ಉತ್ತರ (27, 503), ಗುರುಮಠಕಲ್ (19, 090), ಚಿತ್ತಾಪುರ (14, 339), ಸೇಡಂನಲ್ಲಿ ಮುನ್ನಡೆ ಸಿಕ್ಕಿತ್ತು. ಇದೇ ಅವರ ವಿಜಯಕ್ಕೆ ಕಾರಣವಾಗಿತ್ತು.ಆದರೆ 2019 ರಲ್ಲಿ ಎಲ್ಲವೂ ಉಲ್ಟಾಪಲ್ಟಾ, ಕಾಂಗ್ರೆಸ್- ಜೆಡಿಸ್ ಸಮ್ಮಿಶ್ರ ಸರ್ಕಾರ, ಕಾಂಗ್ರೆಸ್ ಶಾಸಕರ ಬಲವಿದ್ದರೂ ಲೋಕಸಭೆ ಕಣದಲ್ಲಿ ಅದ್ಯಾವುದು ಕೆಲಸಕ್ಕೆ ಬರಲೇ ಇಲ್ಲ. ಕಣದಲ್ಲಿದ್ದ ಡಾ. ಖರ್ಗೆ ಟೀಮ್ ರೂಪಿಸಿದ್ದ ಗೆಲುವಿನ ರಣತಂತ್ರಗಳ್ಯಾವುವು ಬಿಜೆಪಿ ನಾಗಾಲೋಟಕ್ಕೆ ಬ್ರೆಕ್ ಹಾಕಲಿಲ್ಲ.
2019 ರ ಲೋಕ ಸಮರದಲ್ಲಿ ಪಡೆದಂತೆಯೇ ಈ ಬಾರಿಯೂ ನಾವು ಮುನ್ನಡೆ ಹೊಂದುತ್ತೇವೆ. ನಮ್ಮ ಶಾಸಕರಿಲ್ಲದಿದ್ದರೂ ಕೂಡಾ ಜನ ದೇಶದ ವಿಚಾರ ಮಾಡಿ ಮತದಾನ ಮಾಡುತ್ತಾರೆ, ಆಗ ಬಿಜೆಪಿಯೇ ಅವರ ಆಯ್ಕೆ ಎಂದು ಬಿಜೆಪಿಗರು ಹೇಳುತ್ತಿದ್ದರೆ, ಹೆಚ್ಚು ಶಾಸಕರು ನಾವಿದ್ದೇವೆ. ಹೆಚ್ಚಿನ ಲೀಡ್‌ನೊಂದಿಗೆ ಗೆದ್ದಿದ್ದೇವೆ. ಹೀಗಾಗಿ ಲೋಕಸಭಾ ಕ್ಷೇತ್ರದ ಮೇಲೆ ನಿಯಂತ್ರಣ ಸಾಧಿಸಿ ಕಲಬುರಗಿ ಕೈವಶ ಮಾಡಿಕೊಳ್ಳೋದು ಸುಲಭವಾಗಲಿದೆ ಎಂದು ಕಾಂಗ್ರೆಸ್ಸಿಗರು ಪ್ರಯ್ನ ಮುಂದುವರಿಸಿದ್ದಾರೆ.ಹಾಲಿ, ಮಾಜಿ ಶಾಸಕರ ಹೆಗಲಿಗೆ ಲೀಡ್ ಹೊಣೆ: 20124 ಲೋಕ ಕದನ ಕಣದಲ್ಲಿ ಕಾಂಗ್ರೆಸ್‌ನ ಹುರಿಯಾಳಾಗಿ ಖರ್ಗೆಯವರ ಅಳಿಯ ರಾಧಾಕೃಷ್ಣ ದೊಡ್ಮನಿ ಇದ್ದಾರೆ, ಬಿಜೆಪಿಯಿಂದಹುರಿಯಳಾಗಿರುವ ಡಾ. ಉಮೇಶ ಜಾಧವ್ ಅವರು ಇಲ್ಲಿಂದ ಪುನರಾಯ್ಕೆ ಬಯಸಿದ್ದಾರೆ. ಈ ಬಾರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರೇ ಅದಿಕವಾಗಿದ್ದರೂ ಕೂಡಾ , ಎಲ್ಲ ಅಸೆಂಬ್ಲಿ ಕ್ಷೇತ್ರಗಳಲ್ಲಿ ಕಳೆದ ಚುನಾವಣೆಯ ಲೀಡ್ ಪುನರಾವರ್ತನೆಯಾಗುವುದೋ, ಹೊಸ ಲೀಡ್ ಹೊರಹೊಮ್ಮುವುದೋ ಕಾದು ನೋಡಬೇಕಿದೆ.
