ಸಾರಾಂಶ
ಸಿಮೆಂಟ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರೊಬ್ಬರು ಹೃದಯಾಘತದಿಂದ ಮೃತಪಟ್ಟಿದ್ದು, ಅವರ ಶವವನ್ನು ಕಾರ್ಖಾನೆಯ ಸಿಬ್ಬಂದಿ ಅಮಾನವೀಯವಾಗಿ ಎಳೆದೊಯ್ದ ಘಟನೆ ಕಲಬುರಗಿ ಜಿಲ್ಲೆಯ ಕಾರ್ಖಾನೆಯಲ್ಲಿ ನಡೆದಿದ್ದು, ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕಲಬುರಗಿ : ಸಿಮೆಂಟ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರೊಬ್ಬರು ಹೃದಯಾಘತದಿಂದ ಮೃತಪಟ್ಟಿದ್ದು, ಅವರ ಶವವನ್ನು ಕಾರ್ಖಾನೆಯ ಸಿಬ್ಬಂದಿ ಅಮಾನವೀಯವಾಗಿ ಎಳೆದೊಯ್ದ ಘಟನೆ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಕೋಡ್ಲಾ ಸಮೀಪ ಶ್ರೀ ಸಿಮೆಂಟ್ ಕಾರ್ಖಾನೆಯಲ್ಲಿ ನಡೆದಿದ್ದು, ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಿಹಾರ ಮೂಲದ ಚಂದನ್ ಸಿಂಗ್ ಮೃತ ಕಾರ್ಮಿಕ. ಇವರ ಶವವನ್ನು ಸಾಗಿಸುವಾಗ ಕಾರ್ಖಾನೆಯ ಕೆಲವು ಸಿಬ್ಬಂದಿ ಅವರ ಕಳೇಬರವನ್ನು ಧರಧರನೆ ಎಳೆದೊಯ್ದಿದ್ದಾರೆ. ಈ ಸಂಬಂಧ ಉತ್ತರ ಪ್ರದೇಶದ ಕಾರ್ಮಿಕರಾದ ಹೈದರ್ ಅಲಿ, ಅಜಯ್, ರವಿಶಂಕರ್, ಹರಿಂದರ್, ರಮೇಶ್ಚಂದ್ರ ಹಾಗೂ ಅಖಿಲೇಶ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಈ ಮಧ್ಯೆ, ಕಾರ್ಮಿಕನ ಸಾವಿಗೆ ನ್ಯಾಯ ಒದಗಿಸುವಂತೆ ಕೋರಿ ಕಾರ್ಮಿಕರು ಕಾರ್ಖಾನೆ ಆವರಣದಲ್ಲಿ ಶವವಿಟ್ಟು ಪ್ರತಿಭಟನೆ ನಡೆಸುವ ನೆಪದಲ್ಲಿ ಶಾಂತಿ-ಸುವ್ಯವಸ್ಥೆಗೆ ಭಂಗ ಉಂಟು ಮಾಡಿದ್ದಾರೆ ಎಂದು ಪೊಲೀಸರು ದೂರಿನಲ್ಲಿ ದಾಖಲಿಸಿದ್ದಾರೆ. ಮತ್ತೊಂದೆಡೆ, ಚಂದನ್ ಸಾವಿನ ಹಿನ್ನೆಲೆ ಆತನನ್ನು ಗುತ್ತಿಗೆ ಆಧಾರದ ಮೇಲೆ ಸಿಮೆಂಟ್ ಕಾರ್ಖಾನೆಯಲ್ಲಿ ದುಡಿಯಲು ಕಳಿಸಿದ್ದ ಗುತ್ತಿಗೆ ಸಂಸ್ಥೆ ಪರಿಹಾರ ನೀಡಬೇಕೆಂದು ಕಾರ್ಮಿಕರು ಒತ್ತಾಯಿಸಿದ್ದಾರೆ.
ಈ ಸಾವು ಹಲವು ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ. ಕಾರ್ಮಿಕ ಬುಧವಾರ ಬೆಳಗ್ಗೆ ಬಹಿರ್ದೆಸೆಗೆ ಹೋಗಿದ್ದಾಗ ಹೃದಯಾಘಾತದಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ಹೇಳಲಾಗುತ್ತಿದೆ. ಮೃತಪಟ್ಟ ಕಾರ್ಮಿಕನ ಶವವನ್ನು ಕಾರ್ಖಾನೆ ಒಳಗೆ ಎಳೆದುಕೊಂಡು ಬಂದು ಸಹ ಕಾರ್ಮಿಕರಿಂದ ಪ್ರತಿಭಟನೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.