ಏತನ್ಮಧ್ಯೆ ಮೂಲಗಳ ಪ್ರಕಾರ ಜೇವರ್ಗಿ, ಅಫಜಲ್ಪುರ, ಕಲಬುರಗಿ ಗ್ರಾಮೀಣ, ಚಿತ್ತಾಪುರದಲ್ಲಿ ಶತಾಯು ಗತಾಯ ಕಾಂಗ್ರೆಸ್ ಹೆಚ್ಚಿನ ಲೀಡ್ ಹೊಂದುವ ದಿಶೆಯಲ್ಲಿ ತಂತ್ರಗಾರಿಕೆ ಹೆಣೆಯುತ್ತಿದೆ. ಆಲ್ಲಿನ ಹಾಲಿ, ಮಾಜಿ ಸಾಸಕರ ಹೆಗಲಿಗೆ ಲೀಡ್ ಹೊಣೆ ಹೊರಿಸಲಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.ಇತ್ತ ಬಿಜೆಪಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಬೂತ್ ಹಾಗೂ ಶಕ್ತಿಕೇಂದ್ರ, ಹೋಬಳಿ ಮಟ್ಟದಲ್ಲಿ ತನ್ನ ಮುಖಂಡರಿಗೆ ಗುರುತಿಸಿ ಲೀಡ್ ಹೊಣೆ ವಹಿಸಿಕೊಟ್ಟಿದೆ. ಇದಲ್ಲದೆ ಈ ಲೋಕಸಭೆ ಕಣದಲ್ಲಿರುವ ಏಕೈಕ ಬಿಜೆಪಿ ಶಾಸಕರಾದ ಕಲಬುರಗಿ ಉತ್ತರ ಸಾಸಕರು ಸೇರಿದಂತೆ ಎಲ್ಲಾ ಮಾಜಿ ಶಾಸಕರು, ಮುಖಂಡರಿಗೆ ಲೀಡ್ ಗುರಿ ನೀಡಿ ತರ್ಕಬದ್ಧವಾಗಿ ಚುನಾವಣೆಗೆ ಮುಂದಾಗುವ ಮೂಲಕ ಕಲಬುರಗಿ ಕೋಟೆಯಲ್ಲಿ ಕಮಲ ಹಾಗೇ ಅರಳಿ ನಗುವಂತೆ ಮಾಡಲು ಒಳಗೊಳಗೆ ಸಿದ್ಧವಾಗಿದೆ.
ಲೀಡ್‌ಗೆ ಬ್ರೆಕ್ ಹಾಕಲು ಇಲ್ಲೆಲ್ಲಾ ಕಾಂಗ್ರೆಸ್- ಬಿಜೆಪಿ ಪೈಪೋಟಿ?: ಕಲಬುರಗಿ ದಕ್ಷಿಣ, ಅಫಜಲ್ಪುರ, ಜೇವರ್ಗಿ, ಚಿತ್ತಾಪುರ, ಸೇಡಂ, ಇವೆಲ್ಲವೂ ಕೈವಶವಾಗಿವೆ, ಆದಾಗ್ಯೂ ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ಈ ಕ್ಷೇತ್ರಗಳ ಮತದಾರರು ತಾಳುವ ಧೋರಣೆಯ ಬಗ್ಗೆ ಯಾರು ಹೀಗೆ ಎಂದು ಹೇಳಲಾಗದು ಎಂಬುದು ಅನೇಕ ಚುನಾವಣೆಗಳು ಸಾಬೀತು ಮಾಡಿವೆ. ಹೀಗಾಗಿ ಕಾಂಗ್ರೆಸ್ ಈ ಕ್ಷೇತ್ರಗಳಲ್ಲಿ ಬಿಜೆಪಿ ಲೀಡ್‌ಗೆ ಬ್ರೆಕ್ ಹಾಕುವ ಹುನ್ನಾರದಲ್ಲಿದ್ದರೆ, ಇಲ್ಲಿ ಯಾವ ಕಾರಣಕ್ಕೂ ತಮಗೆ ಲೀಡ್ ಕಮ್ಮಿಯಾಗಬಾರದು ಎಂದು ಬಿಜೆಪಿ ರಣತಂತ್ರ ಹೂಡುತ್ತಿದೆ.2014ರ ಲೋಕ ಸಮರದಲ್ಲಿ ಡಾ. ಖರ್ಗೆಯವರಿಗೆ ಎದುರಾಳಿಯಾಗಿ ಬಂಜಾರಾ ಸಮಾಜದ ರೇವು ನಾಯಕ ಬೆಳಮಗಿ ಕಣದಲ್ಲಿದ್ದರೆ, 2019 ರ ಚುನಾವಣೆಯಲ್ಲಿ ಬಂಜಾರಾ ಸಮಾಜದ ಡಾ. ಉಮೇಶ ಜಾಧವ್ ಕಣದಲ್ಲಿದ್ದರು, 2024 ರಲ್ಲಿ ರಾಧಾಕೃಷ್ಣ ಅವರಿಗೂ ಎದುರಾಳಿಯಾಗಿ ಬಂಜಾರಾ ಸಮಾಜದ ಡಾ. ಉಮೇಶ ಜಾಧವ್ ಕಣದಲ್ಲಿರೋದು ವಿಶೇಷವಾಗಿದೆ.
ಕಾಂಗ್ರೆಸ್ ಶಾಸಕರಿಗೆ ಸವಾಲು: ಬಿಜೆಪಿಯ ಉಮೇದುವಾರರಾಗಿ ಕಣದಲ್ಲಿದ್ದ ಡಾ. ಉಮೇಶ ಜಾಧವ್ ತಮ್ಮ ಚೊಚ್ಚಲ ಲೋಕ ಸಮರದಲ್ಲಿ ಅಫಜಲ್ಪುರ, ಜೇವರ್ಗಿ, ಕಲಬುರಗಿ ದಕ್ಷಿಣ, ಸೇಡಂ ಕ್ಷೇತ್ರಗಳಿಂದ ದೊರಕಿದ ಲೀಡ್‌ನಿಂದ ಜಯ ಗಳಿಸಿದ್ದು ಗುಟ್ಟೇನಲ್ಲ. 2023 ರ ಅಸೆಂಬ್ಲಿಯಲ್ಲಿ ಸೇಡಂನಿಂದ ಡಾ. ಶರಣಪ್ರಕಾಶ ಪಾಟೀಲ್ (43, 561), ಕಲಬುರಗಿ ದಕ್ಷಿಣ (21 ಸಾವಿರ ಮತ) ಅಲ್ಲಂಪ್ರಭು ಪಾಟೀಲ್, ಅಫಜಲ್ಪುರದಿಂದ (4, 594) ಎಂವೈ ಪಾಟೀಲ್, ಜೇವರ್ಗಿಯಿಂದ (10, 278) ಡಾ. ಅಜಯ್ ಸಿಂಗ್, ಚಿತ್ತಾಪುರದಿಂದ (13, 650) ಪ್ರಿಯಾಂಕ್ ಖರ್ಗೆ ಗೆದ್ದಿದ್ದಾರೆ. ಈ ಕ್ಷೇತ್ರಗಳಿಂದ ತಾವು ಪಡೆದಷ್ಟೇ ಅಥವಾ ಅದಕ್ಕಿಂತ ಅಧಿಕ ಅಧಿಕ ಲೀಡ್ ಕೊಡೊದೇ ಇರ ಮುಂದಿನ ಸವಾಲಾಗಿದೆ. ಕಲಬುರಗಿ ಉತ್ತರದಲ್ಲಿ ಕಾಂಗ್ರೆಸ್‌ಗೆ ಸಹಜ ಲೀಡ್ ಇರೋದರಿಂದ 2024 ರಲ್ಲಿಯೂ ಅದನ್ನು ಕಾಪಾಡುವ ಸವಾಲು ಶಾಸಕಿ ಕನೀಜ್ ಫಾತೀಮಾ ಮುಂದಿದೆ.